ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣಾ ರಾಜಕೀಯದಿಂದ ನಿವೃತ್ತಿ: ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಘೋಷಣೆ

Last Updated 28 ಫೆಬ್ರುವರಿ 2023, 11:00 IST
ಅಕ್ಷರ ಗಾತ್ರ

ಮೈಸೂರು: ‘ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಚುನಾವಣಾ ರಾಜಕೀಯದಿಂದ ನಿವೃತ್ತಿಯಾಗುತ್ತಿದ್ದು, ಈ ಬಗ್ಗೆ ಪಕ್ಷದ ವರಿಷ್ಠರಿಗೆ ಪತ್ರ ಬರೆದಿದ್ದೇನೆ’ ಎಂದು ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ ಹೇಳಿದರು.

ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿ, ‘2019ರ ನವೆಂಬರ್‌ನಲ್ಲಿ ಆದ ಮಾರಣಾಂತಿಕ ಹಲ್ಲೆಯು ಆರೋಗ್ಯದ ಮೇಲೆ ಪರಿಣಾಮ ಬೀರಿದ್ದು, ಇನ್ನೂ ಚೇತರಿಸಿಕೊಂಡಿಲ್ಲ. ಅನಾರೋಗ್ಯದ ಕಾರಣ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸುವುದಿಲ್ಲ’ ಎಂದರು.

‘ಬೆಳಗಾವಿ ವಿಧಾನಸಭಾ ಅಧಿವೇಶನದ ಸಂದರ್ಭದಲ್ಲಿಯೇ ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್‌ ಸಿಂಗ್‌ ಸುರ್ಜೇವಾಲ, ವಿಧಾನಸಭೆ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದೆ. ಯಾವ ನಿರ್ಧಾರ ತೆಗೆದುಕೊಳ್ಳದಂತೆ, ಯಾರಿಗೂ ಹೇಳದಂತೆ ಸೂಚಿಸಿದ್ದರು’ ಎಂದು ತಿಳಿಸಿದರು.

‘ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಒತ್ತಡವಿದ್ದರಿಂದ ಎನ್‌.ಆರ್.ಕ್ಷೇತ್ರದ ಟಿಕೆಟ್‌ಗೆ ಅರ್ಜಿ ಸಲ್ಲಿಸಿದ್ದೆ. ಇತ್ತೀಚೆಗೆ ಛತ್ತೀಸಗಡದ ರಾಯಪುರದಲ್ಲಿ ನಡೆದ ಕಾಂಗ್ರೆಸ್‌ ಮಹಾಧಿವೇಶನದಲ್ಲೂ ವರಿಷ್ಠರು ಆತುರದ ನಿರ್ಧಾರ ತೆಗೆದುಕೊಳ್ಳದಂತೆ ನಿರ್ದೇಶಿಸಿದ್ದರು. ಸ್ಪರ್ಧಿಸದಿರುವ ಕುರಿತು ಡಿಸೆಂಬರ್‌ನಿಂದ ಗೋಪ್ಯತೆ ಕಾಯ್ದುಕೊಂಡಿದ್ದೆ. ಇದೀಗ ಮಾಧ್ಯಮಗಳ ಮೂಲಕ ಗೊತ್ತಾಗಿದೆ’ ಎಂದರು.

‘ಪಕ್ಷದ ಶಿಸ್ತಿನ ಸಿಪಾಯಿಯಾಗಿದ್ದು, ರಾಜಕಾರಣದಲ್ಲಿ ಇರುವವರೆಗೂ ಕಾಂಗ್ರೆಸ್‌ನಲ್ಲಿ ಇರುತ್ತೇನೆ. ಅನಾರೋಗ್ಯದ ನಡುವೆಯೂ ಕಳೆದ 4 ವರ್ಷದಿಂದ ಜವಾಬ್ದಾರಿ ನಿರ್ವಹಿಸಿರುವ ತೃಪ್ತಿ ಇದೆ. ಹೈಕಮಾಂಡ್‌ ನಿರ್ಧಾರದಂತೆ ನಡೆದುಕೊಳ್ಳುವೆ, ಜನರ ಅಭಿಪ್ರಾಯಕ್ಕೆ ಮನ್ನಣೆ ನೀಡುವೆ’ ಎಂದು ಹೇಳಿದರು.

ನಾಟಕೀಯ ಬೆಳವಣಿಗೆ: ವಿಷಯ ತಿಳಿಯುತ್ತಿದ್ದಂತೆ ತನ್ವೀರ್‌ ಸೇಠ್‌ ಅವರ ಉದಯಗಿರಿ ನಿವಾಸಕ್ಕೆ ದೌಡಾಯಿಸಿದ ಅಭಿಮಾನಿಗಳು ಹಾಗೂ ಕಾಂಗ್ರೆಸ್‌ ಕಾರ್ಯಕರ್ತರು ಶಾಸಕರ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದರು. ಸೀಮೆಎಣ್ಣೆ ಸುರಿದುಕೊಂಡು ಕಾರ್ಯಕರ್ತರೊಬ್ಬರು ಆತ್ಮಹತ್ಯೆಗೆ ಯತ್ನ ಮಾಡಿದರು.

ಇಕ್ಬಾಲ್ ಎಂಬುವವರು ಮನೆ ಮೇಲೆ ಹತ್ತಿ ಧುಮುಕಲು ಯತ್ನಿಸಿದಾಗ ಕೆಲವರು ತಡೆದರು. ತನ್ವೀರ್‌ ಸೇಠ್‌ ಕಾರ್ಯಕರ್ತರನ್ನು ಸಮಾಧಾನಿಸಲು ಹೈರಾಣಾದರು. ಕೆಲವರು ಗದ್ಗದಿತರಾಗಿ, ‘ರಾಜಕೀಯ ನಿವೃತ್ತಿ ಪಡೆಯಬಾರದು. ನಮ್ಮನ್ನು ನೋಡಿಕೊಳ್ಳುವವರು ಯಾರು?’ ಎಂದು ಪ್ರಶ್ನಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT