ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಾಣಾಪಾಯದಿಂದ ತನ್ವೀರ್‌ ಸೇಠ್‌ ಪಾರು

ತೀವ್ರ ನಿಗಾ ಘಟಕದಲ್ಲಿ ಮುಂದುವರಿದ ಚಿಕಿತ್ಸೆ
Last Updated 18 ನವೆಂಬರ್ 2019, 19:45 IST
ಅಕ್ಷರ ಗಾತ್ರ

ಮೈಸೂರು: ಭಾನುವಾರ ತಡರಾತ್ರಿ ಯುವಕನೊಬ್ಬನಿಂದ ಹಲ್ಲೆಗೀಡಾದ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್‌ ಸೇಠ್‌ ಅವರ ಆರೋಗ್ಯ ಸ್ಥಿತಿ ಸುಧಾರಿಸುತ್ತಿದ್ದು, ಇಲ್ಲಿನ ಕೊಲಂಬಿಯಾ ಏಷಿಯಾ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರಿದಿದೆ.

‘ಮಧ್ಯಾಹ್ನದ ವೇಳೆ ವೆಂಟಿಲೇಟರ್ ತೆಗೆಯಲಾಗಿದೆ. ಮೂತ್ರಪಿಂಡ ಬಿಟ್ಟು ಉಳಿದೆಲ್ಲ ಅಂಗಾಂಗಳು ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿದೆ. ಅವರು ಅಪಾಯದಿಂದ ಪಾರಾಗಿದ್ದಾರೆ’ ಎಂದು ಆಸ್ಪತ್ರೆಯ ವೈದ್ಯಕೀಯ ಸೇವೆಗಳ ಮುಖ್ಯಸ್ಥ ಡಾ.ಉಪೇಂದ್ರ ಶೆಣೈ ಸೋಮವಾರ ತಿಳಿಸಿದರು.

‘ಕತ್ತಿಯ ಏಟಿನಿಂದ ಕುತ್ತಿಗೆ ಭಾಗದಲ್ಲಿ ಆಳವಾದ ಗಾಯವಾಗಿ, ಹೆಚ್ಚಿನ ರಕ್ತಸ್ರಾವವಾಗಿದೆ. ಶಸ್ತ್ರಚಿಕಿತ್ಸೆ ನಡೆಸಿ, ಕತ್ತರಿಸಿ ಹೋಗಿದ್ದ ಕುತ್ತಿಗೆಯ ರಕ್ತನಾಳ ಮತ್ತು ನರವನ್ನು ಸರಿಪಡಿಸುವ ಶಸ್ತ್ರಚಿಕಿತ್ಸೆ ನಡೆಸಲಾಗಿದೆ. 48 ಗಂಟೆಗಳ ನಂತರ ಅವರನ್ನು ವಾರ್ಡ್‌ಗೆ ಸ್ಥಳಾಂತರಿಸಲಾಗುವುದು’ ಎಂದು ಅವರು ಹೇಳಿದರು.

ಬನ್ನಿಮಂಟಪದ ಬಾಲಭವನದ ಆವರಣದಲ್ಲಿ ನಡೆದ, ತಮ್ಮ ಸಂಬಂಧಿ ಸಯ್ಯದ್ ಯೂನುಸ್ ಅವರ ಪುತ್ರನ ವಿವಾಹ ಸಮಾರಂಭದಲ್ಲಿ ತನ್ವೀರ್‌ ಸೇಠ್‌ ಭಾಗಿಯಾಗಿದ್ದರು. ರಾತ್ರಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಸ್ನೇಹಿತರೊಂದಿಗೆ ಸಂಗೀತ ಕೇಳುತ್ತಿದ್ದರು. ಈ ವೇಳೆ, ಫರ್ಹಾನ್‌ ಪಾಷಾ(25) ಎಂಬ ಯುವಕ ಅವರ ಮೇಲೆ ಏಕಾಏಕಿ ದಾಳಿ ಮಾಡಿದ್ದಾನೆ. ನೇರವಾಗಿ ಬಂದವನೇ ಅವರ ಕುತ್ತಿಗೆಯ ಎಡಭಾಗಕ್ಕೆ ಕತ್ತಿಯಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಗೃಹರಕ್ಷಕ ದಳದ ಸಿಬ್ಬಂದಿಯೊಬ್ಬರು ಆತನನ್ನು ಅಡ್ಡಗಟ್ಟಿ ಕೆಳಕ್ಕೆ ಬೀಳಿಸಿದ್ದಾರೆ. ಸ್ಥಳದಲ್ಲಿದ್ದ ಜನರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ಹಲ್ಲೆ ನಡೆಸಿದ್ದಾಗಿ ಒಪ್ಪಿಕೊಂಡಿರುವ ಫರ್ಹಾನ್, ‘ತನ್ವೀರ್‌ ಸೇಠ್‌ ಅವರಿಂದ ಯಾವುದೇ ಪ್ರಯೋಜನವಾಗಿಲ್ಲ. ಕ್ಷೇತ್ರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಹೀಗಾಗಿ, ಇಂತಹ ಜನಪ್ರತಿನಿಧಿ ಇರುವುದು ಬೇಡ ಎಂದು ಹಲ್ಲೆ ನಡೆಸಿದೆ’ ಎಂದು ಪೊಲೀಸರಿಗೆ ತಿಳಿಸಿದ್ದಾನೆ.

ಈ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ ಮುತ್ತುರಾಜ್, ‘ಫರ್ಹಾನ್‌ ಎಸ್‌ಡಿಪಿಐ ಕಾರ್ಯಕರ್ತ ಎನ್ನಲಾಗಿದ್ದು, ಈ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದ್ದಾರೆ.

ಫರ್ಹಾನ್ ಮನೆಯಲ್ಲಿ 6 ಮೊಬೈಲ್‌ಗಳು, ಎಸ್‌ಡಿಪಿಐ ಹಾಗೂ ಪಿಎಫ್‌ಐ ಸಂಘಟನೆಗೆ ಸೇರಿದ ಕರಪತ್ರ, ಬಂಟಿಂಗ್ಸ್‌ಗಳು ಹಾಗೂ ಹರಿತವಾದ ಆಯುಧಗಳು ಸಿಕ್ಕಿವೆ ಎಂದು ಮೂಲಗಳು ತಿಳಿಸಿವೆ.

‘ತನಿಖೆಗಾಗಿ 4 ತಂಡಗಳನ್ನು ರಚಿಸಲಾಗಿದೆ. ಆರೋಪಿಯ ಹಿಂದಿರುವ ಸಂಘಟನೆಯನ್ನು ಪತ್ತೆ ಹಚ್ಚುವ ಕೆಲಸ ನಡೆದಿದೆ’ ಎಂದುನಗರ ಪೊಲೀಸ್ ಆಯುಕ್ತ ಕೆ.ಟಿ.ಬಾಲಕೃಷ್ಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT