ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಡಗು, ಕೇರಳಕ್ಕೆ ಗಿರಿಜನರ ವಲಸೆ; ತಪ್ಪದ ಬವಣೆ

ಮೈಸೂರಿನ ಹಾಡಿಗಳಿಂದ ಕಾಫಿ ತೋಟದೆಡೆಗೆ ನೂರಾರು ಕುಟುಂಬಗಳ ಪಯಣ
Last Updated 21 ಫೆಬ್ರುವರಿ 2022, 5:26 IST
ಅಕ್ಷರ ಗಾತ್ರ

ಹುಣಸೂರು/ ಎಚ್.ಡಿ.ಕೋಟೆ/ ಪಿರಿಯಾಪಟ್ಟಣ: ಮೈಸೂರುಜಿಲ್ಲೆಯ ವಿವಿಧ ಹಾಡಿಗಳಿಂದ ಗಿರಿಜನರು ಕೆಲಸಕ್ಕಾಗಿ ಕೊಡಗಿನ ಕಾಫಿ ತೋಟಗಳಿಗೆ ವಲಸೆ ಹೋಗುವ ‘ಅನಿವಾರ್ಯ ಸಂಪ್ರದಾಯ’ ಈ ವರ್ಷವೂ ಮುಂದುವರಿದಿದೆ.

ಹುಣಸೂರು ತಾಲ್ಲೂಕಿನ 54 ಹಾಡಿಗಳಲ್ಲಿ ವಾಸಿಸುತ್ತಿರುವ ಗಿರಿಜನ ಕುಟುಂಬಗಳಿಗೆ ಸಮರ್ಪಕವಾಗಿ ಉದ್ಯೋಗವಿಲ್ಲದೆ ವರ್ಷದಲ್ಲಿ ನಾಲ್ಕು ತಿಂಗಳು ಕಾಫಿ ತೋಟದಲ್ಲಿ ಕೆಲಸ ಮಾಡುವರು. ಅರಣ್ಯ ನಂಬಿ ಬದುಕು ಕಟ್ಟಿಕೊಂಡಿದ್ದ ಗಿರಿಜನರು ನಾಗರ ಹೊಳೆ ರಾಷ್ಟ್ರೀಯ ಉದ್ಯಾನವನ ಘೋಷಣೆ ಯಾದಾಗ ಕಾಡಿನಿಂದ ಹೊರಬಿದ್ದಿದ್ದರು. ಅವರಲ್ಲಿ ಹಲವರಿಗೆ ಸಮರ್ಪಕವಾಗಿ ಪುನರ್ವಸತಿ ಲಭಿಸಿಲ್ಲ. ನೂರಾರು ಕುಟುಂಬಗಳು ಹೊಟ್ಟೆಪಾಡಿಗಾಗಿ ಈಗಲೂ ವಲಸೆಯನ್ನೇ ಅವಲಂಬಿಸಿವೆ.

ವರ್ಷದ ಎಂಟು ತಿಂಗಳು ಹಾಡಿಯಲ್ಲಿ ನೆಲೆ ಕಟ್ಟಿಕೊಳ್ಳುವ ಇವರು ಜನವರಿಯಿಂದ ಏಪ್ರಿಲ್‌ವರೆಗೆ ಹಾಡಿ ತೊರೆದು ಮಕ್ಕಳು ಸೇರಿದಂತೆ ಕುಟುಂಬದೊಂದಿಗೆ ಕಾಫಿ ತೋಟಕ್ಕೆ ತೆರಳುವರು.

‘ಪುನರ್ವಸತಿ ಕೇಂದ್ರದಿಂದ ನಿತ್ಯ 20 ರಿಂದ 30 ಜೀಪ್‌ಗಳಲ್ಲಿ ಕೊಡಗಿನ ಕಾಫಿ ತೋಟಕ್ಕೆ ನಿತ್ಯ ಹೋಗಿ ಬರುವ ಕೂಲಿ ಕಾರ್ಮಿಕರಿದ್ದಾರೆ. ಕೆಲವರು ತಿಂಗಳುಗಳ ಕಾಲ ಅಲ್ಲೇ ಉಳಿದುಕೊಳ್ಳುವರು. ಗಿರಿಜನರಿಗೆ ನೀಡುವ ಸವಲತ್ತು ಗುಣಮಟ್ಟದಿಂದ ಇರಬೇಕು. ಇತ್ತೀಚೆಗೆ ನೀಡಿದ ಎತ್ತುಗಳು ಅನಾರೋಗ್ಯದಿಂದ ಬಳಲಿ ಸತ್ತು ಹೋದವು. ಸವಲತ್ತು ಹೆಚ್ಚಿಸಿದರೆ ವಲಸೆ ನಿಲ್ಲಬಹುದು’ ಎಂದು ನಾಗಾಪುರ ಪುನರ್ವಸತಿ ಕೇಂದ್ರದ ಬ್ಲಾಕ್ 2ರ ಮುಖಂಡ ಜೆ.ಕೆ.ಮಣಿ ಹೇಳುತ್ತಾರೆ.

ಎಚ್.ಡಿ.ಕೋಟೆ ತಾಲ್ಲೂಕಿನ ರೈತರು ಮಳೆ ಅವಲಂಬಿತ ಕೃಷಿಯನ್ನು ಹೆಚ್ಚಾಗಿ ಮಾಡುತ್ತಿರುವುದರಿಂದ, ಆದಿವಾಸಿಗಳಿಗೆ ವರ್ಷಪೂರ್ತಿ ಕೂಲಿ ಸಿಗುವುದಿಲ್ಲವಾದ್ದರಿಂದ ವಲಸೆ ಹೋಗುತ್ತಾರೆ.

ತಾಲ್ಲೂಕಿನಲ್ಲಿ 110 ಹಾಡಿಗಳಿದ್ದು, 18 ಸಾವಿರ ಜನಸಂಖ್ಯೆ ಇದೆ. ಅದರಲ್ಲಿ ಶೇ 70ರಷ್ಟು ಜನ ವಲಸೆ ಹೋಗುತ್ತಾರೆ. ಕೆಲವರು ಜನವರಿಯಿಂದ ಏಪ್ರಿಲ್‌ವರೆಗೆ ಕೊಡಗು, ಕೇರಳಕ್ಕೆ ವಲಸೆ ಹೋದರೆ, ಇನ್ನೂ ಕೆಲವರು ವರ್ಷಪೂರ್ತಿ ಅಲ್ಲೇ ಇದ್ದು ಕೂಲಿ ಕೆಲಸ ಮಾಡುವರು. ಹಬ್ಬ, ಹರಿದಿನಗಳಲ್ಲಿ ಮಾತ್ರ ಇಲ್ಲಿಗೆ ಬರುತ್ತಾರೆ.

ಕಾಫಿ ತೋಟದ ಕೆಲಸದ ಜತೆಗೆ, ತೋಟ ಹದ ಮಾಡುವುದು, ಭತ್ತದ ಗದ್ದೆಯ ಕೆಲಸವನ್ನೂ ಮಾಡುವರು. ವಲಸೆ ಹೋಗುವಾಗ ಜೊತೆಯಲ್ಲಿ ಮಕ್ಕಳನ್ನೂ ಕರೆದೊಯ್ಯುವರು. ಇದರಿಂದ ಅವರು ಶಿಕ್ಷಣದಿಂದ ವಂಚಿತರಾಗುತ್ತಾರೆ.

ಪಿರಿಯಾಪಟ್ಟಣ ವರದಿ: ಪಿರಿಯಾಪಟ್ಟಣ ತಾಲ್ಲೂಕಿನ ಗಡಿಯಂಚಿನ ಹಾಡಿಗಳಿಂದ ಕೊಡಗಿನ ಕಾಫಿ ತೋಟಗಳಿಗೆ ಕೂಲಿ ಕಾರ್ಮಿಕರು ವಲಸೆ ಹೋಗುವುದು ಸಾಮಾನ್ಯ.

ತಾಲ್ಲೂಕಿನ ರಾಣಿ ಗೇಟ್, ಮುತ್ತೂರು ರಾಜು ಗ್ರಾಮ, ಮರಳು ಕಟ್ಟೆ ಹಾಡಿ, ಹೊಸಕೆರೆ ಹಾಡಿ, ಬೆಮ್ಮತ್ತಿ ಹಾಡಿ ಸೇರಿದಂತೆ ಕೆಲವು ಹಾಡಿಗಳ ಗಿರಿಜನರು ಕಾಫಿ ಹಣ್ಣು ಮತ್ತು ಕರಿಮೆಣಸು ಕೊಯ್ಲು ಹಾಗೂ ಕಾಫಿ ತೋಟದ ಕಳೆ ತೆಗೆಯುವ ಕೆಲಸ ಮಾಡುವರು.

