ಸೋಮವಾರ, ಜನವರಿ 20, 2020
29 °C
ಶ್ರೀ ರಾಮಕೃಷ್ಣ ವಿದ್ಯಾ ಶಾಲಾ ವಿದ್ಯಾರ್ಥಿಗಳ ಸಾಧನೆ

ಮೈಸೂರು ವಲಯ ಮಟ್ಟದ ‘ಪ್ರಜಾವಾಣಿ ಕ್ವಿಜ್‌’: ಅವಳಿ ಸಹೋದರರಿಗೆ ಮೊದಲ ಸ್ಥಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ವಲಯದ ‘ಪ್ರಜಾವಾಣಿ ಕ್ವಿಜ್’ ಚಾಂಪಿಯನ್‌ಷಿಪ್‌ನಲ್ಲಿ ನಗರದ ಶ್ರೀ ರಾಮಕೃಷ್ಣ ವಿದ್ಯಾ ಶಾಲಾ ವಿದ್ಯಾರ್ಥಿಗಳು ಸಂಪೂರ್ಣ ಮೇಲುಗೈ ಸಾಧಿಸಿದರು.

ಮೊದಲ ಮೂರು ಸ್ಥಾನಗಳನ್ನು ಗಳಿಸುವ ಮೂಲಕ ಪಾರಮ್ಯ ಮೆರೆದರು. ಇತಿಹಾಸ ಸೃಷ್ಟಿಸಿದರು. ಒಂದೇ ಶಾಲೆಗೆ ಮೊದಲ ಮೂರು ಬಹುಮಾನ ದೊರೆತಿದ್ದು ಇದೇ ಮೊದಲು.

‘ಮೊದಲ ಮೂರು ಬಹುಮಾನ ನಮ್ಮ ಶಾಲೆಗೆ ದೊರೆತಿದ್ದು ಖುಷಿಯಾಗಿದೆ. ಶಾಲಾ ಪಠ್ಯದ ಜತೆ, ಪಠ್ಯೇತರ ಚಟುವಟಿಕೆಗಳಿಗೂ ಶಾಲೆಯಲ್ಲಿ ಸಿಗುವ ಪ್ರೋತ್ಸಾಹವೇ ಇದಕ್ಕೆ ಕಾರಣವಾಗಿದೆ. ನಮ್ಮ ಶಾಲೆಯಲ್ಲಿ ಹೊರತರುವ ಸಂಚಿಕೆ ‘ಪ್ರತಿಭಾ’ದಲ್ಲಿದ್ದ ಹಲವು ಪ್ರಶ್ನೆಗಳೇ ಇಲ್ಲೂ ಇದ್ದದ್ದು ನಮಗೆ ತುಂಬಾ ಅನುಕೂಲಕಾರಿಯಾಯ್ತು. ಗ್ರ್ಯಾಂಡ್ ಫಿನಾಲೆಗೆ ಮತ್ತಷ್ಟು ತಯಾರಿ ನಡೆಸುತ್ತೇವೆ’ ಎಂದು ಮೊದಲ ಸ್ಥಾನ ಗಳಿಸಿದ ಶಾಲೆಯ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು, ಅವಳಿ ಸಹೋದರರಾದ ಗಗನ್‌ ಚಂದನ್‌–ಗೌರವ್ ಚಂದನ್ ತಮ್ಮ ಅನಿಸಿಕೆ ಹಂಚಿಕೊಂಡರು.

‘ಶಾಲಾ ಕ್ವಿಜ್‌ನಲ್ಲಿ ನಾವೇ ಗೆಲ್ತಿದ್ವಿ. ಪತ್ರಿಕೆಯ ನಿಯಮಿತ ಓದು ನಮಗೆ ಅನುಕೂಲಕಾರಿಯಾಯ್ತು’ ಎಂದು ದ್ವಿತೀಯ ಸ್ಥಾನ ಗಳಿಸಿದ ಎಂ.ಎನ್.ವಿಹಾನ್‌, ಸಂಕಲ್ಪ್‌ ಪಿ.ಧರಣ ತಿಳಿಸಿದರು.

‘ಬಜರ್‌ ಸುತ್ತು ಶುರುವಾದಾಗ ಆರನೇ ಸ್ಥಾನದಲ್ಲಿದ್ದೆವು. ಭಯವಾಗಿತ್ತು. ನಮಗೆ ಬಹುಮಾನ ಸಿಗಲ್ಲ ಎಂದುಕೊಂಡಿದ್ದೆವು. ಆತ್ಮವಿಶ್ವಾಸದಿಂದ ಉತ್ತರಿಸಲು ಸಿದ್ಧರಾದೆವು. ಪ್ರಶ್ನೆ ಕೇಳುತ್ತಿದ್ದಂತೆ ಬಜರ್ ಒತ್ತುತ್ತಿದ್ದೆವು. ಎಲ್ಲ ಪ್ರಶ್ನೆಗೆ ನಿರ್ಭಿಡೆಯಿಂದ ಉತ್ತರಿಸಿ ಮೂರನೇ ಸ್ಥಾನ ಗಳಿಸಿದೆವು. ಖುಷಿಯಾಯ್ತು’ ಎಂದು ವಿದ್ಯಾರ್ಥಿಗಳಾದ ಟಿ.ಸಿದ್ದಾರ್ಥ, ಶ್ರೀರಾಮ್ ರೆಡ್ಡಿ ತಮ್ಮ ಸಂತಸ ಹಂಚಿಕೊಂಡರು.

‘ಮೊದಲ ಬಾರಿಗೆ ಚಾಂಪಿಯನ್‌ಷಿಪ್‌ನಲ್ಲಿ ನಮ್ಮ ಶಾಲೆ ಭಾಗವಹಿಸಿದೆ. ಮೊದಲ ಮೂರು ಬಹುಮಾನ ಗೆದ್ದಿದ್ದು ಖುಷಿಯಾಗಿದೆ. ಶಾಲೆಯಲ್ಲಿ ಪಠ್ಯದ ಜತೆ ಪಠ್ಯೇತರ ಚಟುವಟಿಕೆಗೂ ಪೂರಕ ವಾತಾವರಣ ಇರುವುದರಿಂದ ವಿದ್ಯಾರ್ಥಿಗಳು ಈ ಸಾಧನೆಗೈಯಲು ಸಹಕಾರಿಯಾಗಿದೆ’ ಎಂದು ಶಾಲೆಯ ವಿಜ್ಞಾನ ಶಿಕ್ಷಕ ಬಿ.ಎಸ್.ವಿನಯಕುಮಾರ್ ತಿಳಿಸಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು