ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮೈಸೂರು: ‘ತಬ್ಬಲಿ’ ಹುಡುಗಿಗೆ ಕನ್ನಡದಲ್ಲಿ 10 ಚಿನ್ನ

ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವ
ಮೋಹನ್‌ಕುಮಾರ ಸಿ.
Published 3 ಮಾರ್ಚ್ 2024, 19:05 IST
Last Updated 3 ಮಾರ್ಚ್ 2024, 19:05 IST
ಅಕ್ಷರ ಗಾತ್ರ

ಮೈಸೂರು: ತಂದೆ–ತಾಯಿ ಇಬ್ಬರನ್ನೂ ಕಳೆದುಕೊಂಡು, ವಿದ್ಯಾರ್ಥಿನಿಲಯಗಳಲ್ಲಿ ಓದಿದ ‘ತಬ್ಬಲಿ’ ಹುಡುಗಿ ವಿ.ತೇಜಸ್ವಿನಿ ಎಂ.ಎ. ಕನ್ನಡದಲ್ಲಿ 10 ಚಿನ್ನದ ಪದಕ ಹಾಗೂ 4 ನಗದು ಬಹುಮಾನ ಪಡೆದು ಸಾಧನೆ ಮಾಡಿದ್ದಾರೆ. 

ಭಾನುವಾರ ನಡೆದ ಮೈಸೂರು ವಿಶ್ವವಿದ್ಯಾಲಯದ 104ನೇ ಘಟಿಕೋತ್ಸವದಲ್ಲಿ ಪದಕ ಪಡೆದ ಸಂಭ್ರಮವನ್ನು ದಾರಿ ತೋರಿದ ಶಿಕ್ಷಕರೊಂದಿಗೆ ಹಂಚಿಕೊಂಡರು.

ಗಡಿಜಿಲ್ಲೆ ಚಾಮರಾಜನಗರದ ಕೊಳ್ಳೇಗಾಲ ತಾಲ್ಲೂಕಿನ ಸತ್ತೇಗಾಲ ಗ್ರಾಮದ ತೇಜಸ್ವಿನಿ, 4ನೇ ತರಗತಿ ಓದುವಾಗ ತಾಯಿ ನಾಗಮ್ಮ, ದ್ವಿತೀಯ ಪಿಯು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾಗ ತಂದೆ ಎಚ್‌.ವೆಂಕಟೇಶ್‌ ಅವರನ್ನು ಕಳೆದುಕೊಂಡರು. ಉನ್ನತ ಶಿಕ್ಷಣ ಪಡೆಯುವ ಕನಸು ಕಮರಿದ್ದಾಗ ಅವರಿಗೆ ಶಿಕ್ಷಕರು–ಉಪನ್ಯಾಸಕರು ನೆರವಾದರು.

ಪ್ರಾಥಮಿಕ–ಪ್ರೌಢಶಾಲಾ ಶಿಕ್ಷಣವನ್ನು ತಲಕಾಡಿನ ಸರ್ಕಾರಿ ಶಾಲೆಗಳಲ್ಲಿ ಪೂರೈಸಿದ ಅವರು, ಮಳವಳ್ಳಿ ಸರ್ಕಾರಿ ಬಾಲಕಿಯರ ಪಿಯು ಕಾಲೇಜಿನಲ್ಲಿ ಓದಿ, ಮೈಸೂರಿನ ಮಹಾರಾಣಿ ಕಲಾ ಕಾಲೇಜಿನಲ್ಲಿ ಬಿ.ಎ ಪದವಿಯನ್ನು 9 ಚಿನ್ನದ ಪದಕ ಹಾಗೂ 10 ನಗದು ಬಹುಮಾನದೊಂದಿಗೆ ಉತ್ತೀರ್ಣರಾಗಿದ್ದರು.

‘ಶಿಕ್ಷಕರು– ಸ್ನೇಹಿತರ ಪ್ರೋತ್ಸಾಹದಿಂದ ಸಾಧನೆ ಸಾಧ್ಯವಾಗಿದೆ. ವಿದ್ಯಾರ್ಥಿನಿಲಯಗಳಲ್ಲಿ ಸಲಹಿದ, ದಾರಿ ತೋರಿದ ಎಲ್ಲರನ್ನೂ ನೆನೆಯುವೆ. ಪಿಎಚ್‌ಡಿ ಮಾಡಬೇಕು, ಉಪನ್ಯಾಸಕಿಯಾಗಿ ಕನ್ನಡ ಭಾಷೆ–ಸಾಹಿತ್ಯವನ್ನು ಮಕ್ಕಳಿಗೆ ಕಲಿಸುವುದು ನನ್ನ ಆಸೆಯಾಗಿದೆ’ ಎಂದು ತೇಜಸ್ವಿನಿ ನುಡಿದರು. 

ಅನಘಾ ಸಾಧನೆ: ಹುಟ್ಟಿನಿಂದಲೇ ದೃಷ್ಟಿದೋಷ ಹೊಂದಿರುವ ಎಸ್‌.ಅನಘಾ, ಕನ್ನಡ ಎಂ.ಎ. ಪದವಿಯಲ್ಲಿ ಚಿನ್ನದ ಪದಕ ಪಡೆದಿದ್ದಾರೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಸೀನಿಯರ್‌ ಪರೀಕ್ಷೆ ಪಾಸ್‌ ಮಾಡಿರುವ ಅವರು, ವಿದ್ವತ್‌ ಪರೀಕ್ಷೆ ತೆಗೆದುಕೊಂಡಿದ್ದಾರೆ. ಅನಿವಾಸಿ ಭಾರತೀಯರಿಗೆ ಆನ್‌ಲೈನ್‌ನಲ್ಲಿ ಸಂಗೀತ ಪಾಠ ಮಾಡುತ್ತಾ ಈ ಸಾಧನೆ ತೋರಿದ್ದಾರೆ.

ಪೋಷಕರಾದ ಪುಷ್ಪಲತಾ– ಕೆ.ಸತೀಶ್‌ ದಂಪತಿ ಮಗಳಿಗೆ ಆತ್ಮವಿಶ್ವಾಸ ತುಂಬಿದ್ದಾರೆ. ಕನ್ನಡ ಸಂಶೋಧನಾ ಕ್ಷೇತ್ರದಲ್ಲಿ ಕೆಲಸ ಮಾಡುವ ಆಸೆ ಅನಘಾ ಅವರದ್ದು. 

‘ದೃಷ್ಟಿದೋಷ ಇರುವುದು ಬದುಕಿಗೆ ತೊಡಕಲ್ಲ. ಇತರ ಇಂದ್ರಿಯಗಳ ಸಾಮರ್ಥ್ಯ ಹೆಚ್ಚೇ ಇದೆ. ಸ್ವಾವಲಂಬಿಯಾಗಿ ಬದುಕಲು ಶಿಕ್ಷಣ ಪಡೆಯಬೇಕು. ಹೀಗಾಗಿಯೇ ಸಂಗೀತ– ಸಾಹಿತ್ಯ ಕ್ಷೇತ್ರದಲ್ಲಿ ಹೆಚ್ಚು ಕೆಲಸ ಮಾಡುವ, ಕಲಿಯುವ ಆಸೆ ಇದೆ. ಪಿಎಚ್‌ಡಿ ಮಾಡಿ ಉಪನ್ಯಾಸಕಿಯಾಗುವೆ’ ಎಂದು ಅನಘಾ ಹೇಳಿದರು.

 ದೃಷ್ಟಿದೋಷದ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿನಿ ಎಸ್.ಅನಘಾ ಚಿನ್ನದ ಪದಕ ಪಡೆದರು – ಪ್ರಜಾವಾಣಿ ಚಿತ್ರ.
 ದೃಷ್ಟಿದೋಷದ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿನಿ ಎಸ್.ಅನಘಾ ಚಿನ್ನದ ಪದಕ ಪಡೆದರು – ಪ್ರಜಾವಾಣಿ ಚಿತ್ರ.

ಪೂಜಾಗೆ 16 ಮೇಘನಾಗೆ 15

ಚಿನ್ನ ತುಮಕೂರಿನ ತುರುವೇಕೆರೆಯ ಮೇಘನಾ ಮೈಸೂರು ವಿಶ್ವವಿದ್ಯಾಲಯದ ಎಂ.ಎಸ್ಸಿ. (ಇನ್‌ ಆರ್ಗ್ಯಾನಿಕ್‌ ಕೆಮಿಸ್ಟ್ರಿ) ವಿಭಾಗದಲ್ಲಿ 15 ಚಿನ್ನದ ಪದಕ ಹಾಗೂ 5 ನಗದು ಬಹುಮಾನ ಪಡೆದರು. ತಂದೆ ಸುಂದರ್‌ ರಾವ್ ಶಿಕ್ಷಕರಾಗಿದ್ದು ತಾಯಿ ಸುಧಾರಾಣಿ ಅವರ ಪ್ರೋತ್ಸಾಹವನ್ನು ನೆನೆಯುವ ಅವರಿಗೆ ಸ್ಪರ್ಧಾತ್ಮಕ ಪರೀಕ್ಷೆ ಬರೆದು ಸರ್ಕಾರಿ ಸೇವೆ ಸೇರುವ ಗುರಿ ಇದೆ. ಎಂ.ಟೆಕ್‌. ನಗರ ಮತ್ತು ಪ್ರಾದೇಶಿಕ ಯೋಜನೆಯಲ್ಲಿ (ಯುಆರ್‌ಪಿ) 16 ಚಿನ್ನದ ಪದಕ ಪಡೆದಿರುವ ಬಳ್ಳಾರಿಯ ಎನ್‌.ಪೂಜಾ ಪೋಷಕರಾದ ಎನ್‌.ಮೋಹನ್‌ಕುಮಾರ್ ಎನ್‌.ನಾಗವೇಣಿ ಪ್ರೋತ್ಸಾಹವನ್ನು ನೆನೆದರು. ನಗರ ಯೋಜನಾ ಇಲಾಖೆ ಸೇರುವ ಕನಸು ಅವರದು. ಹಿಮಾಚಲದ ಧರ್ಮಶಾಲಾದಿಂದ ನಗರಕ್ಕೆ ಯೋಗ ಶಿಕ್ಷಕಿಯಾಗಿ ಬಂದ ಅಜಿತಾ ಗುಲೇರಿಯಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಾ ಎಂ.ಎ. ತತ್ವಶಾಸ್ತ್ರದಲ್ಲಿ 7 ಚಿನ್ನದ ಪದಕ 4 ನಗದು ಬಹುಮಾನ ಪಡೆದಿದ್ದಾರೆ. ಎಂ.ಎ. ಅರ್ಥಶಾಸ್ತ್ರದಲ್ಲಿ ಜೈನಾ ಎಂ.ಹರನ್‌ 8 ಚಿನ್ನ ಎಂ.ಎಸ್ಸಿ. ಜೀವ ವಿಜ್ಞಾನದಲ್ಲಿ ಜಿ.ಆರ್‌.ಸಂಯಮ 12 ಚಿನ್ನ ಪಡೆದಿದ್ದು ನಾಗರಿಕಾ ಸೇವಾ ಪರೀಕ್ಷೆ ಬರೆಯಲು ತಯಾರಿ ನಡೆಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT