ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಟಿಡಿ ಮಣಿಸಲು ಕಾಂಗ್ರೆಸ್, ಬಿಜೆಪಿ ಪೈಪೋಟಿ!

ಒಕ್ಕಲಿಗ ಅಭ್ಯರ್ಥಿಗೆ ಮಣೆ ಹಾಕಲು ಕಾಂಗ್ರೆಸ್‌ನಲ್ಲಿ ವ್ಯಾಪಕ ಚರ್ಚೆ
Last Updated 10 ನವೆಂಬರ್ 2022, 8:34 IST
ಅಕ್ಷರ ಗಾತ್ರ

ಮೈಸೂರು: ರಾಜ್ಯದ ಪ್ರಮುಖ ಕಣಗಳಲ್ಲಿ ಒಂದಾಗಿರುವ ಹಾಗೂ ಒಕ್ಕಲಿಗ ಸಮಾಜದ ಬಾಹುಳ್ಯವಿರುವ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಜಿ.ಟಿ.ದೇವೇಗೌಡ 2023ರ ಚುನಾವಣೆಯಲ್ಲಿ ಜೆಡಿಎಸ್‌ ಅಭ್ಯರ್ಥಿಯಾಗಿ ಮತ್ತೊಮ್ಮೆ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಟಿಕೆಟ್‌ಗಾಗಿ ಫೈಟ್ ಜೋರಾಗಿದೆ.

ಜಿ.ಟಿ.ದೇವೇಗೌಡ ಅವರಿಗೆ ಟಿಕೆಟ್ ಖಚಿತ ಎನ್ನುವುದನ್ನು ಆ ಪಕ್ಷದ ವರಿಷ್ಠ ಎಚ್‌.ಡಿ.ದೇವೇಗೌಡರೇ ಘೋಷಿಸಿದ್ದಾರೆ. ಇದರೊಂದಿಗೆ, ಜಿಟಿಡಿ ಬೇರೆ ಪಕ್ಷದ ಕದ ತಟ್ಟುತ್ತಾರೆ ಎನ್ನುವ ಚರ್ಚೆಗಳಿಗೆ ತೆರೆ ಬಿದ್ದಿದೆ. ಅವರನ್ನು ಮಣಿಸಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಪಕ್ಷದೊಳಗಿನ ಅಸಮಾಧಾನ ಹಾಗೂ ಒಳೇಟಿನ ಪರಿಣಾಮವನ್ನೂ ಎದುರಿಸಬೇಕಾದ ಅನಿವಾರ್ಯದಲ್ಲಿ ಹಾಲಿ ಶಾಸಕರಿದ್ದಾರೆ.

ಕಾಂಗ್ರೆಸ್‌ನಲ್ಲಿ ಟಿಕೆಟ್ ಆಕಾಂಕ್ಷಿಗಳು ಜಾಸ್ತಿ ಇದ್ದಾರೆ. ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ, ಸಿದ್ದರಾಮಯ್ಯ ಆಪ್ತ ಕೆ.ಮರೀಗೌಡ,ಜಿಲ್ಲಾ ‍ಪಂಚಾಯಿತಿ ಮಾಜಿ ಅಧ್ಯಕ್ಷ ಕೂರ್ಗಳ್ಳಿ ಮಹದೇವ, ಉದ್ಯಮಿಕೃಷ್ಣಕುಮಾರ್ ಸಾಗರ್, ಮುಖಂಡ ರಾಕೇಶ್ ಪಾಪಣ್ಣ, ತಾ.ಪಂ. ಮಾಜಿ ಅಧ್ಯಕ್ಷೆ ಮಂಜುಳಾ ಮಂಜುನಾಥ್, ಮೈಸೂರು ತಾಲ್ಲೂಕು ಎಪಿಎಂಸಿ ಮಾಜಿ ಅಧ್ಯಕ್ಷ ಬೆಳ್ಳುಳ್ಳಿ ಬಸವರಾಜ್‌, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಲೇಖಾ ವೆಂಕಟೇಶ್, ಮಾಜಿ ಶಾಸಕ ಸತ್ಯನಾರಾಯಣ ಅವರ ಮಗ ಜಿ.ಪಂ. ಮಾಜಿ ಸದಸ್ಯ ಅರುಣ್‌ಕುಮಾರ್ ಟಿಕೆಟ್‌ ಬಯಸಿದ್ದಾರೆ. ಮರೀಗೌಡ ಮೊದಲಾದವರು ಕ್ಷೇತ್ರದಲ್ಲಿ ಈಗಾಗಲೇ ಓಡಾಡುತ್ತಿದ್ದಾರೆ.

ಇವರೆಲ್ಲರೂ ಕ್ಷೇತ್ರದವರು. ತಮ್ಮದೇ ಗುಂಪು ಕಟ್ಟಿಕೊಂಡು ಪರಸ್ಪರ ಕಾಳೆಯಲು ಕಾಯುತ್ತಿದ್ದಾರೆ. ಹೀಗಾಗಿ, ಕೊನೆ ಕ್ಷಣದಲ್ಲಿ ಒಕ್ಕಲಿಗ ಸಮಾಜದ ಹೊಸ ಮುಖಕ್ಕೆ ಅವಕಾಶ ಕೊಟ್ಟರೂ ಅಚ್ಚರಿ ಇಲ್ಲ ಎನ್ನುತ್ತವೆ ಪಕ್ಷದ ಮೂಲಗಳು.

2018ರಚುನಾವಣೆಯಲ್ಲಿ ಪ್ರಬಲ ಅಭ್ಯರ್ಥಿ, ಕಾಂಗ್ರೆಸ್‌ನ ಸಿದ್ದರಾಮಯ್ಯ ಸೋತು ಜಿಟಿಡಿ ವಿರುದ್ಧ ಮುಖಭಂಗ ಅನುಭವಿಸಿದ್ದರು. ಬಿಜೆಪಿಯ ಗೋಪಾಲರಾವ್ 3ನೇ ಸ್ಥಾನಕ್ಕೆ ಕುಸಿದಿದ್ದರು. 2013ರಲ್ಲೂ ಜಿ.ಟಿ.ದೇವೇಗೌಡ ಗೆದ್ದಿದ್ದರು. ಆಗ, ಕಾಂಗ್ರೆಸ್‌ನಿಂದ ಎಂ.ಸತ್ಯನಾರಾಯಣ ಪರಾಭವಗೊಂಡಿದ್ದರು.

ಸಿದ್ದರಾಮಯ್ಯ ಸಮೀಕ್ಷೆ...

‘ಆಂತರಿಕ ಸಮೀಕ್ಷೆಯ ಅಭಿಪ್ರಾಯದಂತೆ, ಒಕ್ಕಲಿಗ ಸಮಾಜದ ಪ್ರಬಲ ಅಭ್ಯರ್ಥಿಗೆ ಸಿದ್ದರಾಮಯ್ಯ ಬಯಸಿದ್ದಾರೆ. ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ, ಬಹಳ ವರ್ಷಗಳಿಂದ ಸಂಘಟನೆಯಲ್ಲಿ ತೊಡಗಿರುವ ಮತ್ತು ಸಿದ್ದರಾಮಯ್ಯ ನಂಬಿಕೆಗೂ ಪಾತ್ರವಾಗಿರುವ ಡಾ.ಬಿ.ಜೆ.ವಿಜಯಕುಮಾರ್‌ ಅವರನ್ನು ಕಣಕ್ಕಿಳಿಸಿದರೆ ಹೇಗೆ ಎಂಬ ಚರ್ಚೆಯೂ ನಡೆದಿದೆ’ ಎಂದು ಉನ್ನತ ಮೂಲಗಳು ತಿಳಿಸಿವೆ.

ಬಿಜೆಪಿಯಿಂದ ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಅರುಣ್‌ಕುಮಾರ್‌ ಗೌಡ, ಸಂಘ ಪರಿವಾರದ ಹಿನ್ನೆಲೆಯ ಗೋಪಾಲರಾವ್‌, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮಾಜಿ ಅಧ್ಯಕ್ಷ ಹೇಮಂತ್‌ಕುಮಾರ್ ಗೌಡ, ಚಾಮುಂಡೇಶ್ವರಿ ಕ್ಷೇತ್ರದ ಮಾಜಿ ಅಧ್ಯಕ್ಷ ಗೆಜ್ಜಗಳ್ಳಿ ಮಹೇಶ್ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಮಾಜಿ ಸಚಿವ ಸಿ.ಎಚ್.ವಿಜಯಶಂಕರ್, ವಿಧಾನಪರಿಷತ್ ಸದಸ್ಯ ಸಿದ್ದರಾಜು ಕೂಡ ಸ್ಪರ್ಧೆ ಬಗ್ಗೆ ಬೆಂಬಲಿಗರೊಂದಿಗೆ ಚರ್ಚಿಸಿದ್ದಾರೆ ಎನ್ನುತ್ತವೆ ಮೂಲಗಳು.

ಯುವ ನಾಯಕ ಅರುಣ್‌ಕುಮಾರ್‌ ಮತಗಟ್ಟೆ ಮಟ್ಟದಲ್ಲಿ ಪ್ರವಾಸ ಮಾಡುತ್ತಾ ಆಕಾಂಕ್ಷಿಗಳಿಗೆ ಪೈಪೋಟಿ ಕೊಡುತ್ತಿದ್ದಾರೆ.

ಜಿಟಿಡಿಗೆ ಭಿನ್ನಮತದ ‘ಬಿಸಿ’

ಜಿ.ಟಿ.ದೇವೇಗೌಡ, 3 ವರ್ಷಗಳಿಂದಲೂ ವರಿಷ್ಠರಾದ ಎಚ್‌.ಡಿ.ದೇವೇಗೌಡ ಹಾಗೂ ಎಚ್‌.ಡಿ.ಕುಮಾರಸ್ವಾಮಿ ಅವರೊಂದಿಗೆ ಅಂತರ ಕಾಯ್ದುಕೊಂಡು, ಬಿಜೆಪಿಯವರು ಹಾಗೂ ಕಾಂಗ್ರೆಸ್‌ನವರೊಂದಿಗೆ ‘ಸಖ್ಯ’ ಬೆಳೆಸಿಕೊಂಡಿದ್ದರು. ಆದರೆ, ಆ ಪಕ್ಷಗಳಿಂದ ಡಬಲ್‌ ಟಿಕೆಟ್‌ ಖಾತ್ರಿಯಾಗದಿದ್ದರಿಂದಾಗಿ ಮತ್ತು ಎಚ್.ಡಿ.ದೇವೇಗೌಡರ ಮನವೊಲಿಕೆ ಪರಿಣಾಮ ಜೆಡಿಎಸ್‌ನಲ್ಲೇ ಇರುವುದಾಗಿ ಘೋಷಿಸಿದ್ದಾರೆ. ಇದು, ಪಕ್ಷದ ಕೆಲವರ ಅಸಮಾಧಾನಕ್ಕೂ ಕಾರಣವಾಗಿದೆ.

‘3 ವರ್ಷಗಳಿಂದ ಪಕ್ಷಕ್ಕಾಗಿ ದುಡಿದಿಲ್ಲ. ಕಾರ್ಯಕರ್ತರನ್ನು ಕಡೆಗಣಿಸಿದ್ದರು. ಹೀಗಾಗಿ, ಅವರನ್ನು ಬೆಂಬಲಿಸುವುದಿಲ್ಲ’ ಎಂದು ಮುಖಂಡರಾದ ಬೆಳವಾಡಿ ಶಿವಮೂರ್ತಿ, ಬೀರಿಹುಂಡಿ‌ ಬಸವಣ್ಣ,ಮಾವಿನಹಳ್ಳಿಸಿದ್ದೇಗೌಡ, ಮಾದೇಗೌಡ, ಸೋಮಶೇಖರ್, ಕೆಂಪನಾಯಕ ಗುಡುಗಿದ್ದಾರೆ. ಇದು ಯಾವ ರೀತಿ ಪರಿಣಾಮ ಬೀರುತ್ತದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT