ಗುರುವಾರ, 8 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ದಸರೆಗೆ ಬಹುಮತ!

ಬೆಂಗಳೂರಿನಲ್ಲಿ ನಾಳೆ ದಸರಾ ಉನ್ನತ ಮಟ್ಟದ ಸಮಿತಿ ಸಭೆ
Last Updated 2 ಸೆಪ್ಟೆಂಬರ್ 2021, 2:58 IST
ಅಕ್ಷರ ಗಾತ್ರ

ಮೈಸೂರು: ಕೋವಿಡ್‌ ಮೂರನೇ ಅಲೆಯ ಭೀತಿ ನಡುವೆಯೇ ದಸರಾ ಮಹೋತ್ಸವ ಸಿದ್ಧತೆಗೆ ಶುಕ್ರವಾರ ಬೆಂಗಳೂರಿನಲ್ಲಿ ಮುನ್ನುಡಿ ಬರೆಯುತ್ತಿದ್ದು, ಈ ಬಾರಿ ನಾಡಹಬ್ಬ ಯಾವ ಸ್ವರೂಪದಲ್ಲಿರಬಹುದು ಎಂಬ ಕುತೂಹಲ ಜನರಲ್ಲಿ ಮೂಡಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ವಿಧಾನಸೌಧದಲ್ಲಿ ದಸರಾ ಉನ್ನತಮಟ್ಟದ ಸಭೆ ನಡೆಯಲಿದ್ದು, ಜಿಲ್ಲೆಯ ಜನಪ‍್ರತಿಧಿಗಳೊಂದಿಗೆ ಜಿಲ್ಲಾಧಿಕಾರಿ ಪಾಲ್ಗೊಳ್ಳಲಿದ್ದಾರೆ.

ಬಹುತೇಕರು ಸರಳ, ಸಾಂಪ್ರದಾಯಿಕ ದಸರೆ ಬಗ್ಗೆಯೇ ಒಲವು ತೋರಿದ್ದು, ಅದನ್ನೇ ಸಭೆಯಲ್ಲಿ ಮಂಡಿ
ಸುವುದಾಗಿ ಹೇಳಿದ್ದಾರೆ. ಒಂದೂವರೆ ವರ್ಷದಿಂದ ಪ್ರವಾಸೋದ್ಯಮಕ್ಕೆ ಪೆಟ್ಟು ಬಿದ್ದಿದ್ದು, ಆ ಕ್ಷೇತ್ರದವರೂ ‘ಉತ್ಸವ ಸರಳವಾಗಿಯೇ ಇರಲಿ’ ಎನ್ನುತ್ತಿದ್ದಾರೆ.

ಈ ಬಾರಿ ದಸರೆಯು ಅ.7ರಿಂದ 15ವರೆಗೆ ನಡೆಯಲಿದ್ದು, ಪೂರ್ವಸಿದ್ಧತೆ ಇನ್ನೂ ಆರಂಭವಾಗಿಲ್ಲ. ಅರಣ್ಯ ಇಲಾಖೆ 14 ಆನೆಗಳ ಸಂಭಾವ್ಯ ಪಟ್ಟಿ ಸಿದ್ಧಪಡಿಸಿಕೊಂಡಿದ್ದು, ಒಪ್ಪಿಗೆಗಾಗಿ ಕಾಯುತ್ತಿದೆ. ನಾಡಹಬ್ಬಕ್ಕೆ ಚಾಲನೆ ಸಿಗಲು ತಿಂಗಳಷ್ಟೇ ಉಳಿದಿದ್ದು, ಗಜಪಡೆಯನ್ನು ನಾಡಿಗೆ ಆಹ್ವಾನಿಸಿ ತಾಲೀಮು ನೀಡಬೇಕಿದೆ.

ಕಳೆದ ಬಾರಿಯೂ ಕೋವಿಡ್‌ ಆತಂಕದಿಂದಾಗಿ ಉದ್ಘಾಟನೆ, ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಮೆರವಣಿಗೆಗಷ್ಟೇ ಉತ್ಸವ ಸೀಮಿತವಾಗಿತ್ತು.

ಚಾಮುಂಡಿಬೆಟ್ಟದಲ್ಲಿ ನಡೆದ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನಿತರಿಗೆ ಮಾತ್ರ ಪ್ರವೇಶ ನೀಡಿ, ವರ್ಚ್ಯುಯಲ್ ವೇದಿಕೆ ಮೂಲಕ ವೀಕ್ಷಿಸಲು ಅವಕಾಶ ಮಾಡಲಾಗಿತ್ತು. ಅಂಬಾವಿಲಾಸ ಅರಮನೆ ಆವರಣದಲ್ಲಿ ಸರಳ ಹಾಗೂ ಸಾಂಪ್ರದಾಯಿಕವಾಗಿ ಜಂಬೂಸವಾರಿ ನಡೆದಿತ್ತು. ಗಜಪಯಣವನ್ನೂ ರದ್ದುಪಡಿಸಿ ಅರಮನೆ ಆವರಣದಲ್ಲಿ ಸರಳ ಪೂಜೆ ಮೂಲಕ ಬರಮಾಡಿಕೊಳ್ಳಲಾಗಿತ್ತು. ವಿದ್ಯುತ್‌ ದೀಪಾಲಂಕಾರ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಒತ್ತು ನೀಡಲಾಗಿತ್ತು.

ತಜ್ಞರ ಸಲಹೆ ಕೋರಿಕೆ: ಉನ್ನತಮಟ್ಟದ ಸಮಿತಿಯು ನಾಡಹಬ್ಬದ ಆಚರಣೆ ಬಗ್ಗೆ ಕೋವಿಡ್‌ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಕೇಳುವ ನಿರೀಕ್ಷೆ ಇದೆ.

ಕಳೆದ ವರ್ಷ ಕೋವಿಡ್‌ ಪ್ರಕರಣ ಹೆಚ್ಚಿದ್ದರಿಂದ ಸಮಿತಿಯು ಮೈಸೂರಿಗೆ ಬಂದು ಪರಿಶೀಲಿಸಿತ್ತು. ಉದ್ಘಾಟನೆಗೆ 200 ಮಂದಿ ಹಾಗೂ ಜಂಬೂಸವಾರಿಗೆ 300 ಮಂದಿಗೆ ಮಾತ್ರ ಪ್ರವೇಶ ನೀಡುವಂತೆ ಆರೋಗ್ಯ ಇಲಾಖೆಗೆ ವರದಿ ಸಲ್ಲಿಸಿತ್ತು. ಅದರಂತೆಯೇ ದಸರೆಯನ್ನು ಆಯೋಜಿಸಲಾಗಿತ್ತು.

ಅಭಿಪ್ರಾಯ...

ಕೊರೊನಾ ತೊಲಗಿಲ್ಲ, ಎಚ್ಚರ!

ಹೊರಗೆ ಬರಲು ಜನ ಕಾತರರಾಗಿದ್ದಾರೆ. ಆದರೆ, ಕೊರೊನಾ ತೊಲಗಿಲ್ಲ. ಹೀಗಾಗಿ, ಎಚ್ಚರಿಕೆ ವಹಿಸಬೇಕು. ಸಭೆ, ಸಮಾರಂಭ ನಡೆಸುತ್ತಿರುವ ರಾಜಕಾರಣಿಗಳಿಂದಾಗಿಯೇ ಸಮಸ್ಯೆ ಉಳಿದಿದೆ.

- ಎಚ್.ವಿಶ್ವನಾಥ್‌, ವಿಧಾನ ಪರಿಷತ್‌ ಸದಸ್ಯ

ಸಾಂಪ್ರದಾಯಿಕವಾಗಿರಲಿ

ಅದ್ದೂರಿಯೂ ಬೇಡ, ಸರಳವೂ ಬೇಡ. ಸಾಂಪ್ರದಾಯಿಕವಾಗಿರಲಿ. ಪೂಜಾ ಕಾರ್ಯಕ್ರಮಗಳಿಗೆ ತಡೆ ಬೇಡ. ದೀಪಾಲಂಕಾರ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿ. –ಪ್ರತಾಪಸಿಂಹ, ಸಂಸದ

ಜನ ನೊಂದಿದ್ದಾರೆ

ಜನರ ಬಹಳ ನೊಂದಿದ್ದಾರೆ. ಇಂಥ ಸಂದರ್ಭದಲ್ಲಿ ಅದ್ದೂರಿ ನಡೆಸಿ ಭಾವನೆಗಳಿಗೆ ಧಕ್ಕೆ ಉಂಟು ಮಾಡಬಾರದು. ಪ್ರವಾಸೋದ್ಯಮದ ಮೇಲೆ ಪರಿಣಾಮ ಬೀರಬಹುದು. ಆದರೆ, ಹೆಚ್ಚು ಜನ ಸೇರಿದರೆ ಮತ್ತೆ ಅನಾಹುತ ಉಂಟಾಗಬಹುದು. –ಸಾ.ರಾ.ಮಹೇಶ್‌, ಶಾಸಕ

ದುಂದುವೆಚ್ಚ ಬೇಡ

ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನ ಹಬ್ಬ ಮಾಡುವ ಸ್ಥಿತಿಯಲ್ಲಿಲ್ಲ. ಸಂಭ್ರಮಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿದ್ದಾರೆ. ಅನಗತ್ಯ ವೆಚ್ಚ ಬೇಡ

–‍ಪುಷ್ಪಾ ಅಮರನಾಥ್‌, ಅಧ್ಯಕ್ಷೆ, ಕೆಪಿಸಿಸಿ ಮಹಿಳಾ ಘಟಕ

ಜೀವನಕ್ಕಿಂತ ಜೀವ ಮುಖ್ಯ

ಕೋವಿಡ್‌ ಕಡಿಮೆಯಾದರೆ ಜೋರಾಗಿ ನಡೆಯಲಿ. ಇಲ್ಲದಿದ್ದರೆ ಸರಳವಾಗಿ ಆಚರಿಸಲಿ. ಪ್ರವಾಸೋದ್ಯಮಕ್ಕೆ ಹೊಡೆತ ಬಿದ್ದಿರುವುದು ನಿಜ. ಆದರೆ, ಜೀವನಕ್ಕಿಂತ ಜೀವ ಮುಖ್ಯ. -ಸಿ.ನಾರಾಯಣಗೌಡ, ‌ಅಧ್ಯಕ್ಷ, ಹೋಟೆಲ್‌ ಮಾಲೀಕರ ಸಂಘ ‌

ಅದ್ದೂರಿ ದಸರೆ ಬೇಡ

ಸುರಕ್ಷತೆ ದೃಷ್ಟಿಯಿಂದ ಅದ್ದೂರಿ ದಸರೆ ಬೇಡ. ದೊಡ್ಡಮಟ್ಟದಲ್ಲಿ ಆಚರಿಸಲು ಯಾರೂ ಮಾನಸಿಕವಾಗಿ ಸಿದ್ಧವಾಗಿಲ್ಲ. ಸರಳ, ಸಾಂಪ್ರದಾಯಿಕವಾಗಿಯೇ ಇರಲಿ. ಜಯಕುಮಾರ್‌, ಅಧ್ಯಕ್ಷ, ಮೈಸೂರು ಟ್ರಾವೆಲ್ಸ್‌ ಅಸೋಸಿಯೇಷನ್‌

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT