ಶನಿವಾರ, ಜನವರಿ 16, 2021
21 °C
ಒಂದೇ ದಿನಕ್ಕೆ 35 ಪೈಸೆಯಷ್ಟು ಕಡಿಮೆಯಾದ ಕೋಳಿಮೊಟ್ಟೆ ದರ

ಮೈಸೂರು | ಕುಸಿದ ಬೀನ್ಸ್ ದರ; ಟೊಮೆಟೊ ದುಬಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಇಲ್ಲಿನ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಬೀನ್ಸ್ ದರ ಕಳೆದ 20 ದಿನಗಳಲ್ಲಿ ಕೆ.ಜಿಗೆ ₹ 30ರಷ್ಟು ಕುಸಿತ ಕಂಡಿದ್ದು, ಬೆಳೆಗಾರರಿಗೆ ನಿರಾಸೆ ತರಿಸಿದೆ.

ತಿಂಗಳ ಆರಂಭದಲ್ಲಿ ಕೆ.ಜಿಗೆ ₹ 50 ಇದ್ದ ಬೆಲೆ ಈಗ ₹ 20ಕ್ಕೆ ಕುಸಿತ ಕಂಡಿದೆ. ಶುಕ್ರವಾರ ಕೆ.ಜಿ ಬೀನ್ಸ್ ₹ 15ಕ್ಕೆ ಇಳಿದಿತ್ತು.

ಆವಕದ ಪ್ರಮಾಣದಲ್ಲಿ ವ್ಯತ್ಯಾಸವಾಗದೇ ಇದ್ದರೂ, ಬೇಡಿಕೆಯಲ್ಲಿ ಇಳಿಕೆಯಾಗಿರುವುದು ಬೆಲೆ ಇಳಿಕೆಗೆ ಕಾರಣವಾಗಿದೆ. ಆಷಾಢದಲ್ಲಿ ಯಾವುದೇ ಶುಭ ಸಮಾರಂಭಗಳು ನಡೆಯದೇ ಇರುವುದರಿಂದ ಬೆಲೆ ಚೇತರಿಕೆ ಕಾಣುವ ಸಾಧ್ಯತೆ ಕಡಿಮೆ ಎಂದು ತರಕಾರಿ ವ್ಯಾಪಾರಿ ರಾಮಪ್ರಸಾದ್ ಹೇಳುತ್ತಾರೆ.

ಆದರೆ, ಟೊಮೆಟೊಗೆ ಬೇಡಿಕೆ ಹೆಚ್ಚಾಗಿದ್ದು, ಬೆಲೆ ದುಬಾರಿಯತ್ತ ಸಾಗಿದೆ. ಕಳೆದ ವಾರ ಕೆ.ಜಿಗೆ ₹ 11 ಇದ್ದ ಧಾರಣೆ ಸೋಮವಾರ ₹ 23ಕ್ಕೆ ತಲುಪಿತ್ತು. ಚಿಲ್ಲರೆ ದರವೂ ದುಬಾರಿಯಾಗುತ್ತಿದ್ದು, ಗ್ರಾಹಕರಿಗೆ ಬಿಸಿತುಪ್ಪವಾಗಿ ಪರಿಣಮಿಸಿದೆ.

‌ಹಸಿಮೆಣಸಿನಕಾಯಿಯ ದರವೂ ಏರುಗತಿಯಲ್ಲೇ ಇದೆ. ಕಳೆದ ವಾರ ಕೆ.ಜಿಗೆ ₹ 25 ಇದ್ದ ಧಾರಣೆ ಈಗ ₹ 28ನ್ನು ಮುಟ್ಟಿದೆ. ನುಗ್ಗೆಕಾಯಿ ₹ 35ರಿಂದ ₹ 40ಕ್ಕೆ, ದಪ್ಪಮೆಣಸಿನಕಾಯಿ ₹ 58ರಿಂದ ₹ 62ಕ್ಕೆ, ಬೆಂಡೇಕಾಯಿ ₹ 5ರಿಂದ ₹ 8ಕ್ಕೆ ಬೆಲೆ ಏರಿಕೆ ಕಂಡಿವೆ. ಬಹುತೇಕ ತರಕಾರಿಗಳ ಬೆಲೆಗಳು ಏರುಗತಿಯಲ್ಲಿರುವುದು ಬೆಳೆಗಾರರ ಸಂತಸಕ್ಕೆ ಕಾರಣವಾಗಿದೆ.

ಏಲಕ್ಕಿ ಬಾಳೆಹಣ್ಣಿನ ದರವು ಈ ವಾರ ಕೆ.ಜಿಗೆ ₹ 50ರಿಂದ ₹ 60ನ್ನು ತಲುಪಿದೆ. ಹಾಪ್‌ಕಾಮ್ಸ್‌ನಲ್ಲಿ ಕೆ.ಜಿಗೆ ₹ 52 ಇದ್ದರೆ, ಉಳಿದ ಮಾರುಕಟ್ಟೆಗಳಲ್ಲಿ ದರವು ಇದರ ಆಸುಪಾಸಿನಲ್ಲೇ ಇದೆ.

ಕೋಳಿಮೊಟ್ಟೆ ದರ ಕುಸಿತ: ರಾಷ್ಟ್ರೀಯ ಮೊಟ್ಟೆ ದರ ಸಮನ್ವಯ ಸಮಿತಿಯ ದರವು ಕಳೆದ ವಾರ ಒಂದು ಕೋಳಿ ಮೊಟ್ಟೆಗೆ ₹ 4.40 ಇತ್ತು. ಈಗ ಇದು ₹ 4.05ಕ್ಕೆ ಕಡಿಮೆಯಾಗಿದೆ. ಶನಿವಾರದವರೆಗೂ ದರ ₹ 4.40ರಲ್ಲೇ ಇತ್ತು. ಆದರೆ, ಮರುದಿನವೇ ದರ 35 ಪೈಸೆಗಳಷ್ಟು ಕುಸಿದಿರುವುದು ಪೌಲ್ಟ್ರಿ ಫಾರಂನವರ ಚಿಂತೆಗೆ ಕಾರಣವಾಗಿದೆ.

ತೊಗರಿಬೇಳೆಯ ಸಗಟು ಧಾರಣೆ ಕೆ.ಜಿಗೆ ₹ 92ರಿಂದ ₹ 100ಕ್ಕೆ ಏರಿಕೆ ಕಂಡಿದೆ. ಉದ್ದಿನಬೇಳೆ ₹ 120 ಹಾಗೂ ಹೆಸರುಬೇಳೆ ₹ 114ರಲ್ಲೇ ಸ್ಥಿರವಾಗಿವೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು