ಗುರುವಾರ, 10 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಸಮಾಜಕ್ಕೆ ಶಕ್ತಿ ತುಂಬಲು ‘ಪಂಚ ಗ್ಯಾರಂಟಿ’

ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ
Published : 29 ಸೆಪ್ಟೆಂಬರ್ 2024, 6:36 IST
Last Updated : 29 ಸೆಪ್ಟೆಂಬರ್ 2024, 6:36 IST
ಫಾಲೋ ಮಾಡಿ
Comments

ಮೈಸೂರು: ‘ಅನ್ನಕ್ಕಾಗಿ ಯಾರೊಬ್ಬರೂ ಇನ್ನೊಬ್ಬರ ಮನೆಯ ಮುಂದೆ ನಿಂತು ಕೈ ಒಡ್ಡದಂತೆ ಮಾಡುವ ಉದ್ದೇಶದಿಂದ ನಾನು ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಸಮಾಜದಲ್ಲಿ ಆರ್ಥಿಕ ಶಕ್ತಿ ಬರಲೆಂದು ಪಂಚ ಗ್ಯಾರಂಟಿಗಳನ್ನು ನೀಡಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗ, ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ  ಜಾಗೃತ ವೇದಿಕೆ ಮತ್ತು ಇನ್‌ಸ್ಟಿಟ್ಯೂಟ್‌ ಫಾರ್‌ ಸೋಷಿಯಲ್‌ ವರ್ಕರ್ಸ್‌ ಫಾರ್‌ ಆ್ಯಕ್ಷನ್‌ ರಿಸರ್ಚ್‌ ಸಹಯೋಗದಲ್ಲಿ ಇಲ್ಲಿನ ಮಾನಸಗಂಗೋತ್ರಿಯ ವಿಜ್ಞಾನ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಡಿ.ಶ್ರೀನಿವಾಸ ಮಣಗಳ್ಳಿ ಸಂಪಾದಿತ ‘ಗ್ಯಾರಂಟಿ ಯೋಜನೆಗಳು: ಬಡವರ ಸುರಕ್ಷತೆ ಮತ್ತು ಕಲ್ಯಾಣ’ ಕೃತಿ ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಹೊಟ್ಟೆ ತುಂಬ ಹಿಟ್ಟು; ಬಾಯಿ ತುಂಬ ಅನ್ನ ಎಂದು ನನ್ನಮ್ಮ ಹೇಳುತ್ತಿದ್ದರು. ಬಡವರಿಗೆ ಅನ್ನ ಹಬ್ಬದ ಸಂದರ್ಭದಲ್ಲಷ್ಟೆ ಸಿಗುತ್ತಿತ್ತು. ಮಕ್ಕಳಿಗೆ ಹುಷಾರಿಲ್ಲದ ವೇಳೆ ಬಡವರು ಉಳ್ಳವರ ಮನೆಗಳಿಗೆ ತುತ್ತು ಅನ್ನಕ್ಕಾಗಿ ಬಂದು ನಿಲ್ಲುತ್ತಿದ್ದರು. ನಮ್ಮ ಮನೆಯ ಬಳಿಗೂ ಬರುತ್ತಿದ್ದರು. ಅನ್ನಕ್ಕಾಗಿ ಕಾದು ನಿಂತ ಪರಿಸ್ಥಿತಿಯೇ ನಾನು ಅನ್ನಭಾಗ್ಯ ಜಾರಿಗೊಳಿಸಲು ಕಾರಣ’ ಎಂದು ಬಾಲ್ಯದ ದಿನಗಳನ್ನು ನೆನೆದರು.

ಫಲಾನುಭವಿಗಳು ಮಾತನಾಡಬೇಕು: ‘ಗ್ಯಾರಂಟಿ‌ ಯೋಜನೆಗಳ ಬಗ್ಗೆ ಫಲಾನುಭವಿಗಳು ಮಾತನಾಡುವುದು ಬಹಳ ಮುಖ್ಯ. ಟೀಕೆ–ಅವಹೇಳನ ಸಹಜ. ಅದನ್ನೆಲ್ಲಾ ಸಹಿಸಿಕೊಳ್ಳಬೇಕಾಗುತ್ತದೆ’ ಎಂದು ನುಡಿದರು.

‘ಸಾಮಾಜಿಕ ಹಾಗೂ ಆರ್ಥಿಕ ಪ್ರಜಾಪ್ರಭುತ್ವ ಬಾರದೇ ರಾಜಕೀಯ ಪ್ರಜಾಪ್ರಭುತ್ವ ಯಶಸ್ವಿಯಾಗದು. ಆರ್ಥಿಕ ಹಾಗೂ ಸಾಮಾಜಿಕವಾಗಿ ಸಬಲರನ್ನಾಗಿ ಮಾಡದಿದ್ದರೆ ಜಾತಿ ಹೋಗುತ್ತದೆಯೇ? ಜಾತಿ ವ್ಯವಸ್ಥೆಯಿಂದಾಗಿಯೇ ಅಸಮಾನತೆ ಇದೆ. ಸಾಮಾಜಿಕ ವ್ಯವಸ್ಥೆಗೆ ಚಲನೆ ಸಿಕ್ಕಾಗ ಮಾತ್ರ ಜಾತಿ ಹೋಗುತ್ತದೆ. ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಳ್ಳಬೇಕು’ ಎಂದು ಹೇಳಿದರು.

ನಾಟಕಕಾರ ಕೆ.ವೈ.ನಾರಾಯಣಸ್ವಾಮಿ ಮಾತನಾಡಿ, ‘ಪಂಚ ಗ್ಯಾರಂಟಿ ಯೋಜನೆಗಳು ಮನುಷ್ಯರಿಗೆ ಚಾಲಕ ಶಕ್ತಿಗಳಾಗಿವೆ. ಈ ನಿಟ್ಟಿನಲ್ಲಿ ಈ ಪುಸ್ತಕವನ್ನು ಗ್ಯಾರಂಟಿ ಯೋಜನೆಗಳ ಸೋಷಿಯಲ್ ಆಡಿಟ್ ಆಗಿ ನೋಡಬೇಕು’ ಎಂದರು.

‘ಸರ್ಕಾರವು ಬ್ಯಾಕ್‌ಲಾಗ್ ಹುದ್ದೆ ಭರ್ತಿಯ ಗ್ಯಾರಂಟಿಯನ್ನೂ ಕೊಡಬೇಕು’ ಎಂದು ಕೋರಿದರು.

ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಮಾತನಾಡಿ, ‘ಬಡವರಿಗೆ ಗ್ಯಾರಂಟಿ ಯೋಜನೆಗಳು‌ ಸಿಕ್ಕಿದ್ದರಿಂದ, ಶೋಷಣೆ ಮಾಡುತ್ತಿದ್ದವರ ಕಣ್ಣು ಕೆಂಪಗಾಗಿದೆ’ ಎಂದರು.

‘ಸಂವಿಧಾನ ತಿರುಚುವ ಹುನ್ನಾರ ನಡೆಯುತ್ತಲೇ ಇದೆ. ಸಿದ್ದರಾಮಯ್ಯ ನಾಯಕತ್ವಕ್ಕೆ ಗಂಡಾಂತರ ತರಲು ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಪ್ರಯತ್ನಿಸುತ್ತಿವೆ. ಸಮ ಸಮಾಜದ ನಿರ್ಮಾಣಕ್ಕೆ ಶ್ರಮಿಸುತ್ತಿರುವ ಅವರನ್ನು ಉಳಿಸಿಕೊಳ್ಳಬೇಕು. ಸರ್ಕಾರ ಅಸ್ಥಿರಗೊಳಿಸಲು ಅವಕಾಶ ‌ಕೊಡಬಾರದು. ಗ್ಯಾರಂಟಿ ಯೋಜನೆಗಳ ವಿರುದ್ಧ ಮಾತನಾಡುವವರ ವಿರುದ್ಧ ಫಲಾನುಭವಿಗಳು ಧ್ವನಿ ಎತ್ತಿ, ಬಾಯಿ ಮುಚ್ಚಿಸಬೇಕು’ ಎಂದು ಕರೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್‌ ಮಾತನಾಡಿದರು. ವಿಧಾನಪರಿಷತ್‌ ಸದಸ್ಯ ಡಾ.ಡಿ. ತಿಮ್ಮಯ್ಯ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್‌.ಎಂ. ರೇವಣ್ಣ, ಉಪಾಧ್ಯಕ್ಷೆ ಪುಷ್ಪಾ ಅಮರನಾಥ್, ಸೂರಜ್ ಹೆಗಡೆ, ರಾಜ್ಯ ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್. ಶಿವರಾಮು, ಕೃತಿ ಸಂಪಾದಕ ಡಿ.ಶ್ರೀನಿವಾಸ ಮಣಗಳ್ಳಿ, ಸಮಾಜ ಕಾರ್ಯ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಚಂದ್ರಮೌಳಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ, ಕಾಂಗ್ರೆಸ್ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಜೆ. ವಿಜಯ್‌ಕುಮಾರ್‌ ಪಾಲ್ಗೊಂಡಿದ್ದರು.

ಫಲಾನುಭವಿಗಳು ಏನಂತಾರೆ?

ಕ್ಯಾಂಟೀನ್ ಆರಂಭಿಸಿದೆ ಚಿಲ್ಲರೆ ಅಂಗಡಿ‌ ನಡೆಸುತ್ತಿದ್ದೆ. ಗೃಹಲಕ್ಷ್ಮಿ ಯೋಜನೆಯ ಹಣ ಕೂಡಿಟ್ಟು ಅದರಿಂದ ಕ್ಯಾಂಟೀನ್ ಆರಂಭಿಸಿದ್ದೇನೆ. ಇದರಿಂದ ಕುಟುಂಬದ ನಿರ್ವಹಣೆಗೆ ಅನುಕೂಲ ಆಗಿದೆ. ದಿನಕ್ಕೆ ₹1 ಸಾವಿರ ವ್ಯಾಪಾರ ಆಗುತ್ತಿದೆ. ಪಾರ್ವತಾಂಬಾ ನಂಜನಗೂಡು ಸೊಸೆಗೆ ಹೊಲಿಗೆ ಯಂತ್ರ ಕೊಡಿಸಿದೆ ಗೃಹಲಕ್ಷ್ಮಿ ಹಣದಿಂದ ಸೊಸೆಗೆ ಹೊಲಿಗೆ ಯಂತ್ರ ತೆಗೆದುಕೊಟ್ಟಿದ್ದೇನೆ. ಆಕೆ ಬಟ್ಟೆ ಒಲಿದು ಹಣ ಸಂಪಾದಿಸುತ್ತಿದ್ದಾಳೆ. ಅದರಿಂದ ಅನುಕೂಲ ಆಗಿದೆ. ಚಿನ್ನಮ್ಮ ದುದ್ದಗೆರೆ ಹೂವಿನ ವ್ಯಾಪಾರಕ್ಕೆ ಅನುಕೂಲ ನಾನು ಹೂವು ಹೂಮಾಲೆ ವ್ಯಾಪಾರ ಮಾಡುವುದಕ್ಕೆ ಗೃಹಲಕ್ಷ್ಮಿ ಯೋಜನೆಯ ಹಣದಿಂದ ಅನುಕೂಲವಾಗಿದೆ. ರುಕ್ಮಿಣಿ ಮಂಡಿಮೊಹಲ್ಲಾ ಮೈಸೂರು ಮುಂದುವರಿಸಿ ಅನ್ನಭಾಗ್ಯ ಗೃಹಲಕ್ಷ್ಮಿ ಹಾಗೂ ಗೃಹಜ್ಯೋತಿ ಯೋಜನೆಗಳಿಂದ ನಮ್ಮ ಕುಟುಂಬಕ್ಕೆ ಆರ್ಥಿಕವಾಗಿ ಅನುಕೂಲ ಆಗಿದೆ. ಇವು ಮುಂದುವರಿಯಬೇಕು. ರವಿಕುಮಾರ್ ಕೆ.ಆರ್. ಮೊಹಲ್ಲಾ ಮೈಸೂರು ಬಡವರಿಗೆ ಅನುಕೂಲವಾಗಿದೆ ಬಡವರಾದ ನಮ್ಮಂಥವರಿಗೆ ಗ್ಯಾರಂಟಿ ಯೋಜನೆಗಳಿಂದ ಬಹಳ ಅನುಕೂಲ ಆಗಿದೆ. ಅವುಗಳನ್ನು ಮುಂದುವರಿಸಿ. ಕಮಲಮ್ಮ ಹೆಬ್ಬಾಳ ಶಾಹಿನ್ ತಾಜ್ ರಾಘವೇಂದ್ರ ಬಡಾವಣೆ

‘ಫಲಾನುಭವಿಗಳ ಅವಮಾನಿಸಬೇಡಿ’

ಧಾರವಾಡದ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಅಕಾಡೆಮಿ ನಿರ್ದೇಶಕ ಪ್ರೊ.ಎಂ. ಚಂದ್ರ ಪೂಜಾರಿ ಮಾತನಾಡಿ ‌‘ರಾಜ್ಯದಲ್ಲಿದ್ದ ರಾಜಕೀಯ ಸ್ಥಿತಿಯೂ ಇಂತಹ ಯೋಜನೆಗಳ ಅನಿವಾರ್ಯತೆ ಸೃಷ್ಟಿಸಿತ್ತು. ಇವು ಉಚಿತವಲ್ಲ. ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಕಟ್ಟುತ್ತಿರುವವರಿಗೆ ಶೇ 15ರಷ್ಟನ್ನಾದರೂ ವಾಪಸ್ ಕೊಡುವುದು ಉಚಿತ ಹೇಗಾಗುತ್ತದೆ? ಆದ್ದರಿಂದ ಉಚಿತ ಎಂದು ಹೇಳಿ ಫಲಾನುಭವಿಗಳನ್ನು ಅವಮಾನಿಸಬಾರದು’ ಎಂದರು. ‘ಪಂಚ ಗ್ಯಾರಂಟಿ ಯೋಜನೆಗಳಿಂದಾಗಿ ಕರ್ನಾಟಕದ ಜಿಡಿಪಿ ಶೇ 2ರಿಂದ ಶೇ 4ರಷ್ಟು ಏರಿಕೆಯಾಗಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT