ಬುಧವಾರ, ಮೇ 12, 2021
27 °C
ಪೊಲೀಸರ ದಿಢೀರ್ ಕ್ರಮಕ್ಕೆ ದಿಕ್ಕು ತೋಚದಂತಾದ ವ್ಯಾಪಾರಿ ಸಮೂಹ: ದೈನಂದಿನ ವಹಿವಾಟಿಗೆ ಹೊಡೆತ

ಅಂಗಡಿ–ಮಳಿಗೆಗಳ ಬಾಗಿಲು ಮುಚ್ಚಿಸಿದ ಪೊಲೀಸರು...

ಡಿ.ಬಿ.ನಾಗರಾಜ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ದೈನಂದಿನ ವಹಿವಾಟು ನಡೆಸಲಿಕ್ಕಾಗಿ ನಗರದ ವಿವಿಧೆಡೆ ತೆರೆದಿದ್ದ ಅಂಗಡಿ–ಮಳಿಗೆಗಳ ಬಾಗಿಲನ್ನು ಪೊಲೀಸರು ಗುರುವಾರ ಏಕಾಏಕಿ ಮುಚ್ಚಿಸಿದರು.

ಆರಂಭದಲ್ಲಿ ಪೊಲೀಸರ ದಿಢೀರ್‌ ಕ್ರಮಕ್ಕೆ ವರ್ತಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ಕೆಲವೆಡೆ ಮಾತಿನ ಚಕಮಕಿಯೂ ನಡೆಯಿತು. ನಗರದ ಎಲ್ಲೆಡೆ ಪೊಲೀಸ್‌ ಕಾರ್ಯಾಚರಣೆ ಕ್ಷಿಪ್ರಗತಿ ಪಡೆಯುತ್ತಿದ್ದಂತೆ; ಅಸಮಾಧಾನದಿಂದಲೇ ಬಾಗಿಲು ಮುಚ್ಚಿದ ವ್ಯಾಪಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಒಂದೆಡೆ ಪೊಲೀಸರು ಬಲವಂತವಾಗಿ ಅಂಗಡಿ ಮುಚ್ಚಿಸಲು ಮುಂದಾಗುತ್ತಿದ್ದಂತೆ; ಇನ್ನೊಂದೆಡೆ ಹಲವರು ಸ್ವಯಂಪ್ರೇರಿತರಾಗಿ ತಮ್ಮ ಅಂಗಡಿಗಳ ಬಾಗಿಲು ಮುಚ್ಚಿ ಮನೆಗೆ ತೆರಳಿದರು. ಪೊಲೀಸ್‌ ಗರುಡ ವಾಹನಗಳು ಸಹ ಅಂಗಡಿ ಮುಚ್ಚುವಂತೆ ನಗರದ ವಿವಿಧೆಡೆ ಸಂಚರಿಸಿ ಧ್ವನಿ ವರ್ಧಕದ ಮೂಲಕ ಸಂದೇಶ ಸಾರಿದ್ದರಿಂದ, ಬಹುತೇಕರು ತಮ್ಮ ಅಂಗಡಿಗಳ ಬಾಗಿಲಿಗೆ ಬೀಗ ಹಾಕಿಕೊಂಡು ಮನೆಯತ್ತ ಹೆಜ್ಜೆ ಹಾಕಿದರು.

ಈ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಕ್ಷಿಪ್ರಗತಿಯಲ್ಲಿ ಹರಡಿದ್ದರಿಂದ; ವ್ಯಾಪಾರಕ್ಕಾಗಿ ಮಾರುಕಟ್ಟೆಗೆ ದಾಂಗುಡಿಯಿಡಬೇಕಿದ್ದ ಜನರ ಸಂಖ್ಯೆಯೂ ಏಕಾಏಕಿ ಇಳಿಮುಖವಾಯಿತು.

ದಿನಸಿ ಅಂಗಡಿ, ಮೆಡಿಕಲ್‌ ಸ್ಟೋರ್‌, ಹೋಟೆಲ್‌, ಬೇಕರಿ ಸೇರಿದಂತೆ ದಿನಬಳಕೆಯ ವಸ್ತು, ಅವಶ್ಯ ವಸ್ತುಗಳಡಿ ಬರುವ ಅಂಗಡಿಗಳನ್ನು ಹೊರತುಪಡಿಸಿ ಇನ್ನುಳಿದ ಎಲ್ಲ ಅಂಗಡಿಗಳ ಬಾಗಿಲನ್ನು ಪೊಲೀಸರು ಮುಚ್ಚಿಸಿದರು.

ನಗರದ ಜನನಿಬಿಡ ದೇವರಾಜ ಮಾರುಕಟ್ಟೆ, ದೊಡ್ಡ ಗಡಿಯಾರದ ವೃತ್ತದ ಬಳಿ, ಕೆ.ಆರ್‌.ವೃತ್ತ, ಡಿ.ದೇವರಾಜ ಅರಸು ರಸ್ತೆ, ಕಾಳಿದಾಸ ರಸ್ತೆ, ಸಯ್ಯಾಜಿ ರಾವ್ ರಸ್ತೆ, ಶಿವರಾಂಪೇಟೆ, ಅಶೋಕ ರಸ್ತೆ, ಅಗ್ರಹಾರ, ಚಾಮರಾಜ ಜೋಡಿರಸ್ತೆ, ನಾರಾಯಣಶಾಸ್ತ್ರಿ ರಸ್ತೆ, ಇರ್ವಿನ್‌ ರಸ್ತೆ, ಮಂಡಿ ಮೊಹಲ್ಲಾ, ಕೆ.ಆರ್‌.ಮೊಹಲ್ಲಾ, ಲಷ್ಕರ್‌ ಮೊಹಲ್ಲಾ, ನಜರಾಬಾದ್, ಒಂಟಿಕೊಪ್ಪಲು, ಜಯನಗರ, ಚಾಮುಂಡಿಪುರಂ, ಶಾಂತಿನಗರ, ರಾಮಾನುಜ ರಸ್ತೆ, ನಂಜು ಮಳಿಗೆ, ಪ್ರವಾಸೋದ್ಯಮ ತಾಣಗಳು ಸೇರಿದಂತೆ ಜನದಟ್ಟಣೆ ಹೆಚ್ಚಿರುವ ಎಲ್ಲ ರಸ್ತೆಗಳಲ್ಲಿನ ಅಂಗಡಿಗಳನ್ನು ಪೊಲೀಸರು ಬಂದ್‌ ಮಾಡಿಸಿದರು.

ಮಧ್ಯಾಹ್ನದ ವೇಳೆಗೆ ಮೈಸೂರಿನ ಜನದಟ್ಟಣೆಯ ಸ್ಥಳಗಳಲ್ಲಿನ ಬಹುತೇಕ ಅಂಗಡಿಗಳು ಬಾಗಿಲು ಮುಚ್ಚಿದ್ದವು. ಇದರ ಪರಿಣಾಮ ಮುಸ್ಸಂಜೆಯ ಎಂದಿನ ವಹಿವಾಟು ನಡೆಯಲಿಲ್ಲ. ಸಂಜೆಯ ವೇಳೆಗೆ ರಸ್ತೆ ಬದಿಯೇ ತರಕಾರಿ ವ್ಯಾಪಾರಿಗಳು ತಮ್ಮ ವಹಿವಾಟು ನಡೆಸಿದ್ದು ಗೋಚರಿಸಿತು.

ಶಾಪಿಂಗ್ ಕಾಂಪ್ಲೆಕ್ಸ್‌, ಸಿನಿಮಾ ಚಿತ್ರಮಂದಿರ, ಜಿಮ್‌, ಈಜುಕೊಳ ಬುಧವಾರವೇ ತಮ್ಮ ಚಟುವಟಿಕೆ ಸ್ಥಗಿತಗೊಳಿಸಿದ್ದವು. ಅಂಗಡಿ–ಮಳಿಗೆ ಬಾಗಿಲು ಮುಚ್ಚಿದ್ದರೂ ಜನರ ಸಂಚಾರ ಹಿಂದಿಗಿಂತ ಕೊಂಚ ಕಡಿಮೆಯಿತ್ತು.

*****

ಕೋವಿಡ್‌–19 ಮಾರ್ಗಸೂಚಿ ಪಾಲನೆ: ಡಿಸಿಪಿ

‘ಮೈಸೂರಿನಲ್ಲಿ ಪೊಲೀಸರು ಯಾವುದೇ ಕಠಿಣ ಕ್ರಮ ತೆಗೆದುಕೊಂಡಿಲ್ಲ. ಕೋವಿಡ್‌–19 ಮಾರ್ಗಸೂಚಿ ಪಾಲಿಸಿದ್ದಾರಷ್ಟೇ’ ಎಂದು ಡಿಸಿಪಿ ಡಾ.ಎ.ಎನ್‌.ಪ‍್ರಕಾಶ್‌ಗೌಡ ತಿಳಿಸಿದರು.

‘ಸರ್ಕಾರದ ಸುತ್ತೋಲೆ, ಮಾರ್ಗಸೂಚಿ ಅನುಸಾರವೇ ಕೆಲಸ ಮಾಡುತ್ತಿದ್ದೇವೆ. ದಿನಸಿ ಅಂಗಡಿ, ಮೆಡಿಕಲ್‌ ಸ್ಟೋರ್, ಹಾಲು–ಹಣ್ಣು–ತರಕಾರಿ, ಮೀನು–ಮಾಂಸ, ಹಾರ್ಡ್‌ವೇರ್‌, ಕಬ್ಬಿಣ, ಸಿಮೆಂಟ್‌, ಎಲೆಕ್ಟ್ರಾನಿಕ್ಸ್‌ ವಸ್ತುಗಳ ಅಂಗಡಿ ತೆರೆಯಲಷ್ಟೇ ಅವಕಾಶವಿದೆ. ಉಳಿದವನ್ನು ತೆರೆಯಬಾರದು. ಅದರಂತೆ ಇನ್ನಿತರೆ ಅಂಗಡಿಗಳ ಬಾಗಿಲು ಮುಚ್ಚಿಸಿದ್ದೇವೆ. ಬಾರ್‌–ಹೋಟೆಲ್‌ನಿಂದ ಪಾರ್ಸೆಲ್‌ ಕೊಂಡೊಯ್ಯಲು ಅವಕಾಶ ನೀಡಿದ್ದೇವೆ’ ಎಂದು ಅವರು ಮಾಹಿತಿ ನೀಡಿದರು.

‘ಮೇ 4ರವರೆಗೂ ಈ ಆದೇಶ ಜಾರಿಯಲ್ಲಿರಲಿದೆ. ನಂತರ ಮುಂಬರುವ ಆದೇಶದಂತೆ ಕ್ರಮ ತೆಗೆದುಕೊಳ್ಳುತ್ತೇವೆ. ಮೈಸೂರಿನಲ್ಲಿ ಸಾಂಕ್ರಾಮಿಕ ಪಿಡುಗಾದ ಕೋವಿಡ್‌–19 ಒಬ್ಬರಿಂದ ಒಬ್ಬರಿಗೆ ಹರಡುವುದು ಹೆಚ್ಚುತ್ತಿದೆ. ಸಾವಿನ ಪ್ರಮಾಣವೂ ಹೆಚ್ಚಳಗೊಂಡಿದೆ. ಆದ್ದರಿಂದ ಕಠಿಣ ಕ್ರಮ ಅನಿವಾರ್ಯವಾಗಿದೆ. ವಾರದಿಂದೀಚೆಗೆ ಕೋವಿಡ್‌ ಮಾರ್ಗಸೂಚಿ ಉಲ್ಲಂಘಿಸಿದ 30 ಅಂಗಡಿ ಮಾಲೀಕರ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಿದ್ದೇವೆ’ ಎಂದು ಡಿಸಿಪಿ ತಿಳಿಸಿದರು.

‘ಶುಕ್ರವಾರ ರಾತ್ರಿ 9 ಗಂಟೆಯಿಂದ ಸೋಮವಾರ ಬೆಳಿಗ್ಗೆ 6 ಗಂಟೆಯವರೆಗೂ ವಾರಾಂತ್ಯದ ಕರ್ಫ್ಯೂ ಜಾರಿಯಲ್ಲಿರುತ್ತದೆ. ಶನಿವಾರ, ಭಾನುವಾರ ಸಹ ಬೆಳಿಗ್ಗೆ 6ರಿಂದ 10 ಗಂಟೆಯವರೆಗೆ ಮಾತ್ರ ಅವಶ್ಯಕ ಸೇವೆಗಳ ಅಂಗಡಿಗಳ ಬಾಗಿಲು ತೆರೆಯಬೇಕು. ಉಳಿದ ಅವಧಿ ಸಂಪೂರ್ಣ ಸ್ಥಬ್ಧ. ವ್ಯಾಪಾರಸ್ಥರು ಸಹ ಅಗತ್ಯವಿರುವಷ್ಟು ಪದಾರ್ಥ ಖರೀದಿಸಿ (ಹಾಲು–ಮಾಂಸ) ಮಾರಾಟ ಮಾಡಬೇಕು. ವಿನಾಃ ಕಾರಣ ಹೆಚ್ಚಿಗೆ ಖರೀದಿಸಿ ನಷ್ಟ ಮಾಡಿಕೊಳ್ಳಬಾರದು’ ಎಂದು ಪ್ರಕಾಶ್‌ಗೌಡ ಕಿವಿಮಾತು ಹೇಳಿದರು.

‘ಶನಿವಾರ–ಭಾನುವಾರ ಸೆಲೂನ್, ಬ್ಯೂಟಿ ಪಾರ್ಲರ್‌ ತೆರೆಯಲು ಅವಕಾಶವಿಲ್ಲ. ಉಳಿದ ದಿನಗಳಲ್ಲಿ ಎಂದಿನಂತೆ ತೆರೆಯಬಹುದು’ ಎಂದು ತಿಳಿಸಿದರು.

*****

ಮುಂಚಿತವಾಗಿಯೇ ಮಾಹಿತಿ ಕೊಡಬೇಕಿತ್ತು: ಹೊರಗಿನಿಂದ ಬಂದವರ ಪಾಡೇನು?

ದಿಢೀರ್‌ ನಿರ್ಧಾರ: ಮೈಸೂರಿಗರು ತತ್ತರ

ಡಿ.ಬಿ.ನಾಗರಾಜ

ಮೈಸೂರು: ಅಂಗಡಿ–ಮಳಿಗೆಗಳ ಬಾಗಿಲನ್ನು ಏಕಾಏಕಿ ಮುಚ್ಚಿಸಿದ ಪೊಲೀಸರ ದಿಢೀರ್‌ ನಿರ್ಧಾರ ಜನ ಸಮೂಹವನ್ನು ತತ್ತರಗೊಳಿಸಿದೆ. ಬಹುತೇಕರು ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

‘ಶನಿವಾರ, ಭಾನುವಾರ ಹೊರತುಪಡಿಸಿ ಉಳಿದ ದಿನಗಳಂದು ರಾತ್ರಿ‌ 9ರಿಂದ ಬೆಳಿಗ್ಗೆ 6 ಗಂಟೆಯವರೆಗೂ ಮಾತ್ರ ಕರ್ಫ್ಯೂ ಇರಲಿದೆ. ಉಳಿದ ಅವಧಿಯಲ್ಲಿ ಕೋವಿಡ್–19 ಮಾರ್ಗಸೂಚಿ ಪಾಲಿಸಿಕೊಂಡು ವಹಿವಾಟು ನಡೆಸಬಹುದು ಎಂಬ ಆದೇಶವೇ ಎಲ್ಲೆಡೆ ಹರಿದಾಡಿತ್ತು. ಅದರಂತೆ ನಾವು ವಹಿವಾಟು ನಡೆಸುತ್ತಿದ್ದೆವು.’

‘ಆದರೆ ಗುರುವಾರ ಪೊಲೀಸರು ಏಕಾಏಕಿ ನಮ್ಮ ಅಂಗಡಿಗಳ ಬಾಗಿಲು ಬಂದ್‌ ಮಾಡಿಸಿದರು. ಈಗಾಗಲೇ ವ್ಯಾಪಾರವಿಲ್ಲದೇ ಕಂಗಾಲಾಗಿದ್ದ ನಮಗೆ ಪೊಲೀಸರ ಈ ಕ್ರಮ ಗಾಯದ ಮೇಲೆ ಬರೆ ಹಾಕಿದಂತಾಗಿದೆ. ನಮ್ಮ ಹೊಟ್ಟೆಪಾಡು ಹೇಗೆ ಅನ್ನೊದೇ ಚಿಂತೆ ಆಗಿದೆ. ನಮಗೂ ಅವಕಾಶ ಮಾಡಿಕೊಟ್ಟಿದ್ರೆ, ನಾಲ್ಕು ಕಾಸು ದುಡ್ಕೊತ್ತಿದ್ದೆವು. ಈಗ ಎಲ್ಲದಕ್ಕೂ ತೊಂದರೆಯಾಗಿದೆ. ದಿಕ್ಕೇ ತೋಚದಂತಾಗಿದೆ’ ಎಂದು ಹಲವು ವ್ಯಾಪಾರಿಗಳು ‘ಪ್ರಜಾವಾಣಿ’ ಬಳಿ ತಮ್ಮ ಗೋಳು ತೋಡಿಕೊಂಡರು.

‘ಕನಿಷ್ಠ ಅರ್ಧ ದಿನವಾದರೂ ವ್ಯಾಪಾರಕ್ಕೆ ಅವಕಾಶ ಮಾಡಿಕೊಟ್ಟರೆ, ಬದುಕು ನಡೆಯಲಿದೆ. ಇಲ್ಲದಿದ್ದರೇ ಭಾರವಾಗಲಿದೆ. ದಿನ ದೂಡುವುದೇ ಕಷ್ಟವಾಗಲಿದೆ’ ಎಂದು ಶಾಂತಿನಗರದ ವ್ಯಾಪಾರಿ ಜಮೀಲ್‌ ತಿಳಿಸಿದರು.

‘ನಾವೂ ಈಗಾಗಲೇ ಸಾಕಷ್ಟು ನಷ್ಟದಲ್ಲಿ ಮುಳುಗಿದ್ದೇವೆ. ಬಾಡಿಗೆ ಕಟ್ಟಲೂ ಆಗುತ್ತಿಲ್ಲ. ಬಟ್ಟೆ, ಚಿನ್ನ–ಬೆಳ್ಳಿ, ಟೀ ಅಂಗಡಿಗಳನ್ನು ಮಾತ್ರ ಮುಚ್ಚಿಸುತ್ತಿರೋದು ಸರಿಯಲ್ಲ. ನಮಗೂ ಕಾಲ ನಿಗದಿ ಮಾಡಿ ಅವಕಾಶ ನೀಡಿ. ನೀವು ಕೊಟ್ಟ ಅವಧಿಯಲ್ಲೇ ಕೋವಿಡ್‌–19 ಮಾರ್ಗಸೂಚಿ ಪಾಲಿಸಿಕೊಂಡು ವ್ಯಾಪಾರ ಮಾಡಿಕೊಳ್ಳುತ್ತೇವೆ.’

‘ಇನ್ನೂ 13 ದಿನ ಬಂದ್‌ ಮಾಡಬೇಕು ಎಂಬುದು ನಮ್ಮ ಪಾಲಿಗೆ ಉರುಳಾಗಲಿದೆ. ಇದು ಇನ್ನೆಷ್ಷು ದಿನ ಮುಂದುವರೆಯುತ್ತೆ ಗೊತ್ತಿಲ್ಲ. ನಗರ ಪೊಲೀಸರ ದಿಢೀರ್‌ ಕ್ರಮ ಒಳ್ಳೆಯದಲ್ಲ. ಇದರಿಂದ ನಮ್ಮ ಕುಟುಂಬ ಬೀದಿಗೆ ಬೀಳಲಿದೆ. ರಾತ್ರಿ ಕರ್ಫ್ಯೂಗೆ ನಮ್ಮ ಸಹಮತವಿದೆ. ಹಗಲು ವೇಳೆ ಬಂದ್‌ ಮಾಡಿಸಿದ್ದರಿಂದ ನಮ್ಮ ಬದುಕು ನಿಂತಲ್ಲೇ ನಿಲ್ಲಲಿದೆ’ ಎಂದು ವ್ಯಾಪಾರಿ ಗಿರೀಶ್‌ ಕಣ್ಣೀರಿಟ್ಟರು.

‘ಯಾವುದೇ ಮುನ್ಸೂಚನೆ ನೀಡದೆ ಪೊಲೀಸರು ತೆಗೆದುಕೊಂಡ ನಿರ್ಧಾರ ಸರಿಯಿಲ್ಲ. ಶುಕ್ರವಾರ ರಾತ್ರಿಯಿಂದ ಸೋಮವಾರ ಬೆಳಿಗ್ಗೆಯವರಿಗೆ ಕರ್ಫ್ಯೂ ಇರಲಿದೆ ಎಂದೇ ನಾವು ತಿಳಿದುಕೊಂಡಿದ್ದೆವು. ಮನೆಗೆ ಬೇಕಿದ್ದ ವಸ್ತುಗಳನ್ನು ಶುಕ್ರವಾರ ಖರೀದಿಸೋಣ ಎಂದುಕೊಂಡಿದ್ದೆ. ಇದೀಗ ಏಕಾಏಕಿ ಬಾಗಿಲು ಮುಚ್ಚಿಸಿದ್ದಾರೆ. ಏನು ಮಾಡಬೇಕು ಎಂಬುದೇ ತೋಚದಂತಾಗಿದೆ’ ಎಂದು ರಾಜು ಅಸಮಾಧಾನ ವ್ಯಕ್ತಪಡಿಸಿದರು.

‘ಮೂರ್ತಿ ಮಾಡಿಸಲಿಕ್ಕಾಗಿ ದಾವಣಗೆರೆಯಿಂದ ಬಂದಿದ್ದೆ. ಬಟ್ಟೆ ತೆಗೆದುಕೊಳ್ಳಬೇಕು ಎಂದುಕೊಂಡಿದ್ದೆ. ಅದಿನ್ನೂ ಅಸಾಧ್ಯ. ಉಳಿಯಲು ರೂಂ ಸಿಕ್ಕರೆ ಸಾಕು. ಊಟ–ತಿಂಡಿಗೆ ತೊಂದರೆಯಾಗದಿದ್ದರೆ ನನ್ನ ಪುಣ್ಯ ಎಂದುಕೊಳ್ಳಬೇಕಿದೆ’ ಎಂದು ದಾವಣಗೆರೆಯ ಕೊಟ್ರೇಶ್‌ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು