ಮೈಸೂರು: ‘ಈಚಿನ ದಿನಗಳಲ್ಲಿ ಒಕ್ಕಲಿಗ ನಾಯಕರ ನಡುವಿನ ಸಾರ್ವಜನಿಕ ಸಂವಾದ ಗೌರವ ತರುವಂತೆ ಇಲ್ಲ. ಮಠಾಧೀಶರು ತಮ್ಮ ಧಾರ್ಮಿಕ ಅಧಿಕಾರ ಬಳಸಿ ತಿಳಿಹೇಳಿ ಅಂತ್ಯ ಹಾಡಬೇಕು’ ಎಂದು ಚಿತ್ರಕಲಾ ಪರಿಷತ್ತು ಅಧ್ಯಕ್ಷ ಬಿ.ಎಲ್. ಶಂಕರ್ ಕೋರಿದರು.
‘ಫಸ್ಟ್ ಸರ್ಕಲ್’ ಸೊಸೈಟಿಯು ನಗರದಲ್ಲಿ ಗುರುವಾರ ಆಯೋಜಿಸಿದ್ದ ಒಕ್ಕಲಿಗ ಹೂಡಿಕೆದಾರರ ಸಮಾವೇಶದ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿ, ‘ಸದಾ ಪ್ರಚಾರದಲ್ಲಿರಬೇಕು ಎಂಬ ಧೋರಣೆಯಿಂದ ಈ ಸಮಸ್ಯೆಯಾಗಿದೆ. ರಾಜಕಾರಣಿಗಳು ಹಳಿ ತಪ್ಪಿದ್ದು, ಅವರನ್ನು ಸರಿದಾರಿಗೆ ತರುವ ಅಗತ್ಯವಿದೆ’ ಎಂದರು.
‘ಇತರರು ನಮ್ಮ ಸಮುದಾಯದ ಬಗ್ಗೆ ಲೇವಡಿ ಮಾಡಬಾರದು. ಹೀಗಾಗಿ ನಿರ್ಮಲಾನಂದನಾಥ ಸ್ವಾಮೀಜಿ ಹಾಗೂ ನಂಜಾವಧೂತ ಶ್ರೀಗಳು ಮಧ್ಯಸ್ಥಿಕೆ ವಹಿಸಬೇಕು’ ಎಂದು ಕೋರಿದರು.
‘1952ರಿಂದ ಈವರೆಗೆ ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಸಾಕಷ್ಟು ರಾಜಕಾರಣಿಗಳು ಉತ್ತಮ ಕೆಲಸ ಮಾಡಿ, ಹೆಸರು ಪಡೆದಿದ್ದಾರೆ. ವಾದ–ಪ್ರತಿವಾದಗಳು ನಡೆಯಲಿ. ಯಾರಿಗಾದರೂ ಅವಕಾಶ ನೀಡಲಿ. ಜನರ ತೀರ್ಮಾನಕ್ಕೆ ತಲೆಬಾಗೋಣ. ಆದರೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಒಬ್ಬರನ್ನೊಬ್ಬರು ದೂಷಿಸುವುದು ಬೇಡ’ ಎಂದು ಸಲಹೆ ನೀಡಿದರು.