ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣ ಸಮಸ್ಯೆಯಲ್ಲೂ ‘ಚಿರಾಯು’ ಸಾಧನೆ!

ಕೆಎಸ್‌ಸಿಎ ಅಂತರ ಜಿಲ್ಲಾ ಟೂರ್ನಿಗಳಲ್ಲಿ ರನ್‌ ಹರಿಸಿದ ಚತುರ
Published 24 ಜನವರಿ 2024, 5:32 IST
Last Updated 24 ಜನವರಿ 2024, 5:32 IST
ಅಕ್ಷರ ಗಾತ್ರ

ಮೈಸೂರು: ಚಿರಾಯುವಿಗೆ ಕಿವಿ ಕೇಳುವುದಿಲ್ಲ. ಆದರೆ, ಬ್ಯಾಟ್‌ ಬೀಸಿದರೆ ರನ್‌ಗಳು ಹರಿದು ಬರುತ್ತವೆ! 

ಕೆಎಸ್‌ಸಿಎ ಮೈಸೂರು ವಲಯ ಮಟ್ಟದ 14 ವರ್ಷದೊಳಗಿನ 10 ಅಂತರ ಜಿಲ್ಲಾ ಪಂದ್ಯಗಳನ್ನು ಆಡಿರುವ ಚಿರಾಯು, ಮೈಸೂರು ತಂಡದ ಪರ ಶತಕ (ಅಜೇಯ 121 ರನ್‌) ಸಾಧನೆ ಜೊತೆಗೆ 6 ಅರ್ಧ ಶತಕ ಸಿಡಿಸಿದ್ದಾನೆ. 12 ವರ್ಷದ ಈ ಬಲಗೈ ಬ್ಯಾಟರ್‌, ವಿಕೆಟ್‌ ಕೀಪಿಂಗ್‌ನಲ್ಲೂ ಸೈ ಎನಿಸಿಕೊಂಡಿದ್ದಾನೆ.

ನಗರದ ಮಹಾರಾಜ ಕಾಲೇಜಿನ ‘ಮೈಸೂರು ಕ್ರಿಕೆಟ್‌ ಕ್ಲಬ್‌’ನಲ್ಲಿ ನಿತ್ಯ ಬೆಳಿಗ್ಗೆ 2 ಗಂಟೆ ಅಭ್ಯಾಸ ನಡೆಸುವ ಚಿರಾಯುಗೆ, ಕಿವಿ ಶೇ 70ರಷ್ಟು ಕೇಳುವುದಿಲ್ಲ. ಶ್ರವಣ ಸಾಧನದ ನೆರವಿನೊಂದಿಗೆ ನಗರದ ಪ್ರಾದೇಶಿಕ ಶಿಕ್ಷಣ ಸಂಸ್ಥೆ ಆವರಣದಲ್ಲಿರುವ ಡಿಎಂಎಸ್‌ ಶಾಲೆಯಲ್ಲಿ 6ನೇ ತರಗತಿ ಓದುತ್ತಿದ್ದಾನೆ. 

ಮಗನ ಸಾಧನೆಗೆ ವೀರೇಶ್‌ ಬಿ. ಕೊಣ್ಣೂರು– ದೇವಮ್ಮ ದಂಪತಿ ನೆರವಾಗಿದ್ದಾರೆ. ಮಗನನ್ನು ಕ್ರಿಕೆಟ್‌ ಕಿಟ್‌ ಜೊತೆಗೆ ಟಿ.ಕೆ.ಬಡಾವಣೆಯಿಂದ ಮಹಾರಾಜ ಕಾಲೇಜು ಮೈದಾನಕ್ಕೆ ನಿತ್ಯ ಕರೆದೊಯ್ಯುತ್ತಾರೆ. ಇದೀಗ ಅಂತರ ವಲಯ ಟೂರ್ನಿಗಳಲ್ಲಿ ಅವಕಾಶ ಗಿಟ್ಟಿಸಲು ಕಠಿಣ ಅಭ್ಯಾಸ ನಡೆಸಿರುವ ಅವನಿಗೆ, ಭಾರತ ಕ್ರಿಕೆಟ್‌ ತಂಡವನ್ನು ಪ್ರತಿನಿಧಿಸುವ ಕನಸಿದೆ. 

‘ಮಗ ಒಂದು ವರ್ಷದವನಿದ್ದಾಗ ಶ್ರವಣ ಸಮಸ್ಯೆಯ ಚಿಕಿತ್ಸೆಗಾಗಿ ಉತ್ತರ ಕನ್ನಡ ಜಿಲ್ಲೆಯ ಕುಮಟಾದಿಂದ ಬಂದೆವು. ಅಖಿಲ ಭಾರತ ವಾಕ್‌ ಮತ್ತು ಶ್ರವಣ ಸಂಸ್ಥೆಯಲ್ಲಿ 4 ವರ್ಷ ಚಿಕಿತ್ಸೆ ಕೊಡಿಸಿದೆವು. ಎಲ್ಲ ಮಕ್ಕಳಂತೆ ಶಾಲೆಯಲ್ಲಿ ಕಲಿಯುತ್ತಿದ್ದಾನೆ’ ಎನ್ನುತ್ತಾರೆ ವೀರೇಶ್‌.

‘ಕೋವಿಡ್‌ ವೇಳೆ ಶಾಲೆಗೆ ರಜೆಯಿತ್ತು. ಮನೆಯಲ್ಲಿ ಸದಾ ಚಟುವಟಿಕೆಯಿಂದ ಇರುತ್ತಿದ್ದುದರಿಂದ ಕ್ರಿಕೆಟ್‌ ಆಡಿಸಲು ನಿತ್ಯ ಮಾನಸ ಗಂಗೋತ್ರಿ ಗ್ಲೇಡ್ಸ್ ಪಕ್ಕದಲ್ಲಿರುವ ಮೈದಾನಕ್ಕೆ ಕರೆದೊಯ್ಯುತ್ತಿದ್ದೆ. ನಂತರ ಖಾಲಿ ಇದ್ದ ಮಹಾರಾಜ ಕಾಲೇಜು ಮೈದಾನದ ಕ್ರಿಕೆಟ್‌ ನೆಟ್‌ಗಳಲ್ಲಿ ಅಭ್ಯಾಸ ಮಾಡಿಸುತ್ತಿದ್ದೆ’ ಎಂದರು.

‘ಅಲ್ಲಿ ಆಟ ನೋಡಿದ ಮೈಸೂರು ಕ್ರಿಕೆಟ್‌ ಕ್ಲಬ್‌ನ ಅಶೋಕ್‌ ಹಾಗೂ ಸುಹಾಸ್‌ ಅಯ್ಯರ್‌, ‘ಚೆನ್ನಾಗಿ ಆಡುತ್ತಾನೆ. ತರಬೇತಿ ಕೊಡಿಸಿ’ ಎಂದಿದ್ದರು. ಮಗನಿಗಿದ್ದ ಸಮಸ್ಯೆ ಹೇಳಿಕೊಂಡಾಗ, ಕ್ರಿಕೆಟ್‌ನಲ್ಲಿ ಸಹ್ನೆಯಿಂದಲೇ ಎಲ್ಲವೂ ನಡೆಯುತ್ತವೆ. ಅಲ್ಲಿ ಯಾರಾದರೂ ಮಾತನಾಡುತ್ತಾರೆಯೇ? ರಾಷ್ಟ್ರೀಯ ತಂಡದಲ್ಲೂ ಆಡಬಹುದೆಂದು ಪ್ರೋತ್ಸಾಹಿಸಿದರು. ಪ್ರತಿ ಶನಿವಾರ, ಭಾನುವಾರ ಜಾವಗಲ್‌ ಶ್ರೀನಾಥ್‌ ಅವರೊಂದಿಗೆ ಆಡಿದ್ದ ಸುಂದರೇಶನ್‌ ಅಯ್ಯರ್‌ ಕೂಡ ಕೋಚಿಂಗ್‌ ನೀಡುತ್ತಿದ್ದಾರೆ’ ಎಂದರು.

‘ಕಳೆದ ಡಿಸೆಂಬರ್‌ನಲ್ಲಿ ಕೆಎಸ್‌ಸಿಎ ವಲಯ ಮಟ್ಟದ 14 ವರ್ಷದೊಳಗಿನ ಕ್ರಿಕೆಟ್‌ ಅಂತರ ಜಿಲ್ಲಾ ಕ್ರಿಕೆಟ್‌ ಟೂರ್ನಿಗೆ ಆಯ್ಕೆಯಾಗಿದ್ದ. ಟೂರ್ನಿಯಲ್ಲಿ ವಿವಿಧ ಜಿಲ್ಲಾ ತಂಡಗಳ ವಿರುದ್ಧ 68, 49, 50, 76, 57 ಹಾಗೂ ಅಜೇಯ 121 ರನ್‌ಗಳಿಸಿದ. ಆದರೆ, ವಲಯ ತಂಡದಲ್ಲಿ ಸ್ಥಾನ ಪಡೆಯಲಾಗಲಿಲ್ಲ’ ಎಂದರು.

‘ಕ್ಲಬ್‌ನಲ್ಲಿ 135 ಮಕ್ಕಳು ಅಭ್ಯಾಸ ನಡೆಸುತ್ತಿದ್ದಾರೆ. ಅವರೆಲ್ಲರಿಗೂ ಚಿರಾಯು ಮೆಚ್ಚು. 12 ವರ್ಷದ ಆತನ ಚೆನ್ನಾಗಿ ಆಡುತ್ತಾನೆ ಎನ್ನುತ್ತಾರೆ. ಆಟದಷ್ಟೇ ಪಾಠದಲ್ಲೂ ಆಸಕ್ತಿಯಿದೆ. ಅಣ್ಣ ಚಿನ್ಮಯ್‌ಗೂ ಶ್ರವಣ ಸಮಸ್ಯೆಯಿದೆ. ಇದೀಗ ಮೈಸೂರು ಸ್ಕೂಲ್‌ ಆಫ್‌ ಆರ್ಕಿಟೆಕ್ಚರ್‌ನಲ್ಲಿ ‍ಪದವಿ ಓದುತ್ತಿದ್ದಾನೆ. ಅಣ್ಣನಂತೆಯೇ ತಮ್ಮನೂ ಸಾಧನೆ ಮಾಡಲಿದ್ದಾನೆ’ ಎಂದರು.

ವೀರೇಶ್‌, ನಗರದ ಜಿಲ್ಲಾ ನ್ಯಾಯಾಲಯದಲ್ಲಿ ನೌಕರರಾಗಿದ್ದರೆ, ದೇವಮ್ಮ ‘ಪೇರೆಂಟ್ಸ್‌ ಅಸೋಸಿಯೇಷನ್‌ ಆಫ್‌ ಡೆಫ್‌ ಚಿಲ್ಡ್ರನ್‌’ ಸಂಸ್ಥೆಯಲ್ಲಿ ಶಿಕ್ಷಕಿ. ಮೂಕ ಹಾಗೂ ಕಿವುಡು ಮಕ್ಕಳು ಹಾಗೂ ತಾಯಂದಿರಿಗೆ ತರಬೇತಿ ನೀಡುತ್ತಿದ್ದಾರೆ. ಮಕ್ಕಳ ಚಿಕಿತ್ಸೆಗಾಗಿ ಮೈಸೂರಿಗೆ ಬಂದವರು, ನೂರಾರು ಮಕ್ಕಳ ತಾಯಂದಿರಿಗೆ ನೆರವಾಗಿದ್ದಾರೆ.       

- ಕ್ರಿಕೆಟ್‌ ಎಲ್ಲವನ್ನೂ ಮರೆಸುತ್ತದೆ. ಖುಷಿಯಿಂದ ಆಡುತ್ತೇನೆ. ಭಾರತ ತಂಡದ ಅತ್ಯುತ್ತಮ ವಿಕೆಟ್‌ ಕೀಪರ್‌–ಬ್ಯಾಟರ್‌ ಆಗಬೇಕು ಚಿರಾಯು

- ವಲಯ ಮಟ್ಟದ ತಂಡದ ಆಯ್ಕೆಯಲ್ಲಿ ಸ್ಪರ್ಧೆ ಹೆಚ್ಚಿತ್ತು. ಅಲ್ಲದೇ 12 ವರ್ಷವಾಗಿದ್ದರಿಂದ ಸಿಗಲಿಲ್ಲ. ಮೂರೇ ವರ್ಷದಲ್ಲಿ ಜಿಲ್ಲಾ ತಂಡ ಪ್ರತಿನಿಧಿಸಿದ. ರಾಜ್ಯ ರಾಷ್ಟ್ರ ತಂಡದಲ್ಲೂ ಸ್ಥಾನ ಪಡೆಯುವ ಭರವಸೆ ಇದೆ

-ವೀರೇಶ್‌ ಬಿ.ಕೊಣ್ಣೂರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT