ಕೆ.ಆರ್.ನಗರ: ತಾಲ್ಲೂಕಿನ ಅಡಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಭಾಸ್ಕರ್ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪ್ರಾಥಮಿಕ) ಯಿಂದ ನೀಡುವ ಪ್ರಾಥಮಿಕ ಶಾಲಾ ವಿಭಾಗದ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಸೆ.5ರಂದು ಬೆಂಗಳೂರಿನಲ್ಲಿ ನಡೆಯುವ ಶಿಕ್ಷಕರ ದಿನಾಚರಣೆಯಲ್ಲಿ ಪ್ರಶಸ್ತಿ ಸ್ವೀಕರಿಸಲಿದ್ದಾರೆ.
ಬ್ಯಾಡರಹಳ್ಳಿ ಮರಿಗೌಡ ಮತ್ತು ಗೌರಮ್ಮ ದಂಪತಿ ಪುತ್ರರಾದ ಭಾಸ್ಕರ್, ಕಳೆದ 29ವರ್ಷಗಳಿಂದ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸಿದ್ದಾರೆ. ಪ್ರಸ್ತುತ ಅಡಗನಹಳ್ಳಿ ಶಾಲೆಯಲ್ಲಿ ಕಳೆದ 12ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದು, ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ 2019ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ, ಸಂಘ ಸಂಸ್ಥೆಗಳಿಂದ 2020ರಲ್ಲಿ ಶಿಕ್ಷಣ ರತ್ನ, ಆಗಸ್ಟ್ 2023ರಲ್ಲಿ ಸೇವಾ ರತ್ನ ಪ್ರಶಸ್ತಿ ಪಡೆದಿದ್ದಾರೆ.
ತಾಲ್ಲೂಕಿನ ಅಡಗನಹಳ್ಳಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1ರಿಂದ 5ನೇ ತರಗತಿವರೆಗೆ ಪ್ರಸಕ್ತ ಸಾಲಿನಲ್ಲಿ ಒಟ್ಟು 42 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಲೇಖನ ಸಾಮಗ್ರಿ, ಕಂಪ್ಯೂಟರ್ ಸೇರಿದಂತೆ ಶಾಲೆಗೆ ಅಗತ್ಯ ವಸ್ತುಗಳು ಬೇಕಾದಲ್ಲಿ ದಾನಿಗಳನ್ನು ಹಿಡಿದು ಶಾಲೆಯಲ್ಲಿನ ಕೊರತೆ ನೀಗಿಸಿಕೊಳ್ಳುತ್ತಿದ್ದಾರೆ.
ಶಾಲೆಯಲ್ಲಿ ಸುಂದರ ಕೈ ತೋಟ ನಿರ್ಮಿಸುವುದು, ವಿಶೇಷ ತರಗತಿ ನಡೆಸುವುದು, ವಿವಿಧ ಜಾತಿಯ ಮರಗಳನ್ನು ಬೆಳೆಸುವುದು, ದಾಖಲಾತಿ ಹೆಚ್ಚಿಸುವುದು, ಗುಣಾತ್ಮಕ ಶಿಕ್ಷಣಕ್ಕೆ ಒತ್ತುಕೊಡುವುದು, ಅಂಗವಿಕಲ ಮಕ್ಕಳಿಗೆ ಸಮಾನ ಕಲಿಕೆಗೆ ಅವಕಾಶ ನೀಡುವುದು, ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಉತ್ತೇಜನ ನೀಡುವುದು, ಬಡ ವಿದ್ಯಾರ್ಥಿಗಳಿಗೆ ದಾನಿಗಳಿಂದ ಲೇಖನ ಸಾಮಗ್ರಿ ಕೊಡಿಸುವುದು, ಉತ್ತಮ ಪರಿಸರ ಕಾಪಾಡುವುದು, ರಾಷ್ಟ್ರೀಯ ಕಾರ್ಯಕ್ರಮಗಳಲ್ಲಿ ಮಕ್ಕಳನ್ನು ತೊಡಗಿಸಿಕೊಳ್ಳುವುದರಲ್ಲಿ ಕಾರ್ಯಪ್ರವೃತ್ತರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.