ಸೋಮವಾರ, ಜೂನ್ 14, 2021
20 °C
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ

ಜಿಂದಾಲ್‌ಗೆ ಭೂಮಿ ನೀಡಿದ್ದು ಹಗಲು ದರೋಡೆ; ಅಡಗೂರು ಎಚ್.ವಿಶ್ವನಾಥ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಕೊರೊನಾ ಸಂಕಷ್ಟ ಕಾಲದಲ್ಲಿ ಸರ್ಕಾರವು ಜಿಂದಾಲ್ ಸ್ಟೀಲ್ ವೆಸ್ಟರ್ನ್‌ಗೆ 3,667 ಎಕರೆ ಭೂಮಿಯನ್ನು ನೀಡಿರುವುದು ಹಗಲು ದರೋಡೆ. ಈ ಕುರಿತು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆಯಲಾಗುವುದು ಎಂದು ವಿಧಾನ ಪರಿಷತ್ ಸದಸ್ಯ ಅಡಗೂರು ಎಚ್.ವಿಶ್ವನಾಥ್ ತಿಳಿಸಿದರು.

ಸರ್ಕಾರಕ್ಕೆ ಸುಮಾರು ₹2 ಸಾವಿರ ಕೋಟಿಯಷ್ಟು ಹಣವನ್ನು ಬಾಕಿ ಉಳಿಸಿಕೊಂಡಿರುವ ಕಂಪನಿಯೊಂದಕ್ಕೆ ಎಕರೆಗೆ ₹1.20 ಲಕ್ಷ ದರದಲ್ಲಿ ನೀಡಿರುವುದು ಸರಿಯಲ್ಲ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.

‘ಲಾಕ್‌ಡೌನ್‌ ಮಧ್ಯೆ ಕದ್ದುಮುಚ್ಚಿ ನೀಡಿರುವುದನ್ನು ನೋಡಿದರೆ ಇದರ ಹಿಂದೆ ಭ್ರಷ್ಟಾಚಾರ ನಡೆದಿದೆ ಎಂದು ಸಾಮಾನ್ಯ ಜನರಿಗೂ ಅರ್ಥವಾಗುತ್ತದೆ. ಅದನ್ನು ಬೇರೆ ನಾನು ಬಹಿರಂಗವಾಗಿ ಹೇಳಬೇಕೆ, ಕಿಕ್‌ಬ್ಯಾಕ್‌ ಇಲ್ಲದೇ ಆಗಿದೆಯೇ’ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಂಪುಟದಲ್ಲಿ ಬಹಳ ಬುದ್ಧಿವಂತ ಸಚಿವರು ಎನಿಸಿದ ಸುರೇಶ್‌ಕುಮಾರ್ ಸೇರಿದಂತೆ ಎಲ್ಲರೂ ಮೌನವಾಗಿದ್ದಾರೆ. ಈಗ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದಲ್ಲಿ ಒಂದೇ ತೀರ್ಮಾನಕ್ಕೆ ಮನ್ನಣೆ ದೊರೆಯುತ್ತಿದೆ. ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಕಚೇರಿಗಳೇ ಎಲ್ಲವನ್ನೂ ನಿಯಂತ್ರಿಸುತ್ತಿವೆ ಎಂದು ಬೇಸರ ವ್ಯಕ್ತಪಡಿಸಿದರು.

‘ವಿರೋಧ ಪಕ್ಷಗಳು ಸತ್ತು ಹೋಗಿವೆ. ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಸುದ್ದಿಗಾರರ ಮುಂದೆ ಮಾತನಾಡದೇ ತೆರೆಮರೆಯಲ್ಲಿ ಟ್ವೀಟ್‌ ಮಾಡುತ್ತಿದ್ದಾರೆ. ಈಗ ನಾನು ಸರ್ಕಾರದ ತೀರ್ಮಾನವನ್ನು ಟೀಕಿಸಲಿಲ್ಲ ಎಂದರೆ ರಾಜ್ಯದ ಜನತೆಗೆ ದ್ರೋಹ ಬಗೆದಂತಾಗುತ್ತದೆ. ಹಿಂದೆಯೂ ವೀರಪ್ಪ ಮೊಯಿಲಿ, ಎಸ್.ಎಂ.ಕೃಷ್ಣ ಅವರ ಸಂಪುಟದಲ್ಲಿ ಅನೇಕ ಇಂತಹ ತೀರ್ಮಾನಗಳನ್ನು ವಿರೋಧಿಸಿದ್ದೆ’ ಎಂದು ಅವರು ಹೇಳಿದರು.

ಬೆಲೆ ಬಾಳುವ ಖನಿಜ ಸಂಪತ್ತನ್ನು ಹೊಂದಿರುವ ಭೂಮಿಯನ್ನು ಕಟಬಾಕಿದಾರ ಕಂಪನಿಗೆ ನೀಡಿದ್ದಾದರೂ ಏಕೆ, ಹಿಂದೆ ವಿರೋಧಿಸಿದ್ದು ಏಕೆ, ಎಂಬೆಲ್ಲ ಪ್ರಶ್ನೆಗಳಿಗೆ ಸರ್ಕಾರ ಉತ್ತರಿಸಬೇಕು. ಕಂಪನಿಯಿಂದ ಬರಬೇಕಾದ ಎಲ್ಲ ಹಣವನ್ನು ಪಡೆದು, ಇಂದಿನ ಮಾರುಕಟ್ಟೆ ಮೌಲ್ಯವನ್ನು ನಿಗದಿಪಡಿಸಿ ಮಾರಾಟ ಮಾಡಲಿ ಎಂದು ಒತ್ತಾಯಿಸಿದರು.

ವಿರೋಧ ಪಕ್ಷಗಳು ಕೋವಿಡ್ ನಿರ್ವಹಣೆಯಲ್ಲಿ ಕೇವಲ ಸರ್ಕಾರಿ ಆಸ್ಪತ್ರೆಯ ಲೋಪಗಳನ್ನು ಕುರಿತು ಮಾತ್ರ ಮಾತನಾಡುತ್ತಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಅವರ ಪುತ್ರ ಖಾಸಗಿ ಆಸ್ಪತ್ರೆಗಳೊಂದಿಗೆ ಪಾಲುದಾರರಾಗಿರುವುದರಿಂದ ಖಾಸಗಿ ಆಸ್ಪತ್ರೆಯ ಲೋಪಗಳ ಕುರಿತು ಅವರು ಮಾತನಾಡುತ್ತಿಲ್ಲ ಎಂದು ಚಾಟಿ ಬೀಸಿದರು.

ಕೋವಿಡ್ ನಿರ್ವಹಣೆಗೆ ಹಣ ಇಲ್ಲ ಎಂದು ಹೇಳುತ್ತಾರೆ. ಆದರೆ, ಪರ್ಸೆಂಟೇಜ್ ಕೊಟ್ಟರೆ ಗುತ್ತಿಗೆದಾರನ ಬಿಲ್ ಮಂಜೂರಾಗುತ್ತದೆ. ಮುಖ್ಯಮಂತ್ರಿ ಹಣಕಾಸು ಖಾತೆಯನ್ನು ತಮ್ಮ ಬಳಿ ಇಟ್ಟುಕೊಂಡಿರುವುದರಿಂದ ಉಳಿದ ಮಂತ್ರಿಗಳಿಗೆ ಸ್ವಾತಂತ್ರ್ಯವೇ ಇಲ್ಲದ ಹಾಗೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು