ಗುರುವಾರ , ಜುಲೈ 29, 2021
26 °C
ಆನ್‌ಲೈನ್‌ ಕೋರ್ಸ್‌ ಆಗಿ ಪರಿವರ್ತಿಸಲು ಮೈಸೂರು ವಿಶ್ವವಿದ್ಯಾಲಯ ಚಿಂತನೆ

ದೂರ ಶಿಕ್ಷಣ ಕೋರ್ಸ್‌ ಮುಂದುವರಿಕೆಗೆ ಮನವಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಮೈಸೂರು ವಿಶ್ವವಿದ್ಯಾಲಯದಲ್ಲಿ ಹಾಲಿ ಇರುವ ದೂರ ಶಿಕ್ಷಣ ಕೋರ್ಸ್‌ಗಳನ್ನು ಮುಂದುವರಿಸಲು ಅವಕಾಶ ಕೋರಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ವಿ.ವಿ ಕುಲಪತಿ ಪ್ರೊ.ಜಿ.ಹೇಮಂತಕುಮಾರ್‌ ತಿಳಿಸಿದರು.

ಮಾನಸ ಗಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ನಡೆದ ವಿ.ವಿ ಶೈಕ್ಷಣಿಕ ಮಂಡಳಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ದೂರ ಶಿಕ್ಷಣ ಪದ್ಧತಿಯಡಿ ಹೊಸ ಪ್ರವೇಶಾತಿ ಸ್ಥಗಿತಗೊಳಿಸಿ, ಹಾಲಿ ವಿದ್ಯಾರ್ಥಿಗಳ ಶೈಕ್ಷಣಿಕ ಚಟುವಟಿಕೆಯನ್ನು ಮಾತ್ರ ಮುಂದುವರಿಸಲು ರಾಜ್ಯ ಸರ್ಕಾರ ನಿರ್ದೇಶನ ನೀಡಿದೆ. ಈ ನಿರ್ಧಾರವನ್ನು ಮರುಪರಿಶೀಲಿಸುವಂತೆ ಕುವೆಂಪು ವಿ.ವಿ ಈಗಾಗಲೇ ಮನವಿ ಮಾಡಿದೆ. ನಾವೂ ನಮ್ಮ ನಿಲುವನ್ನು ಸರ್ಕಾರಕ್ಕೆ ತಿಳಿಸುವೆವು’ ಎಂದರು.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅನುಮತಿ ಕೊಟ್ಟಿರುವ ಕೋರ್ಸ್‌ಗಳನ್ನು ಬಿಟ್ಟು ಬೇರೆ ಕೋರ್ಸ್‌ಗಳನ್ನು ನಡೆಸುತ್ತಿಲ್ಲ ಎಂಬುದನ್ನು ಸರ್ಕಾರದ ಗಮನಕ್ಕೆ ತರಲಾಗುವುದು. ಒಂದು ವೇಳೆ ದೂರ ಶಿಕ್ಷಣ ಚಟುವಟಿಕೆ ಸ್ಥಗಿತಗೊಂಡರೆ, ಈ ವಿಭಾಗದ ಎಲ್ಲ ಕೋರ್ಸ್‌ಗಳನ್ನು ಆನ್‌ಲೈನ್ ಕೋರ್ಸ್‌ಗಳಾಗಿ ಪರಿವರ್ತನೆ ಮಾಡುವ ಚಿಂತನೆ ನಡೆಸಲಾಗಿದೆ ಎಂದು ತಿಳಿಸಿದರು.

ಆನ್‌ಲೈನ್‌ ಕೋರ್ಸ್‌ ಮತ್ತೆ ಆರಂಭ: ಯುಜಿಸಿ ಸೂಚನೆ ಮೇರೆಗೆ ಸ್ಥಗಿತಗೊಳಿಸಲಾಗಿದ್ದ ಆನ್‌ಲೈನ್‌ ಕೋರ್ಸ್‌ಗಳನ್ನು ಮತ್ತೆ ಆರಂಭಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು, ಒಪ್ಪಿಗೆ ದೊರೆಯುವ ಅವಕಾಶವಿದೆ ಎಂದು ಕುಲಪತಿ ಹೇಳಿದರು.

ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯ ಪ್ರಕಟಿಸಿದ ನ್ಯಾಷನಲ್ ಇನ್‌ಸ್ಟಿಟ್ಯೂಷನಲ್‌ ರ‍್ಯಾಂಕಿಂಗ್‌ ಫ್ರೇಮ್‌ವರ್ಕ್‌ನ (ಎನ್‌ಐಆರ್‌ಎಫ್‌) ಶ್ರೇಯಾಂಕ ಪಟ್ಟಿಯಲ್ಲಿ ಮೈಸೂರು ವಿ.ವಿಗೆ 27ನೇ ಸ್ಥಾನ ಲಭಿಸಿದೆ. ಶ್ರೇಯಾಂಕಪಟ್ಟಿಯಲ್ಲಿ 100ರ ಒಳಗೆ ಸ್ಥಾನ ಪಡೆಯುವ ವಿ.ವಿಗಳಿಗೆ ಆನ್‌ಲೈನ್‌ ಕೋರ್ಸ್‌ ಆರಂಭಿಸಲು ಅನುಮೋದನೆಯ ಅಗತ್ಯವಿಲ್ಲ ಎಂದು ಯುಜಿಸಿ ಹೇಳಿದೆ ಎಂದು ಮಾಹಿತಿ ನೀಡಿದರು.

ಆನ್‌ಲೈನ್‌ ಕೋರ್ಸ್‌ ಆರಂಭಿಸಿದರೆ ವಿಶ್ವದ ಮೂಲೆಮೂಲೆಯಲ್ಲಿರುವ ವಿದ್ಯಾರ್ಥಿಗಳಿಗೆ ಮೈಸೂರು ವಿ.ವಿಯ ಕೋರ್ಸ್‌ ಕಲಿಯುವ ಅವಕಾಶ ದೊರೆಯಲಿದೆ. ಮಾತ್ರವಲ್ಲ, ವಿ.ವಿಗೆ ಆದಾಯವೂ ಬರಲಿದೆ ಎಂದರು.

ಎಂಫಿಲ್‌ ಮತ್ತೆ ಆರಂಭ: ನಿಯಮಾವಳಿಯಲ್ಲಿ ಕೆಲವು ಬದಲಾವಣೆ ಮಾಡಿ ಎಂ.ಫಿಲ್‌ ಕೋರ್ಸ್‌ ಆರಂಭಿಸಲು ಸರ್ಕಾರದ ಅನುಮೋದನೆಗೆ ಕಳುಹಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು. 2016ರ ನಂತರ ಸರ್ಕಾರದ ನೇಮಕಾತಿಗಳಲ್ಲಿ ಎಂ.ಫಿಲ್‌ ಪದವಿಗಳನ್ನು ಪರಿಗಣಿಸದೆ ಇರುವುದರಿಂದ ಈ ಕೋರ್ಸ್‌ಗಳಿಗೆ ಬೇಡಿಕೆ ಇಲ್ಲದೆ ಸ್ಥಗಿತಗೊಳಿಸಲಾಗಿತ್ತು.

ಎಂಸಿಎ ಕೋರ್ಸ್‌ ಅವಧಿ ಕಡಿತ: ಎಂಸಿಎ ಕೋರ್ಸ್‌ ಅವಧಿಯನ್ನು ಮೂರು ವರ್ಷಗಳಿಂದ ಎರಡು ವರ್ಷಗಳಿಗೆ ಕಡಿತಗೊಳಿಸಲು ವಿ.ವಿ ನಿರ್ಧರಿಸಿದೆ. ಈ ಶೈಕ್ಷಣಿಕ ವರ್ಷದಿಂದ ಎರಡು ವರ್ಷಗಳ ಎಂಸಿಎ ಕೋರ್ಸ್‌ಗಳಿಗೆ ಪ್ರವೇಶ ಲಭಿಸಲಿದೆ. ಹೊಸ ಪಠ್ಯಕ್ರಮಕ್ಕೆ ಸಭೆಯಲ್ಲಿ ಒಪ್ಪಿಗೆ ಲಭಿಸಿತು.

ಸಮಾಜಕಾರ್ಯ ಅಧ್ಯಯನ ವಿಭಾಗದಲ್ಲಿ ಪ್ರೊ.ವೈ.ಎಸ್‌.ಸಿದ್ದೇಗೌಡ ಅವರ ಹೆಸರಿನಲ್ಲಿ ದತ್ತಿ ಉಪನ್ಯಾಸ ಸ್ಥಾಪನೆಗೆ ಮತ್ತು ಒಂಬತ್ತು ಕಾಲೇಜುಗಳಿಗೆ ನೀಡಿರುವ ಸ್ವಾಯತ್ತ ಸ್ಥಾನಮಾನವನ್ನು ಇನ್ನೊಂದು ಶೈಕ್ಷಣಿಕ ಅವಧಿಗೆ ಮುಂದುವರಿಸಲು ನಿರ್ಧರಿಸಲಾಯಿತು.

ಸಭೆಯಲ್ಲಿ ಕುಲಸಚಿವ ಪ್ರೊ.ಆರ್.ಶಿವಪ್ಪ, ಶಿಕ್ಷಣ ಮಂಡಳಿ ಸದಸ್ಯರಾದ ಪ್ರೊ.ಜಿ.ವೆಂಕಟೇಶ್, ಪ್ರೊ.ಎನ್.ಎಂ.ತಳವಾರ್, ಪ್ರೊ.ಆರ್.ರಾಜಣ್ಣ, ಪ್ರೊ.ನಾಗರಾಜ ನಾಯ್ಕ್, ಪ್ರೊ.ಎಂ.ಎಸ್.ಶೇಖರ್, ಪ್ರೊ.ಡಿ.ವಿ.ಗೋಪಾಲಪ್ಪ, ಪ್ರೊ.ಯಶೋದಾ ಮತ್ತಿತರರು ಪಾಲ್ಗೊಂಡರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.