ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಇಲ್ಲಿ ಪ್ರತಿಭಟನೆ ನಡೆಸಿ ಜಿಲ್ಲಾ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಿಗದಿಯಾಗಿರುವ ಕೆಡಿಪಿ ಸಭೆಗೆ ಮುಖ್ಯಮಂತ್ರಿ ಬರುತ್ತಿದ್ದ ಕಾರಣ ಅವರಿಗೆ ಮುತ್ತಿಗೆ ಹಾಕಲು ಕಾರ್ಯಕರ್ತರು ಯತ್ನಿಸಿದರು.
ಮುಖ್ಯಮಂತ್ರಿಗಳಿಗೆ ಮುತ್ತಿಗೆ ಯತ್ನ: ಬಂಧನ
ಚಾಮರಾಜ ಮೊಹಲ್ಲಾದ ವಿಷ್ಣುವರ್ಧನ ರಸ್ತೆಯಲ್ಲಿರುವ ಬಿಜೆಪಿ ಕಚೇರಿ ಮುಂಭಾಗ ಜಮಾಯಿಸಿದ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.
ಶಾಸಕ ಟಿ.ಎಸ್. ಶ್ರೀವತ್ಸ ಅವರು ಸಿದ್ದರಾಮಯ್ಯ ಅವರನ್ನು ಟೀಕಿಸಿ ಹಾಡು ಹಾಡಿದರು. 'ಕರ್ನಾಟಕದ ರಾಜ್ಯದಲ್ಲಿ, ಮೈಸೂರು ಮೂಡಾದಲ್ಲಿ, 14 ಸೈಟುಗಳನ್ನು ದಲಿತರ ಹೆಸರಿನಲ್ಲಿ ನುಂಗಿದರಣ್ಣ ನುಂಗಿದರಣ್ಣ, ಸಿದ್ರಾಮಣ್ಣ ನುಂಗಿದರಣ್ಣ, ವಾಲ್ಮೀಕಿ ನಿಗಮದಲ್ಲಿ 180 ಕೋಟಿಗಳನ್ನು ನುಂಗಿದರಣ್ಣ ನುಂಗಿದರಣ್ಣ ಸಿದ್ರಾಮಣ್ಣ ಸಿದ್ರಾಮಣ್ಣ. ರಾಜೀನಾಮೆ ನೀಡೋದಿಲ್ಲ, ಭ್ರಷ್ಟಾಚಾರ ಬಿಡುವುದಿಲ್ಲ' ಎಂದು ಹಾಡಿದರು. ಅದಕ್ಕೆ ಕಾರ್ಯಕರ್ತರು ದನಿಗೂಡಿಸಿದರು.
ಘೋಷಣೆ ಕೂಗುತ್ತಾ ಜಿಲ್ಲಾ ಪಂಚಾಯಿತಿ ಕಡೆಗೆ ಮೆರವಣಿಗೆಯಲ್ಲಿ ಸಾಗಿದರು. ಅವರನ್ನು ಪೊಲೀಸರು ತಡೆದರು. ಹೋರಾಟ ತೀವ್ರವಾದಾಗ ಅವರನ್ನು ವಶಕ್ಕೆ ಪಡೆದು ಪೊಲೀಸ್ ವಾಹನದಲ್ಲಿ ಕರೆದೊಯ್ದರು.
ಕೇಂದ್ರದ ಮಾಜಿ ಸಚಿವ ಭಗವಂತ್ ಖೂಬಾ, ಬಿಜೆಪಿ ನಗರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ನಾಗೇಂದ್ರ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಭಾಗವಹಿಸಿದ್ದರು.
ಬಿಗಿ ಭದ್ರತೆ: ಸಿಎಂ ಸಭೆ ಕಾರಣದಿಂದ ಜಿಲ್ಲಾ ಪಂಚಾಯಿತಿ ಆವರಣ ಹಾಗೂ ಬಿಜೆಪಿ ಕಚೇರಿ ಸುತ್ತಲೂ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಪ್ರವೇಶ ದ್ವಾರದಲ್ಲಿ ಬ್ಯಾರಿಕೇಡ್ ಹಾಕಿ, ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಲಾಗಿದೆ.
ಬೆಳಿಗ್ಗೆ 11.30ಕ್ಕೆ ನಿಗದಿಯಾಗಿದ್ದ ಕೆಡಿಪಿ ಸಭೆ ಮಧ್ಯಾಹ್ನ 12.20 ದಾಟಿದ್ದರೂ ಆರಂಭವಾಗಿಲ್ಲ.