ಭಾನುವಾರ, ಸೆಪ್ಟೆಂಬರ್ 26, 2021
21 °C

‘ಸ್ವಚ್ಛನಗರ’ವೆಂಬ ಮೈಸೂರಿನಲ್ಲಿ ಶೌಚಾಲಯ ಹುಡುಕುತ್ತಾ...

ರಮೇಶ ಕೆ. Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸ್ವಚ್ಛ ನಗರಿ ಗೌರವವನ್ನು ಉಳಿಸಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆ ಇನ್ನಿಲ್ಲದ ಕಸರತ್ತು ನಡೆಸುತ್ತಿದೆಯಾದರೂ ಮೂಲಸೌಲಭ್ಯಗಳಲ್ಲಿ ಒಂದಾದ ಶೌಚಾಲಯ ಕಲ್ಪಿಸುವ ವಿಷಯದಲ್ಲಿ ಕೊಂಚ ಎಡವಿದಂತೆ ಕಾಣುತ್ತಿದೆ.

ನಗರದ ಪ್ರಮುಖ ಪ್ರವಾಸಿ ತಾಣಗಳು, ಸರ್ಕಾರಿ ಕಚೇರಿಗಳು, ಕಾಲೇಜುಗಳ ಆಸುಪಾಸಿನಲ್ಲೇ ಶೌಚಾಲಯ ಸಮಸ್ಯೆ ಎದ್ದುಕಾಣುತ್ತಿದೆ. ಬೀದಿಬದಿ ವ್ಯಾಪಾರಸ್ಥರು, ಪ್ರವಾಸಿಗರು, ವಿದ್ಯಾರ್ಥಿಗಳು ಹಾಗೂ ಅಕ್ಕಪಕ್ಕದ ತಾಲ್ಲೂಕು, ಜಿಲ್ಲೆಗಳಿಂದ ಬರುವ ಪ್ರಯಾಣಿಕರು ಹೆಚ್ಚಾಗಿ ತೊಂದರೆ ಅನುಭವಿಸುತ್ತಿದ್ದಾರೆ.

ಹಣ ಕೊಟ್ಟು ಬಳಕೆ ಮಾಡುವ ಬಹಳಷ್ಟು ಸಾರ್ವಜನಿಕ ಶೌಚಾಲಯಗಳಲ್ಲಿ ಸ್ವಚ್ಛತೆ ಕಾಣಬಹುದು, ಆದರೆ ಉಚಿತ ಶೌಚಾಲಯಗಳ ಸ್ಥಿತಿ ಹೇಳತೀರದಾಗಿದೆ.

ಜಗನ್ಮೋಹನ ಪ್ಯಾಲೇಸ್‌ ರಸ್ತೆಯ 1ನೇ ಅಡ್ಡರಸ್ತೆಯಲ್ಲಿ ಒಮ್ಮೆ ಹೋದರೆ ತಲೆ ಸುತ್ತುವುದು ಗ್ಯಾರಂಟಿ. ಇಲ್ಲಿ ಎರಡು ಶೌಚಾಲಯಗಳಿವೆ, ಆದರೆ ನಿರ್ವಹಣೆ ಇಲ್ಲದೇ ಕೊಚ್ಚೆ ಗುಂಡಿಯಾಗಿವೆ. ಹಾಗಾಗಿ ಜನ ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡುತ್ತಾರೆ. ರಸ್ತೆ ಸಮೀಪವೇ ‍ಪುಸ್ತಕದ ಅಂಗಡಿಗಳು, ಕಾಲೇಜುಗಳು ಹಾಗೂ ಸರ್ಕಾರಿ ಕಚೇರಿಗಳು ಇರುವುದರಿಂದ ಸಾಮಾನ್ಯವಾಗಿ ಜನದಟ್ಟಣೆ ಇರುತ್ತದೆ. ವಿದ್ಯಾರ್ಥಿನಿಯರು ಹಾಗೂ ಮಹಿಳೆಯರು ಈ ರಸ್ತೆಯಲ್ಲಿ ಓಡಾಡಲು ಹಿಂಜರಿಕೆ ಮಾಡಿಕೊಳ್ಳುವ ಸ್ಥಿತಿಯಿದೆ. ಮುಖ್ಯರಸ್ತೆಯಲ್ಲೂ ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.

ನಗರದ ಪ್ರಮುಖ ಆಕರ್ಷಣೆಯ ಕೇಂದ್ರವಾದ ಅರಮನೆ ಆಜುಬಾಜಿನಲ್ಲೂ ಶೌಚಾಲಯ ಸಮಸ್ಯೆ ತಾಂಡವವಾಡುತ್ತಿದೆ. ಗೌನ್‌ಹೌಸ್‌ ಕಡೆಯ ಗೇಟ್‌ ಬಳಿ ಪಾರ್ಕಿಂಗ್‌ ಜಾಗದಲ್ಲಿ ಹಣ ಕೊಟ್ಟು ಬಳಸುವ ಶೌಚಾಲಯವಿದೆ. ಇದು ಪ್ರವಾಸಕ್ಕೆ ಬರುವ ವಿದ್ಯಾರ್ಥಿಗಳಿಗೆ ಹೊರೆಯಾಗಲಿದೆ. ಪ್ರವಾಸಿಗರು ಅರಮನೆ ನೋಡಿಕೊಂಡು ಹೊರಬಂದರೆ ಶೌಚಕ್ಕೆ ಹುಡುಕಾಡುವ ಪರಿಸ್ಥಿತಿಯಿದೆ. ಇನ್ನೂ ಬಲರಾಮ ಗೇಟ್‌ ಬಳಿ ಉಚಿತ ಪಾರ್ಕಿಂಗ್‌ ವ್ಯವಸ್ಥೆಯಿದೆ ಆದರೆ ಶೌಚಾಲಯವಿಲ್ಲ. ದೊಡ್ಡ ಗಡಿಯಾರ ಅಥವಾ ಸಿಟಿ ಬಸ್‌ ನಿಲ್ದಾಣದವರೆಗೂ ಬರಬೇಕು. ಸ್ಥಳೀಯರಿಗೆ ಹುಡುಕುವ ತೊಂದರೆ ಆಗದಿದ್ದರೂ ಪ್ರವಾಸಿಗರು ಹಾಗೂ ದೂರದ ಊರಿನಿಂದ ಬರುವವರಿಗೆ ತಲೆನೋವಾಗಲಿದೆ.

ಚಾಮರಾಜೇಂದ್ರ ಮೃಗಾಲಯ ನೋಡುವುದಕ್ಕೆ ಬರುವ ಪ್ರವಾಸಿಗರ ಕಥೆ ಇದಕ್ಕಿಂತ ಭಿನ್ನವಾಗಿಲ್ಲ. ಮೃಗಾಲಯದ ಎದುರಿನ ಪಾರ್ಕಿಂಗ್‌ ಜಾಗದಲ್ಲಿ ಇ –ಟಾಯ್ಲೆಟ್‌ ಹಾಗೂ ಒಂದು ಸಾರ್ವಜನಿಕ ಶೌಚಾಲಯವಿದೆ. ಇ –ಟಾಯ್ಲೆಟ್‌ ಇದ್ದರೂ ಬಳಕೆಯಾಗುತ್ತಿಲ್ಲ. ಇನ್ನು ಸಾರ್ವಜನಿಕ ಶೌಚಾಲಯಕ್ಕೆ ಹೋಗಬೇಕೆಂದರೆ ಸರ್ಕಸ್‌ ಮಾಡಬೇಕು. ಪಾರ್ಕಿಂಗ್‌ ಭಾಗದ ಗೇಟ್‌ ಎದುರು ಕಾರ್‌ಗಳನ್ನು ನಿಲ್ಲಿಸಿರುತ್ತಾರೆ. ಕಷ್ಟಪಟ್ಟು ಒಳಹೋದರೆ ಗಬ್ಬುವಾಸನೆ ಬರುತ್ತದೆ. ಗೇಟ್‌ ಪಕ್ಕದಲ್ಲೇ ಕಸದ ರಾಶಿ, ಮಳೆ ನೀರನ್ನು ದಾಟಿಕೊಂಡು ಹೋಗುವ ಪರಿಸ್ಥಿತಿಯಿದೆ.

ನಜರಬಾದ್‌ನಲ್ಲಿರುವ ತಾಲ್ಲೂಕು ಕಚೇರಿಗೆ ನಿತ್ಯ ನೂರಾರು ಜನ ಬರುತ್ತಾರೆ. ತಾಲ್ಲೂಕು ಕಚೇರಿ ಒಳಗಿನ ಒಂದು ಶೌಚಾಲಯಕ್ಕೆ ಬೀಗ ಹಾಕಿದ್ದರೆ, ಮತ್ತೊಂದಕ್ಕೆ ನಿರ್ವಹಣೆ ಕೊರತೆಯಿದೆ. ಮಿನಿ ವಿಧಾನಸೌಧದ ಸುತ್ತಮುತ್ತ ಉಚಿತ ಶೌಚಾಲಯಗಳಿಲ್ಲ. ಇದರಿಂದಾಗಿ ನಿತ್ಯ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದೆ.

ಕೆ.ಜಿ. ಕೊಪ್ಪಲಿನ ನ್ಯಾಯಾಲಯದ ಬಳಿ ಒಂದು ಸಾರ್ವಜನಿಕ ಶೌಚಾಲಯವಿದೆ (ಕೆ.ಜಿ.ಕೊಪ್ಪಲು ಕಮಾನು ಬಳಿ). ಜಿಲ್ಲಾ ಪಂಚಾಯಿತಿ ಕಚೇರಿಯಿಂದ ದೂರವಿದೆ. ಹಾಗೇ ಮಹಾರಾಜ ಕಾಲೇಜು ಹಾಗೂ ಮೈದಾನದ ಸಮೀಪ ಎಲ್ಲಿಯೂ ಶೌಚಾಲಯವಿಲ್ಲ. ಇಲ್ಲಿಯೇ ಬಾಲಕರ ಹಾಸ್ಟೆಲ್‌ ಇದೆ, ಮೈಸೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಜ್ಞಾನ ಅಧ್ಯಯನ ವಿಭಾಗದ ಸ್ಪೋರ್ಟ್ಸ್ ಪೆವಿಲಿಯನ್‌ ಇದೆ. ಮೈದಾನದಲ್ಲಿ ಒಂದಿಲ್ಲೊಂದು ಸಾರ್ವಜನಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಅಂಥ ಸಂದರ್ಭದಲ್ಲಿ ಜನರಿಗೆ ಶೌಚಾಲಯಗಳು ಇಲ್ಲದೇ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆ. ರಸ್ತೆ ಬದಿ ವ್ಯಾಪಾರಿಗಳಿಗೂ ಇದರ ಬಿಸಿ ತಟ್ಟಿದೆ.

ಕುಕ್ಕರಹಳ್ಳಿ ಕೆರೆ ಆವರಣದಲ್ಲಿ ಮೂರು ಶೌಚಾಲಯಗಳಿವೆ, ಆದರೆ ಹೊರ ಭಾಗದಲ್ಲಿ ಎಲ್ಲಿಯೂ ಸಾರ್ವಜನಿಕ ಶೌಚಾಲಯಗಳಿಲ್ಲ. ಕಲಾಮಂದಿರ, ಜಿಲ್ಲಾಧಿಕಾರಿಗಳ ನಿವಾಸ ಹಾಗೂ ತೋಟಗಾರಿಕಾ ಇಲಾಖೆಯ ಜಲದರ್ಶಿನಿ ಉದ್ಯಾನವೂ ಈ ಭಾಗದಲ್ಲಿವೆ.

ಮಹಾನಗರ ಪಾಲಿಕೆಯು ಅಗತ್ಯವಿರುವ ಸ್ಥಳಗಳಲ್ಲಿ ಸಾರ್ವಜನಿಕ ಶೌಚಾಲಯ ವ್ಯವಸ್ಥೆ ಕಲ್ಪಿಸಬೇಕು, ಲಕ್ಷಗಟ್ಟಲೇ ಅನುದಾನ ಬಳಸಿ ಕಟ್ಟಿಸುವ ಶೌಚಾಲಯದ ನಿರ್ವಹಣೆಯತ್ತಲೂ ಗಮನಹರಿಸಬೇಕು ಎಂಬುದು ಬಹಳಷ್ಟು ಸಾರ್ವಜನಿಕರ ಆಗ್ರಹವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು