ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಘರ್ಷವೇ ಆಗಲಿ, ಮಹಿಷ ದಸರೆಗೆ ಅವಕಾಶ ಕೊಡುವುದಿಲ್ಲ: ಸಂಸದ ಪ್ರತಾಪ ಸಿಂಹ

Published 8 ಸೆಪ್ಟೆಂಬರ್ 2023, 10:15 IST
Last Updated 8 ಸೆಪ್ಟೆಂಬರ್ 2023, 10:15 IST
ಅಕ್ಷರ ಗಾತ್ರ

ಮೈಸೂರು: ‘ಮೈಸೂರಿನಲ್ಲಿ ಮಹಿಷ ದಸರಾ ಆಚರಣೆಗೆ ಅವಕಾಶ ಕೊಡುವುದಿಲ್ಲ. ಈ ವಿಷಯದಲ್ಲಿ ಸಂಘರ್ಷಕ್ಕೂ ಸಿದ್ಧವಿದ್ದೇವೆ’ ಎಂದು ಸಂಸದ ಪ್ರತಾಪ ಸಿಂಹ ಹೇಳಿದರು.

ಇಲ್ಲಿ ಪತ್ರಕರ್ತರೊಂದಿಗೆ ಶುಕ್ರವಾರ ಮಾತನಾಡಿದ ಅವರು, ‘ಚಾಮುಂಡಿಬೆಟ್ಟಕ್ಕೆ ಪ್ರತಿ ನಿತ್ಯ ಸಾವಿರಾರು ಮಂದಿ ಬರುತ್ತಾರೆ. ಅವರು ಬರುವುದು ಚಾಮುಂಡಿ ತಾಯಿಯ ದರ್ಶನಕ್ಕೆ ಹಾಗೂ ಆಶೀರ್ವಾದ ಪಡೆಯಲೆಂದೇ ಹೊರತು ಬೇರೆ ಉದ್ದೇಶಕ್ಕಲ್ಲ. ಆಸ್ತಿಕರಿಗೆ ತಾಯಿ ಚಾಮುಂಡಿ ಇದ್ದಾಳೆ. ನಂಬಿಕೆ ಇಲ್ಲದವರಿಗೆ ಬೇರೆ ಇನ್ಯಾರೋ ಇರಬಹುದು. ಇದನ್ನು ಚಾಮುಂಡಿ ಬೆಟ್ಟ ಎನ್ನುತ್ತಾರೆಯೇ ಹೊರತು ಮಹಿಷ ಬೆಟ್ಟ ಎಂದು ಕರೆಯುವುದಿಲ್ಲ’ ಎಂದು ಹೇಳಿದರು.

‘ಮಹಿಷನ ಮೇಲೆ ಪ್ರೀತಿ ಇರುವವರು ಮನೆಯಲ್ಲಿ ಫೋಟೊ ಇಟ್ಟುಕೊಂಡು ಪೂಜಿಸಲಿ. ನಿನ್ನಂತಹ ಮಗ ನನಗೂ ಹುಟ್ಟಲೆಂದು ಕೇಳಿಕೊಳ್ಳಲಿ. ಆದರೆ, ಮಹಿಷ ದಸರಾ ಎಂಬ ಅನಾಚಾರಕ್ಕೆ ಚಾಮುಂಡಿಬೆಟ್ಟ ಸೂಕ್ತವಲ್ಲ. ಅಲ್ಲಿ ನಡೆಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ’ ಎಂದರು.

‘ಇಂಥ ಅನಾಚಾರಗಳನ್ನು ಬಿಜೆಪಿ ಸರ್ಕಾರದಲ್ಲಿ ನಿಲ್ಲಿಸಿದ್ದೆವು. ಮತ್ತೆ ಮುಂದುವರಿಸಲು ಜಿಲ್ಲಾಧಿಕಾರಿ ಹಾಗೂ ನಗರ ಪೊಲೀಸ್ ಆಯುಕ್ತರು ಅವಕಾಶ ಕೊಡಬಾರದು’ ಎಂದು ಎಚ್ಚರಿಕೆ ನೀಡಿದರು.

‘ಕೆಲವರು ಯಾವಾಗ ಮಹಿಷ ದಸರಾ ಆಚರಿಸುತ್ತೇವೆ ಎಂದು ಹೇಳಿದ್ದಾರೆಯೋ ಆ ದಿನಾಂಕದಂದೇ ನಾನೂ ಸೇರಿದಂತೆ ಬಿಜೆಪಿಯ ಮುಖಂಡರೆಲ್ಲರೂ ಮಹಿಷ ಪ್ರತಿಮೆಯ ಬಳಿಗೇ ಬರುತ್ತೇವೆ. ಹಿಂದೂ ಧರ್ಮದಲ್ಲಿ ನಂಬಿಕೆ ಇಟ್ಟಿರುವ ನಾವು ಚಾಮುಂಡಿಗೆ ಅವಮಾನವಾಗಲು ಅವಕಾಶ ಕೊಡುವುದಿಲ್ಲ; ಅನಾಚಾರವನ್ನು ತಡೆದೇ ತಡೆಯುತ್ತೇವೆ. ಹೇಗೆ ನಡೆಸುತ್ತಾರೋ ನೋಡೋಣ’ ಎಂದು ಸವಾಲು ಹಾಕಿದರು.

‘ಅನಾಚಾರ ಮರುಕಳಿಸದಂತೆ ಮುಖ್ಯಮಂತ್ರಿ ನೋಡಿಕೊಳ್ಳಬೇಕು’ ಎಂದು ಕೋರಿದರು.

‘ಮುಖ್ಯಮಂತ್ರಿಗಳೇ ನಿಮಗೆ ದೇವರ ಬಗ್ಗೆ ನಿಮಗೆ ನಂಬಿಕೆ ಇಲ್ಲದಿದ್ದರೆ ಪರವಾಗಿಲ್ಲ. ಆದರೆ, ಮೈಸೂರಿಗರು ಮತ್ತು ಚಾಮುಂಡಿ ತಾಯಿಯ ಭಕ್ತರ ನಂಬಿಕೆ ಒಡೆಯಲು ಹೋಗಬೇಡಿ’ ಎಂದರು.

‘ಮಹಿಷ ದಸರಾ ಮಾಡಲು ಹೊರಟಿರುವ ಮನೆಯವರ ಮಹಿಳೆಯರೂ ಚಾಮುಂಡಿಯ ಭಕ್ತೆಯರೇ ಆಗಿರುತ್ತಾರೆ. ಅಧಿಕಾರದಲ್ಲಿ ಯಾರೇ ಇರಲಿ. ಆದರೆ, ಅನಾಚಾರಕ್ಕೆ ನಾವು ಬಿಡುವುದಿಲ್ಲ’ ಎಂದು ಗುಡುಗಿದರು.

‘ಸಿದ್ದರಾಮಯ್ಯ ಸರ್ಕಾರವಿದ್ದಾಗ ಮಹಿಷ ದಸರೆಗೆ ಅನುಮತಿ ನೀಡಿದ್ದರು. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ನಾವು ಮಟ್ಟ ಹಾಕಿದ್ದೆವು. ಅದೇನೋ ಗೊತ್ತಿಲ್ಲ, ಸಿದ್ದರಾಮಯ್ಯ ಸರ್ಕಾರ ಬಂದಾಗ ಧರ್ಮ ವಿರೋಧಿಗಳಿಗೆ ಶಕ್ತಿ ಬರುತ್ತದೆ. ಅದನ್ನೇ ಮಹಿಷ ದಸರಾ ರೂಪದಲ್ಲಿ ನೋಡುತ್ತಿದ್ದೇವೆ’ ಎಂದು ದೂರಿದರು.

‘ಚಾಮುಂಡಿಬೆಟ್ಟದಲ್ಲಿ ರಾತ್ರಿಯಿಡೀ ಮಲಗಿ ಮಹಿಷ ದಸರಾ ತಡೆಯುತ್ತೇವೆ’ ಎಂದು ಕೃಷ್ಣರಾಜ ಕ್ಷೇತ್ರದ ಶಾಸಕ ಟಿ.ಎಸ್. ಶ್ರೀವತ್ಸ ಹೇಳಿದರು.

‘ಆ ಆಚರಣೆ ತಡೆಯಲು ಈಗಾಗಲೇ ತಯಾರಿ ಮಾಡಿಕೊಂಡಿದ್ದೇವೆ. ದಸರಾ ಸಂದರ್ಭದಲ್ಲಿ ಪೂಜೆ–ಪ್ರಸಾದ ಚಾಮುಂಡಿಗೆ ಮಾತ್ರ ಸಲ್ಲಬೇಕು. ಅದ್ಹೇಗೆ ಮಹಿಷ ದಸರಾ ನಡೆಸುತ್ತಾರೋ ನೋಡುತ್ತೇವೆ’ ಎಂದರು.

‘ಕೆಲವರು ಕೆಟ್ಟ ಆಚರಣೆ ಮೂಲಕ ಬಹುಸಂಖ್ಯಾತರ ಭಾವನೆಗೆ ವಿರುದ್ಧವಾಗಿ ನಿಲ್ಲುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಅ. 13ರಂದು ಮಹಿಷ ದಸರಾ ಆಚರಿಸಲಾಗುವುದು. ಮಹಿಷ ಪ್ರತಿಮೆ ಬಳಿ ಸ್ಥಳದ ಕೊರತೆ ಇರುವುದರಿಂದಾಗಿ ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಕಾರ್ಯಕ್ರಮ ಆಯೋಜಿಸಲಿದ್ದೇವೆ. ಮಹಿಷನ ಪ್ರತಿಮೆಗೆ ನೂರಾರು ಮಂದಿ ಸಮ್ಮುಖದಲ್ಲಿ ಪುಷ್ಪಾರ್ಚನೆ ಮಾಡಲಾಗುವುದು. ಆಚರಣೆಗೆ ಅನುಮತಿಯ ಅವಶ್ಯಕತೆ ಇಲ್ಲ’ ಎಂದು ಮಹಿಷ ದಸರಾ ಆಚರಣೆ ಸಮಿತಿಯವರು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT