ಗುರುವಾರ , ಮೇ 26, 2022
23 °C
ಶಕ್ತಿಧಾಮದಲ್ಲಿ ಬಾಲಕಿಯರಿಗಾಗಿ ಉಚಿತ ಬೇಸಿಗೆ ಶಿಬಿರಕ್ಕೆ ನಟ ಶಿವರಾಜಕುಮಾರ್ ಚಾಲನೆ

ಮೈಸೂರು | ಸಂತಸದ ಹೂಮಳೆಯಲ್ಲಿ ಮಿಂದೆದ್ದ ಮಕ್ಕಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಶಕ್ತಿಧಾಮದಲ್ಲಿ ನೂರಾರು ಮಕ್ಕಳು ಸಂಭ್ರಮದ ಹೂಮಳೆಯಲ್ಲಿ ಮಿಂದೆದ್ದರು. ನೆಚ್ಚಿನ ನಟ ಶಿವರಾಜಕುಮಾರ್ ಅವರೊಂದಿಗೆ ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಅವರೊಂದಿಗೆ ಮಾತನಾಡಿ ಸಂಭ್ರಮಿಸಿದರು.

ಇಲ್ಲಿ ಸೋಮವಾರ ನಡೆದ ಹೆಣ್ಣು ಮಕ್ಕಳ ಉಚಿತ ಬೇಸಿಗೆ ಶಿಬಿರದ ಪ್ರಾರಂಭೋತ್ಸವದಲ್ಲಿ ಈ ದೃಶ್ಯಗಳು ಕಂಡು ಬಂದವು.

ನಗಾರಿ ಹಾಗೂ ಇತರ ಕಲಾತಂಡಗಳೊಂದಿಗೆ ಶಕ್ತಿಧಾಮದ ಗೇಟಿನಿಂದ ಶಿವರಾಜ್‌ಕುಮಾರ್ ಹಾಗೂ ಅವರ ಪತ್ನಿ ಶಕ್ತಿಧಾಮದ ಅಧ್ಯಕ್ಷೆ ಗೀತಾ ಶಿವರಾಜ್‌ಕುಮಾರ್‌ ಹೆಜ್ಜೆ ಹಾಕುವ ಮೂಲಕ ಶಿಬಿರಕ್ಕೊಂದು ಮುನ್ನುಡಿ ಬರೆದರು. ಅಲ್ಲಲ್ಲಿ ನೆಟ್ಟಿದ್ದ ಸ್ಥಂಭಗಳಲ್ಲಿ ದೀಪಗಳನ್ನು ಮಕ್ಕಳು ಬೆಳಗಿದರು.

ಮೇದಾರಕೇರಿಯವರು ಬುಟ್ಟಿ ಹೆಣೆಯುವುದನ್ನು ಹೇಳಿಕೊಡುತ್ತಾರೆ, ವಿಶಾಲ್ ಮತ್ತು ಸಂಗಡಿಗರು ಕುಂಬಾರಿಕೆ ಕಲಿಸುತ್ತಾರೆ ಎಂದು ಶಿಬಿರದ ಸಂಚಾಲಕ ದೀಪಕ್‌ ತಿಳಿಸಿದರು.

ನಂತರ, ಮಕ್ಕಳು ಬೆಳಿಗ್ಗೆ ಕಲಿತ ‘ಇಳಿದು ಬಾರಮ್ಮಯ್ಯ ಇಳಿದು ಬಾರೆ ಬೆಟ್ಟದ ಚಾಮುಂಡಿ ಇಳಿದು ಬಾರೆ’ ಹಾಡನ್ನು ಹಾಡಿ ಸಮಾರಂಭಕ್ಕೆ ಚಾಲನೆ ಮಾಡಿದರು. ಕಲಾವಿದೆ ಅಪೂರ್ವ ಪುಷ್ಪಾಂಜಲಿ ನೃತ್ಯದ ಮೂಲಕ ಗಮನ ಸೆಳೆದರು.

ನಟ ಶಿವರಾಜ್‌ಕುಮಾರ್ ಮಾತನಾಡಿ, ‘ಎಲ್ಲ ಸೌಲಭ್ಯಗಳೂ ಎಲ್ಲರಿಗೂ ದಕ್ಕಬೇಕು. ಎಲ್ಲರೂ ನಮ್ಮ ಮಕ್ಕಳಂತೆ. ಶಕ್ತಿಧಾಮ ಮಕ್ಕಳ ಸೇವೆಗೆ ಒಂದು ಅವಕಾಶ. ತಾಯಿ ನಿಧನರಾದ ಬಳಿಕ ಇಲ್ಲಿಗೆ ಹೆಚ್ಚು ಬರುತ್ತಿದ್ದೇನೆ. ಶಾಂತಿ ಸಿಗುತ್ತಿದೆ’ ಎಂದರು.

‘ಪತ್ನಿ ಗೀತಾ ಅವರು ನನಗಿಂತ ಹೆಚ್ಚು ಶಿಕ್ಷಣ ಪಡೆದಿದ್ದರಿಂದ ಅವರೇ ಶಕ್ತಿಧಾಮದ ಅಧ್ಯಕ್ಷರಾಗಲು ಸೂಕ್ತ ಎನಿಸಿತು. ಇದರಲ್ಲಿ ಅವರದ್ದೇ ಹೆಚ್ಚು ಪಾತ್ರ ಇದೆ. ನನ್ನ ಪಾತ್ರ ಅಷ್ಟೇನೂ ಇಲ್ಲ’ ಎಂದರು.

ವ್ಯವಸ್ಥಾಪಕ ಧರ್ಮದರ್ಶಿ ಜಿ.ಎಸ್.ಜಯದೇವ ಮಾತನಾಡಿದರು. ಶಕ್ತಿಧಾಮದ ಸೇವಾಕಾರ್ಯದಲ್ಲಿ ಭಾಗಿಯಾದ ಷರೀಫ್, ಗೋಪಾಲಕೃಷ್ಣ, ಆನಂದ್, ಕೃಷ್ಞ, ಮುನಿಗೋಪಾಲರಾಜು, ಸದಾನಂದ, ಚೇತನ್ ಪ್ರಕಾಶ ಅವರನ್ನು ಸನ್ಮಾನಿಸಲಾಯಿತು.

ಕಲಾವಿದ ಶಿವಕುಮಾರ್ ಹಾಗೂ ಶಿಬಿರದಲ್ಲಿನ ಕೆಲವು ಮಕ್ಕಳು ಕೈಯಲ್ಲಿ ಬಿಡಿಸಿದ ನಟ ಪುನೀತ್‌ರಾಜಕುಮಾರ್ ಅವರ ಚಿತ್ರವನ್ನು ಶಿವರಾಜ್‌ಕುಮಾರ್‌ ಅವರಿಗೆ ನೀಡಿದರು.

ಶಕ್ತಿಧಾಮದ ಶೈಕ್ಷಣಿಕ ಆಡಳಿತಗಾರರಾದ ಮಂಜುಳಾ ಮಾತನಾಡಿದರು.  ಶಕ್ತಿಧಾಮದ ಉಪಾಧ್ಯಕ್ಷ ಕೆಂಪಯ್ಯ, ಖಜಾಂಚಿ ಎಂ.ಎನ್.ಸುಮನಾ, ಮುಖ್ಯಕಾರ್ಯನಿರ್ವಹಣಾಧಿಕಾರಿ ಸಂತೃಪ್ತಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.