‘ತಾಲೂಕಿನಲ್ಲಿ ನಿರಂತರ ಕೂಲಿ ದೊರೆಯದ ಕಾರಣ ಮತ್ತು ನರೇಗಾ ಯೋಜನೆಯಲ್ಲಿ ಕೂಲಿಯ ಪ್ರಮಾಣ ಕಡಿಮೆ ಇರುವುದರಿಂದ ವಲಸೆ ಅನಿವಾರ್ಯ ಎನಿಸಿದೆ. ಕೊಡಗಿನ ಕಾಫಿ ತೋಟಗಳಲ್ಲಿ ವರ್ಷದ ಬಹುತೇಕ ತಿಂಗಳು ಕೆಲಸ ಇರುತ್ತದೆ’ ಎನ್ನುತ್ತಾರೆ ಗಿರಿಜನ ಮುಖಂಡ ಬಸಪ್ಪ.

‘ಸರ್ಕಾರದ ಯೋಜನೆ ಬಳಸುತ್ತಿಲ್ಲ’

‘ಕೊಡಗಿನ ಕಾಫಿ ತೋಟಕ್ಕೆ ನಾಲ್ಕು ತಿಂಗಳು ವಲಸೆ ಹೋಗುವ ಗಿರಿಜನರು, ಇತರ ದಿನಗಳಲ್ಲಿ ಹಾಡಿಯಲ್ಲೇ ಇರುತ್ತಾರೆ. ಅವರಿಗೆ ಸರ್ಕಾರವು ಈಗಾಗಲೇ ಭೂಮಿ ನೀಡಿದ್ದು, ಇತರ ಯೋಜನೆಗಳಲ್ಲಿ ವಿವಿಧ ಸವಲತ್ತುಗಳನ್ನು
ನೀಡಿದೆ. ಆದರೆ ಅವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವ ಪ್ರವೃತ್ತಿ ಕಾಣುತ್ತಿಲ್ಲ. ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ’ ಎಂಬುದು ಹುಣಸೂರು ತಾಲ್ಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಸವರಾಜ್ ಅವರ ಹೇಳಿಕೆ.

‘ವಲಸೆ ಹೋಗುವ ಗಿರಿಜನರನ್ನು ಒಂದು ಸ್ಥಳದಲ್ಲಿ ಉಳಿಸಿಕೊಂಡು ಉದ್ಯೋಗ ನೀಡುವ ಯಾವುದೇ ಯೋಜನೆಗಳು ಕಾರ್ಮಿಕ ಇಲಾಖೆಯಲ್ಲಿ ಇಲ್ಲ. ಜಾಗೃತಿ ಮೂಡಿಸುವ ಕಾರ್ಯಕ್ರಮ ಆಗಿಂದಾಗ್ಗೆ ನಡೆಸುತ್ತಿದ್ದೇವೆ’ ಎಂದು ಕಾರ್ಮಿಕ ಇಲಾಖೆ ತಾಲ್ಲೂಕು ಅಧಿಕಾರಿ ಲಕ್ಷ್ಮೀಶ ತಿಳಿಸಿದರು.

ಜನ ಏನಂತಾರೆ?

ಮನವೊಲಿಸುವ ಕೆಲಸ ಆಗಲಿ

ಗಿರಿಜನರು ಒಂದು ಕಡೆ ತಳವೂರಿ ಬದುಕು ಸಾಗಿಸುವುದು ಅಪರೂಪ. ಅವರ ಮನವೊಲಿಸುವ ಪ್ರಾಮಾಣಿಕ ಕೆಲಸ ಆಗಬೇಕು. ನಾಗಾಪುರದಲ್ಲಿ 280 ಗಿರಿಜನ ಕುಟುಂಬವಿದ್ದು, ಇವರಲ್ಲಿ ಶೇ 25 ಕುಟುಂಬಗಳ ಸದಸ್ಯರು ಕೃಷಿಯಲ್ಲಿ ತೊಡಗಿ ಆರ್ಥಿಕವಾಗಿ ಅಲ್ಪಮಟ್ಟಿಗೆ ಸಬಲರಾಗಿದ್ದಾರೆ. ಶೇ 75 ರಷ್ಟು ಜನರು ತಮ್ಮ ಭೂಮಿ ಬೇರೆಯವರಿಗೆ ಗುತ್ತಿಗೆ ನೀಡಿ ಕೊಡಗಿಗೆ ವಲಸೆ ಹೋಗುತ್ತಾರೆ.

–ಜೆ.ಕೆ.ಮಣಿ, ಮುಖಂಡ, ನಾಗಾಪುರ ಬ್ಲಾಕ್ 2, ಹುಣಸೂರು

***

ಇನ್ನಷ್ಟು ಸವಲತ್ತು ನೀಡಬೇಕು

ಐಟಿಡಿಪಿ ಇಲಾಖೆ ಗಿರಿಜನರನ್ನು ಜಾಗೃತಿಗೊಳಿಸಿದ ಬಳಿಕ ಇನ್ನಷ್ಟು ಸವಲತ್ತು ನೀಡಬೇಕು. ನಮ್ಮ ಸಮುದಾಯದ ಜನರಿಗೆ ಅರಿವು ಮೂಡಿಸದೆ ಕೇವಲ ಸವಲತ್ತು ನೀಡುವುದರಿಂದ ಯಾವುದೇ ಪ್ರಯೋಜನವಾಗದು. ಅದು ಇಲಾಖೆಯ ದಾಖಲೆಗಷ್ಟೇ ಸೀಮಿತವಾಗುತ್ತದೆ. ವಲಸೆ ತಪ್ಪಿಸಲು ಅಗತ್ಯ ಕ್ರಮವಹಿಸಬೇಕು.

–ಜೆ.ಕೆ.ಬಸವ, ನಾಗಾಪುರ ಪುನರ್ವಸತಿ ಕೇಂದ್ರ, ಹುಣಸೂರು

***

ಕಿರು ಉತ್ಪನ್ನ ಸಂಗ್ರಹಕ್ಕೆ ಅವಕಾಶ ಸಿಗಲಿ

ಆದಿವಾಸಿಗಳಿಗೆ 2006 ಅರಣ್ಯ ಹಕ್ಕು ಕಾಯ್ದೆಯಡಿ ಕಾಡಿನಿಂದ ಕಿರು ಉತ್ಪನ್ನ ಸಂಗ್ರಹಕ್ಕೆ ಅವಕಾಶ ನೀಡಬೇಕು. ಅವರು ಸಂಗ್ರಹಿಸಿದ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಪಡಿಸುವ ಜತೆಗೆ ಸೂಕ್ತ ಮಾರುಕಟ್ಟೆಯನ್ನೂ ಒದಗಿಸಬೇಕು. ಸಾಮುದಾಯಿಕ ಹಕ್ಕು ಪತ್ರಗಳನ್ನು ನೀಡಿ ಅವರನ್ನು ಉದ್ಯೋಗವಂತರನ್ನಾಗಿ ಮಾಡಬೇಕು.

–ಶೈಲೇಂದ್ರ, ಆದಿವಾಸಿ ಮುಖಂಡ, ಎಚ್‌.ಡಿ.ಕೋಟೆ

***

ಪರ್ಯಾಯ ಉದ್ಯೋಗ ಕೊಡಿ

ಹಾಡಿಗಳಲ್ಲಿ ಇದ್ದರೆ ವರ್ಷಪೂರ್ತಿ ಕೆಲಸ ಇರುವುದಿಲ್ಲ. ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅರಣ್ಯ ಇಲಾಖೆ ಇವುಗಳ ಸಹಯೋಗದಲ್ಲಿ ಆದಿವಾಸಿಗಳಿಗೆ ಸ್ಥಳೀಯವಾಗಿ ಉದ್ಯೋಗ ಕೊಡುವ ನಿಟ್ಟಿನಲ್ಲಿ ಕ್ರಮ ಆಗಬೇಕು. ವಲಸೆ ಹೋಗುವುದರಿಂದ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಿದೆ. ಮುಂದೆ ಅವರು ಕೂಡ ಹೆತ್ತವರ ಹಾದಿಯನ್ನೇ ಹಿಡಿಯುತ್ತಾರೆ.

–ಪುಟ್ಟಬಸವ ವಡ್ಡರಗುಡಿ, ಆದಿವಾಸಿ ಮುಖಂಡ, ಎಚ್‌.ಡಿ.ಕೋಟೆ

ನಿರ್ವಹಣೆ: ಮಹಮ್ಮದ್‌ ನೂಮಾನ್. ಮಾಹಿತಿ: ಎಚ್.ಎಸ್.ಸಚ್ಚಿತ್, ಸತೀಶ್‌ ಆರಾಧ್ಯ, ಬಿ.ಆರ್‌.ಗಣೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT