ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿಗೆ ಸಿದ್ದರಾಮಯ್ಯ ಕೊಡುಗೆ ಶೂನ್ಯ: ಸಿ.ಎನ್‌. ಅಶ್ವತ್ಥನಾರಾಯಣ ಟೀಕೆ

ಮೈ.ವಿ. ರವಿಶಂಕರ್‌ ಪರ ಮತಯಾಚನೆ
Last Updated 8 ಜೂನ್ 2022, 3:50 IST
ಅಕ್ಷರ ಗಾತ್ರ

ಮೈಸೂರು: ‘ಸಿದ್ದರಾಮಯ್ಯ ಐದು ವರ್ಷ ಮುಖ್ಯಮಂತ್ರಿಯಾಗಿಯೂ ಮೈಸೂರು ಭಾಗಕ್ಕೆ ನೀಡಿದ ಕೊಡುಗೆ ಶೂನ್ಯ’ ಎಂದು ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ಟೀಕಿಸಿದರು.

ದಕ್ಷಿಣ ಪದವೀಧರರ ಕ್ಷೇತ್ರದ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್‌ ಪರ ಪ್ರಚಾರ ಕಾರ್ಯದ ನಿಮಿತ್ತ ಮಂಗಳವಾರ ಹಮ್ಮಿಕೊಂಡಿದ್ದ ಅತಿಥಿ ಉಪನ್ಯಾಸಕರ ಜತೆ ಸಂವಾದ ಕಾರ್ಯಕ್ರಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಐದು ವರ್ಷಗಳಲ್ಲಿ ಮೈಸೂರಿಗೆ ಏನು ಮಾಡಬೇಕಿತ್ತೋ ಆ ಕೆಲಸಗಳನ್ನು ಸಿದ್ದರಾಮಯ್ಯ ಮಾಡಲಿಲ್ಲ. ಮಂಡಕಳ್ಳಿಯಲ್ಲಿರುವ ವಿಮಾನ ನಿಲ್ದಾಣದ ವಿಸ್ತರಣೆಯನ್ನೂ ಅವರು ಮಾಡಲಿಲ್ಲ. ನಮ್ಮ ಅವಧಿಯಲ್ಲಿ ವಿಸ್ತರಣೆ ಕೆಲಸ ನಡೆಯುತ್ತಿದೆ’ ಎಂದು ಹೇಳಿದರು.

‘ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ₹1.29 ಲಕ್ಷ ಕೋಟಿ ನೀಡಿದೆ. ರಾಜ್ಯದಲ್ಲಿ ಶಿಕ್ಷಣ, ಆರೋಗ್ಯ, ಮೂಲಸೌಕರ್ಯ ಸೇರಿದಂತೆ ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ಮೈಸೂರು– ಬೆಂಗಳೂರು ದಶಪಥ ಹೆದ್ದಾರಿ ಸೇರಿದಂತೆ ಒಟ್ಟಾರೆ 6 ಸಾವಿರ ಕಿ.ಮೀ ರಸ್ತೆ ಅಭಿವೃದ್ಧಿ ಕಾಮಗಾರಿ ನಡೆಯುತ್ತಿದೆ. ಹೆಚ್ಚಿನ ವಿಮಾನ ನಿಲ್ದಾಣಗಳನ್ನು ನಿರ್ಮಿಸಲಾಗುತ್ತಿದೆ. ಮೈಸೂರು ಭಾಗದಲ್ಲಿ ನಿರ್ಮಾಣಗೊಳ್ಳುವ ಸೆಮಿ ಕಂಡಕ್ಟರ್‌ ಪಾರ್ಕ್‌ನಿಂದ ದೊಡ್ಡ ಬದಲಾವಣೆ ಆಗಲಿದೆ’ ಎಂದು ತಿಳಿಸಿದರು.

