ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಟ್ಟೆಮಳಲವಾಡಿಯಲ್ಲಿ ತಂಬಾಕು ಹರಾಜು: ಮೊದಲ ದಿನ ಕೆ.ಜಿಗೆ ₹ 177ದರ ನಿಗದಿ

ಕಟ್ಟೆಮಳಲವಾಡಿಯಲ್ಲಿ ತಂಬಾಕು ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಆರಂಭ
Last Updated 8 ಅಕ್ಟೋಬರ್ 2020, 1:51 IST
ಅಕ್ಷರ ಗಾತ್ರ

ಹುಣಸೂರು: ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದಲ್ಲಿ ತಂಬಾಕು ಹರಾಜು ಮಾರುಕಟ್ಟೆ ಆರಂಭವಾಗಿದ್ದು, ಪ್ರಥಮ ದಿನವೇ ಕೆ.ಜಿ. ತಂಬಾಕಿಗೆ ₹ 177 ರಂತೆ ದಾಖಲೆ ದರದಲ್ಲಿ ಮಾರಾಟವಾಯಿತು.

ತಾಲ್ಲೂಕಿನ ಕಟ್ಟೆಮಳಲವಾಡಿ ಗ್ರಾಮದ ದೇವರಾಜ ಅರಸು ತಂಬಾಕು ಹರಾಜು ಮಾರುಕಟ್ಟೆಯಲ್ಲಿ ತಾ.ಪಂ. ಅಧ್ಯಕ್ಷೆ ಪದ್ಮಮ್ಮ ಮತ್ತು ವಲಯ ವ್ಯವಸ್ಥಾಪಕ ಮಂಜುನಾಥ್ ಚಾಲನೆ ನೀಡಿದರು.

‘ಪ್ಲಾಟ್ ಫಾರಂ 64ರಲ್ಲಿ ಕೆ.ಜಿ.ಗೆ ₹ 177ಗೆ ಮಾರಾಟವಾಗಿದ್ದು, ಈ ಸಾಲಿನ ಆರಂಭದಲ್ಲಿ ಅತಿ ಹೆಚ್ಚಿನ ದರಕ್ಕೆ ಮಾರಾಟವಾದ ದಾಖಲೆ ಇದಾಗಿದೆ. ಆರಂಭದಂದೆ ಮಾರುಕಟ್ಟೆಯಲ್ಲಿ ಕೆ.ಜಿ.ಗೆ ₹ 177 ದರ ನೀಡಿದ್ದು, ಈ ದರ ಪ್ರತಿ ದಿನವೂ ಇರಬೇಕು. ಇಲ್ಲವಾದಲ್ಲಿ ರೈತರು ಸಂಕಷ್ಟದಲ್ಲಿ ಸಿಲುಕುತ್ತಾರೆ’ ಎಂದು ತಾ.ಪಂ. ಅಧ್ಯಕ್ಷೆ ಪದ್ಮಮ್ಮ ಹೇಳಿದರು.

‘ಈ ಸಾಲಿನಲ್ಲಿ ಕೋವಿಡ್ ಕಾರಣದಿಂದ ಕೃಷಿ ಕೂಲಿ ಕಾರ್ಮಿಕರ ದರ ಹೆಚ್ಚಾಗಿದ್ದು, ತಂಬಾಕು ಉತ್ಪಾದನಾ ವೆಚ್ಚವೂ ಗಣನೀಯವಾಗಿ ಹೆಚ್ಚಾಗಿದೆ. ಹರಾಜು ಮಾರುಕಟ್ಟೆಯಲ್ಲಿ ರೈತರಿಗೆ ಉತ್ತಮ ದರ ಸಿಕ್ಕಲ್ಲಿ ಅಲ್ಪಮಟ್ಟದ ಲಾಭ ಸಿಗಲಿದೆ’ ಎಂದರು.

‘ತಂಬಾಕು ಹರಾಜಿನಲ್ಲಿ ಈಗಾಗಲೇ 7 ಕಂಪನಿಗಳು ಭಾಗವಹಿಸಿದ್ದು, ಈ ವಾರದ ಅಂತ್ಯದಲ್ಲಿ 15 ಕಂಪನಿಗಳು ಭಾಗವಹಿಸಲಿದೆ. ಮಂಡಳಿ ಉತ್ತಮ ದರ ಕೊಡಿಸಲು ಬದ್ಧವಾಗಿದ್ದು, ರೈತರು ಉತ್ತಮ ಗುಣಮಟ್ಟದ ತಂಬಾಕು ಮಾರುಕಟ್ಟೆಗೆ ತರಬೇಕು’ ಎಂದು ವಲಯ ವ್ಯವಸ್ಥಾಪಕ ಮಂಜುನಾಥ್ ಹೇಳಿದರು.

ಐಟಿಸಿ, ಲೀಫ್ ಮ್ಯಾನೇಜರ್ ಶ್ರೀನಿವಾಸ್ ರೆಡ್ಡಿ ಮಾತನಾಡಿ, ‘ಈ ಬಾರಿ ಉತ್ತಮ ಇಳುವರಿ ಬಂದಿದ್ದು, ರೈತರು ಗುಣಮಟ್ಟದ ಸೊಪ್ಪು ಬೆಳೆದಿದ್ದಾರೆ. ಮಾರುಕಟ್ಟೆಯಲ್ಲಿ ಉತ್ತಮ ಸೊಪ್ಪಿಗೆ ₹ 175 ನೀಡುತ್ತಿದ್ದು, ಇದೇ ದರ ಮುಂದುವರೆಯಲು ಇದೇ ಗುಣಮಟ್ಟದ ಸೊಪ್ಪು ಬರಬೇಕು’ ಎಂದರು.

ರೈತ ಅಶೋಕ್ ಮಾತನಾಡಿ, ‘ಕಳೆದ ಸಾಲಿನಲ್ಲಿ ಸರಾಸರಿ ₹ 125 ಸಿಕ್ಕಿದ್ದು, ನಷ್ಟ ಅನುಭವಿಸಿದ್ದೇವೆ. ಈ ಸಾಲಿನಲ್ಲಿ ಕೋವಿಡ್ ಆತಂಕದಲ್ಲೂ ತಂಬಾಕು ಬೆಳೆದಿದ್ದು, ರೈತರು ಹೆಚ್ಚು ವೆಚ್ಚ ಮಾಡಿದ್ದಾರೆ. ಮಂಡಳಿ ಕಂಪನಿಗಳೊಂದಿಗೆ ಮಾತನಾಡಿ ರೈತರನ್ನು ಉಳಿಸುವ ದಿಕ್ಕಿನಲ್ಲಿ ಮಾರುಕಟ್ಟೆ ನಡೆಸಬೇಕು’ ಎಂದರು.

ಹರಾಜು ಮಾರುಕಟ್ಟೆ ಆರಂಭದಲ್ಲಿ ಮಂಡಳಿ ಅಧಿಕಾರಿಗಳಾದ ದಿನೇಶ್, ವೀರಭದ್ರಯ್ಯ, ಬಿಜೆಪಿ ಮುಖಂಡ ರಮೇಶ್, ತಾಲ್ಲೂಕು ಘಟಕದ ಅಧ್ಯಕ್ಷ ನಾಗಣ್ಣ, ಹನಗೋಡು ಮಂಜುನಾಥ್ ಸೇರಿದಂತೆ ಹಲವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT