ಮೈಸೂರು: ‘ಕನ್ನಡ ಸಾಹಿತ್ಯದ ಸಂದರ್ಭದಲ್ಲಿ ಬಸವಣ್ಣನ ಸಾಮಾಜಿಕ ಚಿಂತನೆಯ ಪರಿಭಾಷೆಯಲ್ಲಿ ಅಕ್ಕಮಹಾದೇವಿಯನ್ನು ನೋಡಲಿಲ್ಲ’ ಎಂದು ವಿಷಾದ ವ್ಯಕ್ತಪಡಿಸಿದ ಸಾಹಿತಿ ಪ್ರೊ.ಅರವಿಂದ ಮಾಲಗತ್ತಿ, ‘ಅಕ್ಕನ ವಚನಗಳನ್ನು ಮತ್ತೊಮ್ಮೆ ಓದುವ ಮತ್ತು ಅರ್ಥೈಸುವ ಅಗತ್ಯವಿದೆ’ ಎಂದು ಸಲಹೆ ನೀಡಿದರು.
ಇಲ್ಲಿನ ಎಂಜಿನಿಯರ್‌ಗಳ ಸಂಸ್ಥೆಯ ಸಭಾಂಗಣದಲ್ಲಿ ಮಾನಸಗಂಗೋತ್ರಿಯ ಅಂಗಳ ಸಾಹಿತ್ಯ ಬಳಗ ಮತ್ತು ಗದಗದ ಲಡಾಯಿ ಪ್ರಕಾಶನದ ಸಹಯೋಗದಲ್ಲಿ ಸೋಮವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಾ.ಎಚ್.ಎಸ್.ಅನುಪಮಾ ವಿರಚಿತ ‘ಬೆಳಗಿನೊಳಗು ಮಹದೇವಿಯಕ್ಕ’ ಕಾದಂಬರಿಯ 2ನೇ ಮುದ್ರಣವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.
‘ಅಕ್ಕನನ್ನು ಸೀಮಿತ ಚೌಕಟ್ಟಿನಲ್ಲಿ ನೋಡುವುದನ್ನು ಈ ಕಾದಂಬರಿ ಮುರಿದು ಹಾಕಿದೆ. ಪೌರಾಣಿಕ ಸ್ಪರ್ಶದ ಕವಚವನ್ನೂ ಕಳಚಿ ಹಾಕಲಾಗಿದೆ. ಹೀಗಾಗಿ, ಕಾದಂಬರಿಯ ನೋಟವೇ ಬದಲಾಗಿದೆ. ಐತಿಹಾಸಿಕ ಕೃತಿ ಇದು ಎನ್ನುವ ಅರಿವು ಪದೇ ಪದೇ ಆಗುತ್ತಾ ಹೋಗುತ್ತದೆ. ಇದರಲ್ಲಿ ಅಧಿಕೃತತೆ ಇದೆ ಎನ್ನುವುದನ್ನು ಓದುಗರಿಗೆ ಮನವರಿಕೆ ಮಾಡಿಕೊಡುತ್ತದೆ. ಇದು ಆತ್ಮಕಥೆಯ ಪರಿಭಾಷೆಯನ್ನೂ ಹೊಂದಿದೆ. ಅಕ್ಕನೇ ಮುಂದೆ ಕುಳಿತು ಬರೆಸಿದಂತೆದೆ. ಹಾಗಾಗಿ ಇದನ್ನು ಕಾದಂಬರಿ ಎನ್ನುವುದಕ್ಕಿಂತ ಅಕ್ಕನ ಆತ್ಮಕಥೆ ಎನ್ನಬಹುದು’ ಎಂದು ತಿಳಿಸಿದರು.
‘ಕನ್ನಡ ಸಾಹಿತ್ಯವು ಅಕ್ಕನಿಗೆ ಕೊಡಬೇಕಾದ ಸ್ಥಾನಮಾನವನ್ನು ಕೊಡಲಿಲ್ಲವೇನೋ ಎಂಬ ಪ್ರಶ್ನೆಯನ್ನೂ ಕಾದಂಬರಿ ಎತ್ತಿದೆ’ ಎಂದರು.
ಮಿತಿ ಹಾಕಿದಂತಾಗುತ್ತದೆ:
‘ಒಬ್ಬ ಇತಿಹಾಸಕಾರನಿಗೆ ಹಾಗೂ ಸೃಜನ ಬರಹಗಾರನಿಗೆ ಇರುವ ದೊಡ್ಡ ವ್ಯತ್ಯಾಸವೇನೆಂದರೆ, ಇತಿಹಾಸಕಾರ ಸಾಕ್ಷಿ ಇಲ್ಲದಿದ್ದರೆ ಊಹೆ ಮಾಡಿ ಬಿಟ್ಟುಬಿಡುತ್ತಾರೆ. ಆದರೆ, ಲೇಖಕರಿಗೆ ಸ್ವಾತಂತ್ರ್ಯ ಇರುತ್ತದೆ. ಇದನ್ನು ಅನುಪಮಾ ಬಳಸಿಕೊಂಡಿದ್ದಾರೆ. ಈ ಕಾದಂಬರಿಯನ್ನು ಸ್ತ್ರೀವಾದದ ಹಿನ್ನೆಲೆಯಲ್ಲಿ ನೋಡುವ ಅಗತ್ಯವಿಲ್ಲ. ಹಾಗೆ ನೋಡಿದರೆ ನಾವೇ ಕೃತಿಗೆ ಮಿತಿ ಹಾಕಿದಂತಾಗುತ್ತದೆ. ಏಕೆಂದರೆ, ಅಕ್ಕ ಜೀವಪರವಾದ ನಿಲುವು ಹೊಂದಿದ್ದವರು’ ಎಂದು ತಿಳಿಸಿದರು.
‘ಪಾವಿತ್ರ್ಯತೆಯ ಪರಿಕಲ್ಪನೆಯನ್ನು ಕಳಚಿಕೊಂಡಿದ್ದರಿಂದ ಕೃತಿಯು ಸಹಜತೆ ಗಳಿಸಿಕೊಂಡಿದೆ. ವರ್ತಮಾನದ ವಿದ್ಯಮಾನಗಳಿಗೆ ಸಹ್ಯವಾಗಿದೆ. ಈ ಬದಲಾವಣೆಗಳು ಆರೋಗ್ಯಕರವಾದವಾಗಿವೆ’ ಎಂದು ವ್ಯಾಖ್ಯಾನಿಸಿದರು.
ಕಾದಂಬರಿ ಕುರಿತು ಮಾತನಾಡಿದ ಪ್ರೊ.ಎಂ.ಉಷಾ, ‘ಅಕ್ಕಮಹಾದೇವಿ ಸಂಕೀರ್ಣವಾದ ವ್ಯಕ್ತಿತ್ವ. ಕೆಲವೇ ಮಾತುಗಳಲ್ಲಿ ಆಕೆಯ ಬಗ್ಗೆ ಹೇಳಲಾಗದು’ ಎಂದರು.
‘ಪ್ರಸ್ತುತ ಎಲ್ಲ ಪ್ರಾಕಾರಗಳ ಚೌಕಟ್ಟನ್ನೂ ಮುರಿಯುತ್ತಾ ನಾವು ಬಂದಿದ್ದೇವೆ. ಹೀಗಾಗಿ, ಎಷ್ಟು ಸಂಪುಟಗಳು ಬಂದರೂ ಓದುವವರಿದ್ದಾರೆ’ ಎಂದು ತಿಳಿಸಿದರು.
ಕಾದಂಬರಿ ರಚಿಸಿರುವ ಡಾ.ಎಚ್.ಎಸ್.ಅನುಪಮಾ ಮಾತನಾಡಿ, ‘ಲಕ್ಕುಂಡಿಗೆ ಅಕ್ಕ ಬಂದಿದ್ದಳು ಎನ್ನುವುದು ನಾನು ಕಲ್ಪನೆ ಮಾಡಿಕೊಂಡು ಬರೆದಿರುವುದು. ಅದು ಇತಿಹಾಸವಲ್ಲ. ನಾನೇ ಒಂದು ರೂಟ್ ಮ್ಯಾಪ್ ಮಾಡಿಕೊಂಡು ಆಕೆ ಎಲ್ಲೆಲ್ಲಿಗೆ ಹೋಗಿರಬಹುದು ಎಂದು ಊಹಿಸಿಕೊಂಡು ಅದರಂತೆ ಬರೆಯುತ್ತಾ ಹೋದೆ. ಐತಿಹಾಸಿಕ ಅಂಶಗಳ ಜೊತೆಗೆ ಅಲ್ಲಲ್ಲಿ ಸ್ವಾತಂತ್ರ್ಯ ತೆಗೆದುಕೊಂಡು ನನ್ನ ಕಲ್ಪನೆಗಳನ್ನು ಸೇರಿಸಿದ್ದೇನೆ’ ಎಂದು ಹೇಳಿದರು.
ಪ್ರಕಾಶಕ ಬಸವರಾಜ ಸೂಳಿಬಾವಿ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.