ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೃಗತ್ವ ಕಳೆಯಲು ಸಾಹಿತ್ಯಾಭಿರುಚಿ ಬೆಳೆಸಿಕೊಳ್ಳಿ’

ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಪ್ರತಿಪಾದನೆ l ಐವರು ಲೇಖಕರ 8 ಕೃತಿ ಬಿಡುಗಡೆ
Published 2 ಮೇ 2024, 6:10 IST
Last Updated 2 ಮೇ 2024, 6:10 IST
ಅಕ್ಷರ ಗಾತ್ರ

ಮೈಸೂರು: ‘ಮಾನವನಲ್ಲಿ ಅಂತರ್ಗತವಾಗಿರುವ ಮೃಗೀಯ ವರ್ತನೆ ಇಲ್ಲವಾಗಿಸಲು ಕಲೆ– ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಬೇಕು’ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಮಾನಸ ಪ್ರತಿಪಾದಿಸಿದರು.

ವಿಜಯನಗರದ ಜಿಲ್ಲಾ ಕನ್ನಡ ಸಾಹಿತ್ಯ ಭವನದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಕಥಾಬಿಂದು ಪ್ರಕಾಶನವು ಬುಧವಾರ ಆಯೋಜಿಸಿದ್ದ ‘ಸಾಹಿತ್ಯ ಸಂಭ್ರಮ’ದಲ್ಲಿ ವಿವಿಧ ಲೇಖಕರ 8 ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದರು.

‘ವನ್ಯಮೃಗಗಳು ಕಾಡಿನಲ್ಲಿ ಘರ್ಜಿಸಿ, ಬೇಟೆಯಾಡಿ ಜೀವಿಸುತ್ತಿರುತ್ತವೆ. ನಮ್ಮೊಳಗಿನ ಕಾಡಿನಲ್ಲೂ ಮೃಗೀಯ ಗುಣಗಳಿವೆ. ಅವುಗಳ ಇರುವಿಕೆಯನ್ನು ಆಗಾಗ ತೋರಿಸುತ್ತಿರುತ್ತೇವೆ’ ಎಂದರು.

‘ಅನಾಗರಿಕತನ ಹೋಗಿ ಕಾರುಣ್ಯ, ಮಾನವೀಯ ಗುಣ ಬರಬೇಕೆಂದರೆ ಸಾಹಿತ್ಯದ ಸಹವಾಸ ಮಾಡಬೇಕು. ಆಗ ಅಲ್ಪಮಾನವ ವಿಶ್ವಮಾನವನಾಗಲು ಸಾಧ್ಯ’ ಎಂದು ಅಭಿಪ್ರಾಯಪಟ್ಟರು.

‘ಬದುಕು ಸವಾಲಿನಿಂದ ಕೂಡಿದ್ದು ಅದನ್ನು ಗೆಲ್ಲಲು ಸಮಚಿತ್ತತೆ ಬೇಕು. ಅದಕ್ಕೆ ಓದು ಅಗತ್ಯ. ಕಷ್ಟಕಾಲದಲ್ಲಿ ಸಾಹಿತ್ಯವೇ ನಮ್ಮನ್ನು ಸಂತೈಸುತ್ತದೆ’ ಎಂದರು.

ಸಾಧಕರಿಗೆ ಸನ್ಮಾನ: ಟಿ.ತ್ಯಾಗರಾಜು, ರವಿಕುಮಾರ್, ಕೆ.ನಾಗರಾಜು, ಲಕ್ಷ್ಮೀ ಮೈಸೂರು, ಎಂ.ಪಿ.ಶಿವಕುಮಾರಿ, ಎಂ.ಡಿ.ಸುದೀಪ್, ಜಗನ್ನಾಥ್, ಪ್ರಮೀಳಾ ರಾಜ್, ಆಶಾಲತಾ ಚನ್ನಪಟ್ಟಣ, ಮಾಲಾ ಮೂರ್ತಿ, ಮಮತಾ ಶ್ರೀಧರ್, ಟಿ.ಜಿ.ವಿಮಲಾ, ಲತಾ ಕೆ.ಎಸ್‌.ಹೆಗಡೆ, ಗೀತಾ ಲೋಕೇಶ್, ಪರಿಮಳ ಐವರ್ನಾಡು, ಟಿ.ಎಸ್‌.ಬಳ್ಳಾರಿ ಗೌಡ, ದಿನಮಣಿ ಹೇಮರಾಜ್, ರೇಣುಕಾ ಬಾದಾಮಿ, ಪುಷ್ಪಾ ನಾಗತಿಹಳ್ಳಿ, ಶೋಭಿತಾ ಮೈಸೂರು ಅವರಿಗೆ ಕನ್ನಡ ಕಂಠೀರವ ಹಾಗೂ ಲಕ್ಷ್ಮಮ್ಮಣ್ಣಿ ಪ್ರಶಸ್ತಿ ನೀಡಲಾಯಿತು. 

ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡೀಕೆರೆ ಗೋಪಾಲ, ಲೇಖಕ ಕೊಳ್ಚಪ್ಪೆ ಗೋವಿಂದ ಭಟ್ಟ, ಪ್ರಭಾಶಾಸ್ತ್ರಿ ಜೋಶ್ಯುಲ ಮೈಸೂರ, ಪ್ರಕಾಶಕ ಪಿ.ವಿ.ಪ್ರದೀಪ್ ಕುಮಾರ್ ಹಾಜರಿದ್ದರು.

ಕಾರ್ಯಕ್ರಮದ ನಂತರ ನಡೆದ ಕವಿಗೋಷ್ಠಿಯಲ್ಲಿ 35ಕ್ಕೂ ಹೆಚ್ಚು ಮಂದಿ ಕವನ ವಾಚಿಸಿದರು.

ಬಿಡುಗಡೆಯಾದ ಕೃತಿಗಳು

ಟಿ.ತ್ಯಾಗರಾಜು– ‘ಮನದ ಮಾತು’

ಪುಷ್ಪಾ ನಾಗತಿಹಳ್ಳಿ– ‘ಅನುಗತ’ ಮತ್ತು ‘ಧರೆಯಂಚಿನ ಮರ’

ಶೋಭಿತಾ ಮೈಸೂರು– ‘ಸಂಜೆಯ ಸೂರ್ಯ’

ಲತಾ ಕೆ.ಎಸ್.ಹೆಗಡೆ– ‘ಕನ್ನಡ ತರುಲತೆ’ ‘ಗುಬ್ಬಿಯ ಗೂಡು’

ಹಾ.ಮ.ಸತೀಶ್ ಬೆಂಗಳೂರು– ‘ನುಡಿಹಾರ’ ‘ಜೀನುಗುವ ಸೋನೆ ಮಳೆ’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT