ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಾಕ್‌ಡೌನ್‌ ಮಾರ್ಗಸೂಚಿಗಳ ಉಲ್ಲಂಘನೆ; ಕಠಿಣ ಕ್ರಮಕ್ಕೆ ಮುಂದಾದ ಪೊಲೀಸರು

281ಕ್ಕೂ ಅಧಿಕ ವಾಹನಗಳ ವಶ
Last Updated 1 ಮೇ 2021, 4:39 IST
ಅಕ್ಷರ ಗಾತ್ರ

ಮೈಸೂರು: ಲಾಕ್‌ಡೌನ್‌ನ ಮೊದಲೆರಡು ದಿನಗಳ ಕಾಲ ಸೌಮ್ಯವಾಗಿಯೇ ವರ್ತಿಸಿದ್ದ ನಗರ ಪೊಲೀಸರು 3ನೇ ದಿನವಾದ ಶುಕ್ರವಾರ ಕಠಿಣ ಕ್ರಮಕ್ಕೆ ಮುಂದಾಗಿದ್ದಾರೆ. ಅನಗತ್ಯವಾಗಿ ಸಂಚರಿಸಿದವರ 281 ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.

ಸರ್ಕಾರ ಹೊರಡಿಸಿರುವ ಲಾಕ್‌ಡೌನ್‌ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ಪ್ರಕರಣವನ್ನೂ ದಾಖಲಿಸುತ್ತಿದ್ದಾರೆ.

ಮೊದಲ ದಿನ ಮೆದುವಾಗಿ ಎಚ್ಚರಿಕೆ ನೀಡಿದ್ದ ಪೊಲೀಸರು ಇನ್ನು ಮುಂದೆ ಈ ರೀತಿ ಮಾರ್ಗಸೂಚಿಗಳನ್ನು ಉಲ್ಲಂಘಿಸಬಾರದು ಎಂದು ಕಿವಿಮಾತು ಹೇಳಿದರು. ಅನಗತ್ಯವಾಗಿ ಸಂಚರಿಸುತ್ತಿದ್ದವರಿಗೆ ಮತ್ತೆ ಸಂಚರಿಸಿದರೆ ಕಠಿಣ ಕ್ರಮ ನಿಶ್ಚಿತ ಎಂಬ ಎಚ್ಚರಿಕೆಯನ್ನೂ ನೀಡಿದ್ದರು. ಆದರೆ, ಅನಗತ್ಯ ಸಂಚಾರ ನಿಂತಿರಲಿಲ್ಲ.

ಬೆಳಿಗ್ಗೆ 6 ಗಂಟೆಯಿಂದ 10 ಗಂಟೆಯವರೆಗೆ ಎಲ್ಲ ಪ್ರಮುಖ ರಸ್ತೆಗಳಲ್ಲೂ ದಿನಸಿ, ಹಣ್ಣು, ತರಕಾರಿಗಳ ಮಾರಾಟ ನಡೆಯುತ್ತಿತ್ತು. ಬಹುತೇಕ ರಸ್ತೆಗಳಲ್ಲಿ ಜನಸಂದಣಿ ಹೆಚ್ಚಿರುತ್ತಿತ್ತು. ಇದೇ ರೀತಿಯ ಪರಿಸ್ಥಿತಿ 10 ಗಂಟೆಯ ನಂತರವೂ ಕಂಡು ಬರತೊಡಗಿತು.

ಇದನ್ನೆಲ್ಲ ತಡೆಯಲು ಶುಕ್ರವಾರ ನಗರದ ಬಹುತೇಕ ರಸ್ತೆಗಳನ್ನು ಬ್ಯಾರಿಕೇಡ್‌ಗಳಿಂದ ಮುಚ್ಚಿದರು. ಚಾಮರಾಜ ಜೋಡಿ ರಸ್ತೆ, ಜೆಎಲ್‌ಬಿ ರಸ್ತೆ, ಇರ್ವಿನ್ ರಸ್ತೆ, ಅಶೋಕ ರಸ್ತೆ, ಸಯ್ಯಾಜಿರಾವ್ ರಸ್ತೆ ಸೇರಿದಂತೆ ಬಹುತೇಕ ರಸ್ತೆಗಳಲ್ಲಿ ಏಕಮುಖ ಸಂಚಾರವನ್ನು ಜಾರಿಗೊಳಿಸಿದರು. ರಸ್ತೆಯ ಒಂದೇ ಕಡೆ ವಾಹನಗಳು ಸಂಚರಿಸುವುದಕ್ಕೆ ವ್ಯವಸ್ಥೆ ಮಾಡಿದ ನಂತರ ತಪಾಸಣೆ ಸಲೀಸಾಯಿತು.

ಪ್ರತಿ ವಾಹನ ಸವಾರರನ್ನು ತಪಾಸಣೆಗೆ ಒಳಪಡಿಸಿದರು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ಉದ್ಯೋಗಿಗಳು ಅಧಿಕೃತವಾದ ಗುರುತಿನ ಚೀಟಿ ತೋರಿಸಿ ಸಂಚರಿಸಿದರು. ಗುರುತಿನ ಚೀಟಿ ಇಲ್ಲದವರು ಪರದಾಡಿದರು. ಯಾವುದೇ ದಾಖಲಾತಿ ಇಲ್ಲದೇ ಬಂದವರು ವಾಹನವನ್ನು ಪೊಲೀಸರ ವಶಕ್ಕೆ ನೀಡಿ ಕಾಲ್ನಡಿಗೆಯಲ್ಲಿ ಮನೆಯತ್ತ ಪ್ರಯಾಣಿಸಿದರು.

ರಸ್ತೆಗಿಳಿದ ಕಮಿಷನರ್

ವಾಹನ ಸಂಚಾರ ನಿಯಂತ್ರಿಸಲು ನಗರ ಪೊಲೀಸ್ ಕಮಿಷನರ್ ಡಾ.ಚಂದ್ರಗುಪ್ತ ಶುಕ್ರವಾರ ರಸ್ತೆಗಿಳಿದರು. ಇಲ್ಲಿನ ವಿಶ್ವೇಶ್ವರಯ್ಯ ವೃತ್ತ (ಆಯುರ್ವೇದಿಕ್ ವೃತ್ತ)ದಲ್ಲಿ ಅವರು ಪರಿಶೀಲನೆ ನಡೆಸಿದರು.

‘ಅನಗತ್ಯವಾಗಿ ಸಂಚರಿಸುತ್ತಿರುವವರ ಮೇಲೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಜನರು ಅನಗತ್ಯವಾಗಿ ಹೊರಬರಬಾರದು. ವೈದ್ಯಕೀಯ ತುರ್ತು ಪರಿಸ್ಥಿತಿ ಇದ್ದರೆ ಮಾತ್ರ ಹೊರಬೇಕು’ ಎಂದು ಅವರು ಇದೇ ವೇಳೆ ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT