ಮೈಸೂರು: ಕೇಂದ್ರ ಸರ್ಕಾರವು ರಾಹುಲ್ ಗಾಂಧಿ ವಿರುದ್ಧ ಸಂಚು ರೂಪಿಸಿರುವುದನ್ನು ವಿರೋಧಿಸಿ ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಇಲ್ಲಿನ ಗಾಂಧಿ ವೃತ್ತದಲ್ಲಿ ಬುಧವಾರ ಬೆಳಿಗ್ಗೆ 11 ರಿಂದ ಸಂಜೆ 5ಗಂಟೆವರೆಗೆ ಮೌನ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ. ಬಿ.ಜೆ ವಿಜಯ್ ಕುಮಾರ್ ಮಾತನಾಡಿ, ‘ಕಾರ್ಪೊರೇಟ್ ವ್ಯವಸ್ಥೆಗೆ ಬೆಂಬಲ ಹಾಗೂ ಪ್ರಧಾನಿ ತೆಗೆದುಕೊಂಡ ನಿರ್ಧಾರಗಳನ್ನು ಪ್ರಶ್ನೆ ಮಾಡಿದ ಕಾರಣಕ್ಕೆ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದ್ದಾರೆ. ಈ ನಿರ್ಧಾರವನ್ನು ಅನೇಕ ದೇಶಗಳು ಟೀಕಿಸಿವೆ. ಪಕ್ಷದ ಯುವ ನಾಯಕನ ಜೊತೆಗೆ ನಾವೂ ಇದ್ದೇವೆ ಎಂದು ನೈತಿಕ ಬಲ ತುಂಬಲು ಹೋರಾಟ ಮಾಡುತ್ತಿದ್ದೇವೆ’ ಎಂದರು.
‘ಸೂರತ್ ನ್ಯಾಯಾಲಯವು ನೀಡಿರುವ ಶಿಕ್ಷೆಯ ಪ್ರಮಾಣ ಗರಿಷ್ಠ ಮಟ್ಟದ್ದಾಗಿದೆ. ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ಈ ಹಿಂದಿನ ಪ್ರಕರಣದಲ್ಲಿ ಇಷ್ಟು ದೊಡ್ಡ ಮಟ್ಟಿನ ಶಿಕ್ಷೆ ಆಗಿಲ್ಲ. ಸತ್ಯವನ್ನು ಮಾತನಾಡುವ ರಾಹುಲ್ ಗಾಂಧಿಯನ್ನು ಅನರ್ಹಗೊಳಿಸಿರುವುದು ಅನುಮಾನಾಸ್ಪದವಾಗಿದೆ. ಆದರೂ ಕೊನೆಗೆ ಸತ್ಯಕ್ಕೆ ಜಯವಾಗುವುದು’ ಎಂದು ತಿಳಿಸಿದರು.
‘ಸದನದಲ್ಲಿ ಪ್ರಶ್ನಿಸುವ ಹಕ್ಕನ್ನು ಬಿಜೆಪಿ ಕಸಿದುಕೊಂಡಿದೆ. ಸರ್ಕಾರದ ದುಷ್ಕೃತ್ಯಗಳನ್ನು ಬಹಿರಂಗ ಮಾಡುತ್ತಾರೆ ಎಂಬ ಕಾರಣಕ್ಕೆ ಆಡಳಿತ ಪಕ್ಷವು ಪ್ರತಿಪಕ್ಷಗಳ ವಿರುದ್ಧ ಕೆರಳುತ್ತಿದೆ. ಸದನದ ಸ್ಪೀಕರ್ ಸಹ ಈ ರೀತಿ ನಿರ್ಧಾರ ಕೈಗೊಂಡಿದ್ದಾರೆ’ ಎಂದು ತಿಳಿಸಿದರು.
‘ಸೇಡು ಮತ್ತು ಭಯದಿಂದ ಬಿಜೆಪಿ ಬೆದರಿಕೆಯ ರಾಜಕಾರಣ ಮಾಡುತ್ತಿದೆ. ರಾಹುಲ್ ಗಾಂಧಿಯು ಈ ನೆಲದ ಕಾನೂನು ಗೌರವಿಸುವ ಮೂಲಕ ನಮಗೆ ಮಾದರಿಯಾಗಿದ್ದಾರೆ. ಆಡಳಿತ ಪಕ್ಷದ ದುಷ್ಕೃತ್ಯಗಳಿಗೆ ಕಾಂಗ್ರೆಸ್ ವಿಚಲಿತವಾಗುವುದಿಲ್ಲ. ಯುವ ನಾಯಕನ ಬೆಂಬಲಕ್ಕೆ ನಿಲ್ಲುತ್ತೇವೆ. ಬಿಜೆಪಿಯ ಅನ್ಯಾಯಗಳಿಗೆ ಲೋಕಸಭಾ ಚುನಾವಣೆಯಲ್ಲಿ ಮತದಾರ ಉತ್ತರ ನೀಡಲಿದ್ದಾರೆ’ ಎಂದು ಹೇಳಿದರು.
ಮುಖಂಡ ಎಂ.ಕೆ.ಸೋಮಶೇಖರ್ ಮಾತನಾಡಿ, ‘ರಾಹುಲ್ ಗಾಂಧಿ ನಾಯಕತ್ವ ಗುಣವನ್ನು ಸಹಿಸಿಕೊಳ್ಳದ ಬಿಜೆಪಿಯು ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಿದೆ. ದುರಾಡಳಿತದಿಂದ ಜನರನ್ನು ಗೆಲ್ಲಲು ಸಾಧ್ಯವಿಲ್ಲ, ರಾಹುಲ್ ಗಾಂಧಿ ಅವರನ್ನು ಜನರು ಒಪ್ಪಿಕೊಳ್ಳಲಿದ್ದಾರೆ’ ಎಂದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಎಚ್.ಎ.ವೆಂಕಟೇಶ, ಮುಖಂಡರಾದ ಸಿ.ಬಸವೇಗೌಡ, ಪುರುಷೋತ್ತಮ್, ಟಿ.ಬಿ.ಚಿಕ್ಕಣ್ಣ, ಪುಷ್ಪಾಲತಾ ಚಿಕ್ಕಣ್ಣ, ನಾರಾಯಣ, ರಾಜೇಶ್ವರಿ, ಮೋದಾಮಣಿ, ಬಿ.ಎಂ.ರಾಮು, ಮಂಜುಳಾ ಮಾನಸ, ಈಶ್ವರ್ ಚಕ್ಕಡಿ, ಗಿರೀಶ, ಡೈರಿ ವೆಂಕಟೇಶ, ಬಸವೇಗೌಡ, ಎಂ.ನಾರಾಯಣ ಇದ್ದರು.
Highlights - ಕಾಂಗ್ರೆಸ್ ಪದಾಧಿಕಾರಿಗಳಿಂದ ಮೌನ ಪ್ರತಿಭಟನೆ ಆಡಳಿತ ಪಕ್ಷದ ತೀರ್ಮಾನ ಕಾನೂನುಬದ್ಧವಾಗಿಲ್ಲ ಮುಖಂಡರ ಆರೋಪ
Cut-off box - ‘ಸಾವಿನಲ್ಲಿ ರಾಜಕೀಯ ಸಲ್ಲದು’ ‘ತಿ.ನರಸೀಪುರದಲ್ಲಿ ನಡೆದ ವೇಣುಗೋಪಾಲ್ ಹತ್ಯೆಯನ್ನು ನಾವು ಖಂಡಿಸುತ್ತೇವೆ ಹಾಗೂ ಸಮಗ್ರ ತನಿಖೆಗೆ ಒತ್ತಾಯಿಸುತ್ತೇವೆ. ಬಿಜೆಪಿಯು ಸಾವಿನಲ್ಲೂ ರಾಜಕೀಯ ಮಾಡಲು ಹೊರಟಿದೆ. ಸಾವಿಗೆ ಜಾತಿ ಇಲ್ಲ ಬಿಜೆಪಿಯ ಸತ್ಯಶೋಧನಾ ಸಮಿತಿ ಬಂದು ರಾಜ್ಯದಲ್ಲಿ ಕೊಲೆ ಸುಲಿಗೆ ಹೆಚ್ಚಿದೆ ಎಂದಿರುವುದು ಸರಿಯಲ್ಲ. ಕಾಂಗ್ರೆಸ್ ಶಾಂತಿ ಸಹಬಾಳ್ವೆಗೆ ಆದ್ಯತೆ ನೀಡುತ್ತದೆ. ಬಿಜೆಪಿ ಇದಕ್ಕೆ ವಿರುದ್ಧವಾಗಿದೆ’ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಡಾ.ಬಿ.ಜೆ ವಿಜಯ್ ಕುಮಾರ್ ಆರೋಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.