ಮಂಗಳವಾರ, ಸೆಪ್ಟೆಂಬರ್ 21, 2021
25 °C

ಅರ್ಜೆಂಟಾಗಿದೆ... ಇಲ್ಲೆಲ್ಲಿದೆ ಶೌಚಾಲಯ..?

ಕೆ.ಓಂಕಾರ ಮೂರ್ತಿ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ಸ್ವಚ್ಛ ನಗರಿ ಗೌರವ ಪಡೆಯಬೇಕೆಂಬ ಗುರಿಯೊಂದಿಗೆ ಆರಂಭಿಸಿದ ಇ–ಶೌಚಾಲಯ ಸೌಲಭ್ಯ ಯೋಜನೆ ಸಂಪೂರ್ಣ ನೆಲಕಚ್ಚಿದೆ. ಸಾಮಾನ್ಯ ಶೌಚಾಲಯಗಳು ಗಬ್ಬು ನಾರುತ್ತಿವೆ. ಕೆಲವೆಡೆ ಬೀಗವನ್ನೇ ತೆಗೆದಿಲ್ಲ. ಅರ್ಜೆಂಟಾಗಿ ಮೂತ್ರ ಮಾಡಬೇಕೆನಿಸಿದರೆ ಖಾಲಿ ಜಾಗವನ್ನು ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಸ್ವಚ್ಛ ನಗರಿ, ಪ್ರವಾಸಿಗರ ನೆಚ್ಚಿನ ತಾಣ, ಪಾರಂಪರಿಕ ನಗರಿ, ನಿವೃತ್ತರ ಸ್ವರ್ಗ ಎನಿಸಿಕೊಂಡಿರುವ ಮೈಸೂರಿನಲ್ಲಿಯೇ ಹೀಗಾದರೆ ಹೇಗೆ? ಏಕೆ ಪಾಲಿಕೆ ಈ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ತಾಳಿದೆ?

ವಿದ್ಯಾರ್ಥಿನಿಯರಿಗೆ ಕಿರಿಕಿರಿ

ಬಸ್‌ ನಿಲ್ದಾಣದ ಶೌಚಾಲಯಗಳಲ್ಲಿ ಮೂತ್ರ ಮಾಡಲು ಉಚಿತ ಎಂದು ಬೋರ್ಡ್‌ ಹಾಕಿಕೊಂಡಿದ್ದಾರೆ. ಆದರೆ, 5 ರೂಪಾಯಿ ಕೊಡದಿದ್ದರೆ ಒಳಗೇ ಬಿಡುವುದಿಲ್ಲ. ಅದರಲ್ಲೂ ಮಹಿಳೆಯರ ಶೌಚಾಲಯದಲ್ಲಿ ಹಣ ಕೊಟ್ಟೇ ಒಳಗೆ ಹೋಗಬೇಕು. ಶಾಲಾ ಕಾಲೇಜುಗಳಿಗೆ ಹೋಗಿ ಬರುವ ವಿದ್ಯಾರ್ಥಿನಿಯರಿಗೆ ಇದು ಕಿರಿಕಿರಿ ಉಂಟು ಮಾಡುತ್ತಿದೆ. ‘ಶೌಚಾಲಯಕ್ಕೆಂದು ಪ್ರತ್ಯೇಕವಾಗಿ ಹಣ ಇಟ್ಟುಕೊಂಡು ಬರಬೇಕಾಗಿದೆ’ ಎಂದು ವಿದ್ಯಾರ್ಥಿನಿಯರು ಅಳಲು ತೋಡಿಕೊಳ್ಳುತ್ತಾರೆ. ಇನ್ನು ನಗರದ ವಿವಿಧೆಡೆ ಮಹಿಳೆಯರ ಪಾಡು ಕೇಳುವವರಾರು?

*

ನಿರ್ವಹಣೆ ಕೊರತೆಯಿಂದ ಯಂತ್ರಗಳು ಹಾಳಾಗುತ್ತಿವೆ. ಅಧಿಕಾರಿಗಳು, ಜನಪ್ರತಿನಿಧಿಗಳು ಸರಿಯಾಗಿ ಜವಾಬ್ದಾರಿ ನಿಭಾಯಿಸಿಲ್ಲ. ಇ–ಶೌಚಾಲಯ ಬದಲು ಸಾಮಾನ್ಯ ಶೌಚಾಲಯಗಳನ್ನು ನಿರ್ಮಿಸಿದ್ದರೆ ಹೆಚ್ಚು ಬಳಕೆ ಯೋಗ್ಯವಾಗಿರುತ್ತಿದ್ದವು. ಇಂಥ ಶೌಚಾಲಯಗಳನ್ನು ಹೇಗೆ ಬಳಸಿಕೊಳ್ಳಬೇಕೆಂಬುದು ಹೆಚ್ಚಿನವರಿಗೆ ಗೊತ್ತಿಲ್ಲ

ಬಿ.ಎಲ್‌.ಭೈರಪ್ಪ, ಮಾಜಿ ಮೇಯರ್‌

*

ಕಾಯಿನ್‌ ಹಾಕಬೇಕೆಂದು ಜನರೇ ಬಳಕೆ ಮಾಡುವುದಿಲ್ಲ. ಕೆಲವರಿಗೆ ಬಳಸಿಕೊಳ್ಳುವ ರೀತಿ ತಿಳಿದಿಲ್ಲ. ಕೆಲವೆಡೆ ಬಳಕೆಯೇ ಆಗಿಲ್ಲ. ಹೀಗಾಗಿ, ಸ್ಥಳಾಂತರ ಮಾಡಲು ಮುಂದಾಗಿದ್ದೇವೆ

ಮಹೇಶ್‌, ಕಾರ್ಯಪಾಲಕ ಎಂಜಿನಿಯರ್‌, ಪಾಲಿಕೆ

ಮೈಸೂರು ಪ್ರವಾಸಿಗರ ನೆಚ್ಚಿನ ತಾಣ. ಲಕ್ಷಾಂತರ ಪ್ರವಾಸಿಗರು ಬಂದು ಹೋಗುತ್ತಾರೆ. ಅಷ್ಟೇ ಏಕೆ; ಸ್ವಚ್ಛ ನಗರಿ ಎಂಬ ಪಟ್ಟವನ್ನೂ ಪಡೆದುಕೊಂಡಿದೆ.

ನಗರದ ಜನಸಂಖ್ಯೆಯೂ ಹತ್ತು ಲಕ್ಷ ದಾಟಿದೆ. ಸಾವಿರಾರು ವಿದ್ಯಾರ್ಥಿಗಳು, ನೌಕರರು, ವ್ಯಾಪಾರಸ್ಥರು ನಗರದಲ್ಲಿ ನಿತ್ಯ ತಿರುಗಾಡುತ್ತಾರೆ. ಗ್ರಾಮೀಣ ಭಾಗದಿಂದಲೂ ಬರುತ್ತಾರೆ. ಆದರೆ, ಪ್ರಮುಖ ತಾಣಗಳಲ್ಲಿಯೇ ಶೌಚಾಲಯ ವ್ಯವಸ್ಥೆ ಇಲ್ಲ. ಅರ್ಜೆಂಟಾಗಿ ಮೂತ್ರ ಮಾಡಬೇಕೆನಿಸಿದರೆ ಖಾಲಿ ಜಾಗವನ್ನು ಹುಡುಕಾಡಬೇಕಾದ ಪರಿಸ್ಥಿತಿ ಇದೆ. ಹಲವರು ರಸ್ತೆ ಬದಿಯೇ ಮೂತ್ರ ವಿಸರ್ಜನೆ ಮಾಡುತ್ತಿದ್ದು, ಅಲ್ಲಲ್ಲಿ ಗಬ್ಬು ನಾರುತ್ತಿದೆ. ಇದಕ್ಕೊಂದು ಉದಾಹರಣೆ ಬಸ್‌ ನಿಲ್ದಾಣ, ರೈಲು ನಿಲ್ದಾಣ, ಅರಮನೆ, ಮೃಗಾಲಯ ಸುತ್ತಮುತ್ತಲಿನ ವಾತಾವರಣ. ಈ ಪ್ರದೇಶಗಳ ಆಸುಪಾಸಿನ ರಸ್ತೆಗಳ ಸಂದಿ–ಗೊಂದಿಗಳಲ್ಲಿ ಜನ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇನ್ನು ಬಾರುಗಳು, ಮದ್ಯದಂಗಡಿಗಳ ಸುತ್ತಮುತ್ತಲಿನ ಪರಿಸ್ಥಿತಿ ಅಧೋಗತಿ!

ಕೆಲವೆಡೆ ಶೌಚಾಲಗಳು ಇದ್ದರೂ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಕೆಲವೆಡೆ ಶೌಚಾಲಯಗಳಿಗೆ ಬೀಗ ಹಾಕಲಾಗಿದೆ. ಬಕೆಟ್‌ಗಳು ಮುರಿದು ಹೋಗಿವೆ. ಬಾಗಿಲುಗಳಿಗೆ ಲಾಕ್‌ಗಳಿಲ್ಲ. ಸ್ವಚ್ಛತೆ ಕೊರತೆ ಎದ್ದು ಕಾಣುತ್ತಿದೆ. ಕೆಲವು ಶೌಚಾಲಯಗಳಲ್ಲಿ ನೀರು ಹಾಗೂ ವಿದ್ಯುತ್‌ ವ್ಯವಸ್ಥೆಯೇ ಇಲ್ಲ. ಸ್ವಚ್ಛ ನಗರಿ ಪಟ್ಟಕ್ಕಾಗಿ ಕೊನೆಯ ಕ್ಷಣದಲ್ಲಿ ಕಸರತ್ತು ನಡೆಸುವ ಪಾಲಿಕೆಯು ಇಂಥ ವಿಚಾರಗಳಲ್ಲಿ ಎಡವುತ್ತಿದೆ. ಕೆಲಸಕ್ಕೆ ಬಾರದ ಇ–ಶೌಚಾಲಯಗಳನ್ನು (ಎಲೆಕ್ಟ್ರಾನಿಕ್‌ ಟಾಯ್ಲೆಟ್‌) ನಿರ್ಮಿಸಿ ದುಂದುವೆಚ್ಚದಲ್ಲಿ ತೊಡಗಿದೆ.

ಸರ್ಕಾರಿ ಕಚೇರಿಗಳು, ಆಸ್ಪತ್ರೆಗಳು, ಶಾಲಾ–ಕಾಲೇಜುಗಳಲ್ಲಿಯೇ ಸರಿಯಾಗಿ ಮೂತ್ರಾಲಯದ ವ್ಯವಸ್ಥೆ ಇಲ್ಲ. ಮಾರುಕಟ್ಟೆಗಳಲ್ಲಿ ಶೌಚಾಲಯ ಇಲ್ಲ. ‌ಇನ್ನೂ ಉದ್ಯಾನಗಳಲ್ಲಿ, ಮೈದಾನಗಳಲ್ಲಿ ಇಲ್ಲವೇ ಇಲ್ಲ. ಬಯಲು ಶೌಚ ಮುಕ್ತ ಎಂದು ದೊಡ್ಡದಾಗಿ ಮಾತನಾಡುತ್ತಾರೆ. ಆದರೆ, ಬಯಲು ಮೂತ್ರ ಮುಕ್ತವಾಗುವುದು ಯಾವಾಗ?

ನೂರು ಜನ ಪುರುಷರಿಗೆ ಒಂದು ಮತ್ತು ನೂರು ಜನ ಮಹಿಳೆಯರಿಗೆ ಎರಡು ಶೌಚಾಲಯವಿರಬೇಕು ಎಂದು ಸ್ವಚ್ಛ ಸರ್ವೇಕ್ಷಣಾ ಮಿಷನ್‌ ಮಾರ್ಗದರ್ಶಿ ಸೂತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆ; ಪ್ರತಿ 7 ಕಿ.ಮೀ.ಗೆ ಒಂದರಂತೆ ಸಾರ್ವಜನಿಕ ಶೌಚಾಲಯವಿರಬೇಕು ಎಂದು ಸೂಚಿಸಲಾಗಿದೆ. ಆದರೆ, ಇಲ್ಲಿರುವುದು ಮೂರು ಮತ್ತೊಂದು!

ಆಡಳಿತದ ಕೇಂದ್ರ ಬಿಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ನಿತ್ಯ ಒಂದಿಲ್ಲೊಂದು ಪ್ರತಿಭಟನೆ ನಡೆಯುತ್ತಿರುತ್ತದೆ. ಪ್ರತಿಭಟನಾಕಾರರು ಮೂತ್ರ ವಿಸರ್ಜನೆಗೆ ಎಲ್ಲಿಗೆ ಹೋಗಬೇಕು? ಅವರಿಗೆಲ್ಲಾ ಬಯಲೇ ಶೌಚಾಲಯವಾಗಿದೆ.

ವಾಹನಗಳ ಪಾರ್ಕಿಂಗ್‌, ಪಾದಚಾರಿ ಮಾರ್ಗಗಳು ಶೌಚಾಲಯಗಳಂತೆ ಬಳಕೆಯಾಗುವ ನೂರಾರು ಉದಾಹರಣೆಗಳು ನಗರದಲ್ಲಿ ಸಿಗುತ್ತವೆ. ಕೆಲವೆಡೆ ದೇವರ ಫೋಟೊ ಇಟ್ಟು ಮೂತ್ರ ವಿಸರ್ಜನೆ ಮಾಡದಂತೆ ಪಡೆಯುವ ಪ್ರಯತ್ನವನ್ನು ಕೆಲ ಬಡಾವಣೆಗಳ ನಾಗರಿಕರು ಮಾಡಿದ್ದಾರೆ. ‘ಇಲ್ಲಿ ಮೂತ್ರ ಮಾಡಬೇಡಿ’ ಎಂಬ ಗೋಡೆಬರಹಗಳಿದ್ದರೂ ಅದರ ಮೇಲೆಯೇ ಶೌಚದ ಸಿಂಚನ ಮಾಡಿಸುವ ಮಹಾನುಭಾವರೂ ಇದ್ದಾರೆ. ಪಾಲಿಕೆ ಜೊತೆಗೆ ಜನರ ತಪ್ಪೂ ಇಲ್ಲಿದೆ.

ಇ–ಶೌಚಾಲಯವೆಂಬ ದುಂದುವೆಚ್ಚ...

ಲಕ್ಷಾಂತರ ರೂಪಾಯಿ ಖರ್ಚು ಮಾಡಿ ನಗರದಲ್ಲಿ ನಿರ್ಮಿಸಿರುವ ಇ–ಶೌಚಾಲಯಗಳು ನೀರಿನಲ್ಲಿ ಮಾಡಿದ ಹೋಮದಂತಾಗಿವೆ.

ನಗರವನ್ನು ಶುಚಿಯಾಗಿಡಬೇಕು, ನಂಬರ್‌ 1 ಪಟ್ಟ ಪಡೆಯಬೇಕು ಎಂದು ಹೇಳಿಕೊಂಡು ಮೈಸೂರು ಮಹಾನಗರ ಪಾಲಿಕೆ (ಎಂಸಿಸಿ) ಕೈಗೆತ್ತಿಕೊಂಡ ಯೋಜನೆ ಸಂಪೂರ್ಣ ವೈಫಲ್ಯ ಕಂಡಿದೆ.

2016ರಲ್ಲಿ ಮೊದಲ ಬಾರಿ ದೇವರಾಜ ಅರಸು ರಸ್ತೆಯಲ್ಲಿ ಇ–ಶೌಚಾಲಯ ನಿರ್ಮಿಸಲಾಯಿತು. ಹಂತಹಂತವಾಗಿ ನಗರದ ವಿವಿಧೆಡೆ ಇಂಥ 23 ಹೈಟೆಕ್‌ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ಹೆಚ್ಚಿನವು ಬಳಕೆ ಆಗಿಲ್ಲ. ಇನ್ನು ಕೆಲವು ತಾಂತ್ರಿಕ ಸಮಸ್ಯೆಯಿಂದ ಸರಿಯಾಗಿ ನಿರ್ವಹಣೆ ಮಾಡದೆ ಹಾಳಾಗಿವೆ.

ಬಹುತೇಕ ಮಹಿಳೆಯರು ಇ-ಶೌಚಾಲಯಗಳನ್ನು ಬಳಕೆ ಮಾಡಲ ಹಿಂಜರಿಯುತ್ತಿದ್ದಾರೆ. ಹಳ್ಳಿಗಳಿಂದ ಬರುವ ಜನರಿಗೂ ಇಂಥ ಶೌಚಾಲಯ ಬಳಸುವ ವೈಖರಿ ಗೊತ್ತಿಲ್ಲ. ಪ್ರವಾಸಿಗರೂ ಬಳಕೆ ಮಾಡುತ್ತಿಲ್ಲ. ಮಾಹಿತಿ ಕೊರತೆಯಿಂದ ಈ ಸಮಸ್ಯೆ ಉಂಟಾಗಿದೆ. ಪಾಲಿಕೆ ಕೂಡ ಮಾಹಿತಿ ಒದಗಿಸುವ ಕೆಲಸ ಮಾಡಲಿಲ್ಲ. ಇದರ ಬಳಕೆಗೆ ಕಾಯಿನ್‌ ಹಾಕಬೇಕು. ಚಿಲ್ಲರೆ ಸಮಸ್ಯೆಯಿಂದಾಗಿ ಬಳಸುವವರ ಸಂಖ್ಯೆ ತೀರಾ ಕಡಿಮೆ.

‘ಈ ಶೌಚಾಲಯಗಳನ್ನು ಹೇಗೆ ಬಳಸಬೇಕೆಂಬುದು ಹೆಚ್ಚಿನವರಿಗೆ ಗೊತ್ತಿಲ್ಲ. ಇ-ಟಾಯ್ಲೆಟ್‌ಗಿಂತ ಸಾಮಾನ್ಯ ಶೌಚಾಲಯಗಳನ್ನು ನಿರ್ಮಿಸಿಕೊಡಬೇಕು’ ಎಂದು ಸಾರ್ವಜನಿಕರು ಹಲವಾರು ಬಾರಿ ದೂರು ಹೇಳಿಕೊಂಡಿದ್ದಾರೆ. ಇಷ್ಟಾದರೂ ಪಾಲಿಕೆ ಕಿವಿಗೆ ಈ ವಿಚಾರ ಬಿದ್ದಿಲ್ಲ. ಪಾಲಿಕೆಯು ತಪ್ಪು ಹೆಜ್ಜೆ ಇಟ್ಟಿದ್ದು ಮಾತ್ರವಲ್ಲ; ಜನರ ತೆರಿಗೆ ಹಣವನ್ನು ದುರುಪಯೋಗ ಮಾಡಿಕೊಂಡಿದೆ.

ಒಂದು ಇ–ಶೌಚಾಲಯಕ್ಕೆ ಸುಮಾರು ₹ 5ರಿಂದ 6 ಲಕ್ಷ ಖರ್ಚಾಗಿದೆ. ಯಂತ್ರ ಪೂರೈಸಿದ ಕಂಪನಿಗಳು ಈಗಾಗಲೇ ಒಂದು ವರ್ಷ ನಿರ್ವಹಣೆ ಕೂಡ ಮಾಡಿವೆ. ಇನ್ನುಮುಂದೆ ಪಾಲಿಕೆಯೇ ತನ್ನ ಖರ್ಚಿನಲ್ಲಿ ನಿರ್ವಹಣೆ ಮಾಡಬೇಕಿದೆ.

ಇ–ಶೌಚಾಲಯಗಳು ಬಳಕೆಯಾಗದ ಕಾರಣ ಅವುಗಳನ್ನು ಸ್ಥಳಾಂತರ ಮಾಡಲು ಈಗ ಪಾಲಿಕೆ ಮುಂದಾಗಿದೆ. ಕೆ.ಜಿ.ಕೊಪ್ಪಲಿನಲ್ಲಿರುವ ಶೌಚಾಲಯವೇ ಇದಕ್ಕೆ ಸಾಕ್ಷಿ. ಸಾರ್ವಜನಕರಿಂದ ಭಾರಿ ಆಕ್ಷೇಪ ವ್ಯಕ್ತವಾದ ಕಾರಣ ಇನ್ನುಮುಂದೆ ಇಂಥ ಶೌಚಾಲಯಗಳನ್ನು ನಿರ್ಮಿಸದಿರಲು ತೀರ್ಮಾನ ಕೈಗೊಂಡಿದೆ.

‘ಇ–ಶೌಚಾಲಯಗಳಿಗೆ ನಾಣ್ಯ ಹಾಕಿ ಬಳಸಬೇಕೆಂದು ಕೆಲವರು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಹೇಗೆ ಬಳಸಬೇಕೆಂಬ ಮಾಹಿತಿಯೂ ಇಲ್ಲ. ಹೀಗಾಗಿ, ಇಂಥ ಶೌಚಾಲಯಗಳ ಬದಲಿಗೆ ಸಾಮಾನ್ಯ ಶೌಚಾಲಯ ನಿರ್ಮಿಸಲು ನಿರ್ಧರಿಸಿದ್ದೇವೆ. ಚುನಾವಣಾ ನೀತಿ ಸಂಹಿತೆ ಮುಗಿದ ತಕ್ಷಣ ಕಾಮಗಾರಿ ಕೈಗೆತ್ತಿಕೊಳ್ಳುತ್ತೇವೆ’ ಎಂದು ಪಾಲಿಕೆ ಕಾರ್ಯಪಾಲಕ ಎಂಜಿನಿಯರ್‌ ಮಹೇಶ್‌ ಪ್ರತಿಕ್ರಿಯಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು