ಮೈಸೂರು: ದಸರಾ ವಸ್ತು ಪ್ರದರ್ಶನ ಮಳಿಗೆಗಳದ್ದು ಅದೇ ರಾಗ, ಅದೇ ಹಾಡು. ನಾಡಹಬ್ಬದ ಉದ್ಘಾಟನೆ ವೇಳೆಗೆ ಸರ್ಕಾರದ ವಿವಿಧ ಇಲಾಖೆಗಳ, ನಿಗಮ ಮಂಡಳಿಗಳು ಮತ್ತು ಜಿಲ್ಲಾ ಪಂಚಾಯಿತಿಗಳ ಮಳಿಗೆಗಳು ಸಿದ್ಧಗೊಂಡಿರುವುದಿಲ್ಲ. ಈ ಬಾರಿಯೂ ಹಳೆಯ ಕತೆ ಮುಂದುವರಿದಿದೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಸ್ತು ಪ್ರದರ್ಶನವನ್ನು ಭಾನುವಾರ ಉದ್ಘಾಟಿಸಿದರು. ಒಂದು ಕಡೆ ಉದ್ಘಾಟನಾ ಸಮಾರಂಭ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಿರ್ಮಾಣ ಕೆಲಸ ಭರದಿಂದ ಸಾಗಿತ್ತು.
ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಇಲಾಖೆಗಳ 18, ವಿವಿಧ ನಿಗಮ ಮಂಡಳಿಗಳ 19 ಮತ್ತು ಜಿಲ್ಲಾ ಪಂಚಾಯಿತಿಗಳ ಆರು ಮಳಿಗೆಗಳು ಈ ಬಾರಿ ವಸ್ತು ಪ್ರದರ್ಶನದಲ್ಲಿ ಇರಲಿವೆ. ಇವುಗಳಲ್ಲಿ ಮೊದಲ ದಿನ ಉದ್ಘಾಟನೆಯಾಗಿದ್ದು ಎರಡು ಮಳಿಗೆಗಳು ಮಾತ್ರ.
ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಮಳಿಗೆಗಳನ್ನು ಉದ್ಘಾಟಿಸಿದರು. ಪ್ರವಾಸೋದ್ಯಮ ಇಲಾಖೆ ಒಳಗೊಂಡಂತೆ ನಾಲ್ಕೈದು ಮಳಿಗೆಗಳ ನಿರ್ಮಾಣ ಶೇ 80 ರಷ್ಟು ಪೂರ್ಣಗೊಂಡಿವೆ.
ಇನ್ನುಳಿದ ಮಳಿಗೆಗಳ ಕೆಲಸ ಆರಂಭಿಕ ಹಂತದಲ್ಲಿವೆ. ಕೆಲವು ಇಲಾಖೆಗಳು ಇನ್ನೂ ಕೆಲಸವನ್ನೇ ಆರಂಭಿಸಿಲ್ಲ! ಎಲ್ಲ 43 ಮಳಿಗೆಗಳು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲು ಕನಿಷ್ಠ 15 ದಿನಗಳಾದರೂ ಬೇಕು.
‘ಎಲ್ಲ ಮಳಿಗೆಗಳು ಇನ್ನೂ ಆರಂಭವಾಗಿಲ್ಲ. ಉದ್ಘಾಟನೆ ಮಾಡುವುದು ನನ್ನ ಕರ್ತವ್ಯ. ಆದ್ದರಿಂದ ವಸ್ತು ಪ್ರದರ್ಶನಕ್ಕೆ ಅಧಿಕೃತ ಚಾಲನೆ ನೀಡಿದ್ದೇನೆ’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದರು.
ತಡವಾಗಿ ಟೆಂಡರ್: ಈ ಬಾರಿ ಟೆಂಡರ್ ಪ್ರಕ್ರಿಯೆಯೇ ತಡವಾಗಿ ನಡೆದಿದೆ. ಇದರಿಂದ ಗುತ್ತಿಗೆದಾರರಿಗೆ ಮಳಿಗೆಗಳ ನಿರ್ಮಾಣಕ್ಕೆ ಸಾಕಷ್ಟು ಸಮಯ ದೊರೆತಿಲ್ಲ. 15 ದಿನಗಳ ಹಿಂದೆಯಷ್ಟೇ ಕೆಲಸಗಳು ಆರಂಭವಾಗಿದ್ದವು.
‘ಇ–ಪ್ರಕ್ಯೂರ್‌ಮೆಂಟ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿತ್ತು. ಇದರಿಂದ ಟೆಂಡರ್ ಪ್ರಕ್ರಿಯೆ ಅಂತಿಮಗೊಳಿಸಲು ತಡವಾಗಿದೆ. ಆರು ಮಳಿಗೆಗಳು ಸಿದ್ಧವಾಗಿದ್ದು, ಅ.6ರ ಒಳಗೆ ಎಲ್ಲ ಮಳಿಗೆಗಳು ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಗಲಿದೆ’ ಎಂದು ವಸ್ತು ಪ್ರದರ್ಶನ ಪ್ರಾಧಿಕಾರದ ಸಿಇಒ ಗಿರೀಶ್ ತಿಳಿಸಿದರು.
‘10 ದಿನಗಳ ಹಿಂದೆಯಷ್ಟೇ ನಿರ್ಮಾಣ ಆರಂಭಿಸಿದ್ದೆವು. ಹಗಲು ರಾತ್ರಿ ಕೆಲಸ ಮಾಡಿದ್ದರಿಂದ ಉದ್ಘಾಟನೆ ವೇಳೆ ಮಳಿಗೆ ಸಿದ್ಧಗೊಂಡಿದೆ’ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಳಿಗೆ ನಿರ್ಮಾಣದ ಗುತ್ತಿಗೆ ವಹಿಸಿಕೊಂಡಿರುವ ಸಂಸ್ಥೆಯ ಪ್ರತಿನಿಧಿ ಪ್ರತಿಕ್ರಿಯಿಸಿದರು.
ದಸರಾ ಉದ್ಘಾಟನೆ ವೇಳೆಗೆ ಎಲ್ಲ ಮಳಿಗೆಗಳು ಸಿದ್ಧವಾಗಿರಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಹಲವು ಸಲ ಎಚ್ಚರಿಕೆ ಕೊಟ್ಟಿದ್ದರು. ಆದರೂ ಹಳೆಯ ಕತೆ ಮುಂದುವರಿದಿದೆ.
ಈ ಬಾರಿ 150 ವಾಣಿಜ್ಯ ಮಳಿಗೆಗಳು ಮತ್ತು 100 ಕ್ಕೂ ಅಧಿಕ ಆಹಾರ ಮಳಿಗೆಗಳು ಇರಲಿವೆ. ಇದರ ಜತೆಗೆ ಮನರಂಜನಾ ಪಾರ್ಕ್ ನಿರ್ಮಾಣ ಕೂಡಾ ಅಂತಿಮ ಹಂತದಲ್ಲಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.