ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಟೀಕಿಸುವವರಿಗೆ ಕೆಲಸಗಳೇ ಉತ್ತರ’: ಬಸವರಾಜ ಬೊಮ್ಮಾಯಿ

ಕಾಂಗ್ರೆಸ್‌ ನಾಯಕರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿರುಗೇಟು
Last Updated 25 ಸೆಪ್ಟೆಂಬರ್ 2022, 16:22 IST
ಅಕ್ಷರ ಗಾತ್ರ

ಮೈಸೂರು: ‘ಯೋಜನೆಗಳು ಕೇವಲ ಘೋಷಣೆಯಾಗಬಾರದು, ಅನುಷ್ಠಾನವಾಗಬೇಕು. ನನ್ನ ವಿರುದ್ಧ ಟೀಕಿಸುವವರಿಗೆ ರಾಜ್ಯ ಸರ್ಕಾರ ಜಾರಿಗೊಳಿಸಿದ ಜನಪರ ಕಾರ್ಯಕ್ರಮಗಳೇ ಉತ್ತರವಾಗಲಿದೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ‌ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಚಾಮರಾಜ ವಿಧಾನಸಭಾ‌ ಕ್ಷೇತ್ರದ ಫಲಾನುಭವಿಗಳಿಗೆ ಸರ್ಕಾರದ ‌ವಿವಿಧ ಸೌಲಭ್ಯಗಳನ್ನು ವಿತರಿಸಿ‌ ಮಾತನಾಡಿದರು.

‘ಜನರ ಒಳಿತಿಗಾಗಿ ಕೆಲಸ ಮಾಡುವುದು, ಅಧಿಕಾರಕ್ಕಾಗಿ ಕೆಲಸ ಮಾಡುವ ಎರಡು ವರ್ಗಗಳಿರುತ್ತವೆ. ಹಲವು ಭಾಗ್ಯಗಳನ್ನು ಘೋಷಿಸಿ, ದೌರ್ಭಾಗ್ಯ ಕರುಣಿಸಿದವರನ್ನು ಜನರು ಬೆಂಬಲಿಸಲಿಲ್ಲ.‌ ಸುಳ್ಳು ಅಪಪ್ರಚಾರ, ಘೋಷಣೆಗಳಿಂದ ಜನರ‌ ಮನಸ್ಸು‌ ಗೆಲ್ಲಲು ಅಸಾಧ್ಯ. ವಾಮಮಾರ್ಗದಿಂದ ಜನರ‌ ಬೆಂಬಲ ಪಡೆಯಲು ಸಾಧ್ಯವಿಲ್ಲ‌’ ಎಂದು ಕಾಂಗ್ರೆಸ್‌ ವಿರುದ್ಧ ಕಿಡಿಕಾರಿದರು.

‘ದುಡಿಯುವ ವರ್ಗಕ್ಕೆ ಅವಕಾಶ ನೀಡಲು ಸರ್ಕಾರ‌ ಬದ್ಧವಾಗಿದೆ. ಸಮಗ್ರ ಅಭಿವೃದ್ಧಿಗೆ ಹತ್ತು ಹಲವು ಯೋಜನೆಗಳನ್ನು ಘೋಷಿಸಿದ್ದು, ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಶಾಸಕ ಎಲ್.ನಾಗೇಂದ್ರ, ‘ಕ್ಷೇತ್ರದಲ್ಲಿ ಕಳೆದೊಂದು ವಾರದಿಂದ ಹತ್ತು ಹಲವು ಸೇವಾ ಚಟುವಟಿಕೆ ನಡೆಸುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ‌‌ ಅವರ ಕನಸು ಸಾಕಾರಗೊಳಿಸಿದ್ದೇವೆ. ಕ್ಷೇತ್ರದ ವ್ಯಾಪ್ತಿಯಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ₹260 ಕೋಟಿ, ಕೆ.ಆರ್.ಆಸ್ಪತ್ರೆಗೆ ₹89.95 ಕೋಟಿ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ₹85 ಕೋಟಿ, ಚಾಮರಾಜ ಕ್ಷೇತ್ರಕ್ಕೆ ₹50 ಕೋಟಿ ವಿಶೇಷ ಅನುದಾನ, ದೇವಸ್ಥಾನಗಳ‌ ಅಭಿವೃದ್ಧಿಗೆ ₹2 ಕೋಟಿ, 1,705 ಆಶ್ರಯ ಮನೆಗಳನ್ನು ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ಮಹಾರಾಣಿ ಕಾಲೇಜಿನ ಸಮಗ್ರ ಅಭಿವೃದ್ಧಿಗೆ ‌ಅನುದಾನ ನೀಡುವಂತೆ ‌ಶಾಸಕ ನಾಗೇಂದ್ರ ಮುಖ್ಯಮಂತ್ರಿಗೆ ಮನವಿ ಮಾಡಿದರು.

ಉಸ್ತುವಾರಿ ಸಚಿ‌ವ ಎಸ್.ಟಿ.ಸೋಮಶೇಖರ್ ಮಾತನಾಡಿ, ‘ರಾಜ್ಯದಲ್ಲಿ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ‌ ₹24 ಸಾವಿರ ಕೋಟಿ‌ ಸಾಲ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ತಿಳಿಸಿದರು.

ಸಂಸದ ಪ್ರತಾಪಸಿಂಹ ಮಾತನಾಡಿ, ‘ಸಿದ್ದರಾಮಯ್ಯ ‌ಅವರು ಬೀಗರೂಟ, ಮುಂಜಿ, ಮದುವೆಗಾಗಿ‌ ಮೈಸೂರಿಗೆ ಬಂದು ತೆರಳುತ್ತಿದ್ದರೇ ವಿನಾ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಬರುತ್ತಿರಲಿಲ್ಲ. ಆದರೆ, ಬಸವರಾಜ ಬೊಮ್ಮಾಯಿ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನಡೆಸಲು ಇಲ್ಲಿಗೆ ಬರುತ್ತಿದ್ದಾರೆ’ ಎಂದು ತಿಳಿಸಿದರು.

ಮೇಯರ್ ಶಿವಕುಮಾರ್, ‌ಉಪಮೇಯರ್ ಡಾ.ಜಿ.ರೂಪಾ, ಜಿಲ್ಲಾಧಿಕಾರಿ ‌ಬಗಾದಿ ಗೌತಮ್, ಜಿಲ್ಲಾ ಪಂಚಾಯಿತಿ‌ ಸಿಇಒ ಬಿ.ಆರ್.ಪೂರ್ಣಿಮಾ, ಪಾಲಿಕೆ ಆಯುಕ್ತ ಲಕ್ಷ್ಮೀಕಾಂತ ಜಿ. ರೆಡ್ಡಿ, ನಗರ ಪೊಲೀಸ್ ಆಯುಕ್ತ ಚಂದ್ರಗುಪ್ತ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಿನೇಶ್, ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ‌ ರಾಜೇಂದ್ರ, ನಗರ ಘಟಕದ ಅಧ್ಯಕ್ಷ ಶ್ರೀವತ್ಸ, ವಿಭಾಗೀಯ ಪ್ರಭಾರಿ ಮೈ.ವಿ.ರವಿಶಂಕರ್, ಮೃಗಾಲಯದ‌ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಬಣ್ಣ, ಅರಗು ಕಾರ್ಖಾನೆ ಅಧ್ಯಕ್ಷ ರಘು ಕೌಟಿಲ್ಯ, ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ.ಶಿವಣ್ಣ,‌ ಚಾಮರಾಜ ವಿಧಾನಸಭಾ ಕ್ಷೇತ್ರದ ಸೋಮರಾಜು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT