ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂರಕ್ಷಿತ ಸ್ಮಾರಕ’ ಪಟ್ಟಕ್ಕೆ ರಾಜ್ಯದ 181 ತಾಣ

ಸರ್ಕಾರಕ್ಕೆ ಶಿಫಾರಸು ಮಾಡಲು ಪರಂಪರೆ ಇಲಾಖೆಯಿಂದ ಸಿದ್ಧತೆ
Published 31 ಅಕ್ಟೋಬರ್ 2023, 5:53 IST
Last Updated 31 ಅಕ್ಟೋಬರ್ 2023, 5:53 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ದೇವಾಲಯ ಸೇರಿದಂತೆ ರಾಜ್ಯದ 181 ಸ್ಮಾರಕಗಳನ್ನು ‘ಸಂರಕ್ಷಿತ ಸ್ಮಾರಕಗಳು’ ಎಂದು ಘೋಷಿಸುವಂತೆ ಪುರಾತತ್ವ ಸಂಗ್ರಹಾಲಯಗಳು ಹಾಗೂ ಪರಂಪರೆ ಇಲಾಖೆಯಿಂದ ಸರ್ಕಾರಕ್ಕೆ ಶಿಫಾರಸು ಮಾಡಲು ಸಿದ್ಧತೆ ನಡೆಸಿದೆ.

ಪುರಾತತ್ವ ಮತ್ತು ಕಲಾತ್ಮಕ ಆಸ್ಥೆಯುಳ್ಳಂತಹ ಮತ್ತು ನೂರು ವರ್ಷಗಳಿಗಿಂತಲೂ ಕಡಿಮೆಯಿಲ್ಲದೆ ಅಸ್ತಿತ್ವದಲ್ಲಿರುವಂಥ ಯಾವುದೇ ರಚನೆ, ನಿರ್ಮಿತಿ, ಸ್ಮಾರಕ ಅಥವಾ ಯಾವುದೇ ಸಮಾಧಿ ದಿಬ್ಬ, ಹೂಳುವ ಸ್ಥಳ, ಗುಹೆ, ಶಿಲಾಶಿಲ್ಪ, ಶಾಸನ ಮತ್ತು ಏಕಶಿಲೆ ಇತ್ಯಾದಿಗಳನ್ನು ಸಂರಕ್ಷಿತ ಸ್ಮಾರಕಗಳೆಂದು ಘೋಷಿಸಬಹುದಾಗಿದೆ. ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಮಾರಕಗಳು ಹಾಗೂ ಪುರಾತತ್ವ ಸ್ಥಳಗಳ ಮತ್ತು ಅವಶೇಷಗಳ ಅಧಿನಿಯಮ 1961 ಹಾಗೂ 1965ರ ನಿಯಮಗಳ ಅನ್ವಯ ಘೋಷಣೆಗಾಗಿ ‘ಅರಕ್ಷಿತ ಸ್ಮಾರಕಗಳ’ ಕಂದಾಯ ದಾಖಲೆ–ಮಾಹಿತಿಯನ್ನು ಒದಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ದಾಖಲೆಗಳು ದೊರೆತ ನಂತರ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತದೆ.

‘ರಾಜ್ಯದಲ್ಲಿನ ಐತಿಹಾಸಿಕ ಮಹತ್ವವುಳ್ಳ ಪ್ರಾಚ್ಯಾವಶೇಷಗಳು, ದೇವಾಲಯಗಳು, ಸ್ಮಾರಕಗಳನ್ನು ಸಂರಕ್ಷಿಸಿ ದಾಖಲೀಕರಿಸಲು ಸಂರಕ್ಷಣಾ ಯೋಜನೆಯನ್ನು ಕೈಗೊಳ್ಳಲಾಗಿದೆ. ಅದರಡಿ ಅವಜ್ಞೆಗೆ ತುತ್ತಾಗಿರುವ ಅನೇಕ ಅರಕ್ಷಿತ ಸ್ಮಾರಕಗಳು ಹಾಗೂ ಇತರೆ ಪ್ರಾಚ್ಯಾವಶೇಷಗಳನ್ನು ಗ್ರಾಮವಾರು ಸರ್ವೇ ಕಾರ್ಯದ ಮೂಲಕ ಗುರುತಿಸಲಾಗುತ್ತಿದೆ. ಈ ಸಮೀಕ್ಷೆಯ ಆಧಾರದಲ್ಲಿ ಹೊಸದಾಗಿ ಅಧಿಸೂಚನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ’ ಎಂದು ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ. ದೇವರಾಜು ತಿಳಿಸಿದರು.

ತಿಂಗಳಲ್ಲಿ ಪೂರ್ಣ: ‘ರಾಜ್ಯದಲ್ಲಿ ಪ್ರಸ್ತುತ 848 ರಾಜ್ಯ ಸಂರಕ್ಷಿತ ಸ್ಮಾರಕಗಳಿವೆ. ಹೊಸದಾಗಿ ಸ್ಮಾರಕಗಳ ಘೋಷಣೆಗೆ ಅನುಮೋದನೆ ದೊರೆತಲ್ಲಿ ರಾಜ್ಯ ಸಂರಕ್ಷಿತ ಸ್ಮಾರಕಗಳ ಸಂಖ್ಯೆ 1,029ಕ್ಕೆ ಏರಲಿದೆ. ಕಂದಾಯ ಇಲಾಖೆಯಿಂದ ದೊರೆಯಲಿರುವ ದಾಖಲೆಗಳ ಆಧಾರದಲ್ಲಿ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವ ಸಲ್ಲಿಸಲಾಗುವುದು. ಆಕ್ಷೇಪಣೆಗೆ 15 ದಿನ ಕಾಲಾವಕಾಶ ನೀಡಲಾಗುತ್ತದೆ. ಇನ್ನೊಂದು ತಿಂಗಳಲ್ಲಿ ಎಲ್ಲ ಪ‍್ರಕ್ರಿಯೆ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ’ ಎನ್ನುತ್ತಾರೆ ಅವರು.

‘ಸಂರಕ್ಷಿತ ಸ್ಮಾರಕಗಳು ಎಂದು ಘೋಷಣೆಯಾದಲ್ಲಿ ಸಂರಕ್ಷಣೆಗೆ ಅನುಕೂಲವಾಗಲಿದೆ. ಕಾನೂನಿನ ಬಲವೂ ಇರುತ್ತದೆ. ‘ನಮ್ಮ ಸ್ಮಾರಕಗಳ ದತ್ತು ಕಾರ್ಯಕ್ರಮ’ದಡಿ ನಿರ್ವಹಣೆಗೆ ದತ್ತು ಕೊಡುವುದಕ್ಕೂ ಸಹಕಾರಿಯಾಗಲಿದೆ. ಯಾರೂ ತೊಂದರೆ ಕೊಡುವುದಕ್ಕೆ ಆಗುವುದಿಲ್ಲ’ ಎಂದು ಹೇಳಿದರು.

‘ಇಷ್ಟು ದೊಡ್ಡ ಸಂಖ್ಯೆಯಲ್ಲಿ ಶಿಫಾರಸು ಮಾಡುತ್ತಿರುವುದು ಇದೇ ಮೊದಲು. ಈ ಹಿಂದೆ 10ರಿಂದ 15 ಸ್ಮಾರಕಗಳನ್ನು ಶಿಫಾರಸು ಮಾಡಲಾಗಿತ್ತು. ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮೂಲಕ ಸಮೀಕ್ಷೆ ನಡೆಸಿ ಕ್ರೋಡೀಕರಿಸಿದ ಮಾಹಿತಿ ಆಧಾರದಲ್ಲಿ ಕಂದಾಯ ದಾಖಲೆಗಳನ್ನು ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು  ತಿಳಿಸಿದರು.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಬೆಳ್ಳಿಗಾವೆಯಲ್ಲಿರುವ ನೀಲಕಂಠೇಶ್ವರ ದೇವಾಲಯ, ಗದಗ ಜಿಲ್ಲೆಯ ಲಕ್ಕುಂಡಿಯಲ್ಲಿರುವ ಮಲ್ಲಿಕಾರ್ಜುನ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಚಂದ್ರಮೌಳೇಶ್ವರ ದೇವಸ್ಥಾನ ಮತ್ತು ಲಕ್ಷ್ಮೀನಾರಾಯಣ ದೇವಸ್ಥಾನ, ಮಡಿಕೇರಿ ತಾಲ್ಲೂಕಿನ ಹುದಿಕೇರಿಯಲ್ಲಿರುವ ರಾಜರ ಸಮಾಧಿ, ಮಡಿಕೇರಿ ತಾಲ್ಲೂಕಿನಲ್ಲಿ ನಾಪೋಕ್ಲುವಿನ ನಾಲ್ಕುನಾಡು ಅರಮನೆ ಮತ್ತು ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಅಂಜನಗೇರಿ-ಬೆಟ್ಟಗೇರಿಯಲ್ಲಿರುವ ಜೈನ ಬಸದಿ ಮೊದಲಾದವುಗಳು ಸಂರಕ್ಷಿತ ಸ್ಮಾರಕಗಳೆಂದು ಘೋಷಣೆಯಾಗಲಿವೆ.

ಕಂದಾಯ ದಾಖಲೆ ಸಂಗ್ರಹಿಸುತ್ತಿರುವ ಇಲಾಖೆ ಜಿಲ್ಲಾಧಿಕಾರಿಗಳಿಗೆ ಪತ್ರ ಸಂರಕ್ಷಣೆಗೆ ಅನುಕೂಲ

ಮೈಸೂರು ಜಿಲ್ಲೆಯಲ್ಲಿ ಯಾವ್ಯಾವು?

ಪಟ್ಟಿಯಲ್ಲಿ ದೇಗುಲಗಳ ಸಂಖ್ಯೆಯೇ ಜಾಸ್ತಿ ಇದೆ. ಮೈಸೂರು ತಾಲ್ಲೂಕಿನ ವರಕೋಡಿನ ವರದರಾಜ ದೇವಾಲಯ ಮತ್ತು ಕಲ್ಯಾಣಿ ಸಿಂಧುವಳ್ಳಿಯ ಸೋಮೇಶ್ವರ ತಳೂರಿನ ಭುಜಂಗೇಶ್ವರ ಕುಮಾರಬೀಡುವಿನ ಬಸವೇಶ್ವರ (ಶ್ರೀಕಂಠೇಶ್ವರ) ಬೋಗಾದಿಯ ಬೋಗೇಶ್ವರಸ್ವಾಮಿ ಹಿನಕಲ್‌ನ ನನ್ನೇಶ್ವರ ಸ್ವಾಮಿ ಹಾಗೂ ಸಿದ್ದಲಿಂಗಪುರದ ಚಂದ್ರಮೌಳೇಶ್ವರ ದೇವಾಲಯಗಳು. ಚಾಮುಂಡಿಬೆಟ್ಟದಲ್ಲಿರುವ ಚಾಮುಂಡೇಶ್ವರಿ ಮಹಾಲಿಂಗೇಶ್ವರ ಕಾಲಭೈರವೇಶ್ವರ ಬೆಟ್ಟ ಪಾದ (ಮೆಟ್ಟಿಲು) ದೇವಿಕೆರೆ ಮಂಟಪ ಹಾಗೂ ಗುಡಿಗಳು ಕೆ.ಆರ್. ನಗರ ತಾಲ್ಲೂಕು ಮಲ್ಲೇಶ್ವರ ಅಡಗನಹಳ್ಳಿಯ ಲಕ್ಷ್ಮೀದೇವಿ ಬ್ಯಾಡರಹಳ್ಳಿಯ ಅರ್ಕೇಶ್ವರ ಹಾಗೂ ಈಶ್ವರ ಹಳೇಯಡತೊರೆಯ ಅರ್ಕೇಶ್ವರ ನಂಜನಗೂಡು ತಾಲ್ಲೂಕು ಹುರದ ಮಲ್ಲಿಕಾರ್ಜುನ ಮತ್ತು ಭ್ರಮರಾಂಭ ಹಂಚಿಪುರದ ಮಲ್ಲಿಕಾರ್ಜುನ ದೇಬೂರಿನ ರಾಮೇಶ್ವರ ಬಸವನಪುರದ ಪಾತಾಳೇಶ್ವರ ವೈದ್ಯನಾಥೇಶ್ವರ ಅರ್ಕೇಶ್ವರ ಹಾಗೂ ಬಸವೇಶ್ವರ (ಪಂಚಲಿಂಗೇಶ್ವರ) ದೇವಾಲಯಗಳು ಚಿಕ್ಕಯ್ಯನಛತ್ರದ ಪ್ರಸನ್ನ ನಂಜುಂಡೇಶ್ವರ ಹುಲ್ಲಹಳ್ಳಿಯ ಮಲ್ಲಿಕಾರ್ಜುನ ಸ್ವಾಮಿ ಕೆಂಬಾಳಿನ ಭೀಮೇಶ್ವರ ಬಿದರಗೂಡಿನ ಮಹಾಲಿಂಗೇಶ್ವರ ಕೂಗ್ಲೂರಿನ ಲಕ್ಷ್ಮಿಕಾಂತ ದೇವಾಲಯಗಳು ಹಾಗೂ ನಂಜನಗೂಡಿನ ಪಂಚಯತಿಗಳ ಬೃಂದಾವನ (ರಾಘವೇಂದ್ರ ಮಠ). ಹುಣಸೂರು ತಾಲ್ಲೂಕಿನ ಯಮಗುಂಭದ ಪಾರ್ಶ್ವನಾಥ ಬಸದಿ ಮರದೂರಿನ ಲಕ್ಷ್ಮಿ–ವೇಣುಗೋಪಾಲಸ್ವಾಮಿ ದೇವಾಲಯ ತರೀಕಲ್ಲಿನ ಕಾಶಿಲಿಂಗ ಹಾಗೂ ಸೋಮೇಶ್ವರ ಕಟ್ಟೆಮಳಲವಾಡಿಯ ವೆಂಕಟೇಶ್ವರ ದೇವಾಲಯ. ಎಚ್‌.ಡಿ. ಕೋಟೆ ತಾಲ್ಲೂಕಿನ ಹಂ‍‍ಪಾಪುರದ ಲಕ್ಷ್ಮೀಕಾಂತಸ್ವಾಮಿ ಹಾಗೂ ಗಂಗಾಧರೇಶ್ವರ ದೇವಾಲು ಹಾಗೂ ಅಂತರಸಂತೆಯ ನೀಲಕಂಠೇಶ್ವರ ದೇವಾಲಯ. ತಿ.ನರಸೀಪುರ ತಾಲ್ಲೂಕಿನ ಸೋಸಲೆಯ ಅರ್ಕೇಶ್ವರ ದೇವಾಲಯ ಹೊಳೆನರಸಿಂಹಸ್ವಾಮಿ ಮೂಗೂರಿನ ದೇಶೇಶ್ವರಸ್ವಾಮಿ ತ್ರಿಪುರಸುಂದರಿ (ತಿಬ್ಬಾದೇವಿ) ಅಮ್ಮಣ್ಣಿಯವರ ದೇವಸ್ಥಾನ ಹಾಗೂ ತಲಕಾಡಿನ ಜನಾರ್ಧನ ದೇವಾಲಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT