ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 300 ಕೋಟಿ ಹಫ್ತಾ: ಇದೇನಾ ಆರ್‌ಎಸ್‌ಎಸ್‌ ಸಿದ್ಧಾಂತ?–ಎಚ್‌.ಡಿ.ಕುಮಾರಸ್ವಾಮಿ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನೆ
Last Updated 24 ಅಕ್ಟೋಬರ್ 2021, 13:06 IST
ಅಕ್ಷರ ಗಾತ್ರ

ಮೈಸೂರು: ‘ಜಮ್ಮು ಮತ್ತು ಕಾಶ್ಮೀರದಲ್ಲಿ 2 ಕಡತಗಳ ವಿಲೇವಾರಿಗಾಗಿಆರ್‌ಎಸ್‌ಎಸ್‌ ಮುಖಂಡರು ಹಾಗೂ ಉದ್ಯಮಿಗಳು ₹ 300 ಕೋಟಿ ಹಫ್ತಾ ಕೊಟ್ಟಿದ್ದರು ಎಂದು ಅಲ್ಲಿನ ರಾಜ್ಯಪಾಲರೇ ಹೇಳಿಕೆ ಕೊಟ್ಟಿದ್ದಾರೆ. ಇದೇನಾ ಆರ್‌ಎಸ್‌ಎಸ್‌ ಸಿದ್ಧಾಂತ’ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ ಪ್ರಶ್ನಿಸಿದರು.

ಪತ್ರಕರ್ತರ ಭವನದಲ್ಲಿ ಭಾನುವಾರ ಏರ್ಪಡಿಸಿದ್ದ ಸಂವಾದದಲ್ಲಿ ಮಾತನಾಡಿ, ‘ಪ್ರಧಾನಿ ನರೇಂದ್ರ ಮೋದಿ ಮುಖೇನ ನೇಮಕವಾದ ರಾಜ್ಯಪಾಲರೇ ಹಫ್ತಾ ಬಗ್ಗೆ ಮಾತನಾಡಿದ್ದಾರೆ. ಆರ್‌ಎಸ್‌ಎಸ್‌ ಎಂದರೆ ಹಿಂದುತ್ವ, ದೇಶಭಕ್ತಿ, ಸಿದ್ಧಾಂತ, ಸಂಸ್ಕೃತಿ ಎನ್ನುತ್ತೀರಿ‌‌’ ಎಂದು ಕುಟುಕಿದರು.

‘ಈ ದೇಶದ ಹಿಂದುತ್ವ ನಾಶ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ದೇಶದ ಬ್ರ್ಯಾಂಡ್‌ ಹಿಂದುತ್ವ. ಅದಕ್ಕೆ ನಾವೂ ಕೈ ಜೋಡಿಸುತ್ತೇವೆ. ಆದರೆ, ನಾನು ಆರ್‌ಎಸ್‌ಎಸ್‌ ಕುರಿತು ಕೆಲವು ಲೇಖಕರು ಬರೆದ ಪುಸ್ತಕಗಳಲ್ಲಿನ ಅಂಶಗಳನ್ನಷ್ಟೇ ಪ್ರಸ್ತಾಪಿಸಿದ್ದೇನೆ. ಇದು ಮಹಾ ಅಪರಾಧವೇ? ಆರ್‌ಎಸ್‌ಎಸ್‌ ಕುರಿತು ನಾನು ಎತ್ತಿರುವ ಪ್ರಶ್ನೆಗಳಿಗಷ್ಟೇ ಉತ್ತರ ನೀಡಲಿ’ ಎಂದು ಸವಾಲು ಹಾಕಿದರು.

‘ಜೆಡಿಎಸ್‌ ಅಲ್ಲ; ಜೆಡಿಎಫ್‌ (ಜನತಾದಳ ಫ್ಯಾಮಿಲಿ) ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಿದ್ದರೆ, ರಾಜಕಾರಣದಲ್ಲೇ ಇರದ ಯತೀಂದ್ರ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದೀರಲ್ಲಾ, ಅದು ಯಾವ ಫ್ಯಾಮಿಲಿ? ಕಾಂಗ್ರೆಸ್‌ ಫ್ಯಾಮಿಲಿಯೇ? ಅಥವಾ ಸಿದ್ದರಾಮಯ್ಯ ಫ್ಯಾಮಿಲಿಯೇ? ನಿಮ್ಮ ಮಗನನ್ನು ಬಿಟ್ಟು ಸಾಮಾನ್ಯ ಕಾರ್ಯಕರ್ತನನ್ನು ನಿಲ್ಲಿಸಬಹುದಿತ್ತಲ್ಲವೇ? ಎಲ್ಲರ ಮನೆ ದೋಸೆಯೂ ತೂತು. ಈ ವಿಚಾರವನ್ನು ಪದೇಪದೇ ಚರ್ಚೆ ಮಾಡುವುದನ್ನು ನಿಲ್ಲಿಸಲಿ’ ಎಂದು ತಾಕೀತು ಮಾಡಿದರು.

‘ಸಿದ್ದರಾಮಯ್ಯ ಜೆಡಿಎಸ್‌ನಲ್ಲಿದ್ದಾಗ ನಾವು ಹಣ ಖರ್ಚು ಮಾಡಿ ವೇದಿಕೆ ನಿರ್ಮಿಸಿ ಬ್ಯಾನರ್‌ ಕಟ್ಟಿ ಜನರನ್ನು ಸೇರಿಸಿದ ಮೇಲೆ ಬರುತ್ತಿದ್ದರು. ಬೆಂಗಳೂರಿನ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ನಡೆದಿದ್ದ ಕಾರ್ಯಕ್ರಮದ ಬ್ಯಾನರ್‌ನಲ್ಲಿ ತಮ್ಮ ಫೋಟೋ ಇರಲಿಲ್ಲ ಎಂಬ ಕಾರಣಕ್ಕೆ ಬರುವುದಿಲ್ಲ ಎಂದು ಕೂತಿದ್ದರು. ಕಾರ್ಯಕ್ರಮಗಳಲ್ಲೂ ಎಚ್‌.ಡಿ.ದೇವೇಗೌಡರಿಗೆ ಚಪ್ಪಲಿ ತಾಗುವಂತೆ ಕಾಲಮೇಲೆ ಕಾಲು ಹಾಕಿಕೊಂಡು ಕೂರುತ್ತಿದ್ದರು. ಅಂತಹ ಮನಸ್ಥಿತಿ ಇರುವ ಅವರು ಮುಖ್ಯಮಂತ್ರಿಗಿರಿಯನ್ನು ಸುಲಭವಾಗಿ ಬಿಟ್ಟುಕೊಡುತ್ತಾರೆಯೇ’ ಎಂದು ಪ್ರಶ್ನಿಸಿದರು.

‘ನನ್ನಿಂದ ಯಾರು ಏನೇನು ಪಡೆದಿದ್ದಾರೆ ಎಂಬುದು ಗೊತ್ತು. ಜಮೀರ್‌ ಅಹಮ್ಮದ್‌ ಅವರನ್ನು ಚುನಾವಣೆಗೆ ನಿಲ್ಲಿಸಿ ಗೆಲ್ಲಿಸಿದ್ದೇ ನಾನು. ಅವರೀಗ ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ನಡೆದು ಹೋಗುವ ಆನೆ ಹಿಂದೆ ನಾಯಿಗಳು ಬೊಗಳುತ್ತವೆ. ಇದಕ್ಕೆಲ್ಲಾ ಉತ್ತರ ನೀಡಬೇಕೇ? ನಾಲಿಗೆ ಇದೆಯೆಂದು ಹೊಲಸು ಮಾತನಾಡಬಾರದು. ನಮ್ಮ ಕುಟುಂಬದ ಬಗ್ಗೆ ಮಾತನಾಡುವವರಿಗೆ ಆ ಚಾಮುಂಡೇಶ್ವರಿ, ಅಲ್ಲಾ ನೋಡಿಕೊಳ್ಳುತ್ತಾನೆ’ ಎಂದರು.

ವಿಧಾನಸೌಧಕ್ಕೆ ಬೀಗ: ಎಚ್‌ಡಿಕೆ

‘ಉಪಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಬಿಜೆಪಿಯು ಪ್ರತಿ ಬೂತ್‌ಗೆ ಒಬ್ಬರಂತೆ ಸಚಿವರನ್ನು ನೇಮಿಸಿದೆ. ಇದರಿಂದ ರಾಜ್ಯದ ಆಡಳಿತ ಯಂತ್ರ ಸ್ಥಗಿತಗೊಂಡಿದೆ. ಮಂತ್ರಿಗಳು ವಿಧಾನಸೌಧಕ್ಕೆ ಬೀಗ ಜಡಿದು ಸಿಂದಗಿ, ಹಾನಗಲ್‌ ಕ್ಷೇತ್ರಗಳಲ್ಲಿ ಬೀಡುಬಿಟ್ಟಿದ್ದಾರೆ. ಜನರ ಸಮಸ್ಯೆಗಳಿಗಿಂತ ಚುನಾವಣೆಯಲ್ಲಿ ಗೆಲ್ಲುವುದೇ ಮುಖ್ಯವಾಗಿದೆ. ಕಾಂಗ್ರೆಸ್‌ ಕೂಡ ಬೂತ್‌ಗೆ ಒಬ್ಬರಂತೆ ನಾಯಕರನ್ನು ನೇಮಿಸಿದೆ. ಎರಡೂ ಪಕ್ಷಗಳು ಪೈಪೋಟಿಗೆ ಬಿದ್ದಂತೆ ಪ್ರಚಾರದಲ್ಲಿ ತೊಡಗಿವೆ’ ಎಂದು ಎಚ್‌.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT