ಮೈಸೂರು: ಕೆ.ಆರ್.ಆಸ್ಪತ್ರೆಗೆ ಮುಖ್ಯದ್ವಾರದ ಮೂಲಕ ಪ್ರವೇಶಿಸಿದ ಕೂಡಲೇ ಶುದ್ಧ ಕುಡಿಯುವ ನೀರಿನ ಘಟಕವೊಂದು ನಿಮ್ಮ ಕಣ್ಣಿಗೆ ಬೀಳುತ್ತದೆ. ಆದರೆ ಅಲ್ಲಿನ ನೀರು ಕುಡಿಯಲು ಯೋಗ್ಯವಿಲ್ಲ ಬೇರೆ ಕಡೆ ತೆಗೆದುಕೊಳ್ಳಿ ಎಂದು ಅಲ್ಲಿನ ಸಿಬ್ಬಂದಿಯೇ ಎಚ್ಚರಿಸುತ್ತಾರೆ.
ಆಸ್ಪತ್ರೆಗೆ ಬರುವವರಿಗೆ ಮೂಲ ಸೌಕರ್ಯ ಒದಗಿಸುವುದು ಆಡಳಿತ ಮಂಡಳಿಯ ಕರ್ತವ್ಯ. ಆದರೆ ಇಲ್ಲಿ ಸುತ್ತಲೂ ಹುಡುಕಿದರೂ ಎಲ್ಲೂ ನೀರಿನ ಘಟಕ ಸಿಗುವುದಿಲ್ಲ. ಧನ್ವಂತರಿ ಕಟ್ಟಡ ಹಾಗೂ ಹಳೆಯ ಜಯದೇವ ಕಟ್ಟಡದ ಬಳಿಯಿರುವ ಕ್ಯಾಂಟೀನ್‌ಗಳಿಂದ ಬಾಟಲಿಯಲ್ಲಿ ನೀರು ತುಂಬಿಸಿಕೊಳ್ಳಬೇಕಾದ ಅನಿವಾರ್ಯತೆಯಿದೆ.
ಆವರಣದಲ್ಲಿ ‘ಭಗವಾನ್ ಮಹಾವೀರ್ ವಾಟರ್ ಸೆಂಟರ್’ ಎಂಬ ಫಲಕವುಳ್ಳ ಶುದ್ದ ಕುಡಿಯುವ ನೀರಿನ ಘಟಕವೊಂದು ಕಾಣಿಸುತ್ತದೆ. ಆದರೆ ಅದು ಬಳಸಲು ಯೋಗ್ಯವಾಗಿಲ್ಲ. ನಲ್ಲಿಗಳಲ್ಲಿ ನೀರು ಸುರಿಯುತ್ತಲೇ ಇದೆ. ಬೇಸಿನ್ ಸುತ್ತ ಶುಚಿತ್ವವಿಲ್ಲ, ಗೋಡೆಗಳು ಪಾಚಿ ಹಿಡಿದಿವೆ.
‘ಆ ನೀರು ಕುಡಿಯಬೇಡಿ. ಅದನ್ನು ತೊಳೆದು ಎಷ್ಟು ವರ್ಷವಾಯಿತೋ ತಿಳಿಯದು. ನಾವೇ ಬಳಸುವುದಿಲ್ಲ, ಯಾರದ್ರೋ ಕೇಳಿದ್ರೆ ಇಲ್ಲೇ ಪಕ್ಕದಲ್ಲಿರುವ ನಲ್ಲಿಯಿಂದ ನೀರು ತೆಗೆದುಕೊಳ್ಳಲು ತಿಳಿಸುತ್ತೇವೆ’ ಎಂದು ಭದ್ರತಾ ಸಿಬ್ಬಂದಿ ಒಬ್ಬರು ತಿಳಿಸಿದರು. ಅವರು ಕೈ ತೋರಿಸಿದೆಡೆಗೆ ನಡೆದರೆ ಅಲ್ಲೂ ಕುಡಿಯುವ ನೀರಿನ ಘಟಕ ಕಾಣಸಿಗುವುದಿಲ್ಲ.
ಈ ಟ್ಯಾಂಕ್‌ನ್ನು ಜೈನ್ ಯೂತ್ ಅಸೋಸಿಯೇಷನ್ ವತಿಯಿಂದ ಸುಮತಿನಾಥ್ ಜೈನ್ ಎಂಬುವರು ಕಟ್ಟಿಸಿದ್ದು, ಆಸ್ಪತ್ರೆಗೆ ಹಸ್ತಾಂತರಿಸಿದ್ದಾರೆ. ಹಾಗಿದ್ದರೆ ಇರುವ ಸೌಲಭ್ಯವನ್ನು ಉಳಿಸಿಕೊಂಡು ನಿರ್ವಹಣೆ ಮಾಡುವ ಜವಾಬ್ದಾರಿ ಯಾರದು ಎಂಬುದು ಯಕ್ಷ ಪ್ರಶ್ನೆಯಾಗಿ ಉಳಿದಿದೆ. ಅನೇಕ ರೋಗಗಳಿಗೆ ಅಶುದ್ಧ ನೀರು ಕಾರಣವಾಗುತ್ತದೆ ಎಂದು ವೈದ್ಯಕೀಯ ವಲಯವೇ ಅರಿವು ಮೂಡಿಸುತ್ತಿದ್ದು, ಅದೇ ಆಸ್ಪತ್ರೆಯಲ್ಲಿ ಈ ರೀತಿಯ ಪರಿಸ್ಥಿತಿ ಇರುವುದು ವಿಷಾದನೀಯ.
ನಿತ್ಯ ಸಾವಿರಾರು ರೋಗಿಗಳು ಈ ಆಸ್ಪತ್ರೆಗೆ ಬರುತ್ತಾರೆ. ಟ್ಯಾಂಕ್ ಮುಂಭಾಗ ನೀರು ಬಳಸಬಾರದು ಎನ್ನುವ ಸೂಚನಾ ಫಲಕ ಇಲ್ಲದೇ ಇರುವುದರಿಂದ ಇದೇ ಟ್ಯಾಂಕ್‌ನ್ನು ಬಳಸುವ ಸಾಧ್ಯತೆಯೂ ಇದೆ. ಪ್ರತೀ ಬಾರಿ ಅವರನ್ನು ತಡೆಯಲು ಸಿಬ್ಬಂದಿಗಳಿಂದ ಸಾಧ್ಯವೇ. ಇದರ ಮುಂಭಾಗದಲ್ಲೇ ವಾಹನ ಪಾರ್ಕ್ ಮಾಡಿ ಆಸ್ಪತ್ರೆಗೆ ತೆರಳುವ ವೈದ್ಯರೂ ಈ ಬಗ್ಗೆ ಮೌನ ವಹಿಸಿದ್ದಾರೆ.
‘ಮೂಲ ಸೌಕರ್ಯಗಳಲ್ಲೊಂದಾದ ಕುಡಿಯುವ ನೀರು ಸುಲಭವಾಗಿ ಜನರಿಗೆ ಸಿಗುವಂತೆ ವ್ಯವಸ್ಥೆಯಾಗಬೇಕು. ಹಳ್ಳಿಗಳಿಂದ ಬರುವ ಜನರ ಆರೋಗ್ಯ ರಕ್ಷಣೆ ಆಸ್ಪತ್ರೆಯ ಧ್ಯೇಯವಾಗಿರಬೇಕು. ಹಿಗಾಗಿ ಅಲ್ಲಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಸಿ, ಅವುಗಳ ನಿರ್ವಹಣೆ ಮಾಡುವಂತಾಗಲಿ’ ಎಂಬುದು ಸಾರ್ವಜನಿಕರ ಆಗ್ರಹ.
‘ಹೊಸತಾಗಿ ಮೂರು ನೀರಿನ ಘಟಕ ನಿರ್ಮಾಣ ಮಾಡಲು ಯೋಜನೆ ರೂಪಿಸಲಾಗಿದೆ. ಸ್ಟೋನ್ ಬಿಲ್ಡಿಂಗ್ ಬಳಿ ಈಗಾಗಲೇ ಇರುವ ನೀರಿನ ಘಟಕ ಸರಿ ಪಡಿಸಲು ಎಂಜಿನಿಯರ್‌ಗಳಿಗೆ ಸೂಚಿಸಿದ್ದೇನೆ. ಚೆಲುವಾಂಬ ಆಸ್ಪತ್ರೆ ಬಳಿ ಕಂಪೆನಿಯೊಂದರ ಸಿಎಸ್‌ಆರ್ ನಿಧಿ ಮೂಲಕ ಹೊಸ ನೀರಿನ ಘಟಕ ನಿರ್ಮಿಸಲಾಗುವುದು. ವೈದ್ಯರ ಸಂಘಟನೆಯವರ ಮೂಲಕ ಕರ್ತವ್ಯನಿರತ ವೈದ್ಯರ ಕೊಠಡಿಗೆ 4 ವಾಟರ್ ಫಿಲ್ಟರ್ ಅಳವಡಿಸುತ್ತಿದ್ದೇವೆ’ ಎಂದು ಆಸ್ಪತ್ರೆಯ ಸೂಪರಿಂಟೆಂಡೆಂಟ್ ಶೋಭಾ ‘ಪ್ರಜಾವಾಣಿ’ಗೆ ತಿಳಿಸಿದರು.
Highlights - ನಲ್ಲಿಯಲ್ಲಿ ಪೋಲಾಗುತ್ತಿರುವ ನೀರು ನಿರ್ವಹಣೆಯಿಲ್ಲದೆ ಪಾಳುಬಿದ್ದ ನೀರಿನ ಘಟಕ ನೀರು ಹುಡುಕಲು ಹರಸಾಹಸ
Cut-off box - ಕುಡಿಯುವ ನೀರಿನ ಘಟಕಗಳೇ ವಿರಳ ಬೃಹತ್ತಾಗಿರುವ ಆಸ್ಪತ್ರೆಯ ಆವರಣದಲ್ಲಿ ಕುಡಿಯುವ ನೀರಿನ ಘಟಕಗಳೇ ವಿರಳವಾಗಿವೆ. ಸಿಬ್ಬಂದಿ ಇಲ್ಲಿ ಮೂರು ಘಟಕಗಳಿವೆ ಎಂದು ತಿಳಿಸುತ್ತಾರೆ. ಆದರೆ ಅದು ಎಲ್ಲಿದೆ ಎಂದು ಹುಡುಕುವುದಕ್ಕಾಗಿಯೇ ದಣಿವು ಹೆಚ್ಚಿಸಿಕೊಳ್ಳಬೇಕಾಗುತ್ತದೆ. ಅಲ್ಲಿನ ಸಿಬ್ಬಂದಿಯಿಂದ ‘ಓ ಅಲ್ಲೇ ಇದೆ’ ಎಂಬ ಉತ್ತರಗಳಷ್ಟೇ ಕೇಳಿಸುತ್ತದೆ. ಶಸ್ತ್ರಚಿಕಿತ್ಸೆ ನಡೆಯುವ ಸ್ಟೋನ್ ಬಿಲ್ಡಿಂಗ್ ಬಳಿ ಇರುವ ನೀರಿನ ಘಟಕವೂ ಕೆಟ್ಟು ಹೋಗಿದೆ. ಆಸ್ಪತ್ರೆಯಲ್ಲಿ ಹೆಚ್ಚಿನ ಕಡೆಗಳಲ್ಲಿ ಕುಡಿಯುವ ನೀರು ದೊರಕುವಂತೆ ವ್ಯವಸ್ಥೆ ಮಾಡಬೇಕಿದ್ದು ಇದಕ್ಕಾಗಿ ಸರ್ಕಾರಿ ವ್ಯವಸ್ಥೆಯೊಂದಿಗೆ ಖಾಸಗಿ ಸಂಘ ಸಂಸ್ಥೆಗಳೂ ಕೈ ಜೋಡಿಸಬಹುದಾಗಿದೆ.
Cut-off box - 50 ಸಿ.ಸಿ ಟಿವಿ ಕ್ಯಾಮೆರಾ ಅಳವಡಿಕೆ (ವರದಿ ಪರಿಣಾಮ) ‘ಪ್ರಜಾವಾಣಿ’ ಸರಣಿ ವರದಿಗೆ ಕೆ.ಆರ್. ಆಸ್ಪತ್ರೆ ಅಧಿಕಾರಿಗಳು ಸ್ಪಂದಿಸಿದ್ದು ಆಸ್ಪತ್ರೆ ಆವರಣದ ಸುತ್ತಲೂ ಸಿಸಿ ಟಿವಿ ಕ್ಯಾಮೆರಾ ಭದ್ರತೆ ಒದಗಿಸಲು ಕ್ರಮ ಕೈಗೊಂಡಿದ್ದಾರೆ. ‘ಒಟ್ಟು 94 ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಿದ್ದು ಮಂಗಳವಾರ 50 ಕ್ಯಾಮೆರಾ ಅಳವಡಿಸಲಾಗಿದೆ. ಚೆಲುವಾಂಬ ಆಸ್ಪತ್ರೆಯ ಮುಂಭಾಗ ಉಚಿತವಾಗಿ ಆಹಾರದ ಪೊಟ್ಟಣ ನೀಡುತ್ತಾರೆ. ಅದನ್ನು ಸ್ವೀಕರಿಸಿ ಕೆಲವರು ಪಾನಮತ್ತರಾಗಿ ಆಸ್ಪತ್ರೆ ಆವರಣದಲ್ಲಿ ರಾತ್ರಿ ಕಳೆಯುತ್ತಾರೆ. ಹೀಗಾಗಿ ಅಲ್ಲಿ ಆಹಾರ ವಿತರಣೆ ನಿಲ್ಲಿಸಲು ಸೂಚಿಸಲಾಗಿದೆ. ರಾತ್ರಿ ಸಮಯದಲ್ಲಿ ಪೊಲೀಸ್ ಬೀಟ್‌ಗೂ ಮನವಿ ಮಾಡಲಾಗಿದೆ. ಆಸ್ಪತ್ರೆ ಆವರಣದಲ್ಲಿ ಭದ್ರತೆ ಒದಗಿಸಲು ಪೊಲೀಸ್ ಆಯುಕ್ತರಿಗೆ ಪತ್ರ ಬರೆಯುತ್ತಿದ್ದೇವೆ’ ಎಂದು ಆಸ್ಪತ್ರೆಯ ಡೀನ್ ಡಾ.ಕೆ.ಆರ್.ದಾಕ್ಷಾಯಿಣಿ ‘ಪ್ರಜಾವಾಣಿ’ಗೆ ತಿಳಿಸಿದರು. ‘ಆಸ್ಪತ್ರೆ ಆವರಣಕ್ಕೆ ಅನಗತ್ಯ ಪ್ರವೇಶಿಸುವುದನ್ನು ತಡೆಯಲು ಮುಖ್ಯ ಗೇಟ್ ಮೂಲಕ ಮಾತ್ರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಿದ್ದೇವೆ. ಚೆಲುವಾಂಬ ಹಾಗೂ ಧನ್ವಂತರಿ ಕಟ್ಟಡದ ಕಡೆಯಿಂದ ಬರುವ ದಾರಿಗಳಲ್ಲಿ ಪ್ರವೇಶ ನಿಷೇಧಿಸುತ್ತೇವೆ. ಜನರ ಓಡಾಟ ಕಡಿಮೆ ಇರುವ ಪ್ರದೇಶಗಳಲ್ಲಿ 50 ಟ್ಯೂಬ್‌ಲೈಟ್ ಅಳವಡಿಸಿದ್ದೇವೆ’ ಎಂದು ಆಸ್ಪತ್ರೆಯ ಸೂಪರಿಡೆಂಟ್ ಶೋಭಾ ಹೇಳಿದರು. ಆಸ್ಪತ್ರೆಯಲ್ಲಿನ ಸಮಸ್ಯೆಗಳ ಬಗ್ಗೆ ಕೇಂದ್ರಿಕರಿಸಿ ‘ಕೆ.ಆರ್ ಆಸ್ಪತ್ರೆ– ಅವ್ಯವಸ್ಥೆ ದರ್ಶನ’ ಶೀರ್ಷಿಕೆಯಲ್ಲಿ ‘ಪ್ರಜಾವಾಣಿ’ ಸರಣಿ ಲೇಖನ ಪ್ರಕಟಿಸುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.