ಗುರುವಾರ, 12 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಜೆಪಿ–ಜೆಡಿಎಸ್‌ನದ್ದು ಸ್ವಾರ್ಥದ ಯಾತ್ರೆ: ಉಗ್ರ ನರಸಿಂಹೇಗೌಡ

Published 3 ಆಗಸ್ಟ್ 2024, 15:53 IST
Last Updated 3 ಆಗಸ್ಟ್ 2024, 15:53 IST
ಅಕ್ಷರ ಗಾತ್ರ

ಮೈಸೂರು: ‘ಬಿಜೆಪಿ–ಜೆಡಿಎಸ್ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯು ಜನಪರ ಉದ್ದೇಶವಿಲ್ಲದ, ಪ್ರಚಂಡ ಜನಾಭಿಪ್ರಾಯದ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೇರುವ ನಾಡ ದ್ರೋಹಿಗಳ ಗುಂಪಿನ ಸ್ವಾರ್ಥದ್ದಾಗಿದೆ’ ಎಂದು ಸರ್ವೋದಯ ಕರ್ನಾಟಕ ಪಕ್ಷದ ಮುಖಂಡ ಉಗ್ರನರಸಿಂಹೇಗೌಡ ಟೀಕಿಸಿದ್ದಾರೆ.

ಈ ಬಗ್ಗೆ ಹೇಳಿಕೆ ನೀಡಿರುವ ಅವರು, ‘ಮುಡಾ ನಿವೇಶನ ಹಂಚಿಕೆಯ ಅಕ್ರಮದ ತನಿಖೆಗೆ ನಿವೃತ್ತ ನ್ಯಾಯಾಧೀಶರನ್ನು ರಾಜ್ಯ ಸರ್ಕಾರ ನೇಮಿಸಿದೆ. ಹೀಗಿದ್ದರೂ ವಿರೋಧ ಪಕ್ಷದವರು ನಡೆಸುತ್ತಿರುವ ಪ್ರತಿಭಟನಾ ಪಾದಯಾತ್ರೆಯು ನಿರ್ದಿಷ್ಟ ಕಾರಣವಿಲ್ಲದ ಕರ್ಕಶ ರೋದನದಂತಿದೆ’ ಎಂದು ಆರೋಪಿಸಿದ್ದಾರೆ.

‘ಬಿಜೆಪಿಗೆ ಕಳೆದ ಹತ್ತು ವರ್ಷಗಳಲ್ಲಿ ಹಲವು ಸರ್ಕಾರಗಳನ್ನು ಬೀಳಿಸಿ ಅಧಿಕಾರಕ್ಕೇರಿ ಹಣ ಲೂಟಿ ಮಾಡಿದ ರುಚಿ ಹತ್ತಿದೆ. ಜನವಿರೋಧಿ ರಾಜಕಾರಣ ಮಾಡಿದವರ ಜತೆಗೂಡಿ ಚುನಾವಣೆಗೆ ಹೊರಟ ಜೆಡಿಎಸ್‌ಗೆ ಕರ್ನಾಟಕವು ಕಳೆದ ಬಾರಿಗಿಂತ ಕಡಿಮೆ ಸ್ಥಾನ ಕೊಟ್ಟು ಒಕ್ಕೂಟ ಸರ್ಕಾರ ರಚನೆಗೂ ನೀವು ಯೋಗ್ಯರಲ್ಲ ಎಂದು ಹೇಳಿದೆ. ಆದರೆ, ಅನೈತಿಕ ರಾಜಕಾರಣವನ್ನು ತನ್ನ ಮೂಲ ಮಂತ್ರವಾಗಿಸಿಕೊಂಡಿರುವ ಆ ಪಕ್ಷದವರು ಕಾಂಗ್ರೆಸ್‌ ಸರ್ಕಾರ ಕೆಡವಿ ಜನ ಮತದ ವಿರುದ್ಧ ಸರ್ಕಾರ ರಚಿಸಲು ಮುಡಾ ಹಗರಣ ಬಳಸಿಕೊಳ್ಳಲು ಕುತಂತ್ರದ ಯೋಜನೆ ರೂಪಿಸಿದ್ದಾರೆ’ ಎಂದು ಕಿಡಿಕಾರಿದ್ದಾರೆ.

‘ಅನೈತಿಕ ರಾಜಕಾರಣ ಮಾಡಿ ಅಧಿಕಾರಕ್ಕೇರಲು ಕುಟಿಲ ಯೋಜನೆ ಮಾಡುತ್ತಿರುವವರನ್ನು ಕರ್ನಾಟಕದ ಜನ ಚಳವಳಿಗಳು ಮೂಲೆಗೊತ್ತಿ ದಕ್ಷ ಆಡಳಿತಕ್ಕಾಗಿ ಕಾಂಗ್ರೆಸ್ ಸರ್ಕಾರವನ್ನು ಎಚ್ಚರಿಸಲು ಚಾಟಿ ಬೀಸಬೇಕು’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT