ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಕ್ರಿದ್‌ 2021: ಕುರಿ, ಟಗರು, ಹೋತಗಳಿಗೆ ಭಾರಿ ಬೇಡಿಕೆ, ಇಲ್ಲಿದೆ ದರ ವಿವರ

ವಹಿವಾಟಿಗೆ ಅಡ್ಡಿಯಾದ ಕೋವಿಡ್ l ಗರಿಷ್ಠ ₹ 70 ಸಾವಿರ
Last Updated 21 ಜುಲೈ 2021, 3:43 IST
ಅಕ್ಷರ ಗಾತ್ರ

ಮೈಸೂರು: ಬಕ್ರೀದ್‌ ಅಂಗವಾಗಿ ನಗರದ ಬನ್ನಿಮಂಟಪ ಸಮೀಪದ ಎಲ್‌ಐಸಿ ವೃತ್ತದಲ್ಲಿ ಮಂಗಳವಾರ ನಡೆದ ಕುರಿ ಸಂತೆಯಲ್ಲಿ ಕುರಿ, ಟಗರು, ಹೋತಗಳಿಗೆ ಭಾರಿ ಬೇಡಿಕೆ ಕಂಡು ಬಂತು.ಮುಸ್ಲಿಂ ಮಹಿಳೆಯರು ಕುರಿ ಖರೀದಿಸಿದ್ದು ವಿಶೇಷವಾಗಿತ್ತು.

ಮಂಡ್ಯ ಜಿಲ್ಲೆಯ ನಾಟಿ ಕುರಿ–ಟಗರಿನಿಂದ ಬಂಡೂರು, ಬಿಜಾಪುರ, ಬಸವನಬಾಗೇವಾಡಿ, ಅಮೀನಗಡ ಹಾಗೂ ಕೆಂದೂರಿ ತಳಿಯ ಕುರಿಗಳವರೆಗೆ ವೈವಿಧ್ಯಮಯ ತಳಿಗಳ ಖರೀದಿ ಭರಾಟೆಯಲ್ಲಿ ಮುಸ್ಲಿಮರು ತೊಡಗಿದ್ದರು. ಕುರಿ–ಟಗರೊಂದರ ಕನಿಷ್ಠ ಬೆಲೆ ₹ 7 ಸಾವಿರದಿಂದ ಗರಿಷ್ಠ ₹ 70 ಸಾವಿರದಷ್ಟಿತ್ತು.

ಚೌಕಾಶಿ ವ್ಯಾಪಾರವೇ ಹೆಚ್ಚಿತ್ತು. ಗ್ರಾಹಕರು–ಕುರಿ ಸಾಕಣೆದಾರರ ನಡುವೆ ದಲ್ಲಾಳಿಗಳ ಕಾರುಬಾರು ಜೋರಾಗಿತ್ತು. ಕುರಿಗಳು ಮಾರಾಟವಾದಂತೆ ಮತ್ತೆ ಕುರಿ ತರುತ್ತಿದ್ದರು.! ಪಾಂಡವಪುರ, ಮದ್ದೂರು ತಾಲ್ಲೂಕಿನ ಕುರಿ ಸಾಕಣೆದಾರರು, ದಲ್ಲಾಳಿಗಳೇ ಹೆಚ್ಚಿದ್ದರು.

ಹಿಂದಿನಷ್ಟಿಲ್ಲ ವಹಿವಾಟು: ‘ವಾರದ ಹಿಂದೆ 50 ಕುರಿ ಮಾರಾಟವಾದವು.ಉಳಿದಿರುವ ₹ 32 ಸಾವಿರದ ಟಗರನನ್ನು ₹ 24 ಸಾವಿರಕ್ಕೆ ಕೇಳಿದ್ದರೂ ಕೊಟ್ಟಿಲ್ಲ. ಬುಧವಾರವೇ ಹಬ್ಬ. ₹ 28 ಸಾವಿರಕ್ಕೆ ಕೊಡುವೆ. ಹಿಂದಿನ ವರ್ಷ 80 ಕುರಿ ಮಾರಿದ್ದೆ. ಈ ವರ್ಷ ಅಷ್ಟಿಲ್ಲ’ ಎಂದು ಮದ್ದೂರು ತಾಲ್ಲೂಕಿನ ಕಿರುಗಾವಲಿನ ಸಮೀರ್‌ ತಿಳಿಸಿದರು.

‘ತಲಾ 50 ಕೆ.ಜಿ.ತೂಗುವ ಎರಡು ವರ್ಷ ಪ್ರಾಯದ ಬಂಡೂರು ತಳಿಯ ಜೋಡಿ ಟಗರಿಗೆ ₹ 1.30 ಲಕ್ಷ ಹೇಳಿದ್ದೇನೆ. ತಲಾ ₹ 50 ಸಾವಿರದವರೆಗೂ ಕೇಳಿದ್ದಾರೆ. ಇಲ್ಲಿ ದಲ್ಲಾಳಿಗಳದ್ದೇ ಕಾರುಬಾರು’ ಎಂದು ಎಂದು ಹೊಸಕೆರೆಯ ಸಂತೋಷ್‌ ಕಿಡಿಕಾರಿದರು.

62 ಕೆ.ಜಿ. ತೂಕದ ಶಿರೋಹಿ ತಳಿಯ ಹೋತದ ಮಾರಾಟಕ್ಕೆ ಬಂದಿದ್ದ ಮೈಸೂರಿನ ನಾಯ್ಡು ನಗರದ ಖಾದರ್‌ ₹ 50 ಸಾವಿರ ಬೆಲೆ ನಿಗದಿ ಮಾಡಿದ್ದರು.

‘ಮೂರು ದಶಕದಿಂದ ಕುರಿ ವ್ಯಾಪಾರ ಮಾಡುತ್ತಿದ್ದೇವೆ. ಮುಂಚೆ ಭರ್ಜರಿ ವಹಿವಾಟು ನಡೆಯುತ್ತಿತ್ತು. 40ಕ್ಕೂ ಹೆಚ್ಚು ಕುರಿ ಮಾರಿದ್ದೇವೆ. ರಾತ್ರಿಯವರೆಗೂ ವ್ಯಾಪಾರ ಮಾಡಿ ಊರಿಗೆ ಹೋಗುತ್ತೇವೆ’ ಎಂದು ಪಾಂಡವಪುರ ತಾಲ್ಲೂಕಿನ ದೇಸವಳ್ಳಿಯ ಲೋಕೇಶ್‌
ತಿಳಿಸಿದರು.

ಕೋವಿಡ್‌ ಮುನ್ನೆಚ್ಚರಿಕೆ ಮಾಯ:ಕುರಿ ಸಂತೆಯಲ್ಲಿ ಕೋವಿಡ್‌ ನಿಯಂತ್ರಣ ಮಾರ್ಗಸೂಚಿ ಪಾಲನೆ ಕಂಡುಬರಲಿಲ್ಲ. ಮಾಸ್ಕ್‌ ಧರಿಸಿದ್ದು ಕೆಲವರಷ್ಟೇ. ಅದೂ ಮೂಗಿನಿಂದ ಕೆಳಕ್ಕೆ. ಗಲ್ಲಕ್ಕೆ ಮಾಸ್ಕ್‌ ಹಾಕಿದ್ದವರೇ ಹೆಚ್ಚಿದ್ದರು. ಸ್ಯಾನಿಟೈಸರ್‌ ಬಳಕೆಯೂ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT