ಮಂಗಳವಾರ, 28 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತ: ವಿಜಯೇಂದ್ರ ವಾಗ್ದಾಳಿ

ವೀರಶೈವ–ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಬಿ.ವೈ.ವಿಜಯೇಂದ್ರ ವಾಗ್ದಾಳಿ
Published 21 ಏಪ್ರಿಲ್ 2024, 15:53 IST
Last Updated 21 ಏಪ್ರಿಲ್ 2024, 15:53 IST
ಅಕ್ಷರ ಗಾತ್ರ

ಮೈಸೂರು: ‘ಗ್ಯಾರಂಟಿಯೇ ಅಭಿವೃದ್ಧಿಯೇ? ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯ ಸಂಪೂರ್ಣ ಸ್ಥಗಿತಗೊಂಡಿದೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಇಲ್ಲಿನ ನರಸಿಂಹರಾಜ ಕಂಠೀರವ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಭಾನುವಾರ ಆಯೋಜಿಸಿದ್ದ ವೀರಶೈವ–ಲಿಂಗಾಯತ ಸಮಾಜದ ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ಹುಬ್ಬಳ್ಳಿಯ ನೇಹಾ ಕೊಲೆ ಪ್ರಕರಣದಲ್ಲಿ ಹಗುರವಾಗಿ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿಯ ಮಾನಸಿಕ ಸ್ಥಿತಿ ಹೇಗಿದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಯಾವ ಸಮಾಜದ ಬಗ್ಗೆಯೂ ಅವರಿಗೆ ಗೌರವ ಇಲ್ಲ’ ಎಂದು ಆರೋಪಿಸಿದರು.

‘ಈ ಸರ್ಕಾರ ನೀಡಿರುವ ಗ್ಯಾರಂಟಿಗಳು ಶಾಶ್ವತವಲ್ಲ. ರಾಜ್ಯವನ್ನು ಸಾಲದ ಕೂಪಕ್ಕೆ ತಳ್ಳಲಾಗುತ್ತಿದೆ. ಕೆಲವು ತಿಂಗಳು ಕಳೆದರೆ, ಸರ್ಕಾರಿ ನೌಕರರಿಗೆ ಸಂಬಳ ಕೊಡುವುದಕ್ಕೂ ಕಷ್ಟವಾಗಲಿದೆ. ಕೇವಲ ಖುಷಿ ಪಡಿಸುವಂತಹ ಕೆಲಸವನ್ನಷ್ಟೆ ಈ ಸರ್ಕಾರ ಮಾಡುತ್ತಿದೆ’ ಎಂದು ದೂರಿದರು.

‘ದುಡಿದು ಸುಸ್ತಾಗಿ ಬರುವ ಬಡವರು, ರೈತರು ಹಾಗೂ ಕಾರ್ಮಿಕರು ರಾತ್ರಿ ಮಾಡುತ್ತಿದ್ದ ಖರ್ಚು (ಮದ್ಯಪಾನಕ್ಕೆ) ದುಪ್ಪಟ್ಟಾಗಿದೆ. ಪುರುಷರಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ಪ್ರಯಾಣ ದರ ಜಾಸ್ತಿಯಾಗಿದೆ. ವಿದ್ಯುತ್ ದರವೂ ಜಾಸ್ತಿಯಾಗಿದೆ. ನೋಂದಣಿ ಶುಲ್ಕ ಹೆಚ್ಚಾಗಿದೆ. ಒಂದು ಕೈಯಲ್ಲಿ ಕೊಟ್ಟು ಮತ್ತೊಂದು ಕೈಲಿ ಜಾಸ್ತಿ ಕಿತ್ತುಕೊಳ್ಳುವ ಕೆಲಸವನ್ನು ಈ ಸರ್ಕಾರ ಮಾಡುತ್ತಿದೆ’ ಎಂದು ಆರೋಪಿಸಿದರು.

‘ವಿದ್ಯುತ್‌ ಪರಿವರ್ತಕ ಅಳವಡಿಕೆಗೆ ಬಿ.ಎಸ್. ಯಡಿಯೂರಪ್ಪ ಸರ್ಕಾರವಿದ್ದಾಗ ₹25 ಸಾವಿರ ಇತ್ತು. ಈ ಸರ್ಕಾರ ಬಂದ ಮೇಲೆ ರೈತರು ₹3 ಲಕ್ಷ ಕಟ್ಟಬೇಕಾಗಿದೆ’ ಎಂದು ದೂರಿದರು.

‘ಸ್ವತಃ ಮುಖ್ಯಮಂತ್ರಿಯೇ ಮೈಸೂರಿಗೆ ಆಗಾಗ ಬಂದು ಠಿಕಾಣಿ ಹೂಡುತ್ತಿದ್ದರೂ ಬಿಜೆಪಿ ಅಭ್ಯರ್ಥಿ ಯದುವೀರ್‌ 2 ಲಕ್ಷ ಮತಗಳ ಅಂತರದಿಂದ ಗೆಲ್ಲುವುದನ್ನು ತಡೆಯಲು ಆಗುವುದಿಲ್ಲ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷ ನಂದೀಶ್ ಹಂಚೆ ಮಾತನಾಡಿ, ‘ಸಮಾಜವು ಹೀಗೆಯೇ ಶಕ್ತಿ ತುಂಬುತ್ತಿದ್ದರೆ ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗುವ ದಿನಗಳು‌ ದೂರವಿಲ್ಲ’ ಎಂದರು.

ಸಮಾಜದ ಮುಖಂಡರಾದ ಶಿವಮೂರ್ತಿ, ಚಂದ್ರಶೇಖರ್, ನಾಗರಾಜ್, ಮೂರ್ತಿ, ಸುನಂದಾ ಪಾಲನೇತ್ರ, ಬಿ.ವಿ. ಮಂಜುನಾಥ್‌ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT