ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ವೀಣಾವಾದಕ ವಿಶ್ವೇಶ್ವರನ್‌ಗೆ ‘ಅಕಾಡೆಮಿ ರತ್ನ’

Published 29 ಫೆಬ್ರುವರಿ 2024, 6:16 IST
Last Updated 29 ಫೆಬ್ರುವರಿ 2024, 6:16 IST
ಅಕ್ಷರ ಗಾತ್ರ

ಮೈಸೂರು: ಕೇಂದ್ರ ಸಂಗೀತ ನಾಟಕ ಅಕಾಡೆಮಿ ನೀಡುವ ಪ್ರತಿಷ್ಠಿತ ‘ರತ್ನ’ ಪ್ರಶಸ್ತಿಗೆ ಸಾಂಸ್ಕೃತಿಕ ನಗರಿ ಮೈಸೂರಿನ ವೀಣಾವಾದಕ ಆರ್‌.ವಿಶ್ವೇಶ್ವರನ್‌ ಭಾಜನರಾಗಿದ್ದಾರೆ. ಅಕಾಡೆಮಿಯು 2022–23ನೇ ಸಾಲಿನ ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಾಗಿ ಬುಧವಾರ ಘೋಷಿಸಿದೆ.

ನಗರದ ಕಾಶೀಪತಿ ಅಗ್ರಹಾರದಲ್ಲಿ 1931ರಲ್ಲಿ ಅರಮನೆ ಆಸ್ಥಾನ ವಿದ್ವಾಂಸ ಬಿ.ರಾಮಯ್ಯ ಹಾಗೂ ವರಲಕ್ಷ್ಮಮ್ಮ ದಂಪತಿ ಪುತ್ರರಾಗಿ ಜನಿಸಿದ ಅವರು, 9ನೇ ವಯಸ್ಸಿನಿಂದಲೂ ದೇಶ–ವಿದೇಶಗಳಲ್ಲಿ ಸಂಗೀತ ಕಛೇರಿಗಳನ್ನು ನೀಡಿದ್ದಾರೆ.

ಕರ್ನಾಟಕ ಸಂಗೀತ ಗಾಯನದಲ್ಲಿಅಭ್ಯಾಸ ನಡೆಸಿದ್ದ ಅವರು, ಸಹೋದರ ಸೀತಾರಾಮ ಅವರೊಂದಿಗೆ ನಡೆಸಿದ ವಾಗ್ವಾದ ಹಾಗೂ ಸವಾಲು ವೀಣಾವಾದಕರನ್ನಾಗಿಸಿತು. ‘ವೀಣೆಯನ್ನು ನುಡಿಸಿದರೆ ಹಾಡಿದಂತಿರಬೇಕು’ ಎಂಬುದು ವಿಶ್ವೇಶ್ವರನ್‌ ಅವರ ವಾದವಾಗಿತ್ತು.

‘ನುಡಿಸಿ ತೋರಿಸೆಂದು ಅಣ್ಣ ಸವಾಲು ಹಾಕಿದಾಗ, ನುಡಿಸಲು ಆರಂಭಿಸಿದೆ. ಏನು ಹಾಡುತ್ತಿದ್ದೆನೋ ಅದನ್ನೇ ನುಡಿಸಲು ಶ್ರಮಿಸಿದೆ. ಸಂಗೀತ ಸರಸ್ವತಿ ಇಲ್ಲಿವರೆಗೆ ಕರೆತಂದಳು. ಸಂಗೀತ ಲಕ್ಷ್ಯ ಹಾಗೂ ಲಕ್ಷಣಗಳಲ್ಲಿ ಜ್ಞಾನ ಹಾಗೂ ಕಲಿಕೆಯು ಸಾಗಿದೆ’ ಎಂದು ವಿಶ್ವೇಶ್ವರನ್‌ ಭಾವುಕರಾದರು.

‘ರತ್ನ ಪ್ರಶಸ್ತಿ ಸಿಕ್ಕಿರುವುದು ಸಂತಸ ತಂದಿದೆ. ನನಗೀಗ 93 ವರ್ಷ. ಕರ್ನಾಟಕದವರಿಗೆ ಎಲ್ಲವೂ ನಿಧಾನವಾಗಿ ಸಿಗುತ್ತದೆ. ಅಕಾಡೆಮಿಯು ನನ್ನನ್ನು ಗುರುತಿಸಿದೆಯಲ್ಲ ಅದೇ ಸಂತೋಷ. 2012ರಲ್ಲಿ ಸಂಗೀತ ನಾಟಕ ಅಕಾಡೆಮಿಯ ಟ್ಯಾಗೋರ್ ಪುರಸ್ಕಾರ ದೊರೆತಿತ್ತು’ ಎಂದು ವಿಶ್ವೇಶ್ವರನ್‌ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.  

ಸಂಗೀತ ಶಾಸ್ತ್ರಜ್ಞ, ವಾಗ್ಗೇಯಕಾರರಾಗಿ 150ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಅವರು, ‘ಫೆಸೆಟ್ಸ್‌ ಆಫ್‌ ಮ್ಯೂಸಿಕ್’, ‘ಸಂಗೀತ ಶಾಸ್ತ್ರ ಚಿಂತನ ರಸಾಯನ’, ‘ಶ್ಯಾಮಕೃಷ್ಣ ವಾಗ್ಗೇಯ ವ್ಯಾಖ್ಯಾನ’, ‘ವಾಗ್ಗೇಯ ವಿಶ್ವೇಶ್ವರಿ’ ಎಂಬ ನಾಲ್ಕು ಸಂಗೀತ ಗ್ರಂಥಗಳನ್ನು ಬರೆದಿದ್ದಾರೆ. 

ಮಹಾರಾಜ ಕಾಲೇಜಿನಲ್ಲಿ ‘ಇಂಡಾಲಜಿ’ಯಲ್ಲಿ 1954ರಲ್ಲಿ ಎಂ.ಎ ಪದವಿ ಪಡೆದು, ಮಹಾರಾಣಿ ಕಾಲೇಜಿನಲ್ಲಿ ಸಂಗೀತ ಪ್ರಾಧ್ಯಾಪಕರಾಗಿದ್ದರು. ನಂತರ ಲಲಿತಾಕಲಾ ಕಾಲೇಜಿನಲ್ಲಿ 27 ವರ್ಷ ಪ್ರಾಧ್ಯಾಪಕ, ಪ್ರಾಂಶುಪಾಲರಾಗಿ ನಿವೃತ್ತರಾದ ಅವರು, 85 ವರ್ಷಗಳಿಂದ ಸಾವಿರಾರು ಸಂಗೀತ ಕಛೇರಿ ನೀಡಿದ್ದಾರೆ.

ಅವರಿಗೆ 2002ರಲ್ಲಿ ಕರ್ನಾಟಕ ರಾಜ್ಯ ಸರ್ಕಾರದ ರಾಜ್ಯ ಸಂಗೀತ ವಿದ್ವಾನ್ ಪ್ರಶಸ್ತಿ, 2012ರಲ್ಲಿ ಟಿ.ಚೌಡಯ್ಯ ಪುರಸ್ಕಾರ, 2005ರಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯದ 2015ರಲ್ಲಿ ಗೌರವ ಡಾಕ್ಟರೇಟ್‌ ದೊರೆತಿದೆ. ಇದೀಗ ರತ್ನ ಪ್ರಶಸ್ತಿ ಪ್ರದಾನವು ಮಾರ್ಚ್ 6ರಂದು ರಾಷ್ಟ್ರಪತಿ ಭವನದಲ್ಲಿ ನಡೆಯಲಿದೆ.

ಎಸ್‌.ವಿ.ಸಹನಾ
ಎಸ್‌.ವಿ.ಸಹನಾ
ಸಹನಾಗೆ ಯುವ ಪುರಸ್ಕಾರ
ಮೈಸೂರಿನ ವೀಣಾವಾದಕಿ ಎಸ್‌.ವಿ.ಸಹನಾಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿಯ 2022ನೇ ಸಾಲಿನ ‘ಉಸ್ತಾದ್‌ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ’ ದೊರೆತಿದೆ. ಲೇಖಕ ಟಿ.ಎಸ್‌.ವೇಣುಗೋಪಾಲ್‌ ಹಾಗೂ ಪ್ರೊ.ಶೈಲಜಾ ದಂಪತಿ ಪುತ್ರಿ ಸಹನಾ ಅವರ ಸಂಗೀತ ಪಯಣ 7ನೇ ವಯಸ್ಸಿನಲ್ಲೇ ಆರಂಭವಾಯಿತು. ಮೈಸೂರಿನ ಎಂ.ಜೆ.ಶ್ರೀನಿವಾಸ ಅಯ್ಯಂಗಾರ್‌ ಅವರಲ್ಲಿ ವೀಣಾ ಅಭ್ಯಾಸ ಆರಂಭಿಸಿ ನಂತರ ವಿದ್ವಾನ್ ಟಿ.ಎನ್.ಶೇಷಗೋಪಾಲನ್ ಟಿ.ವಿ.ಗೋಪಾಲಕೃಷ್ಣನ್‌ ಅವರಲ್ಲಿ ಕಲಿತಿದ್ದಾರೆ. ಆಕಾಶವಾಣಿ ‘ಎ’ ಶ್ರೇಣಿ ಕಲಾವಿದೆಯಾದ ಅವರು ದೇಶ–ವಿದೇಶದಲ್ಲಿ ಸಾವಿರಕ್ಕೂ ಹೆಚ್ಚು ಕಛೇರಿಗಳನ್ನು ನೀಡಿದ್ದಾರೆ.  ‘ಪ್ರಶಸ್ತಿ ದೊರೆತಿರುವುದು ಸಂತಸ ತಂದಿದೆ. ಗುರುಗಳ ಆಶೀರ್ವಾದ ಪೋಷಕರು ಹಾಗೂ ಪತಿ ಶ್ರೀನಿವಾಸ್ ಅವರ ಪ್ರೋತ್ಸಾಹ ಈ ಸಂದರ್ಭದಲ್ಲಿ ನೆನೆಯುವೆ’ ಎಂದು ಸಹನಾ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT