ಶನಿವಾರ, ಅಕ್ಟೋಬರ್ 23, 2021
20 °C
ಹನಗೋಡು ವ್ಯಾಪ್ತಿಯಲ್ಲಿ ಭಾರಿ ವರ್ಷಧಾರೆ; ಲಕ್ಷಾಂತರ ರೂಪಾಯಿ ನಷ್ಟ

ಹನಗೋಡು ಭಾಗದಲ್ಲಿ ಬಿರುಗಾಳಿಸಹಿತ ಮಳೆ: ಆಸ್ತಿಗೆ ಹಾನಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹನಗೋಡು: ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ಬಿದ್ದ ಬಿರುಗಾಳಿಸಹಿತ ಭಾರಿ ಮಳೆಗೆ ಬಾಳೆ, ಮುಸುಕಿನ ಜೋಳದ ಬೆಳೆ, ಮರಗಳು, ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಮಣ್ಣಿನ ರಸ್ತೆಗಳು ಕೊಚ್ಚಿ ಹೋಗಿವೆ. ಹಲವೆಡೆ ಮನೆಗಳಿಗೂ ಹಾನಿಯಾಗಿದೆ.

ಬಿಲ್ಲೇನಹೊಸಹಳ್ಳಿ, ಕೊಳುವಿಗೆ, ಕೆ.ಜಿ.ಹಬ್ಬನಕುಪ್ಪೆ, ನೇರಳಕುಪ್ಪೆ ಕಚುವಿನಹಳ್ಳಿ, ಶೆಟ್ಟಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿರುಸಿನ ಮಳೆಯಾಗಿದ್ದು, ಬಹುತೇಕ ಕೆರೆ-ಕಟ್ಟೆಗಳು ಕೋಡಿ ಬಿದ್ದಿವೆ.

ಬಿಲ್ಲೇನಹೊಸಳ್ಳಿಯ ರಮೇಶ್‌ ಕಾಳೇಗೌಡ ಅವರಿಗೆ ಸೇರಿದ ಕೊಯ್ಲಿಗೆ ಬಂದಿದ್ದ ಎರಡು ಎಕರೆ ನೇಂದ್ರ ಬಾಳೆ, ತೋಮಸ್ ಹಾಗೂ ಮಾದೇಗೌಡ ಅವರ ಒಂದು ಎಕರೆ ಏಲಕ್ಕಿ ಬಾಳೆ ಗಿಡಗಳು ನೆಲಕಚ್ಚಿವೆ. ಜಾನ್ಸನ್ ಅವರ ಎರಡು ಎಕರೆ ಮರಗೆಣಸು, ಮೀನಾಕ್ಷಿ ಅವರ ಮೂರು ಎಕರೆ ಮುಸುಕಿನ ಜೋಳ ನಾಶವಾಗಿದ್ದು, ಲಕ್ಷಾಂತರ ರೂಪಾಯಿ ನಷ್ಟ ಉಂಟಾಗಿದೆ.

ಕಚುವಿನಹಳ್ಳಿಯ ತಾ.ಪಂ ಮಾಜಿ ಸದಸ್ಯ ಗಣಪತಿ ಅವರ ಜಮೀನಿನಲ್ಲಿದ್ದ ತೇಗ, ಆಕೇಶಿಯ, ಸಿಲ್ವರ್ ಸೇರಿದಂತೆ ಹತ್ತಾರು ಮರಗಳು, ಮಾದೇವಮ್ಮ ಬಾಜೇಗೌಡ ಅವರ ಎರಡು ತೆಂಗಿನ ಮರಗಳು ಬುಡಸಮೇತ ಮುರಿದು ಬಿದ್ದಿವೆ.

ಮನೆಗಳಿಗೆ ಹಾನಿ: ಹನಗೋಡಿನಲ್ಲಿ ಅಂಗಡಿ, ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಬಿಲ್ಲೇನಹೊಸಹಳ್ಳಿಯ ಎಸ್.ಪಿ.ರಾಜು, ಡಿ.ಸ್ವಾಮಿ, ಮಾದೇವಮ್ಮ, ಒ.ಕೆ.ರಾಧಾ, ಮಾದೇವಿ ಅವರ ವಾಸದ ಮನೆಗಳ ಮೇಲೆ ಮರಗಳು ಬಿದ್ದು ಹಾನಿಯಾಗಿವೆ.

ನೇರಳಕುಪ್ಪೆಯ ಶಿವ, ಕಚುವಿನಹಳ್ಳಿ ಮಾದೇವ ಹಾಗೂ ಕೊಳವಿಗೆ ಗ್ರಾಮದ ರಮ್ಯಾ ಮಹೇಶ್ ಹಾಗೂ ಮಂಜುಳಾ ಸಣ್ಣಪ್ಪ, ಬಿಲ್ಲೇನಹೊಸಳ್ಳಿಯ ಶಾಂತಿ ಹರೀಶ್, ಮಲ್ಲಮ್ಮ ಅವರ ಮನೆಗಳ ಗೋಡೆಗಳು ಕುಸಿದಿವೆ. ಕೆಲ ಮನೆಗಳ ಪಾತ್ರೆ, ಬಟ್ಟೆಬರೆ, ದಿನಸಿ ಪದಾರ್ಥಗಳು ಮಳೆ ನೀರಿನಲ್ಲಿ ತೋಯ್ದು ಹೋಗಿವೆ.

ಧರೆಗುರುಳಿದ ವಿದ್ಯುತ್ ಕಂಬಗಳು: ಬಿಲ್ಲೇನಹೊಸಹಳ್ಳಿ ಗ್ರಾಮದಲ್ಲಿ ಮರಗಳು ಬಿದ್ದು ಏಳು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ. ವಿದ್ಯುತ್ ಕಡಿತಗೊಂಡಿದೆ.

ಪರಿಹಾರ ನೀಡಲು ಮನವಿ: ಮಳೆಯಿಂದ ಮನೆ ಹಾಗೂ ಬೆಳೆ ನಷ್ಟವಾದ ಸಂತ್ರಸ್ತರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ನೇರಳಕುಪ್ಪೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಉದಯನ್ ಆಗ್ರಹಿಸಿದ್ದಾರೆ.

ನಾಗರಹೊಳೆ ರಾಷ್ಟೀಯ ಉದ್ಯಾನವನದ ವೀರನಹೊಸಹಳ್ಳಿ ಹಾಗೂ ಹುಣಸೂರು ವಲಯದ ಅರಣ್ಯ ಪ್ರದೇಶದಲ್ಲಿ ಉತ್ತಮ ಮಳೆಯಾಗಿದೆ.

ಹಾನಿಗೀಡಾದ ಪ್ರದೇಶಗಳಿಗೆ ಗ್ರಾಮ ಲೆಕ್ಕಿಗ ದೊಡ್ಡೇಶ್, ಸುಮಂತ್ ಭೇಟಿ ನೀಡಿ ಪರಿಶೀಲಿಸಿದರು.

ವಿವಿಧೆಡೆ ಧಾರಾಕಾರ ಮಳೆ
ವರುಣಾ:
ಹೋಬಳಿ ಭಾಗದಲ್ಲಿ ಬುಧವಾರ ರಾತ್ರಿ ಧಾರಾಕಾರ ಮಳೆ ಸುರಿಯಿತು.

ವರುಣಾ, ವರಕೋಡು, ಮೇಗಳಾಪುರ, ಹೊಸಕೋಟೆ, ದೇವಲಾಪುರ, ಆಲನಹಳ್ಳಿ, ನಾಡನಹಳ್ಳಿ ಮೆಲ್ಲಹಳ್ಳಿ ಮತ್ತಿತರ ಭಾಗದಲ್ಲಿ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿಯಿತು.

ಈ ಮಳೆಯಿಂದಾಗಿ ಭತ್ತದ ಬೆಳೆಗೆ ಅನುಕೂಲವಾಗಲಿದೆ ಎಂದು ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.