ಮೈಸೂರು: ‘ನಗರದಾದ್ಯಂತ ಇರುವ ರಸ್ತೆ ಗುಂಡಿಗಳನ್ನು ನಾಲ್ಕೈದು ದಿನಗಳೊಳಗೆ ಸಮರ್ಪಕವಾಗಿ ಮುಚ್ಚಬೇಕು. ಇದಕ್ಕಾಗಿ ಹಗಲು ರಾತ್ರಿ ಎನ್ನದೇ ಕೆಲಸ ಮಾಡಬೇಕು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಾಕೀತು ಮಾಡಿದರು.
ಇಲ್ಲಿ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ‘ವರ್ತುಲ ರಸ್ತೆಯಲ್ಲಿನ ಬೀದಿ ದೀಪಗಳ ಸಮಸ್ಯೆಗಳನ್ನು ತಕ್ಷಣವೇ ಸರಿಯಾಗಿ ದುರಸ್ತಿಪಡಿಸಬೇಕು’ ಎಂದು ಖಡಕ್ ಸೂಚನೆ ನೀಡಿದರು.
ವರ್ತುಲ ರಸ್ತೆಯುದ್ದಕ್ಕೂ ಸೇವಾ ರಸ್ತೆಯನ್ನು ನಿರ್ಮಿಸದಿರುವುದಕ್ಕೆ ತೀವ್ರ ಗರಂ ಆದ ಅವರು, ‘ಏಕೆ ಇದುವರೆಗೂ ಸರ್ವೀಸ್ ರಸ್ತೆ ಮಾಡಿಲ್ಲ?’ ಎಂದು ಕೇಳಿದರು.
‘ಸೇವಾ ರಸ್ತೆ ನಿರ್ಮಿಸಲು ಕಾನೂನು ತೊಡಕು (ಲಿಟಿಗೇಷನ್) ಇದೆ’ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ತಿಳಿಸಿದರು. ಇದಕ್ಕೆ ಗರಂ ಆದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ‘ಯಾವ ಲಿಟಿಗೇಷನ್ ಕೂಡ ಇಲ್ಲ. ನಾನು ಲೋಕೋಪಯೋಗಿ ಸಚಿವನಾಗಿದ್ದಾಗಲೇ ಎಲ್ಲವನ್ನೂ ಬಗೆಹರಿಸಲಾಗಿದೆ. ಮೊದಲು ಕೆಲಸ ಪ್ರಾರಂಭಿಸಿ’ ಎಂದು ತಾಕೀತು ಮಾಡಿದರು