‘ಜೂನ್‌ 21ರಂದು ಮೈಸೂರಿನಲ್ಲಿ ನಡೆಯುವ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಇದೇ ಹಿನ್ನೆಲೆಯಲ್ಲಿ ಯೋಗ ವಿಶ್ವವಿದ್ಯಾಲಯ ಸ್ಥಾಪಿಸಬೇಕು ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ಆದರೆ, ಪ್ರಧಾನಿ ಏನು ಘೋಷಿಸುತ್ತಾರೆ ಎಂಬುದು ಗೊತ್ತಿಲ್ಲ. ಪ್ರತ್ಯೇಕವಾಗಿ ಯೋಗ ವಿಶ್ವವಿದ್ಯಾಲಯ ನಿರ್ಮಿಸುವುದರಲ್ಲಿ ಅರ್ಥವಿಲ್ಲ. ಯೋಗವು ಕಲಿಕೆ, ಜೀವನದ ಭಾಗವಾಗಿರಬೇಕು. ಅದನ್ನು ಪ್ರತ್ಯೇಕಗೊಳಿಸಿದರೆ ಪ್ರಯೋಜನವಿಲ್ಲ. ಕಲೆ, ಸಾಹಿತ್ಯ, ಭಾಷೆ, ಸಂಸ್ಕೃತಿ, ಕ್ರೀಡೆ, ಯೋಗ ಎಲ್ಲವೂ ಒಳಗೊಳ್ಳಬೇಕು’ ಎಂದು ಡಾ.ಅಶ್ವತ್ಥನಾರಾಯಣ ತಿಳಿಸಿದರು.

ಶಾಸಕ ಎಲ್‌.ನಾಗೇಂದ್ರ, ದಕ್ಷಿಣ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮೈ.ವಿ. ರವಿಶಂಕರ್‌, ಬಿಜೆಪಿ ಮುಖಂಡರಾದ ಎಂ.ಶಿವಕುಮಾರ್‌, ಡಾ.ಚಂದ್ರಶೇಖರ್‌, ಟಿ.ರಮೇಶ್‌ ಇದ್ದರು.

ವಿವಿಧೆಡೆ ಸಚಿವರ ಪ್ರಚಾರ

ಸರ್ಕಾರಿ ಆಯುರ್ವೇದ ವೈದ್ಯಕೀಯ ಕಾಲೇಜು, ಮೈಸೂರು ವೈದ್ಯಕೀಯ ಕಾಲೇಜು ಹಾಗೂ ಸಂಶೋಧನಾ ಸಂಸ್ಥೆ, ಬಿಜಿಎಸ್‌ ಕಾಲೇಜು, ಮಹಾರಾಜ ಕಾಲೇಜು, ಯುವರಾಜ ಕಾಲೇಜು, ಸರಸ್ವತಿಪುರಂ ಹಾಗೂ ಕುವೆಂಪುನಗರದ ಬಾಸುದೇವ ಸೋಮಾನಿ ಕಾಲೇಜು ಹಾಗೂ ಕೆಬಿಎಲ್‌ ಆಲನಹಳ್ಳಿ ಬಡಾವಣೆಯ ಕಾವೇರಿ ಕಾಲೇಜಿಗೆ ಭೇಟಿ ನೀಡಿ ಪದವೀಧರರ ಮತಯಾಚನೆ ಮಾಡಿದರು.

‘ವಿವಿಧ ಕಾಲೇಜುಗಳಲ್ಲಿ ಪ್ರಚಾರ ನಡೆಸಿದ್ದು, ಉತ್ತಮ ಸ್ಪಂದನೆ ವ್ಯಕ್ತವಾಗಿದೆ. ಮತದಾರರು ಬಿಜೆಪಿ ಪರವಾಗಿ ಒಲವು ಹೊಂದಿದ್ದಾರೆ. ದೇಶ ಹಾಗೂ ರಾಜ್ಯಕ್ಕೆ ಸೂಕ್ತ ಪಕ್ಷ ಬಿಜೆಪಿ. ದೇಶಕ್ಕೆ ಉತ್ತಮ ನಾಯಕತ್ವ, ಆಡಳಿತ ಎಲ್ಲವನ್ನೂ ನೀಡುವ ಶಕ್ತಿ, ಕಾಳಜಿ ಇರುವ ಪಕ್ಷ ಬಿಜೆಪಿ’ ಎಂದು ಡಾ.ಸಿ.ಎನ್‌. ಅಶ್ವತ್ಥನಾರಾಯಣ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT