ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೈಸೂರು: ಎರಡೂ ಕೈಯಲ್ಲಿ ಬರೆಯುವ ಬಾಲೆ, ವಿವಿಧೆಡೆ ಪ್ರದರ್ಶನ

ಆ್ಯಂಬಿಡೆಕ್ಸ್‌ಟ್ರಸ್‌ ಕೌಶಲದ ಪುಟಾಣಿ
Published 5 ಮೇ 2024, 6:48 IST
Last Updated 5 ಮೇ 2024, 6:48 IST
ಅಕ್ಷರ ಗಾತ್ರ

ಮೈಸೂರು: ಇಲ್ಲಿನ ದೇವರಾಜ ಮೊಹಲ್ಲಾ ನಿವಾಸಿ, ಪುಟಾಣಿ ಎ.ಚಿರಸ್ವಿ ಬಾಲಸುಬ್ರಮಣಿಯನ್‌ ಎರಡೂ ಕೈಗಳಿಂದ ಬರೆಯುವ ಅದ್ಭುತ ಸಾಮರ್ಥ್ಯ ಹೊಂದಿದ್ದು, ವೇಗದ ಬರವಣಿಗೆಗಾಗಿ ದಾಖಲೆಯನ್ನೂ ಮಾಡಿದ್ದಾರೆ.

ಆ್ಯಂಬಿಡೆಕ್ಸ್‌ಟ್ರಸ್‌ (ಇರ್ಕ್ಕೈ ಕುಶಲ) ಎಂದರೆ ಬಲ ಮತ್ತು ಎಡಗೈ ಎರಡನ್ನೂ ಸಮಾನವಾಗಿ ಬಳಸುವ ಸಾಮರ್ಥ್ಯ. ಇದು ಜಗತ್ತಿನ ಶೇ 1ರಷ್ಟು ಮಂದಿಯಲ್ಲಿದ್ದರೂ ಅದನ್ನು ರೂಢಿಸಿಕೊಂಡು ಸಾಧನೆಯ ದಾರಿಯತ್ತ ಸಾಗುವವರು ಕಡಿಮೆ. ಅದರಲ್ಲೂ, ಈಗ ತಾನೇ ಒಂದನೇ ತರಗತಿಗೆ ಕಾಲಿಟ್ಟಿರುವ, ಆರೂವರೆ ವರ್ಷದ ಚಿರಸ್ವಿ ತನ್ನ ಸಾಧನೆ ಮೂಲಕ ಎಲ್ಲರನ್ನೂ ನಿಬ್ಬೆರಗಾಗಿಸಿದ್ದಾಳೆ.

ಇಂಡಿಯಾಸ್‌ ವರ್ಲ್ಡ್‌ ಬುಕ್‌ ರೆಕಾರ್ಡ್ಸ್‌ನಲ್ಲಿ ‘ಎರಡೂ ಕೈಗಳ ಬರವಣಿಗೆ ಕೌಶಲ ಹೊಂದಿರುವ ಕಿರಿಯ ಮಗು’ ಎಂಬ ಹೆಸರು ಪಡೆದಿದ್ದಾಳೆ. ಕಳೆದ ಏಪ್ರಿಲ್‌ನಲ್ಲಿ ಇಂಗ್ಲಿಷ್‌ನ 100 ಪದಗಳನ್ನು ಏಕಕಾಲದಲ್ಲಿ 14 ನಿಮಿಷ 15 ಸೆಕೆಂಡ್‌ಗಳಲ್ಲಿ ಬರೆದು ಚೆನ್ನೈನ ಕಲಾಂಸ್‌ ವರ್ಲ್ಡ್‌ ರೆಕಾರ್ಡ್ಸ್‌ನಲ್ಲೂ ದಾಖಲೆ ಸೃಷ್ಟಿಸಿದ್ದಾರೆ. ಪ್ರಶಸ್ತಿಗಳು ಸಂದಿವೆ.

‘ಮಗಳು ಬರವಣಿಗೆ ಆರಂಭಿಸಿದಾಗಲೇ ಎರಡು ಕೈಗಳಲ್ಲಿ ಬರೆಯಲು ಪ್ರಯತ್ನಿಸಿದಳು. ಇಂದು ಕನ್ನಡ ವರ್ಣಮಾಲೆ, ಇಂಗ್ಲಿಷ್‌ ಸಣ್ಣ ಅಕ್ಷರಗಳ ವರ್ಣಮಾಲೆಯನ್ನು ಕೇವಲ 1 ನಿಮಿಷದಲ್ಲಿ 50ರಿಂದ 1ರವರೆಗಿನ ಸಂಖ್ಯೆಗಳನ್ನು 1.26 ನಿಮಿಷದಲ್ಲೇ ಬರೆಯುತ್ತಾಳೆ’ ಎಂದು ಆಕೆಯ ತಂದೆ, ಆರ್‌ಬಿಐ ಉದ್ಯೋಗಿ ಎ.ವಿ.ಬಾಲಸುಬ್ರಮಣಿಯನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸದ್ಯ ಎರಡೂ ಕೈಗಳಲ್ಲಿ ಒಂದೇ ರೀತಿಯ ಬರವಣಿಗೆ ನಡೆಯುತ್ತಿದೆ. ಒಂದು ಕೈಯಲ್ಲಿ ಇಂಗ್ಲಿಷ್‌, ಮತ್ತೊಂದು ಕೈಯಲ್ಲಿ ಕನ್ನಡ ಬರವಣಿಗೆ ಕಲಿಯುತ್ತಿದ್ದಾಳೆ. ಒಂದರಲ್ಲಿ ಪದಗಳು, ಮತ್ತೊಂದರಲ್ಲಿ ಅದಕ್ಕೆ ಸಂಬಂಧಿಸಿದ ಚಿತ್ರಗಳ ರಚನೆಯೂ ನಡೆಯುತ್ತಿದೆ. ಆಕೆಗೆ ಉತ್ತಮ ತರಬೇತಿ ಕೊಡಿಸುವ ಆಸೆಯಿದೆ. ಆದರೆ, ಸೂಕ್ತ ತರಬೇತಿ ಸಂಸ್ಥೆಗಳೇ ಕಾಣುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಚಿರಸ್ವಿ ಹಲವು ಶಾಲೆಗಳಲ್ಲಿ ಕೌಶಲ ಪ್ರದರ್ಶಿಸಿದ್ದು, ಮೈಬಿಲ್ಡ್ ಎಕ್ಸ್‌ಪೋ, ರಂಗಾಯಣದ ಚಿಣ್ಣರ ಮೇಳ, ಕಲಾಸುರುಚಿ ಬೇಸಿಗೆ ಶಿಬಿರಗಳಲ್ಲಿ ಮಕ್ಕಳಿಗೆ ಬರವಣಿಗೆ ಕೌಶಲದ ಅಗತ್ಯದ ಬಗ್ಗೆ ತಿಳಿಸಿದ್ದಾಳೆ.

‘ಎರಡೂ ಕೈಗಳಲ್ಲಿ ಬರೆಯುವುದರಿಂದ ಮಿದುಳಿನ ಎಡ ಮತ್ತು ಬಲ ಭಾಗಗಳೆರಡೂ ಚುರುಕಾಗಿ ಕಾರ್ಯನಿರ್ವಹಿಸುತ್ತವೆ. ಹಾಗಾಗಿ, ಮಗಳ ಕಲೆಯನ್ನು ವಿವಿಧ ವೇದಿಕೆಗಳಲ್ಲಿ ಪ್ರದರ್ಶಿಸುವಂತೆ ಪ್ರೋತ್ಸಾಹಿಸುತ್ತಿದ್ದೇನೆ. ಪತ್ನಿ, ಶಿಕ್ಷಕಿ ಕೆ.ಆರ್‌.ಕವಿತಾ ಅವರ ಸಹಕಾರದಿಂದ ನೃತ್ಯ, ಸಂಗೀತದ ಕಲಿಕೆಯಲ್ಲೂ ಮಗಳು ಚುರುಕಿದ್ದಾಳೆ’ ಎಂದು ಸಂತಸ ವ್ಯಕ್ತಪಡಿಸಿದರು.

ಕಲಾಂಸ್‌ ವರ್ಡ್‌ ರೆಕಾರ್ಡ್‌ನೊಂದಿಗೆ ಎ.ಚಿರಸ್ವಿ ಬಾಲಸುಬ್ರಹ್ಮಣಿಯನ್‌
ಕಲಾಂಸ್‌ ವರ್ಡ್‌ ರೆಕಾರ್ಡ್‌ನೊಂದಿಗೆ ಎ.ಚಿರಸ್ವಿ ಬಾಲಸುಬ್ರಹ್ಮಣಿಯನ್‌

ಬರವಣಿಗೆ ಕಲಿಕೆಗೆ ಶಾಲೆ

ಮಧ್ಯಪ್ರದೇಶದ ಸಿಂಗ್ರೌಲಿ ಜಿಲ್ಲೆಯ ವೀಣಾ ವಾದಿನಿ ಶಾಲೆಯಲ್ಲಿ ಎರಡೂ ಕೈಗಳಲ್ಲೂ ಬರೆಯುವ ಕೌಶಲವನ್ನು ಕಲಿಸಲಾಗುತ್ತದೆ. ಇಲ್ಲಿ ನೂರಾರು ವಿದ್ಯಾರ್ಥಿಗಳು ವಿವಿಧ ಭಾಷೆಗಳನ್ನು ಬರೆಯುವುದನ್ನೂ ಕಲಿಯುತ್ತಿದ್ದು ಬರವಣಿಗೆ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ. ಇದೇ ಕೌಶಲ ಹೊಂದಿದ್ದ ಭಾರತದ ಮೊದಲ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರಿಂದ ಸ್ಫೂರ್ತಿ ಪಡೆದಿದ್ದ ಮಾಜಿ ಸೈನಿಕ ಬಿ.ಪಿ.ಶರ್ಮಾ ಅವರು ಈ ಶಾಲೆಯನ್ನು ಆರಂಭಿಸಿದ್ದಾರೆ. ಸುಪ್ರಸಿದ್ಧ ಆಲ್ಬರ್ಟ್ ಐನ್‌ಸ್ಟೈನ್ ಬೆಂಜಮಿನ್ ಫ್ರಾಂಕ್ಲಿನ್ ನಿಕೋಲಾ ಟೆಸ್ಲಾ ಜೇಮ್ಸ್ ಎ. ಗಾರ್ಫೀಲ್ಡ್ ಮತ್ತು ಲಿಯೊನಾರ್ಡೊ ಡಾ ವಿಂಚಿ ಕೂಡ ಎರಡೂ ಕೈಯಿಂದ ಬರೆಯಬಲ್ಲವರಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT