ಬುಧವಾರ, 17 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜಕೀಯ ಭಾಷಣ: ವಸಂತಕುಮಾರ್ ಎತ್ತಂಗಡಿ

Published 17 ಫೆಬ್ರುವರಿ 2024, 16:13 IST
Last Updated 17 ಫೆಬ್ರುವರಿ 2024, 16:13 IST
ಅಕ್ಷರ ಗಾತ್ರ

ಬೆಂಗಳೂರು: ರಾಜಕೀಯ, ಚುನಾವಣಾ ಫಲಿತಾಂಶದ ಬಗ್ಗೆ ಮಾತನಾಡಿದ ಆರೋಪದ ಮೇಲೆ ಮೈಸೂರು ಮಹಾರಾಣಿ ಮಹಿಳಾ ಕಾಲೇಜು ಪ್ರಾಂಶುಪಾಲರಾಗಿದ್ದ ಬಿ.ವಿ.ವಸಂತಕುಮಾರ್ ಅವರನ್ನು ಹುದ್ದೆಯಿಂದ ಬಿಡುಗಡೆ ಮಾಡಲಾಗಿದೆ.

ಈ ಕುರಿತು ಮೈಸೂರು ಪ್ರಾದೇಶಿಕ ಕಚೇರಿ ಜಂಟಿ ನಿರ್ದೇಶಕರಿಗೆ ಲಿಖಿತ ಸೂಚನೆ ನೀಡಿರುವ ಕಾಲೇಜು ಶಿಕ್ಷಣ ಇಲಾಖೆ ಮುಖ್ಯ ಆಡಳಿತಾಧಿಕಾರಿ, ತಕ್ಷಣ ಅವರನ್ನು ಪ್ರಾಂಶುಪಾಲರ ಜವಾಬ್ದಾರಿಯಿಂದ ಬಿಡುಗಡೆ ಮಾಡಬೇಕು. ಅವರ ಸ್ಥಾನಕ್ಕೆ ಕಾಲೇಜಿನಲ್ಲಿ ಸೇವಾ ಜ್ಯೇಷ್ಠತೆ ಹೊಂದಿರುವ ಹಿರಿಯ ಪ್ರಾಧ್ಯಾಪಕರಿಗೆ ಪ್ರಭಾರ ವಹಿಸಬೇಕು ಎಂದು ಸೂಚಿಸಿದ್ದಾರೆ.

ಕಾಲೇಜಿನ ಪರಿಶಿಷ್ಟ ಜಾತಿ ಮತ್ತು ಪಂಗಡದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ಹಾಗೂ ಹಾಸ್ಟೆಲ್‌ನ ₹10 ಲಕ್ಷಕ್ಕೂ ಹೆಚ್ಚು ಹಣ ದುರುಪಯೋಗ ಮಾಡಲಾಗಿದೆ ಎಂಬ ಆರೋಪವು ಅವರ ಮೇಲಿದೆ. 

‘ವಿದ್ಯಾರ್ಥಿವೇತನದ ಹಣ ದುರುಪಯೋಗವಾಗಿಲ್ಲ. 2014–15ರಿಂದ 2018–19ನೇ ಸಾಲಿನವರೆಗೆ 472 ವಿದ್ಯಾರ್ಥಿಗಳು ವಿದ್ಯಾರ್ಥಿ ವೇತನ ಪಡೆದಿರಲಿಲ್ಲ.ತಾವು ಪ್ರಾಂಶುಪಾಲರಾದ ನಂತರ ವಿದ್ಯಾರ್ಥಿ ವೇತನ ಪಡೆಯದ ವಿದ್ಯಾರ್ಥಿಗಳಿಗೆ ಪತ್ರ ಬರೆಯಲಾಗಿತ್ತು. ಅವರಲ್ಲಿ 51 ವಿದ್ಯಾರ್ಥಿಗಳಿಗೆ ₹72,386 ಪಾವತಿಸಲಾಗಿದೆ. ಬಾಕಿ ₹11.50 ಲಕ್ಷ ಖಾತೆಯಲ್ಲೇ ಇದೆ’ ಎಂದು ವಸಂತಕುಮಾರ್ ಅವರು ಇಲಾಖೆ ಆಯುಕ್ತರಿಗೆ ಉತ್ತರ ನೀಡಿದ್ದರು. 

ಬಿಜೆಪಿಯ ವಿದ್ಯಾರ್ಥಿ ಸಂಘಟನೆ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ವಸಂತಕುಮಾರ್, ಬಿಜೆಪಿ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

‘ಆರೋಪ ನಿರಾಧಾರ’

‘ವಿದ್ಯಾರ್ಥಿ ವೇತನ ಉಳಿಕೆ ಹಾಸ್ಟೆಲ್‌ ಹಣದ ವಿಚಾರಕ್ಕೂ ನನಗೂ ಸಂಬಂಧವಿಲ್ಲ. ಲೆಕ್ಕಪರಿಶೋಧಕರು ಆಕ್ಷೇಪಣೆ ಮಾಡಿರುವುದು 2018ರಲ್ಲಿ. ನಾನು ಪ್ರಾಂಶುಪಾಲರ ಜವಾಬ್ದಾರಿ ವಹಿಸಿಕೊಂಡಿದ್ದು ಮಾರ್ಚ್‌ 2023. ಅಲ್ಲದೇ ಇಲಾಖೆ ಉಲ್ಲೇಖಿಸಿದಂತೆ ರಾಜಕೀಯ ಭಾಷಣ ಮಾಡಿಲ್ಲ. ಅದು ಪತ್ರಿಕೆಗೆ ಬರೆದ ಶಿಕ್ಷಣ ಕುರಿತ ಲೇಖನ. ಹಾಗಾಗಿ ಆರೋಪ ನಿರಾಧಾರ’ ಎಂದು ವಸಂತಕುಮಾರ್ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT