ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಕೃತಿ ನಾಶಗೊಳಿಸಿ ಬದುಕುವ ಯತ್ನ ಬೇಡ: ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

15 ಸಾವಿರ ಸಸಿ ವಿತರಣಾ ಕಾರ್ಯಕ್ರಮ
Published 19 ಜೂನ್ 2023, 15:28 IST
Last Updated 19 ಜೂನ್ 2023, 15:28 IST
ಅಕ್ಷರ ಗಾತ್ರ

ಮೈಸೂರು: ‘ನಮಗೆ ಆಧಾರವಾಗಿರುವ ಪ್ರಕೃತಿಯನ್ನು ನಾಶ ಮಾಡಿ ಬದುಕುವ ಪ್ರಯತ್ನವನ್ನು ಯಾರೂ ಮಾಡಬಾರದು’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ಹಸಿರು ಮೈಸೂರು ಲಕ್ಷ ವೃಕ್ಷ ಆಂದೋಲನದಿಂದ ನಗರದ ಹೊರವಲಯದ ನಂಜನಗೂಡು ರಸ್ತೆಯಲ್ಲಿನ ನರ್ಸರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ 15 ಸಾವಿರ ಸಸಿ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮನುಷ್ಯ ಬದುಕಲು ಗಾಳಿ ಬೇಕು. ಗಾಳಿ ಪಡೆಯಲು ಹಸಿರು ಇರಬೇಕು. ಕೃತಕವಾಗಿ ಸೃಷ್ಟಿಸಲು ಸಾಧ್ಯವಿಲ್ಲ. ಭಗವಂತನ ಸೃಷ್ಟಿಯ ಪ್ರಾಕೃತಿಕ ಸಂಪತ್ತನ್ನು ಯಾರೂ ನಾಶ ಮಾಡಲು ಮುಂದಾಗಬಾರದು’ ಎಂದು ಸಲಹೆ ನೀಡಿದರು.

‘ಪರಿಸರ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿ. ಪ್ರತಿಯೊಬ್ಬರು ಪರಿಸರ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಹಸಿರು ಬೆಳೆಸುವ ಪ್ರಾಮಾಣಿಕ ಕೆಲಸ ಮಾಡಬೇಕು. ಹಸಿರು ಗಿಡ ಬೆಳೆಸಿ ಪೋಷಿಸಬೇಕು’ ಎಂದರು.

‘ಎಚ್‌.ವಿ. ರಾಜೀವ್‌ ಅವರು ಒಳ್ಳೆಯ ಚಿಂತನೆ ಹಾಗೂ ಉದ್ದೇಶ ಹೊಂದಿ ಪರಿಸರ ಕಾಳಜಿಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಯಶಸ್ಸು ಪಡೆದಿದ್ದಾರೆ. ಇದೊಂದು ಉತ್ತಮ ಕಾರ್ಯಕ್ರಮವಾಗಿದ್ದು, ಎಲ್ಲರೂ ಒಂದೊಂದು ಗಿಡ ನೆಡುವ ಸಂಕಲ್ಪ ಮಾಡಿ’ ಎಂದು ಹೇಳಿದರು.

ಅರಣ್ಯ ಸಂರಕ್ಷಣಾಧಿಕಾರಿ ಮಾಲತಿ ಪ್ರಿಯ ಮಾತನಾಡಿ, ‘ಗಿಡ ಬೆಳೆಸುವುದು ಕೇವಲ ಅರಣ್ಯ ಇಲಾಖೆಯ ಕರ್ತವ್ಯ ಮಾತ್ರವಲ್ಲ, ಇದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ. ಅರಣ್ಯ ಇಲಾಖೆ ಜೊತೆಗೂಡಿ ಸಹಕರಿಸಿದರೆ, ಮೂರು ವರ್ಷದೊಳಗೆ ಮೈಸೂರನ್ನು ಹಸಿರು ನಗರವನ್ನಾಗಿಸಬಹುದು’ ಎಂದರು.

‘ಸಸಿ ಪಡೆದು ನೆಡುವುದಕ್ಕೆ ಸೀಮಿತಗೊಳ್ಳದೆ, ಅವುಗಳನ್ನು ಪೋಷಿಸಿ ಬೆಳೆಸಬೇಕು. ಎಷ್ಟು ಸಸಿ ಉಳಿದುಕೊಂಡಿವೆ ಎಂಬುದನ್ನು ಗಮನ ಹರಿಸಬೇಕು. ಅರಣ್ಯ ಇಲಾಖೆಯಿಂದ ನೀಡುವ ಸಸಿಗಳ ದರ ಕಡಿಮೆಗೊಳಿಸಲು ಸರ್ಕಾರಕ್ಕೆ ಮನವಿ ಮಾಡಲಾಗಿದೆ’ ಎಂದು ತಿಳಿಸಿದರು.

ಧರ್ಮಸ್ಥಳದ ಎಸ್‌ಕೆಡಿಆರ್‌ಡಿಪಿ, ಬಿ.ಸಿ.ಟ್ರಸ್ಟ್‌ ಪ್ರಾದೇಶಿಕ ನಿರ್ದೇಶಕ ವಿವೇಕ್‌ ಪಿ.ಪೈಸ್‌ ಮಾತನಾಡಿ, ‘ಪರಿಸರದ ಪ್ರೀತಿ ಪ್ರತಿ ನಿತ್ಯದ ಧ್ಯೇಯವಾಗಬೇಕು. ನಿಸರ್ಗದ ಈ ಭೂಮಿಯಲ್ಲಿ ಅರಣ್ಯ ಗರ್ಭಗುಡಿ ಇದ್ದಂತೆ. ಇದನ್ನು ರಕ್ಷಿಸುವ ಕಾಳಜಿ, ಬದ್ಧತೆ ಹೊಂದಬೇಕು. ಅರಣ್ಯ ನಾಶದಿಂದ ಮಳೆ ಕೊರತೆ ಸಂಭವಿಸಿದ್ದು, ನದಿಗಳು ಬತ್ತಿವೆ’ ಎಂದು ವಿಷಾದ ವ್ಯಕ್ತಪಡಿಸಿದರು.

ಪತ್ರಕರ್ತರಾದ ಹರಿಪ್ರಕಾಶ್‌ ಕೋಣೆಮನೆ, ವಿಕ್ರಮ್‌ ಮುತ್ತಣ್ಣ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪರಿಸರ ಪೋಷಕರಾದ ಬಿ.ಎಲ್‌.ಭೈರಪ್ಪ, ಕುಮಾರ್‌, ಅಶೋಕ್‌, ಲೀಲಾ ಶಿವಕುಮಾರ್‌, ಗೋವರ್ಧನ್‌ ಅವರನ್ನು ಸನ್ಮಾನಿಸಲಾಯಿತು. ಬಳಿಕ, ಸಸಿಗಳನ್ನು ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT