ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಿದ್ದರಾಮಯ್ಯಗೆ ಅವಮಾನ ಮಾಡಿದ್ದು ಸರಿಯೇ: ಎಂ. ಲಕ್ಷ್ಮಣ

ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ. ಲಕ್ಷ್ಮಣ ಪ್ರಶ್ನೆ; ಹೊಸ ಯೋಜನೆ ತರಲು ಸಲಹೆ
Published 8 ಜೂನ್ 2024, 13:57 IST
Last Updated 8 ಜೂನ್ 2024, 13:57 IST
ಅಕ್ಷರ ಗಾತ್ರ

ಮೈಸೂರು: ‘ತವರು ಜಿಲ್ಲೆಯ ಜನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮುಖಭಂಗ ಮಾಡುವ ಕೆಲಸ‌ ಮಾಡಬಾರದಿತ್ತು. ಎಷ್ಟೆಂದು ಅವರಿಗೆ ಅವಮಾನ ಮಾಡುತ್ತೀರಿ’ ಎಂದು ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಎಂ. ಲಕ್ಷ್ಮಣ ಕೇಳಿದರು.

‘ಮೈಸೂರು–ಕೊಡಗು ಕ್ಷೇತ್ರದಲ್ಲಿ ಕಾಂಗ್ರೆಸ್‌ ಸೋಲು ಸಿದ್ದರಾಮಯ್ಯ ಅವರಿಗೆ ಮಾಡಿದ ಅವಮಾನ. ಜಾತಿಗಿಂತ ವ್ಯಕ್ತಿ ನೋಡುವ ಅವರು ಯಾವ ಜಾತಿಗೂ ಸೀಮಿತವಲ್ಲ. ಅವರಂಥ ಇನ್ನೊಬ್ಬ ಮುಖ್ಯಮಂತ್ರಿ ಸಿಗಲು ಸಾಧ್ಯವೇ? ಅವರು ಮಾಡಿದ ತಪ್ಪೇನು’ ಎಂದು ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

‘ನನ್ನ ಪಾಲಿಗೆ ಸಿದ್ದರಾಮಯ್ಯ ದೇವರು. ಅವರೊಟ್ಟಿಗೆ ಸಹಕಾರ ನೀಡಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌, ಎಂಟು ವಿಧಾನಸಭಾ ಕ್ಷೇತ್ರಗಳ ಶಾಸಕರು, ಮುಖಂಡರಿಗೆ ಧನ್ಯವಾದ. ಬೆಂಬಲಿಸಿದ 6.56 ಲಕ್ಷ ಮತದಾರರು, ಸಂಘಟನೆಗಳ ಕಾರ್ಯಕರ್ತರಿಗೆ ಧನ್ಯವಾದ. ನಾನು ಎಲ್ಲಿಯೂ ಕಳೆದು ಹೋಗುವುದಿಲ್ಲ. ಸೋತರೂ ನಿರಂತರ ಜನ ಸಂಪರ್ಕದಲ್ಲಿ ಇರುತ್ತೇನೆ. ಪ್ರತಿ ಕ್ಷೇತ್ರಕ್ಕೆ ಹೋಗಿ ಜನರ ಸಮಸ್ಯೆ ಆಲಿಸುತ್ತೇನೆ. ಮಡಿಕೇರಿಯಲ್ಲೂ ಕಚೇರಿ ತೆರೆಯುತ್ತೇನೆ’ ಎಂದು ಹೇಳಿದರು.

‘ನೂತನ ಸಂಸದ ಯದುವೀರ್ ಅವರಿಗೆ ಅಭಿನಂದನೆ. ಹಿಂದಿನ ಸಂಸದರಂತೆ ನಿರ್ಲಕ್ಷ್ಯದಿಂದ ಕೆಲಸ ಮಾಡಬೇಡಿ. ಹೊಸ ಯೋಜನೆಗಳನ್ನು ಮೈಸೂರಿಗೆ ತನ್ನಿ’ ಎಂದು ಸಲಹೆ ನೀಡಿದರು.

‘ಕ್ಷೇತ್ರದಲ್ಲಿ ಜಾತಿ ರಾಜಕಾರಣ ಕೆಲಸ ಮಾಡಿದೆ. ಒಕ್ಕಲಿಗ, ಲಿಂಗಾಯತದಂತಹ ಮೇಲ್ವರ್ಗದ ಸಮುದಾಯಗಳು ಕೈ ಹಿಡಿಯಲಿಲ್ಲ. ಕೃಷ್ಣರಾಜ, ಚಾಮರಾಜ, ವಿರಾಜಪೇಟೆ ಹಾಗೂ ಮಡಿಕೇರಿ ವಿಧಾನಸಭಾ ಕ್ಷೇತ್ರಗಳಲ್ಲಿ ನಾವು ನಿರೀಕ್ಷಿಸಿದಷ್ಟು ಮತ ಬರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಪಕ್ಷದ ನಗರ ಘಟಕದ ಅಧ್ಯಕ್ಷ ಆರ್.ಮೂರ್ತಿ, ಪ್ರಧಾನ ಕಾರ್ಯದರ್ಶಿ ಶಿವಣ್ಣ, ಬಿ.ಎನ್. ರಾಮು ಇದ್ದರು.

‘ನೀಟ್ ಪರೀಕ್ಷೆಯಲ್ಲಿ ಭ್ರಷ್ಟಾಚಾರ’

‘ವೈದ್ಯಕೀಯ ಪದವಿ ಪ್ರವೇಶಕ್ಕೆ ಕೇಂದ್ರ ಸರ್ಕಾರವು ನಡೆಸುವ ನೀಟ್ ಪರೀಕ್ಷೆಯಲ್ಲಿ ಭಾರಿ ಗೋಲ್‌ಮಾಲ್ ನಡೆದಿದ್ದು ಈ ಬಗ್ಗೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆ ನಡೆಸಬೇಕು’ ಎಂದು ಎಂ. ಲಕ್ಷ್ಮಣ ಒತ್ತಾಯಿಸಿದರು. ‘ಹರಿಯಾಣದ ಒಂದೇ ಕೇಂದ್ರದಲ್ಲಿ ಪರೀಕ್ಷೆ ಬರೆದ 180 ಅಭ್ಯರ್ಥಿಗಳ ಪೈಕಿ 67 ಮಂದಿ 170 ಅಂಕಕ್ಕೆ 170 ಅಂಕ‌ ಪಡೆದು ದೇಶಕ್ಕೆ ಅಗ್ರ ಸ್ಥಾನ ಗಳಿಸಿದ್ದಾರೆ. ಇದು ಹಗರಣ ನಡೆದಿರುವುದಕ್ಕೆ ಸಾಕ್ಷಿ. 24 ಲಕ್ಷ ವಿದ್ಯಾರ್ಥಿಗಳಿಗೆ ಇದರಿಂದ ಅನ್ಯಾಯ ಆಗಿದೆ. ರಾಜ್ಯದಿಂದ ಆಯ್ಕೆ ಆಗಿರುವ ಸಂಸದರು ಮೊದಲ ಅಧಿವೇಶನದಲ್ಲಿಯೇ ಈ ಬಗ್ಗೆ ಧ್ವನಿ ಎತ್ತಬೇಕು’ ಎಂದು ಕೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT