ಶನಿವಾರ, ಸೆಪ್ಟೆಂಬರ್ 18, 2021
26 °C

ಭತ್ತ ಕೃಷಿ ಕ್ಷೀಣ: ಅಂತರ್ಜಲ ಕುಸಿತ- ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಭತ್ತ ಬೆಳೆಯುವ ಪ್ರದೇಶ ಕ್ಷೀಣಿಸಿದ್ದರಿಂದ ಅಂತರ್ಜಲದ ಪ್ರಮಾಣವೂ ಕಡಿಮೆಯಾಗುತ್ತಿದೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಶುಕ್ರವಾರ ಇಲ್ಲಿ ಅಭಿಪ್ರಾಯಪಟ್ಟರು.

‘ಹಸಿರು ಮೈಸೂರಿಗಾಗಿ ಲಕ್ಷ ವೃಕ್ಷ ಆಂದೋಲನ’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಭತ್ತದ ಕೃಷಿಯಲ್ಲಿ ಸಾಮಾನ್ಯವಾಗಿ 4 ಇಂಚು ನೀರು ನಿರಂತರವಾಗಿ ಇರಲೇಬೇಕು. ಇದರಿಂದ ಅಂತರ್ಜಲ ವೃದ್ಧಿಯಾಗುತ್ತದೆ. ಆದರೆ, ಭತ್ತದ ಕೃಷಿ ಕಡಿಮೆಯಾಗುತ್ತಿರುವುದರಿಂದ ಭೂಮಿಗೆ ನೀರು ಮರುಪೂರಣವಾಗುತ್ತಿಲ್ಲ’ ಎಂದು
ಪ್ರತಿಪಾದಿಸಿದರು.

‘ಈ ವರ್ಷ ಆಗಸ್ಟ್‌ನಲ್ಲಿ ಸಂಕ್ರಮಣ–ಹುತ್ತರಿ ಸಮಯಕ್ಕೆ ಭತ್ತದ ತೆನೆಯೇ ಸಿಗಲಿಲ್ಲ. ಗಣೇಶ ಚತುರ್ಥಿಗೆ ದೇವರಿಗೆ ಹೊಸ ಅಕ್ಕಿಯ ನೈವೇದ್ಯ ಮಾಡಬೇಕು ಎಂಬುದು ನಿಯಮ. ಈ ಸಲ ಬರ ಪರಿಸ್ಥಿತಿಯಿಂದಾಗಿ ಭತ್ತವನ್ನೇ ಬೆಳೆಯಲಾಗಲಿಲ್ಲ. ನೈವೇದ್ಯಕ್ಕಾದರೂ ಆಗಲಿ ಎಂದು ಸ್ವತಃ ನಾನೇ ತೋಟದಲ್ಲಿ ಬೆಳೆದ ಭತ್ತವೂ ಅತಿವೃಷ್ಟಿಯಿಂದ ಹಾಳಾಯಿತು. ಕೊನೆಗೆ, 120 ಕಿ.ಮೀ ದೂರದ ಕುಂದಾಪುರದಿಂದ ಹೊಸ ಅಕ್ಕಿ ತರಿಸಿ ನೈವೇದ್ಯ ಮಾಡಬೇಕಾಯಿತು’ ಎಂದ ಹೆಗ್ಗಡೆ, ಇದೆಲ್ಲ ಹವಾಮಾನದ ವೈಪರೀತ್ಯದ ಫಲ ಎಂದು ವಿಶ್ಲೇಷಿಸಿದರು.

ಈಶ ಫೌಂಡೇಷನ್‌ನ ಜಗ್ಗಿ ವಾಸುದೇವ್ ಮಾತನಾಡಿ, ‘ರಾಜ್ಯದಲ್ಲಿ ಹೆಚ್ಚು ಮಳೆ ಬಿದ್ದಿದ್ದರಿಂದ ಅನಾವೃಷ್ಟಿಯಾಗಿಲ್ಲ. ಹಿಂದೆ ಎಷ್ಟು ಮಳೆ ಬಿದ್ದಿತ್ತೊ ಅಷ್ಟೇ ಮಳೆ ಈಗಲೂ ಬಿದ್ದಿದೆ. ಆದರೆ, ಆ ಮಳೆ ನೀರನ್ನು ಹಿಡಿದಿಡುವಂತಹ ಮರಗಳು ಕಡಿಮೆಯಾಗಿವೆ. ಹೀಗಾಗಿ, ನೀರು ಭೂಮಿಯಲ್ಲಿ ಇಂಗದೇ ಹರಿದು ಹೋಗುತ್ತಿದ್ದು, ಇದೇ ಪ್ರವಾಹ ಎನಿಸಿದೆ’ ಎಂದು ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.