ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರಿನಲ್ಲಿ ಪೊಲೀಸರ ವಿರುದ್ಧ ತಣಿಯದ ಆಕ್ರೋಶ: ಕಿಡಿಕಾರುತ್ತಿರುವ ಚಾಲಕರು

Last Updated 24 ಮಾರ್ಚ್ 2021, 1:42 IST
ಅಕ್ಷರ ಗಾತ್ರ

ಮೈಸೂರು: ಬೋಗಾದಿ– ಹಿನಕಲ್ ರಿಂಗ್‌ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಅವೈಜ್ಞಾನಿಕವಾದ ತಪಾಸಣೆಯನ್ನು ಸಂಚಾರ ಪೊಲೀಸರು ನಿಲ್ಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.‌

ಈ ರಸ್ತೆಯಲ್ಲಿ ಸಂಚರಿಸುವವರಲ್ಲಿ ಕೂಲಿಕಾರರು, ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಕಾರ್ಮಿಕರು, ಬಡವರು ಹಾಗೂ ಮಧ್ಯಮ ವರ್ಗದವರೇ ಹೆಚ್ಚು. ಇವರು ಚಾಲನೆ ಮಾಡುವ ವಾಹನಗಳಲ್ಲಿ ಒಂದಿಲ್ಲೊಂದು ದಾಖಲಾತಿಗಳು ಇರುವುದಿಲ್ಲ. ಕೆಲವು ಕೂಲಿಕಾರ್ಮಿಕರು ಒಂದೇ ಬೈಕಿನಲ್ಲಿ ಮೂವರು ಕುಳಿತು ಹೆಲ್ಮೆಟ್ ಇಲ್ಲದೇ ಹೋಗುತ್ತಾರೆ. ಇವರೆಲ್ಲರೂ ಪೊಲೀಸರ ತಪಾಸಣೆಯಿಂದ ಹೈರಾಣಾಗಿದ್ದಾರೆ.

ಎಲ್ಲ ದಾಖಲಾತಿಗಳು ಇದ್ದರೂ, ಈ ಹಿಂದೆ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ್ದರ ದಂಡವನ್ನು ಪಾವತಿಸಲು ಇವರ ಬಳಿ ಹಣ ಇರುವುದಿಲ್ಲ. ಬಹಳಷ್ಟು ಮಂದಿ ಈ ಭಾಗದಲ್ಲಿ ಪೂರ್ಣ ದಂಡವನ್ನು ಪಾವತಿಸಲಾಗದೇ, ₹ 100, ₹ 200 ನೀಡಿ ರಶೀತಿ ಪಡೆಯದೇ ಸಾಗುತ್ತಾರೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಕಾರ್ಮಿಕರೊಬ್ಬರು ಹೇಳುತ್ತಾರೆ.

ತಪಾಸಣೆ ನಡೆಸುವಾಗ ಪೊಲೀಸರ ಕಣ್ತಪ್ಪಿಸಲು ತಮ್ಮ ವಾಹನವನ್ನು ಮನಬಂದಂತೆ ಚಾಲನೆ ಮಾಡುವುದು ಇಲ್ಲಿ ಸಾಮಾನ್ಯ ಎನಿಸಿದೆ. ಅತಿ ವೇಗವಾಗಿ ಕೆಲವರು ಸಾಗಿದರೆ, ಮತ್ತೆ ಹಲವರು ವಾಪಸ್ ಹಿಂದಕ್ಕೆ ಹೋಗಿ, ಬಳಸು ಮಾರ್ಗದಲ್ಲಿ ರಿಂಗ್‌ರಸ್ತೆಯನ್ನು ದಾಟುತ್ತಾರೆ. ‌

ನಿತ್ಯ ಇಲ್ಲಿನ ಜನರು ಸಂಚಾರ ಪೊಲೀಸರ ತಪಾಸಣೆಯನ್ನು ಕಿರಿಕಿರಿ ಎಂದೇ ಭಾವಿಸಿದ್ದಾರೆ. ಹೀಗಾಗಿ, ಇವರಲ್ಲಿ ಪೊಲೀಸರ ವಿರುದ್ಧ ಆಕ್ರೋಶ ಮಡುಗಟ್ಟಿದ್ದು, ಸೋಮವಾರ ನಡೆದ ಅಪಘಾತದ ಸಂದರ್ಭದಲ್ಲಿ ಇದು ಸ್ಫೋಟಗೊಂಡಿದೆ.

ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ನಾಲ್ವರು ಗಾರೆ ಕೆಲಸ ಮಾಡುವ ವೃತ್ತಿಯವರಾಗಿದ್ದರೆ, 7 ಮಂದಿ ಚಾಲಕರೇ ಆಗಿದ್ದಾರೆ. ಪೊಲೀಸರ ತಪಾಸಣೆಯಿಂದ ಬೇಸತ್ತಿದ್ದ ಜನರು ಅಪಘಾತದ ಸುದ್ದಿ ತಿಳಿಯುತ್ತಲೆ ಸ್ಥಳದಲ್ಲಿ ಜಮಾಯಿಸಿ, ಪೊಲೀಸರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳುತ್ತಾರೆ.‌

‘ಹೀನಾಯವಾಗಿ ನಡೆಸಿಕೊಳ್ಳುತ್ತಾರೆ’: ‘ಸಂಚಾರ ಪೊಲೀಸರು ತಪಾಸಣೆ ನಡೆಸುವಾಗ ವಾಹನ ಸವಾರರನ್ನು ಕಳ್ಳರಿಗಿಂತಲೂ ಹೀನಾಯವಾಗಿ ನಡೆಸಿಕೊಳ್ಳುತ್ತಾರೆ ಎಂಬುದು ಬಹುತೇಕ ಮಂದಿಯ ಆರೋಪ. ಒಂದೊಂದು ರಸ್ತೆಯಲ್ಲಿ ಐದಾರು ಮಂದಿ ಪೊಲೀಸರು, ಗೃಹರಕ್ಷಕ ದಳದವರು ಬಚ್ಚಿಟ್ಟುಕೊಂಡು ವಾಹನ ಸವಾರರನ್ನು ಅಡ್ಡಗಟ್ಟುತ್ತಾರೆ. ಸಂಚಾರ ನಿಯಮ ಉಲ್ಲಂಘನೆ ಇದ್ದರಂತೂ ಅತ್ಯಂತ ಹೀನಾಯವಾಗಿ ನಡೆಸಿಕೊಳ್ಳುತ್ತಾರೆ’ ಎಂದು ಈ ಭಾಗದಲ್ಲಿ ಸಂಚರಿಸುವ ಕೂಲಿ ಕಾರ್ಮಿಕ ರಾಮು ಬೇಸರ ವ್ಯಕ್ತಪಡಿಸುತ್ತಾರೆ.

ಬೆಳವಾಡಿಯಿಂದ ಹಿನಕಲ್‌ವರೆಗೆ 4 ಅಪಘಾತ ವಲಯ!: ‘ಬೆಳವಾಡಿಯಿಂದ ಹಿನಕಲ್‌ ಜಂಕ್ಷನ್‌ವರೆಗೆ 4 ಅಪಘಾತ ವಲಯ (ಬ್ಲ್ಯಾಕ್‌ ಸ್ಪಾಟ್‌)ಗಳಿವೆ. ಕಳೆದ 3 ವರ್ಷಗಳಲ್ಲಿ ಸಂಭವಿಸಿದ ಅಪಘಾತಗಳಲ್ಲಿ 5ಕ್ಕಿಂತ ಹೆಚ್ಚು ಮಂದಿ ಇಲ್ಲಿ ಮೃತಪಟ್ಟಿದ್ದಾರೆ. ಈ ರಸ್ತೆಯಲ್ಲಿ ತಪಾಸಣೆ ಅನಿವಾರ್ಯ’ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳುತ್ತಾರೆ. ಸಾರ್ವಜನಿಕರು ಸಂಚಾರ ನಿಯಮಗಳನ್ನು ಪಾಲಿಸಬೇಕು’ ಎಂದು ಅವರು ಮನವಿ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT