ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಮನ್ವಯ ಸಮಿತಿ ಸಭೆ ಇಂದು: ಬಿಜೆಪಿ, ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರು ಭಾಗಿ

Published 26 ಮಾರ್ಚ್ 2024, 20:25 IST
Last Updated 26 ಮಾರ್ಚ್ 2024, 20:25 IST
ಅಕ್ಷರ ಗಾತ್ರ

ಮೈಸೂರು: ‘ನಗರದ ಸದರ್ನ್‌ ಸ್ಟಾರ್‌ ಹೋಟೆಲ್‌ನಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷದ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಬುಧವಾರ ಸಂಜೆ 4ಕ್ಕೆ ಮುಖಂಡರ ಸಭೆ ನಡೆಯಲಿದ್ದು, ಸಮನ್ವಯ ಸಮಿತಿ ರಚಿಸಲಿದ್ದೇವೆ’ ಎಂದು ಬಿಜೆಪಿ ಮೈಸೂರು ನಗರಾಧ್ಯಕ್ಷ ಎಲ್.ನಾಗೇಂದ್ರ ತಿಳಿಸಿದರು.

ಇಲ್ಲಿ ಮಂಗಳವಾರ ‍ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಬುಧವಾರ ಬೆಳಿಗ್ಗೆ 8 ಗಂಟೆಗೆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಚಾಮುಂಡಿ ಬೆಟ್ಟಕ್ಕೆ ತೆರಳಿ ದೇವಿಗೆ ವಿಶೇಷ ಪ್ರಾರ್ಥನೆ ಸಲ್ಲಿಸಿ, ಗೋವುಗಳಿಗೆ ನೀರು ಮತ್ತು ಮೇವು ನೀಡಿ ರಾಜ್ಯದಲ್ಲಿ ನೀರಿಗಾಗಿ ನಡೆಯುತ್ತಿರುವ ಹಾಹಾಕಾರದ ಬಗ್ಗೆ ಗಮನಸೆಳೆಯಲಿದ್ದಾರೆ. ನಂತರ ಕೊಡಗಿನಲ್ಲಿ ನಡೆಯುವ ಸಭೆ ಹಾಗೂ ಸಮ್ಮೇಳನದಲ್ಲಿ ಭಾಗವಹಿಸಿ, ಸಂಜೆ ಮೈಸೂರಿಗೆ ಆಗಮಿಸುತ್ತಾರೆ’ ಎಂದರು.

‘ಸಮನ್ವಯ ಸಮಿತಿ ಸಭೆಯಲ್ಲಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ, ಶಾಸಕರಾದ ಜಿ.ಟಿ.ದೇವೇಗೌಡ, ಟಿ.ಎಸ್‌.ಶ್ರೀವತ್ಸ ಸಹಿತ ಎರಡೂ ಪಕ್ಷದ ಪ್ರಮುಖರು ಉಪಸ್ಥಿತರಿರುತ್ತಾರೆ. ನಂತರ ಸಂಜೆ 6ಕ್ಕೆ ವಸ್ತುಪ್ರದರ್ಶನ ಮೈದಾನದಲ್ಲಿ ನಡೆಯುವ ಬಿಜೆಪಿ ಹಾಗೂ ಜೆಡಿಎಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.

ಎಚ್‌.ವಿ.ರಾಜೀವ್‌ ಕಾಂಗ್ರೆಸ್‌ ಸೇರ್ಪಡೆಯಾಗುತ್ತಿರುವ ಕುರಿತು ಪ್ರತಿಕ್ರಿಯಿಸಿ, ‘ವಿಧಾನಸಭಾ ಚುನಾವಣೆಯಿಂದಲೇ ಅವರು ಬಿಜೆಪಿಯಿಂದ ಅಂತರ ಕಾಯ್ದುಕೊಂಡಿದ್ದಾರೆ. ಶ್ರೀವತ್ಸ ಪರವಾಗಿ ಕೆಲಸವೂ ಮಾಡಿರಲಿಲ್ಲ. ಈ ಹಿಂದೆ ಭೇಟಿಯಾದಾಗ ಪಕ್ಷ ಬಿಡುವುದು ಬೇಡ ಎಂದು ತಿಳಿಸಿದ್ದೆ. ಆದರೆ ಅವರು ರಾಜೀನಾಮೆ ನೀಡಿದ್ದು, ಅಂಗೀಕರಿಸಿದ್ದೇವೆ. ಮನವೊಲಿಸುವ ಪ್ರಯತ್ನ ಮಾಡುವುದಿಲ್ಲ. ವರುಣಾ ಮುಖಂಡರೊಂದಿಗೆ ಬಿ.ವೈ.ವಿಜಯೇಂದ್ರ ಅವರು ಬುಧವಾರ ಸಂಜೆ ಸಭೆ ನಡೆಸಲಿದ್ದು, ಅಸಮಾಧಾನಿತ ಬಿಜೆಪಿ ಮುಖಂಡ ಸದಾನಂದ ಅವರೊಂದಿಗೂ ಮಾತುಕತೆ ನಡೆಸಲಿದ್ದಾರೆ’ ಎಂದರು.

‘ಈ ಚುನಾವಣೆಯಲ್ಲಿ ಜೆಡಿಎಸ್‌ ಜೊತೆಗೆ ಸೇರಿರುವುದರಿಂದ ಬಿಜೆಪಿಗೆ ಹೆಚ್ಚಿನ ಶಕ್ತಿ ಬಂದಿದೆ. ಈ ಬಾರಿ ನಿರೀಕ್ಷೆಗೂ ಮೀರಿ ಹೆಚ್ಚಿನ ಅಂತರದಿಂದ ಗೆಲುವು ಪಡೆಯಲಿದ್ದೇವೆ. ಕಳೆದ ಬಾರಿ ಪಿರಿಯಾಪಟ್ಟಣದಲ್ಲಿ ಕಡಿಮೆ ಮತ ಬಂದಿತ್ತು. ಈ ಬಾರಿ ಅದನ್ನೂ ಸೇರಿಸಿ ಎಲ್ಲಾ ಕ್ಷೇತ್ರದಲ್ಲೂ ಹೆಚ್ಚಿನ ಮತ ಸೆಳೆಯಲಿದ್ದೇವೆ. ಅಲ್ಪಸಂಖ್ಯಾತರು ಹೆಚ್ಚಿರುವ ನರಸಿಂಹರಾಜ ಕ್ಷೇತ್ರದಲ್ಲೂ ಸಮಾನ ಹೋರಾಟ ನಡೆಯಲಿದೆ. ಈ ಶಕ್ತಿಯ ಮುಂದೆ ರಾಜೀವ್‌ ನಮಗೆ ಸಮಾನರಲ್ಲ’ ಎಂದು ಹೇಳಿದರು.

‘47 ವರ್ಷದ ಬಳಿಕ ಒಕ್ಕಲಿಗರನ್ನು ಅಭ್ಯರ್ಥಿ ಮಾಡಿದ್ದೇವೆ ಎನ್ನುತ್ತಾ ಅದನ್ನೇ ತಮ್ಮ ಟ್ರಂಪ್‌ ಕಾರ್ಡ್‌ ಆಗಿ ಬಳಸಲು ಯೋಜಿಸುತ್ತಿದೆ. ಆದರೆ ಇಷ್ಟು ವರ್ಷ ಒಕ್ಕಲಿಗರು ಇವರ ಕಣ್ಣಿಗೆ ಬೀಳಲಿಲ್ಲ ಯಾಕೆ. ಯಾರೂ ಸಿಗದಿದ್ದಕ್ಕೆ ಲಕ್ಷ್ಮಣ್‌ ಅವರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾರೆ. ವರ್ಷವಿಡೀ ಅವರು ಮಾತನಾಡಿರುವ ಮಾತುಗಳನ್ನು ಜನ ಗಮನಿಸಿದ್ದಾರೆ ಅವರ ಆರೋಪಗಳಿಗೆ ಮತದಾರರೇ ಉತ್ತರ ನೀಡುತ್ತಾರೆ’ ಎಂದು ಹೇಳಿದರು.

ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಜಿಲ್ಲಾಧ್ಯಕ್ಷ ಜಿಲ್ಲಾಧ್ಯಕ್ಷ ಮಹದೇವಸ್ವಾಮಿ, ಚುನಾವಣಾ ನಿರ್ವಹಣಾ ಸಮಿತಿಯ ರಾಬಿನ್ ದೇವಯ್ಯ, ಮುಖಂಡರಾದ ಗಿರಿಧರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT