ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಖಂಡತೆಗಾಗಿ ಸಂವಿಧಾನ ರಕ್ಷಿಸಬೇಕು

ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಜ್ಞಾನಪ್ರಕಾಶ ಸ್ವಾಮೀಜಿ
Published 25 ಜೂನ್ 2024, 4:10 IST
Last Updated 25 ಜೂನ್ 2024, 4:10 IST
ಅಕ್ಷರ ಗಾತ್ರ

ಮೈಸೂರು: ‘ದೇಶದ ಅಖಂಡತೆಗಾಗಿ ಸಂವಿಧಾನವನ್ನು ನಾವೆಲ್ಲರೂ ರಕ್ಷಿಸಿಕೊಳ್ಳಬೇಕು’ ಎಂದು ಉರಿಲಿಂಗ ಪೆದ್ದಿ ಮಠದ ಜ್ಞಾನಪ್ರಕಾಶ ಸ್ವಾಮೀಜಿ ಕರೆ ನೀಡಿದರು.

ಕರ್ನಾಟಕ ಭೀಮ್‌ ಸೇನೆಯಿಂದ ನಗರದ ಪುರಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ದಲಿತ ಕಣ್ಮಣಿಗಳಾದ ವಿ. ಶ್ರೀನಿವಾಸ ಪ್ರಸಾದ್, ಆರ್‌. ಧ್ರುವನಾರಾಯಣ ಹಾಗೂ ಕೆ.ಶಿವರಾಮ್‌ ಅವರಿಗೆ ನುಡಿನಮನ’, ಎಸ್‌ಎಸ್‌ಎಲ್‌ಸಿ ಹಾಗೂ ದ್ವಿತೀಯ ಪಿಯು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಆಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಅಂಬೇಡ್ಕರ್ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್‌ ನೊಂದ ಸಮಾಜದವರಿಗೆ ನಂದಾದೀಪವಾಗಿ ಬಂದವರು. ಶೋಷಿತರಿಗೆ ಆಸರೆ ಹಾಗೂ ಆಶ್ರಯ ನೀಡಿದವರು. ನಾಲ್ವಡಿ ಅವರು ಮೀಸಲಾತಿ ನೀಡಿ ಸಮತಾವಾದಿ‌ ಆದರು. ಮೀಸಲಾತಿಯನ್ನು ಅಂಬೇಡ್ಕರ್ ಅವರು ಬಹಳ ಸ್ಪಷ್ಟವಾಗಿ ಸಂವಿಧಾನದ ಮೂಲಕವೇ ನೀಡಿದರು’ ಎಂದು ಸ್ಮರಿಸಿದರು.

‘ಸಂವಿಧಾನ ಎಂದರೆ ದೇಶದ ಸಂಪತ್ತನ್ನು ಸರ್ವರಿಗೂ ಸಮಾನವಾಗಿ ಹಂಚುವುದೇ ಆಗಿದೆ’ ಎಂದು ಪ್ರತಿಪಾದಿಸಿದರು.

ಅಂಬೇಡ್ಕರ್‌ ಜ್ಞಾನದ ಸಂಕೇತ: ‘ಇಡೀ ಜಗತ್ತು ಇಂದು ಅಂಬೇಡ್ಕರ್ ಕಡೆಗೆ ಮುಖ ಮಾಡುತ್ತಿದೆ. ಏಕೆಂದರೆ, ಅವರು ಜ್ಞಾನದ ಸಂಕೇತವಾಗಿದ್ದಾರೆ. ಆದ್ದರಿಂದಲೇ ಸ್ಫೂರ್ತಿಯಾಗಿದ್ದಾರೆ. ಗೌತಮ ಬುದ್ಧ, ಬಸವಣ್ಣ ಹಾಗೂ ಅಂಬೇಡ್ಕರ್ ಅವರನ್ನು ನಾವೆಲ್ಲರೂ ನೆನೆಯುತ್ತಲೇ ಇರಬೇಕು. ಏಕೆಂದರೆ ಅವರೆಲ್ಲರೂ ನಮ್ಮ ವಿಮೋಚಕರಾಗಿದ್ದಾರೆ. ಜ್ಞಾನ, ಕ್ರಾಂತಿ ಹಾಗೂ ವೈಜ್ಞಾನಿಕ ವಿಚಾರವಂತಿಕೆಯ ದೀಪ ಅವರಾಗಿದ್ದಾರೆ’ ಎಂದು ಬಣ್ಣಿಸಿದರು.

‘ಭಾರತ ದೇಶದಲ್ಲಿ ನೂರಾರು ಜಾತಿ ಹಾಗೂ ಹಲವು ಧರ್ಮಗಳಿವೆ. ಇವುಗಳೆಲ್ಲವನ್ನೂ ಸಂವಿಧಾನವೆಂಬ ಹಗ್ಗವು ಹಿಡಿದಿಟ್ಟಿದೆ’ ಎಂದರು.

‘ಹಕ್ಕುಗಳು ತಾವಾಗಿಯೇ ನಮ್ಮ ಮನೆಗಳ ಬಾಗಿಲಿಗೆ ಬರುವುದಿಲ್ಲ. ಪಡೆದುಕೊಳ್ಳಲು ಹೋರಾಡಬೇಕು. ಇದಕ್ಕಾಗಿ ಸಂಘಟನೆ ಅಗತ್ಯವಾಗಿದೆ’ ಎಂದು ತಿಳಿಸಿದರು.

ಕರ್ನಾಟಕ ಭೀಮ್ ಸೇನೆಯ ಅಧ್ಯಕ್ಷ ಶಂಕರ್‌ ರಾಮಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಸುರೇಶ್ ಗವಿಯಪ್ಪ, ಜಿಲ್ಲಾ ಸಮಿತಿಯ ಅಧ್ಯಕ್ಷ ಸರ್ವೇಶ್‌ ಎಸ್., ಮಾಜಿ ಸೈನಿಕ ಸ್ವಾಮಿ ನಾಯಕ್‌, ಮಾಜಿ ಮೇಯರ್‌ ಪುರುಷೋತ್ತಮ್‌, ರಂಗ ಸಂಘಟಕ ಗೋಪಾಲಕೃಷ್ಣ, ಲೋಕೇಶ್, ಪದ್ಮಾವತಿ, ಮಂಜುನಾಥ್, ನರಸಿಂಹಮೂರ್ತಿ, ವಿ.ಎಂ. ಮಲ್ಲೇಶ್, ಮಧು ಹೊಲೆಯಾರ್, ಬಾಲರಾಜು ಪಾಲ್ಗೊಂಡಿದ್ದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು– ಪ್ರಜಾವಾಣಿ ಚಿತ್ರ

ಪೆನ್‌ಗಳಲ್ಲಿ ಅಂಬೇಡ್ಕರ್‌ ಜೀವಂತ’

‘ಶತಮಾನಗಳಿಂದ ಅನ್ಯಾಯಕ್ಕೆ ಒಳಗಾಗಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರು ಹಾಗೂ ಹಿಂದುಳಿದ ವರ್ಗದವರಿಗೆ ಶಕ್ತಿ ತುಂಬುವ ಕೆಲಸವನ್ನು ಅಂಬೇಡ್ಕರ್‌ ಅವರು ಸಂವಿಧಾನದ ಮೂಲಕ ಮಾಡಿದರು. ಇದಕ್ಕಾಗಿಯೇ ಅಂಬೇಡ್ಕರ್ ಇಡೀ ಜೀವನವನ್ನೇ ಧಾರೆ ಎರೆದರು. ಶಿಕ್ಷಣದ ಹಕ್ಕು ಎಲ್ಲರಿಗೂ ದೊರೆಯುವಂತೆ ಮಾಡಲು ಹೋರಾಡಿದರು. ಅವರ ಕಾರಣದಿಂದಾಗಿಯೇ ಹೆಣ್ಣು ಮಕ್ಕಳಿಗೆ ಶಿಕ್ಷಣದ ಹಕ್ಕು ಸಿಕ್ಕಿತು. ಸರ್ಕಾರಿ ಶಾಲೆ- ಕಾಲೇಜುಗಳಲ್ಲಿ ಶೇ 100ರಷ್ಟು ಅಂಕ ಗಳಿಸಿದವರ ಪೆನ್ನುಗಳಲ್ಲಿ ಅಂಬೇಡ್ಕರ್ ಜೀವಂತವಾಗಿದ್ದಾರೆ’ ಎಂದು ಜ್ಞಾನಪ್ರಕಾಶ ಸ್ವಾಮೀಜಿ ಹೇಳಿದರು. ‘ಶೋಷಿತರ ಮಕ್ಕಳು ಕೂಡ ಚೆನ್ನಾಗಿ ಓದಿ ಐಎಎಸ್‌ ಐಪಿಎಸ್‌ ಮೊದಲಾದ ಅಧಿಕಾರಿಗಳಾಗಲು ಅವಕಾಶ ಇರುವುದಕ್ಕೆ ಸಂವಿಧಾನವೇ ಕಾರಣ. ಶಿಕ್ಷಣ ಎನ್ನುವ ದೊಡ್ಡ ಅಸ್ತ್ರವನ್ನು ಅಂಬೇಡ್ಕರ್‌ ನಮಗೆ ಕೊಟ್ಟಿದ್ದಾರೆ. ಅದನ್ನು ಬಳಸಿಕೊಂಡು ಅಧಿಕಾರಿಗಳಾಗಲು ವಿದ್ಯಾರ್ಥಿಗಳು ಶ್ರಮಿಸಬೇಕು. ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT