ಶುಕ್ರವಾರ, ಮಾರ್ಚ್ 31, 2023
25 °C
ಅವಧಿ ಮೀರಿದ ಔಷಧ ಸಂಗ್ರಹಿಸಿ ವಿಲೇವಾರಿ ಮಾಡಲು ‘ಮೆಡ್ಸ್‌ಬಿನ್‌’ ಕಾರ್ಯಕ್ರಮ

ಕೆಆರ್‌ಪಿಎಗೆ ‘ಸ್ವಚ್ಛ ಸಾರಥಿ ಫೆಲೋಶಿಪ್‌’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಅವಧಿ ಮೀರಿದ ಔಷಧಗಳನ್ನು ಸಂಗ್ರಹಿಸಿ ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕಾರ್ಯದಲ್ಲಿ ತೊಡಗಿರುವ ಕರ್ನಾಟಕ ರಿಜಿಸ್ಟರ್ಡ್‌ ಫಾರ್ಮಾಸಿಸ್ಟ್‌ ಅಸೋಸಿಯೇಷನ್‌ಗೆ (ಕೆಆರ್‌ಪಿಎ) ಭಾರತ ಸರ್ಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ‘ಸ್ವಚ್ಛ ಸಾರಥಿ ಫೆಲೋಶಿಪ್‌ (ಎಸ್‌ಎಸ್‌ಎಫ್‌)– 2021’ ದೊರೆತಿದೆ.

‘ಕೆಆರ್‌ಪಿಎ ಸಂಸ್ಥೆಯು ರೋಟರಾಕ್ಟ್‌ ಮೈಸೂರು ಜೊತೆಗೂಡಿ ‘ಮೆಡ್ಸ್‌ಬಿನ್‌’ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಅವಧಿ ಮೀರಿದ ಔಷಧ ಹಾಗೂ ಉಪಯೋಗಕ್ಕೆ ಬಾರದ ಔಷಧಗಳನ್ನು ಸಂಗ್ರಹಿಸುವ ಉದ್ದೇಶದಿಂದ ಮೈಸೂರಿನ ಶಾರದಾ ವಿಲಾಸ ಕಾಲೇಜ್‌ ಆಫ್‌ ಫಾರ್ಮಸಿ, ಫರೂಕಿಯಾ ಕಾಲೇಜ್‌ ಆಫ್‌ ಫಾರ್ಮಸಿ, ಎನ್‌ಐಇ ಪ್ರಥಮ ದರ್ಜೆ ಕಾಲೇಜು ಹಾಗೂ ಮಹಾಜನ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೆಡ್ಸ್‌ಬಿನ್‌ಗಳನ್ನು ಸ್ಥಾಪಿಸಲಾಗಿದೆ. ಈ ಬಿನ್‌ಗೆ ಔಷಧಗಳನ್ನು ಹಾಕಬಹುದು. ಅವುಗಳನ್ನು ವಿಲೇವಾರಿ ಮಾಡುವ ಉದ್ದೇಶದಿಂದ ಸತ್ವ ಹೆಲ್ತ್‌ ಎಂಬ ಸಂಸ್ಥೆಯೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಅವರು ಔಷಧಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡಲಿದ್ದಾರೆ’ ಎಂದು ಕೆಆರ್‌ಪಿಎ ಅಧ್ಯಕ್ಷ ಕೌಶಿಕ್‌ ದೇವರಾಜು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಸ್ವಚ್ಛ ಸಾರಥಿ ಫೆಲೋಶಿಪ್‌ ಅಡಿ ಜುಲೈ 1ರಿಂದ ಒಂದು ವರ್ಷದವರೆಗೆ ಪ್ರತಿ ತಿಂಗಳು ₹2 ಸಾವಿರ ಫೆಲೋಶಿಪ್‌ ಸಿಗಲಿದೆ. ಈ ಹಣ ಬಳಸಿಕೊಂಡು ಮೆಡ್ಸ್‌ಬಿನ್‌ ಸ್ಥಾಪಿಸುವುದು, ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ’ ಎಂದರು.

ಕೆಆರ್‌ಪಿಎ ಸಲಹಾ ಸಮಿತಿಯ ಡಾ.ಸಲಾವುದ್ದೀನ್‌ ಮಾತನಾಡಿ, ‘ಅವಧಿ ಮುಗಿದ ಔಷಧ ವಿಷಕ್ಕೆ ಸಮ. ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು. ಸಾರ್ವಜನಿಕರು ಈ ಮೆಡ್ಸ್‌ಬಿನ್‌ಗಳಲ್ಲಿ ಔಷಧಗಳನ್ನು ಹಾಕಬೇಕು’ ಎಂದು ಮನವಿ ಮಾಡಿದರು.

ರೋಟರಾಕ್ಟ್‌ ಮೈಸೂರು ಸಂಸ್ಥೆಯ ಸುಮುಖ್‌ ಭಾರದ್ವಾಜ್‌ ಮಾತನಾಡಿ, ‘ಮೆಡ್ಸ್‌ಬಿನ್‌ಗಳನ್ನು 16ರಿಂದ 20 ಸ್ಥಳಗಳಲ್ಲಿ ಅಳವಡಿಸಲು ಉದ್ದೇಶಿಸಲಾಗಿದೆ’ ಎಂದರು.

ರೋಟರಾಕ್ಟ್‌ ಮೈಸೂರು ನಿರ್ದೇಶಕ ವಸಂತ ಜೋಶಿ, ಜಶ್ವಂತರ್‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು