ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೂಚ್‌ ಬಿಹಾರ್‌ ಟ್ರೋಫಿ: ಕರ್ನಾಟಕಕ್ಕೆ ಭರ್ಜರಿ ಜಯ

Published 3 ಡಿಸೆಂಬರ್ 2023, 19:01 IST
Last Updated 3 ಡಿಸೆಂಬರ್ 2023, 19:01 IST
ಅಕ್ಷರ ಗಾತ್ರ

ಮೈಸೂರು: ಸಾಂಘಿಕ ಪ್ರದರ್ಶನ ತೋರಿದ ಕರ್ನಾಟಕ ತಂಡ ಉತ್ತರಾಖಂಡದ ವಿರುದ್ಧ ಇನಿಂಗ್ಸ್ ಮತ್ತು 47 ರನ್‌ಗಳಿಂದ ಭರ್ಜರಿ ಗೆಲುವು ಸಾಧಿಸಿತು.

ಮಾನಸಗಂಗೋತ್ರಿಯ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಕೂಚ್‌ ಬಿಹಾರ್‌ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯಲ್ಲಿ ಒಂದು ದಿನ ಬಾಕಿ ಇರುವಂತೆಯೇ ಕರ್ನಾಟಕದ ಆಟಗಾರರು ಜಯಭೇರಿ ಬಾರಿಸಿ ಸಂಭ್ರಮಿಸಿದರು.

3ನೇ ದಿನದಾಟ ಮುಂದುವರಿಸಿದ ಕರ್ನಾಟಕ ಒಟ್ಟು 97.5 ಓವರ್‌ಗಳಲ್ಲಿ 404 ರನ್‌ಗಳ ಬೃಹತ್‌ ಮೊತ್ತ ಕಲೆ ಹಾಕಿ ಇನಿಂಗ್ಸ್‌ ಮುನ್ನಡೆ ಗಳಿಸಿತು. ಉತ್ತರಾಖಂಡದ ಆದಿತ್ಯ ರಾವತ್ 4, ಡಿ.‍ಪಿ. ಸಿಂಗ್ ಮತ್ತು ಕೃಷ್ಣ ಗಾರ್ಗ್‌ ತಲಾ 2 ವಿಕೆಟ್‌ ಗಳಿಸಿದರು.

ದೊಡ್ಡ ಗುರಿಯ ಬೆನ್ನತ್ತಿದ ಉತ್ತರಾಖಂಡ ಆಟಗಾರರಿಗೆ ಕರ್ನಾಟಕದವರು ಚುರುಕಿನ ಬೌಲಿಂಗ್ ಹಾಗೂ ಉತ್ತಮ ಫೀಲ್ಡಿಂಗ್ ಮೂಲಕ ಕಾಡಿದರು. ಈ ಪರಿಣಾಮ ಪ್ರವಾಸಿ ತಂಡ 56.5 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್‌ಗಳನ್ನಷ್ಟೆ ಗಳಿಸಲು ಶಕ್ತವಾಯಿತು. ನಾಯಕ ಆರವ್ ಮಹಾಜನ್‌ ಗಾಯದ ಕಾರಣ ಆಡಲಿಲ್ಲ.

2ನೇ ಇನಿಂಗ್ಸ್‌ನಲ್ಲೂ ಉತ್ತಮ ಬೌಲಿಂಗ್‌ ಪ್ರದರ್ಶನ ನೀಡಿದ ಧೀರಜ್‌ ಗೌಡ (31ಕ್ಕೆ 3) ತಂಡದ ಗೆಲುವಿಗೆ ದೊಡ್ಡ ಕಾಣಿಕೆ (7 ಮೇಡನ್ ಓವರ್) ನೀಡಿದರು. ಸಮರ್ಥ್‌ ಎನ್‌. ಹಾಗೂ ಇಶಾನ್‌ ತಲಾ 2 ವಿಕೆಟ್ ಪಡೆದರೆ, ಸಮಿತ್ ದ್ರಾವಿಡ್ ಮತ್ತು ಹಾರ್ದಿಕ್ ರಾಜ್‌ ತಲಾ 1 ವಿಕೆಟ್‌ ಗಳಿಸಿದರು. 99 ರನ್‌ ಗಳಿಸುವಷ್ಟರಲ್ಲೇ 8 ವಿಕೆಟ್‌ ಕಳೆದುಕೊಂಡಿದ್ದ ಉತ್ತರಾಖಂಡಕ್ಕೆ ಯೋಗೇಶ್‌ (ಅಜೇಯ 54, 5x4) ಕೊಂಚ ನೆರವಾದರು.

ಸಂಕ್ಷಿಪ್ತ ಸ್ಕೋರು: ಮೊದಲ ಇನಿಂಗ್ಸ್‌: ಉತ್ತರಾಖಂಡ 90.1 ಓವರ್‌ಗಳಲ್ಲಿ 9 ವಿಕೆಟ್‌ಗೆ 232 (ಆರವ್‌ ಮಹಾಜನ್‌ 127, ಸಂಸ್ಕಾರ್ ರಾವತ್ 43, ಇಶಾನ್‌ ಎಸ್. 49ಕ್ಕೆ3, ಧೀರಜ್‌ ಗೌಡ 62ಕ್ಕೆ3, ಸಮರ್ಥ್‌ ಎನ್. 17ಕ್ಕೆ2). ಕರ್ನಾಟಕ: 97.5 ಓವರ್‌ಗಳಲ್ಲಿ 404 (ಪ್ರಖರ್‌ ಚತುರ್ವೇದಿ 151, ಕೆ.ಪಿ. ಕಾರ್ತಿಕೇಯ 121, ಶಿಖರ್‌ ಶೆಟ್ಟಿ 14, ಆದಿತ್ಯ ರಾವತ್‌ 82ಕ್ಕೆ 4, ಡಿ.ಪಿ.ಸಿಂಗ್ 79ಕ್ಕೆ 2, ಕೃಷ್ಣ ಗಾರ್ಗ್‌ 61ಕ್ಕೆ 2, ರಾಜ್ಯವರ್ಧನ್‌ 83ಕ್ಕೆ 1.

ಎರಡನೇ ಇನಿಂಗ್ಸ್‌: ಉತ್ತರಾಖಂಡ 56.5 ಓವರ್‌ಗಳಲ್ಲಿ 9 ವಿಕೆಟ್‌ಗೆ 125 (ಯೋಗೇಶ್‌ ಅಜೇಯ 54, ಆದಿತ್ಯ ರಾವತ್‌ 17, ಡಿ.ಪಿ. ಸಿಂಗ್‌ 12, ಧೀರಜ್‌ಗೌಡ 31ಕ್ಕೆ 3, ಸಮರ್ಥ್‌ ಎನ್. 14ಕ್ಕೆ 2, ಇಶಾನ್ ಎಸ್. 16ಕ್ಕೆ 2).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT