ಗುರುವಾರ , ಮೇ 6, 2021
23 °C
ಹುಣಸೂರು: ಪೌರಕಾರ್ಮಿಕರ ಕಾಲೊನಿಗೆ ಕಲುಷಿತ ನೀರು ಸರಬರಾಜು

ಶುದ್ಧ ಕುಡಿಯುವ ನೀರು ಪೂರೈಕೆಗೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಣಸೂರು: ನಗರದ ಪೌರಕಾರ್ಮಿಕರ ಕಾಲೊನಿಗೆ ಸರಬರಾಜಾಗುವ ಕುಡಿಯುವ ನೀರು ಕಲುಷಿತಗೊಂಡಿದ್ದು, ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘19, 21 ಮತ್ತು 26ನೇ ವಾರ್ಡ್‌ಗಳಿಗೆ ನಗರಸಭೆಯಿಂದ ಸರಬರಾಜು ಮಾಡುತ್ತಿರುವ ಕುಡಿಯುವ ನೀರು ಕಲುಷಿತಗೊಂಡಿದ್ದು, ಈ ಸಂಬಂಧ ನಗರಸಭೆ ಅಧಿಕಾರಗಳ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ದಲಿತ ಸಂಘರ್ಷ ಸಮಿತಿ ಮುಖಂಡ ಕೊಳಗಟ್ಟ ಕೃಷ್ಣ ಆರೋಪಿಸಿದರು.

‘ನಗರಸಭೆ ಪೌರಾಯುಕ್ತರು ಹಾಗೂ ಕುಡಿಯುವ ನೀರು ಸರಬರಾಜು ವಿಭಾಗದ ಸಿಬ್ಬಂದಿ ಗಮನಕ್ಕೆ ತಂದು ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಲಾಗಿತ್ತು. ಮನವಿಗೆ ಅಧಿಕಾರಿಗಳು ಸಕಾರಾತ್ಮಕವಾಗಿ ಸ್ಪಂದಿಸಿಲ್ಲ’ ಎಂದರು.

‘ದುಡಿಯುವ ವರ್ಗ ಹೆಚ್ಚಾಗಿ ವಾಸಿಸುವ ವಾರ್ಡ್‌ಗಳಲ್ಲೇ ಶುದ್ಧ ಕುಡಿಯುವ ನೀರು ಒದಗಿಸಲು ನಗರಸಭೆ ವಿಫಲವಾಗಿದೆ. ನೀರಿನ ಟ್ಯಾಂಕ್ ಸ್ವಚ್ಛಗೊಳಿಸದ ಕಾರಣ ಕಲುಷಿತ ನೀರು ಬರುತ್ತಿದೆ’ ಎಂದು ಅವರು ಆರೋಪಿಸಿದರು.

ವಾರ್ಡ್ ಸದಸ್ಯೆ ರಾಣಿ ಪೆರುಮಾಳ್ ಮಾತನಾಡಿ, ‘21ನೇ ವಾರ್ಡ್‌ನಲ್ಲಿ ಹೆಚ್ಚಾಗಿ ಪೌರಕಾರ್ಮಿಕರು ವಾಸವಿದ್ದು, ಕಲುಷಿತ ನೀರು ಸರಬರಾಜಾಗುತ್ತಿರುವುದು ಬೇಸರದ ಸಂಗತಿ. ಈ ಸಂಬಂಧ ಪೌರಾಯುಕ್ತ ಮಂಜುನಾಥ್ ಗಮನಕ್ಕೆ ತಂದಿದ್ದೇನೆ. ಶೀಘ್ರದಲ್ಲೇ ಸಮಸ್ಯೆ ಬಗೆಹರಿಯಲಿದೆ’ ಎಂದು ಭರವಸೆ ನೀಡಿದ್ದರು.

‘ಕುಡಿಯುವ ನೀರು ಸರಬರಾಜು ಘಟಕದ ಕೊಳವೆ ಬಾವಿಯಿಂದ ಈ ಬಡಾವಣೆಗಳಿಗೆ ನೀರು ಬಿಡಲಾಗುತ್ತಿದೆ. ಕೊಳವೆ ಬಾವಿಯಿಂದಲೇ ಕಲುಷಿತ ನೀರು ಬರುತ್ತಿದ್ದು, ಬಾವಿಗೆ ಜಾಲರಿ ಅಳವಡಿಸಿ, ಶುದ್ಧೀಕರಿಸಿ ಸರಬರಾಜು ಮಾಡುವ ಕ್ರಮ ಕೈಗೊಳ್ಳಲಾಗಿದೆ’ ಎಂದು ನಗರಸಭೆ ಕುಡಿಯುವ ನೀರು ವಿಭಾಗದ ಎಂಜಿನಿಯರ್ ಅನುಪಮಾ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ನಗರದ ವಿ.ಪಿ. ಬೋರೆ, ವಿಜಯನಗರ, ಲಾಲ್‌ಬನ್ ಬೀದಿ ಮತ್ತು ಪೌರಕಾರ್ಮಿಕರ ಬಡಾವಣೆಗಳಲ್ಲೂ ಇದೇ ಸಮಸ್ಯೆಯಿದೆ’ ಎಂದು ಹೇಳಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು