ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಸ್ವರ ಸಾಮ್ರಾಟನಿಗೆ ಗೀತ ನಮನ

ಗಾಯಕ ರಾಜೇಶ್‌ ಕೃಷ್ಣನ್‌ ತಂಡದಿಂದ ಎಸ್‌ಪಿಬಿ ಗೀತ ಗಾಯನ
Last Updated 22 ಅಕ್ಟೋಬರ್ 2020, 14:27 IST
ಅಕ್ಷರ ಗಾತ್ರ

ಮೈಸೂರು: ನಾಡಹಬ್ಬ ಮೈಸೂರು ದಸರಾದ ಸಾಂಸ್ಕೃತಿಕ ವೇದಿಕೆ ಬುಧವಾರ ರಾತ್ರಿ ವಿಶೇಷ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಯಿತು.

ಈಚೆಗಷ್ಟೇ ಅಗಲಿದ ಗಾನ ಗಾರುಡಿಗ, ಸ್ವರ ಸಾಮ್ರಾಟ ಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಂ ಅವರಿಗೆ ಗೀತ ನಮನ ಸಲ್ಲಿಸಿದ್ದು ವಿಶೇಷವಾಗಿತ್ತು.

ಗಾಯಕ ರಾಜೇಶ್‌ ಕೃಷ್ಣನ್‌ ತಂಡದ ಕಲಾವಿದರು ಎರಡು ತಾಸಿಗೂ ಹೆಚ್ಚಿನ ಅವಧಿ, ಡಾ.ಎಸ್‌.ಪಿ.ಬಾಲಸುಬ್ರಹ್ಮಣ್ಯಂ ಹಾಡಿದ ಹಲವಾರು ಕನ್ನಡ ಚಲನಚಿತ್ರ ಗೀತೆಗಳನ್ನು ಪ್ರಸ್ತುತಪಡಿಸಿ ಮೆಚ್ಚುಗೆಗೆ ಪಾತ್ರರಾದರು.

ರಾಜೇಶ್‌ ಕೃಷ್ಣನ್‌ ಕನ್ನಡ ರೋಮಾಂಚನವೀ ಕನ್ನಡ...ಕಸ್ತೂರಿ ನುಡಿಯಿದು, ಕರುನಾಡ ಮಣ್ಣಿದು...ಕರುನಾಡ ತಾಯಿ ಸದಾ ಚಿನ್ಮಯಿ ಹಾಡುಗಳನ್ನು ಹಾಡುವ ಮೂಲಕ ಕನ್ನಡ ಪ್ರೇಮವನ್ನು ಬಡಿದೆಬ್ಬಿಸಿದರು.

ಗಾಯಕಿ ಅನುರಾಧಾ ಭಟ್‌ ಜೊತೆ, ಜೊತೆಯಲಿ, ಜೊತೆ ಜೊತೆಯಲಿ ಇರುವೆನು ಹೀಗೆ ಎಂದೂ... ನಗುವ ನಯನ ಮಧುರ ಮೌನ...ಕೇಳದೆ ನಿಮಗೀಗ ಹಾಡುಗಳನ್ನು ಹಾಡುವ ಮೂಲಕ ಎಸ್‌ಪಿಬಿ ಸ್ಮರಿಸಿದರು.

ಸಂಗೀತ ನಿರ್ದೇಶಕ ರಾಜನ್‌, ಗಾಯಕಿ ಜಾನಕಿ ಅವರನ್ನು ಸ್ಮರಿಸಿ ಹಲವು ಹಾಡುಗಳನ್ನು ಹಾಡಿದರು. ಈ ಭೂಮಿ ಬಣ್ಣದ ಬುಗುರಿ, ಪವಡಿಸು ಪರಮಾತ್ಮ, ನೂರೊಂದು ನೆನಪು ಮುಂತಾದ ಜನಪ್ರಿಯ ಗೀತೆಗಳನ್ನು ಹಾಡುವ ಮೂಲಕ ವೀಕ್ಷಕರನ್ನು ಸಂಗೀತ ಲೋಕದೊಳಗೆ ಕರೆದೊಯ್ದರು.

ನುಡಿ ನಮನ ಸಾರ್ಥಕ: ಎಸ್‌ಪಿಬಿ ನೆನಪಿನಲ್ಲಿ ಆಯೋಜಿಸಿದ್ದ ನುಡಿನಮನ ಕಾರ್ಯಕ್ರಮವನ್ನು ಗಾಯಕ ರಾಜೇಶ್ ಕೃಷ್ಣನ್ ಸಾರ್ಥಕ ಪಡಿಸಿದ್ದಾರೆ ಎಂದು ಸಚಿವ ಎಸ್.ಟಿ.ಸೋಮಶೇಖರ್ ಸಂತಸ ವ್ಯಕ್ತಪಡಿಸಿದರು.

‘ಈಚೆಗೆ ನಮ್ಮನ್ನು ಅಗಲಿದ ಎಸ್‌ಪಿಬಿ‌ ಹೆಸರಿನಲ್ಲಿ ಒಂದು ಕಾರ್ಯಕ್ರಮ ಆಯೋಜಿಸಬೇಕು ಎಂದು ಬಯಸಿದ್ದೆವು. ಆ ಕಾರ್ಯಕ್ರಮಕ್ಕೆ ರಾಜೇಶ್ ಕೃಷ್ಣನ್ ಅವರನ್ನೇ ಕರೆಸಬೇಕೆಂಬುದು ನಮ್ಮ ಅಭಿಲಾಷೆಯಾಗಿತ್ತು. ನಮ್ಮ ಬಯಕೆ ಈಡೇರಿದೆ’ ಎಂದರು.

ಆರೋಗ್ಯ ಸಚಿವ ಡಾ.ಕೆ.ಸುಧಾಕರ್, ಶಾಸಕ ಎಲ್.ನಾಗೇಂದ್ರ ಮತ್ತಿತರರಿದ್ದರು.

ಅರಮನೆಯಲ್ಲಿ ಸರಸ್ವತಿ ಪೂಜೆ

ಮೈಸೂರು ಅರಮನೆಯಲ್ಲಿ ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಬುಧವಾರ ವಿದ್ಯಾದೇವತೆ ಸರಸ್ವತಿಯ ಪೂಜೆ ನೆರವೇರಿಸಿದರು.

ನವರಾತ್ರಿಯ ಐದನೇ ದಿನ ಅರಮನೆಯ ಕನ್ನಡ ತೊಟ್ಟಿಯಲ್ಲಿ ವಿದ್ಯಾ ದೇವತೆಯಾದ ಸರಸ್ವತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.

ಬೆಳಿಗ್ಗೆ 9.45ರಿಂದ 10.15ರವರೆಗಿನ ಶುಭ ಮುಹೂರ್ತದಲ್ಲಿ ತಾಯಿ ಸರಸ್ವತಿಯ ಪುರಾತನ ಪೋಟೋ ಮುಂದೆ ವೀಣೆ, ಪುಸ್ತಕಗಳಿಗೆ ಯದುವೀರ್ ಪೂಜೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT