ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಬೂಸಾ: ದಲಿತ ಚಳವಳಿಗೆ ಸ್ಪಷ್ಟ ರೂಪ; ಲೇಖಕ ಕೃಷ್ಣಮೂರ್ತಿ

‘ಬೂಸಾ ಚಳವಳಿ– 50’ ಅವಲೋಕನ ಕಾರ್ಯಕ್ರಮದಲ್ಲಿ ಲೇಖಕ ಅಗ್ರಹಾರ ಕೃಷ್ಣಮೂರ್ತಿ
Published 9 ಜೂನ್ 2024, 0:29 IST
Last Updated 9 ಜೂನ್ 2024, 0:29 IST
ಅಕ್ಷರ ಗಾತ್ರ

ಮೈಸೂರು: ‘ಬೂಸಾ ಚಳವಳಿಯಲ್ಲಿ ಸಂಸ್ಕೃತಿ, ಭಾಷೆಯ ಹೆಸರಿನಲ್ಲಿ ಜಾತಿ ವ್ಯವಸ್ಥೆ ಕೆಲಸ ಮಾಡಿತು. ಆದರೆ, ಇದರಿಂದ ದಲಿತ ಚಳವಳಿಗೆ ಸ್ಪಷ್ಟ ರೂಪ ಸಿಕ್ಕಿತು’ ಎಂದು ಲೇಖಕ ಅಗ್ರಹಾರ ಕೃಷ್ಣಮೂರ್ತಿ ಪ್ರತಿಪಾದಿಸಿದರು.

ಮೈಸೂರಿನ ಒಡಲು ಟ್ರಸ್ಟ್‌ ಹಾಗೂ ಮಾನಸ ಗಂಗೋತ್ರಿಯ ವಿದ್ಯಾರ್ಥಿ ಸಂಶೋಧಕರ ಸಂಘವು ಶನಿವಾರ ವಿಜ್ಞಾನ ಭವನದಲ್ಲಿ ಆಯೋಜಿಸಿದ್ದ ‘ಬೂಸಾ ಚಳವಳಿ– 50’ ಕುರಿತ ಅವಲೋಕನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಈ ಚಳವಳಿಯು ಮೇಲ್ವರ್ಗದವರು ದಲಿತರ ಮೇಲೆ ನಡೆಸುತ್ತಿದ್ದ ದೌರ್ಜನ್ಯಗಳನ್ನು ಪ್ರತಿಧ್ವನಿಸಿತ್ತು. ಕಾಲೇಜು ಹಂತದಲ್ಲಿ ನಾವು ಆಗಷ್ಟೇ ಕಟ್ಟಿಕೊಂಡಿದ್ದ ವೈಚಾರಿಕ ವೇದಿಕೆಯು ಮುನ್ನೆಲೆಗೆ ಬಂದು ಕೆಲಸ ಮಾಡಿತ್ತು’ ಎಂದು ನೆನಪಿಸಿಕೊಂಡರು.

‘ಸಂವಿಧಾನ ಬದಲಾಯಿಸಲು ಹೊರಟವರನ್ನು ವಿರೋಧಿಸಿದ ವರಿಗೇ ಶಿಕ್ಷೆಯಾಗುತ್ತಿದೆ. ದೇವಾಲಯ ಕಟ್ಟಿದ್ದಕ್ಕೆ ಆಕ್ಷೇಪಿಸಿದವರ ಮೇಲೆ ದಾಳಿ ನಡೆದಿದೆ. ‌ಯಾರೂ ಪ್ರತಿಭಟಿಸಿಲ್ಲ. ಆದರೆ, 50 ವರ್ಷಗಳ ಹಿಂದೆ ಬಿ.ಬಸವಲಿಂಗಪ್ಪ ಅವರು ‘ಜೀವನದ ದಾರಿ ರೂಪಿಸಲು ಇಂಗ್ಲಿಷ್‌ ಕಾರಣವಾಗುತ್ತದೆ. ಇಂಗ್ಲಿಷ್‌ ಕಲಿಯಿರಿ’ ಎಂದು ಸಾಂದರ್ಭಿಕವಾಗಿ ನೀಡಿದ್ದ ಹೇಳಿಕೆ ಚಳವಳಿಗೆ ಕಾರಣವಾಗಿತ್ತು. ಹೀಗಾಗಿ 50 ವರ್ಷಗಳಲ್ಲಿ
ಸಮಾಜದ ದೃಷ್ಟಿಕೋನ ಹೇಗೆ ಬದಲಾಗಿದೆ ಎಂದು ಅರಿಯಬೇಕು’ ಎಂದರು.

‘ಮಲ ಹೊರುವ ಪದ್ಧತಿಯನ್ನು ಬಸವಲಿಂಗಪ್ಪ ಸಂವಿಧಾನಾತ್ಮಕವಾಗಿ ನಿಷೇಧಿಸಲು ಶ್ರಮಿಸಿದ್ದರು. ಅಂಥ ವ್ಯಕ್ತಿ ಸಾಂಸ್ಕೃತಿಕ ಲೋಕದಲ್ಲಿ ಮೂಡಿಸಿದ್ದ ತಲ್ಲಣ ಸದಾ ಸ್ಮರಣೀಯ. ಅಂದು ಪರ, ವಿರೋಧ ಹೋರಾಟದಲ್ಲಿ ಭಾಗಿಯಾದ ಅನೇಕರು ರಾಜಕೀಯದಲ್ಲಿ ಗುರುತಿಸಿಕೊಂಡಿದ್ದಾರೆ. ಒಟ್ಟಿನಲ್ಲಿ ಚಳವಳಿಯೊಂದು ಮುಂದಿನ ಅನೇಕ ವರ್ಷಗಳ ಕಾಲ ನಾಯಕರನ್ನು ಹುಟ್ಟುಹಾಕಿತ್ತು’ ಎಂದು ಸ್ಮರಿಸಿಕೊಂಡರು.

ಪತ್ರಕರ್ತ ಇಂದೂಧರ ಹೊನ್ನಾಪುರ ಮಾತನಾಡಿ, ‘ಕನ್ನಡ ಸಾಹಿತ್ಯವೆಲ್ಲಾ ಶ್ರೇಷ್ಠವಲ್ಲ, ಅದರಲ್ಲೂ ಬೂಸಾ ಇದೆ ಎಂಬುದು ಚಳವಳಿಯಾಗಬೇಕಾದ ಹೇಳಿಕೆಯಾಗಿರಲಿಲ್ಲ. ಬಸವಲಿಂಗಪ್ಪ ಅವರು ಧರ್ಮ, ದೇವರ ವಿರುದ್ಧ ಹೇಳಿಕೆಯನ್ನು ಸಾರ್ವಜನಿಕವಾಗಿ ನೀಡುತ್ತಿದ್ದರಿಂದ ಅವರನ್ನು ಹಿಮ್ಮೆಟ್ಟಿಸಲು ಬಳಸಿದ ಅಸ್ತ್ರ
ವಾಗಿತ್ತು. ಹೀಗಾಗಿ ಅದು ಸಾಹಿತ್ಯದ ಪ್ರತಿರೋಧವಾಗದೆ, ಜಾತಿ ಜಗಳವಾಗಿ ಹೊರಬಂತು’ ಎಂದು ಹೇಳಿದರು.

ರಾಜ್ಯ ರೈತ ಸಂಘದ ನಾಯಕಿ ಸುನಂದಾ ಜಯರಾಮ್‌, ಒಡಲು ಟ್ರಸ್ಟ್‌ ಅಧ್ಯಕ್ಷ ಆರ್‌.ಎಸ್‌.ದೊಡ್ಡಣ್ಣ,
ಕಾರ್ಯದರ್ಶಿ ಕೆ.ಎನ್‌.ಶಿವಲಿಂಗಯ್ಯ, ಸಂಶೋಧಕರ ಸಂಘದ ಅಧ್ಯಕ್ಷ ರಾಜೇಶ್‌ ಚಾಕನಹಳ್ಳಿ
ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT